For Quick Alerts
  ALLOW NOTIFICATIONS  
  For Daily Alerts

  ಕಾಲ್ಗೆಜ್ಜೆ ಚಿತ್ರತಂಡದಿಂದ ಶಿವಮೊಗ್ಗದಲ್ಲಿ ರಕ್ತದಾನ

  By * ಕೆ ಆರ್ ಸೋಮನಾಥ್, ಶಿವಮೊಗ್ಗ
  |

  ರಕ್ತದಾನ ಶ್ರೇಷ್ಠದಾನವಾಗಿದ್ದು, ಇಂತಹ ಮಹಾತ್ಕಾರ್ಯಕ್ಕೆ ಕಾಲ್ಗೆಜ್ಜೆ ಚಿತ್ರತಂಡ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ ಎಂದು ರೋಟರಿ ರಕ್ತನಿಧಿ ಕೇಂದ್ರದ ಛೇರ‍್ಮನ್ ಭೂಪಾಳಂ ಎಸ್.ಶಶಿಧರ್ ಹೇಳಿದರು.ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ರೋಟರಿ ರಕ್ತನಿಧಿ ಕೇಂದ್ರದಲ್ಲಿ ಕಾಲ್ಗೆಜ್ಜೆ ಚಿತ್ರತಂಡ ಹಾಗೂ ರೋಟರಿ ರಕ್ತನಿಧಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

  ಚಿತ್ರತಂಡ ಸಾಮಾಜಿಕ ಕಳಕಳಿಯುಳ್ಳ ಮಹಾನ್ ಕಾರ್ಯಕ್ಕೆ ಮುಂದಾಗಿದೆ. ರಕ್ತದಾನ ಶ್ರೇಷ್ಠದಾನವಾಗಿದ್ದು, ಸಾಮಾಜಿಕ ಕಳಕಳಿಯುಳ್ಳಂತಹ ಯೋಜನೆಯನ್ನು ಚಿತ್ರತಂಡ ಹಮ್ಮಿಕೊಂಡಿದೆ. ಈ ಕೆಲಸವನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕಾಗಿದೆ ಎಂದರು.

  ಹಾಗೆಯೇ, ರೋಟರಿ ರಕ್ತನಿಧಿ ಕೇಂದ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ನಮ್ಮ ರೋಟರಿ ಸಂಸ್ಥೆಯು ಇಂದು ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿದೆ. ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಹ ಬಡರೋಗಿಗಳಿಗೆ ಕೇವಲ ರು. 100ಕ್ಕೆ ರಕ್ತವನ್ನು ನೀಡಲಾಗುತ್ತಿದೆ. ಅತ್ಯುತ್ತಮ ಕಡಿಮೆ ದರದಲ್ಲಿ ಆಂಬೂಲೆನ್ಸ್ ಸೇವೆಯನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ರೋಟರಿ ಐ ಬ್ಯಾಂಕ್ ಸ್ಥಾಪನೆಯಾದಾಗಿನಿಂದ ಇದುವರೆಗೂ 160 ಜನರಿಗೆ ನೇತ್ರದಾನ ಮಾಡಲಾಗಿದೆ ಎಂದು ಹೇಳಿದರು.

  ನಂತರ, ಚಿತ್ರದ ನಿರ್ದೇಶಕ ಎ.ಬಂಗಾರ್ ಮಾತನಾಡಿ, ಸಮಾಜಕ್ಕೆ ಏನಾದರೂ ಸೇವೆ ನೀಡಬೇಕು ಎಂಬ ಉದ್ದೇಶದಿಂದ ರಕ್ತದಾನ ಶಿಬಿರಕ್ಕೆ ಚಿತ್ರತಂಡ ಮುಂದಾಗಿದೆ ಎಂದ ಅವರು, ಮನುಷ್ಯನಿಗೆ ಸಾಕಷ್ಟು ಆಸೆ ಇರುತ್ತದೆ. ಅಂತಹ ಆಸೆಗಳನ್ನು ಈಡೇರಿಸಿಕೊಳ್ಳಲು ಕಷ್ಟಪಡಲೇಬೇಕು. ಹೀಗಾಗಿ, ಪ್ರತಿಯೊಬ್ಬರೂ ಸಮಾಜದಲ್ಲಿ ಸಾಧನೆ ಮಾಡಲು ಕಷ್ಟಪಡಬೇಕು ಎಂದು ಹೇಳಿದರು.

  ಇಂದು ಚಿತ್ರಮಂದಿರಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಅದಕ್ಕೆ ಸಾಕಷ್ಟು ಕಾರಣವೂ ಇದೆ. ಈ ಅಂಶವನ್ನಿಟ್ಟುಕೊಂಡು ಮಹಿಳಾ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ 'ಕಾಲ್ಗೆಜ್ಜೆ' ಹೆಸರಿನ ಸದಭಿರುಚಿ ಚಿತ್ರವನ್ನು ನಿರ್ಮಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ವೀಕ್ಷಿಸಬಹುದಾಗಿದೆ. ಚಿತ್ರದಲ್ಲಿ ಯುವಕರಿಗೆ ಇಷ್ಟವಾಗುವಂತಹ ಅಂಶವನ್ನು ಅಳವಡಿಸಲಾಗಿದ್ದು, ಇದೊಂದು ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದಂತಹ ಚಿತ್ರವಾಗಿದೆ ಎಂದರು.

  ಕಾರ್ಯಕ್ರಮದ ನಂತರ ಹಲವರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ನಟ ವಿಶ್ವಾಸ್, ನಾಯಕನಟಿ ಕುಮಾರಿ ರೂಪಿಕಾ, ಸಹನಿರ್ದೇಶಕ ಪವನ್, ಕಾರ್ಯಕಾರಿ ನಿರ್ಮಾಪಕ ಭೈರೇಗೌಡ, ಕರವೇ ಜಿಲ್ಲಾಧ್ಯಕ್ಷ ಜಿ.ಪ್ರಕಾಶ್, ಯಲ್ಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  English summary
  Kannada movie Kalgejje team organized a voluntary blood donation camp in Shimoga. By donating blood we indirectly save many lives. This is a holy activity which is above all casts and Religions said the director of the movie Bangar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X