»   »  ಪೈರಸಿ ವಿರೋಧ ಕಾಯಿದೆ; ನಕಲಿಗೆ ಅಸಲಿ ಮದ್ದು!

ಪೈರಸಿ ವಿರೋಧ ಕಾಯಿದೆ; ನಕಲಿಗೆ ಅಸಲಿ ಮದ್ದು!

Subscribe to Filmibeat Kannada

ಕರ್ನಾಟಕ ಸರಕಾರ ಪೈರಸಿ ವಿರೋಧಿ ಕಾಯಿದೆಯನ್ನು ಬುಧವಾರ ಜಾರಿಗೊಳಿಸಿತು. ಈ ಮೂಲಕ ನಕಲಿ, ಸಿಡಿ,ಡಿವಿಡಿ ಮತ್ತು ಕ್ಯಾಸೆಟ್ ದಂಧೆಗೆ ಅಂತ್ಯ ಹಾಡಿದೆ. ಕನ್ನಡ ಚಿತ್ರೋದ್ಯಮದ ಬಹುದಿನದ ಶಾಪ ವಿಮೋಚನೆಯಾಗಿದೆ.

ಪೈರಸಿ ವಿರೋಧಿ ಕಾಯಿದೆಯನ್ನು ಕಾನೂನು ಮತ್ತು ಸಂಸದೀಯ ಸಚಿವ ಎಸ್ ಸುರೇಶ್ ಕುಮಾರ್ ವಿಧಾನಸಭೆಯಲ್ಲಿ ಬುಧವಾರ ಜಾರಿಗೊಳಿಸಿದರು. ಇದರಿಂದ ಪರೋಕ್ಷ ಮತ್ತು ಅಪರೋಕ್ಷವಾಗಿ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ನೆಮ್ಮದಿ ಸಿಕ್ಕಂತಾಗಿದೆ. ನಕಲಿ ದಂಧೆಯಲ್ಲಿ ಭಾಗಿಯಾಗಿರುವ ಹತ್ತು ಸಾವಿರ ಮಂದಿಗೆ ನಿದ್ದೆಗೆಡಿಸಿದೆ.

ನಕಲಿ ಸಿಡಿ, ಡಿವಿಡಿ ದಂಧೆ ಕನ್ನಡ ಚಿತ್ರೋದ್ಯಮಕ್ಕೆ ಉರುಳಾಗಿ ಪರಿಣಮಿಸಿತ್ತು. ಈ ಸಂಕಷ್ಟದಿಂದ ನಮ್ಮನ್ನು ತಪ್ಪಿಸಿ ಕನ್ನಡಚಿತ್ರೋದ್ಯಮವನ್ನು ಪಾರುಮಾಡಿ ಎಂಬುದು ಉದ್ಯಮದ ಬಹುದಿನಗಳ ಬೇಡಿಕೆ. ಕಡೆಗೂ ಪೈರಸಿ ವಿರೋಧಿ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಕರ್ನಾಟಕ ಸರ್ಕಾರ ಕಣ್ಣು ತೆರೆದಿದೆ.

''ಸರಕಾರ ಪೈರಸಿ ವಿರೋಧಿ ಕಾಯಿದೆಯನ್ನು ಜಾರಿಗೊಳಿಸಿ ಕ್ಯಾನ್ಸರ್ ಗೆ ಮದ್ದು ಕಂಡುಹಿಡಿದಂತಾಗಿದೆ. ಹೊಸ ಕಾಯಿದೆಯಿಂದ ಆಡಿಯೋ ಮತ್ತು ವಿಡಿಯೋ ಕಂಪನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ'' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.

''ಸರಕಾರ ಈ ಹೊಸ ಕಾಯಿದೆಯನ್ನು ಜಾರಿಗೊಳಿಸಿ ಉತ್ತಮ ಕೆಲಸ ಮಾಡಿದೆ. ಹೊಸ ಕಾಯಿದೆಯನ್ನು ಸ್ವಾಗತಿಸಿ ನಾವೆಲ್ಲರೂ ಸಂಭ್ರಮಿಸಬೇಕಾಗಿದೆ. ಪೈರಸಿ ವಿರೋಧ ಕಾಯಿದೆಯಿಂದ ನಿರ್ಮಾಪಕನೊಬ್ಬನಿಗೆ ರು.50 ಲಕ್ಷದಷ್ಟು ಲಾಭವಾಗಲಿದೆ. ಸರಕಾರದ ಬೊಕ್ಕಸಕ್ಕೆ ಪ್ರತಿವರ್ಷ ಸರಿಸುಮಾರು ರು.200 ಕೋಟಿಯಷ್ಟು ಹಣ ಹರಿದುಬರಲಿದೆ'' ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದರು.

ರಾಜ್ಯದ ಪ್ರತಿಷ್ಠಿತ ಆಡಿಯೋ ಕಂಪನಿಗಳಲ್ಲಿ ಒಂದಾದ ಲಹರಿ ರೆಕಾರ್ಡಿಂಗ್ ಕಂಪನಿ ಮಾಲೀಕ ವೇಲು ಮಾತನಾಡುತ್ತಾ, ರಾಜ್ಯದ ಸಮಸ್ತ ಆಡಿಯೋ ಕಂಪನಿಗಳು ಹಬ್ಬ ಆಚರಿಸಿಕೊಳ್ಳಬೇಕಾದ ಸಮಯ. ಈ ಕಾಯಿದೆಯಿಂದ ಸರಕಾರಕ್ಕೆ ಹೆಚ್ಚುವರಿ ರು.150 ಕೋಟಿ ಆದಾಯ ಹರಿದು ಬರಲಿದೆ ಎನ್ನುತ್ತಾರೆ.

ಪೈರಸಿ ವಿರೋಧಿ ಕಾಯಿದೆ ಪ್ರಕಾರ,ಒಂದೇ ಒಂದು ನಕಲಿ ಸಿಡಿ, ಡಿವಿಡಿ ಅಥವಾ ಕ್ಯಾಸೆಟ್ ಮಾರುವುದು ಶಿಕ್ಷಾರ್ಹ ಅಪರಾಧ. ಕನಿಷ್ಠ ಒಂದು ವರ್ಷ ಜೈಲುವಾಸ ಮತ್ತು ರು.2 ಲಕ್ಷ ದಂಡ ವಿಧಿಸಲಾಗುತ್ತದೆ. ಈ ಕೇಸಿನಲ್ಲಿ ಸಿಕ್ಕಿಬಿದ್ದವರಿಗೆ ಜಾಮೀನು ಸಿಗುವುದಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada