»   » ಕಡೆಗೂ ಕನ್ನಡದಲ್ಲಿ ಪಾಸಾದರು ಪೂಜಾಗಾಂಧಿ!

ಕಡೆಗೂ ಕನ್ನಡದಲ್ಲಿ ಪಾಸಾದರು ಪೂಜಾಗಾಂಧಿ!

Subscribe to Filmibeat Kannada
ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಎರಡು ವರ್ಷಗಳು ಕಳೆದು ಹೋದವು, ಆಕೆಯ ಖಾತೆಗೆ ಒಂದು ಡಜನ್ ಚಿತ್ರಗಳು ಜಮೆಯಾದವು. ಆಕೆಯ ಕನ್ನಡ ಉಚ್ಛಾರಣೆ ಅಷ್ಟು ಸ್ಪಷ್ಟವಾಗಿಲ್ಲ ಎಂಬ ಕಾರಣಕ್ಕೆ ಮತ್ತೊಬ್ಬರು ಆಕೆಗೆ 'ಕಂಠದಾನ' ಮಾಡಬೇಕಿತ್ತು.ಕನ್ನಡವನ್ನು ನಿರರ್ಗಳವಾಗಿ ಅಲ್ಲದಿದ್ದರೂ ಡಬ್ಬಿಂಗ್ ಹೇಳುವ ಮಟ್ಟಕ್ಕೆ ತಮ್ಮ ಭಾಷೆಯನನ್ನು ಸುಧಾರಿಸಿಕೊಂಡರು. ಹಾಗಾಗಿ ಇದೇ ಮೊದಲ ಬಾರಿಗೆ 'ನಿನಗಾಗಿ ಕಾದಿರುವೆ' ಚಿತ್ರದ ತಮ್ಮ ಪಾತ್ರಕ್ಕೆ ತಮ್ಮದೇ ಧ್ವನಿಯಿಂದ ಜೀವ ತುಂಬಿದ್ದಾರೆ.

ನಿನಗಾಗಿ ಕಾದಿರುವೆ 40 ದಿನಗಳ ಚಿತ್ರೀಕರಣ ಮುಗಿಸಿದೆ. 15 ದಿನಗಳ ಕಾಲ ತಮ್ಮ ಪಾತ್ರಕ್ಕೆ ತಾವೆ ಡಬ್ಬಿಂಗ್ ಹೇಳಿ ಮುಗಿಸಿದ್ದಾರೆ ಪೂಜಾಗಾಂಧಿ.ಈ ಕುರಿತು ಅವರು ಮಾತನಾಡುತ್ತಾ, ''ಡಬ್ಬಿಂಗ್ ಹೇಳಿದ ನಂತರ ನನ್ನ ಭಾಷೆ ಮತ್ತಷ್ಟು ಸುಧಾರಿಸಿದೆ'' ಎಂದರು. ನಿರ್ದೇಶಕನಾಗಿ ಬದಲಾಗಿರುವ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿರ್ದೇಶನದ ಈ ಚಿತ್ರವನ್ನು ಸತೀಶ್ ಬಾಬು ನಿರ್ಮಿಸುತ್ತಿದ್ದಾರೆ. ಪೂಜಾಗಾಂಧಿ ಅವರ ಡಬ್ಬಿಂಗ್ ನಿಂದ ಆಕೆಯಷ್ಟೆ ಅಲ್ಲ ಸ್ವತಃ ನಿರ್ದೇಶಕರು ಖುಷಿಯಾಗಿದ್ದಾರೆ.

ದೆಹಲಿ ಮೂಲದ ವಿದ್ಯಾರ್ಥಿನಿಯ ಪಾತ್ರದಲ್ಲಿ ಪೂಜಾಗಾಂಧಿ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಹಾಗಾಗಿ ಆಕೆಯ ಕನ್ನಡಉಚ್ಛಾರಣೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ.ಆದರೆ ಆಕೆ ನಮ್ಮ ನಿರೀಕ್ಷೆಗೂ ಮೀರಿ ಡಬ್ಬಿಂಗ್ ಹೇಳಿದ್ದಾರೆ. ಮುಂದಿನ ಆಕೆಯ ಎಲ್ಲ ಚಿತ್ರಗಳಿಗೂ ಆಕೆಯೇ ಡಬ್ಬಿಂಗ್ ಹೇಳಿಕೊಳ್ಳುವಷ್ಟರ ಮಟ್ಟಿಗೆ ಆಕೆಯ ಧ್ವನಿ ಸುಧಾರಿಸಿದೆ ಎನ್ನುತ್ತಾರೆ ಜಾಲಿ ಬಾಸ್ಟಿನ್. ನಿನಗಾಗಿ ಕಾದಿರುವೆ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಪೂಜಾಗಾಂಧಿ ಕುರಿತ ಈ ಎಲ್ಲ ವಿಚಾರಗಳು ಅನಾವರಣಗೊಂಡವು. ಅಂದಹಾಗೆ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬನಶಂಕರಿಯ ಬಿಗ್ ಬಜಾರ್ ಮಾರಾಟ ಮಳಿಗೆಯಲ್ಲಿ ತುಂಬಿದ ಜನಸಂದಣಿಯಲ್ಲಿ ಬಿಡುಗಡೆಯಾಯಿತು. ಈ ಚಿತ್ರಕ್ಕೆ ರಾಬಿನ್ ಅವರ ಸಂಗೀತವಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada