»   » ವಿಷ್ಣು ನಿಧನಕ್ಕೆ ನಿಮ್ಮ ಕಂಬನಿ

ವಿಷ್ಣು ನಿಧನಕ್ಕೆ ನಿಮ್ಮ ಕಂಬನಿ

Posted By:
Subscribe to Filmibeat Kannada

ಕನ್ನಡ ತೆರೆಯ ಹಿರಿಯ ಕಲಾವಿದ ಡಾ. ವಿಷ್ಣುವರ್ಧನ್ ಬುಧವಾರ ಮುಂಜಾನೆ ಮೈಸೂರಿನಲ್ಲಿ ನಿಧನರಾದರು. ಅವರ ನಿಧನದೊಂದಿಗೆ ಕನ್ನಡ ಚಿತ್ರರಂಗವನ್ನು ಬೆಳಗಿದ ಹಿರಿಯ ನಾಯಕ ನಟನೊಬ್ಬನನ್ನು ಕಳೆದುಕೊಂಡಂತಾಗಿದೆ. ಬುಧವಾರ ರಾತ್ರಿ ಹೃದಯಾಘಾತಕ್ಕೆ ಈಡಾದ ವಿಷ್ಣು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆಗಳು ಫಲಕಾರಿಯಾಗದೆ ನಸುಕಿನ 2.30ಕ್ಕೆ ಅವರು ಕೊನೆಯುಸಿರೆಳೆದರು.

ಇದು ಚಿತ್ರರಂಗಕ್ಕೆ ಮಾತ್ರವಲ್ಲ ಕನ್ನಡ ಚಿತ್ರರಂಗವನ್ನು ಪ್ರೀತಿಸಿದ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟ. ಬೆಂಗಳೂರಿನ ಜಯನಗರ ನಾಲ್ಕನೇ ಟಿ ಬ್ಲಾಕಿನಲ್ಲಿರುವ ವಿಷ್ಣು ಗೃಹದಲ್ಲಿ ಅವರ ಪಾರ್ಥೀವ ಶರೀರವನ್ನು ಇಡಲಾಗಿತ್ತು. ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಾರ್ಥೀವ ಶರೀರವನ್ನು ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿದೆ. ಸಂಜೆ ನಾಲ್ಕು ಗಂಟೆಯವರೆಗೆ ಅಂತಿಮ ದರ್ಶನ ಅಭಿಮಾನಿಗಳು ಪಡೆಯಬಹುದು. ನಾಲ್ಕರ ನಂತರ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಅಭಿಮಾನಿಗಳು ಶಾಂತಿಯಿಂದ ವರ್ತಿಸಬೇಕೆಂದು ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಕೋರಿದ್ದಾರೆ. ಅಗಲಿದ ಅಪ್ರತಿಮ ಕಲಾವಿದನಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಡೀ ಕನ್ನಡ ಚಿತ್ರೋದ್ಯಮ ಹರಿದುಬರುತ್ತಿದೆ. ಶಾಲಾ, ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ರಾಮಾಚಾರಿ, ಸಾಹಸಸಿಂಹ, ಯಜಮಾನ ವಿಷ್ಣುವರ್ಧನ್ ಅವರಿಗೆ ನಿಮ್ಮ ಕಂಬನಿ ಮಿಡಿಯಲು ಮತ್ತು ಕುಟುಂಬಕ್ಕೆ ಸಂತಾಪ ಸೂಚಿಸಲು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada