»   » ವಿಷ್ಣುವರ್ಧನ್ ಗೆ ತಟ್ಟಿತೆ ನಾಗವಲ್ಲಿ ಶಾಪ?

ವಿಷ್ಣುವರ್ಧನ್ ಗೆ ತಟ್ಟಿತೆ ನಾಗವಲ್ಲಿ ಶಾಪ?

Subscribe to Filmibeat Kannada

'ಆಪ್ತಮಿತ್ರ' ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ನಟಿ ಸೌಂದರ್ಯ ಸಾವಪ್ಪಿದ್ದರು. ಇದೀಗ 'ಆಪ್ತಮಿತ್ರ' ಚಿತ್ರದ ಮುಂದುವರಿದ ಭಾಗ 'ಆಪ್ತರಕ್ಷಕ' ಬಿಡುಗಡೆಗೆ ಸಜ್ಜಾಗಿದೆ. ಕಾಕತಾಳೀಯ ಎಂಬಂತೆ ಚಿತ್ರ ಬಿಡುಗಡೆಗೂ ಮುನ್ನ ವಿಷ್ಣುವರ್ಧನ್ ಸಾವಪ್ಪಿರುವುದು ನಿಜಕ್ಕೂ ವಿಷಾದನೀಯ. ಕೇಳಲು ಬಾಲೀಶ ಅನ್ನಿಸಿದರೂ ಇದೆಲ್ಲಾ ನಾಗವಲ್ಲಿಯ ಶಾಪ ಅನ್ನಿಸುವುದಿಲ್ಲವೆ? ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವಿಷ್ಣುವರ್ಧನ್ ಅವರಿಗೆ ನಾಗವಲ್ಲಿ ಕಾಟ ಕೊಟ್ಟಿದ್ದರು. ಇದನ್ನು ಸ್ವತಃ ವಿಷ್ಣುವರ್ಧನ್ ಅವರೇ ಆಗಾಗ ಹೇಳುತ್ತಿದ್ದರು.

ಆಗಾಗ ಕನಸಿನಲ್ಲಿ ನಾಗವಲ್ಲಿ ಬಂದು ಕಾಡುತ್ತಿದ್ದ ಬಗ್ಗೆಯೂ ವಿಷ್ಣುವರ್ಧನ್ ಹೇಳಿಕೊಂಡಿದ್ದರು. ಆಪ್ತ ರಕ್ಷಕ ಚಿತ್ರೀಕರಣ ವೇಳೆ ಅವರು ಕುದುರೆ ಮೇಲಿಂದ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ವಿಷ್ಣು ನೇರವಾಗಿ ಇದು ನಾಗವಲ್ಲಿಯ ಕಾಟ ಎನ್ನದಿದ್ದರೂ, ಕೆಲವು ಅನುಮಾನಾಸ್ಪದ ಘಟನೆಗಳು ನಡೆದಿವೆ ಎಂದಿದ್ದಂತೂ ನಿಜ. ಕನ್ನಡ ಚಿತ್ರೋದ್ಯಮದಲ್ಲೇ ಅತಿ ಹೆಚ್ಚು ಬಜೆಟ್ ನ ಚಿತ್ರವಾಗಿರುವ 'ಆಪ್ತರಕ್ಷಕ' ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೆ ಬಂದಿದೆ.

'ಆಪ್ತರಕ್ಷಕ' ಚಿತ್ರದ ನಾಯಕಿ ವಿಮಲಾ ರಾಮಾನ್ ಗೂ ನಾಗವಲ್ಲಿ ಕಾಟ ಕೊಟ್ಟಿದ್ದಳು. ಮೊದಲ ದಿನದ ಚಿತ್ರೀಕರಣ ಮುಗಿಸಿ ತನ್ನ ಹೋಟೆಲ್ ನಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಾಗವಲ್ಲಿಯ ನೆರಳು ಕಂಡಿದ್ದಾಗಿ ಈಕೆ ಹೇಳುತ್ತಾರೆ. ಮಧ್ಯರಾತ್ರಿ 12.30ರ ಸಮಯದಲ್ಲಿ ನೆರಳನ್ನು ಕಂಡು ಈಕೆ ಬೆಚ್ಚಿಬಿದ್ದಿದ್ದರು. ಅದರ ಸಂಪೂರ್ಣ ವರದಿ...

ಆದರೆ ಈ ಎಲ್ಲಾ ಸುದ್ದಿಯನ್ನು ವಿಷ್ಣು ಜತೆಗೆ ಈ ಹಿಂದೆ ಹಲವು ಚಿತ್ರಗಳಲ್ಲಿ ಜತೆಯಾಗಿ ಅಭಿನಯಿಸಿದ್ದ ಕುಳ್ಳ ಖ್ಯಾತಿಯ ದ್ವಾರಕೀಶ್ ಸಾರಾಸಗಟಾಗಿ ತಳ್ಳಿಹಾಕುತ್ತಾರೆ. ಕರಿಬಸವಯ್ಯ ಅವರನ್ನು ಅಭಿನಂದಿಸುವ ಸಮಾರಂಭದಲ್ಲಿ, ನಾಗವಲ್ಲಿ ಹಾಗೆಲ್ಲಾ ಕಾಡಬಹುದಿದ್ದರೆ, ನೇರವಾಗಿ ನನ್ನ ಆಪ್ತಮಿತ್ರ ಚಿತ್ರವನ್ನೇ ಕಾಡಬಹುದಿತ್ತು. ಆಗ ಕಾಡದ ನಾಗವಲ್ಲಿ ಈಗೆಲ್ಲಿ ಈ ಆಪ್ತರಕ್ಷಕನನ್ನು ಕಾಡುತ್ತಾಳೆಯೋ ನಾಕಾಣೆ. ಇಂತಹ ವಿಚಾರಗಳಿಂದ ಚಿತ್ರಕ್ಕೆ ಪ್ರಚಾರ ಪಡೆಯುವುದು ಸರಿಯಲ್ಲ. ಉತ್ತಮ ಚಿತ್ರವಾಗಿದ್ದರೆ ಖಂಡಿತ ಜನ ಬರುತ್ತಾರೆ. ಅದಕ್ಕೆ ಇಂತಹ ತಂತ್ರ ಮಾಡುವ ಅಗತ್ಯವಿಲ್ಲ ಎಂದು ಮಾತಿನ ಚಾಟಿ ಬೀಸಿದ್ದರು.

ಅಷ್ಟೇ ಅಲ್ಲ. ಅನವಶ್ಯಕವಾಗಿ ನಾಗವಲ್ಲಿಯ ಹೆಸರಿನಿಂದ ಭಯ ಸೃಷ್ಟಿಸುವುದು ತಪ್ಪು. ಇಲ್ಲಿ ನಾಗವಲ್ಲಿಯ ಹೆಸರೆತ್ತುವ ಅಗತ್ಯವೇ ಇಲ್ಲ. ಸರಿಯಾಗಿ ಕುದುರೆ ಓಡಿಸಲು ಬರದೆ ಕುದುರೆ ಹತ್ತಿ ಬಿದ್ದರೆ ಅದ್ಕಕೆ ನಾಗವಲ್ಲಿ ಹೇಗೆ ತಾನೇ ಕಾರಣಳಾಗುತ್ತಾಳೆ? ನಾಯಕಿಗೆ ಏನೋ ಹೆಚ್ಚು ಕಡಿಮೆಯಾಗಿ ಮೈಹುಷಾರು ತಪ್ಪಿದರೆ ಅದಕ್ಕೆ ನಾಗವಲ್ಲಿ ಯಾಕೆ ಹೊಣೆ ಹೊರಬೇಕು? ಇಂಥ ಇಲ್ಲಸಲ್ಲದ ವಾತಾವರಣದಲ್ಲಿ ನಾಗವಲ್ಲಿಯ ಹೆಸರೆತ್ತಿ ಚಿತ್ರಕ್ಕೆ ಪ್ರಚಾರ ಪಡೆಯುವುದು ತಪ್ಪು ಎಂದರು ದ್ವಾರಕೀಶ್ ಎಚ್ಚರಿಸಿದ್ದರು. ಅದೇನೇ ಇರಲಿ ಕಾಕತಾಳೀಯ ಎಂಬಂತೆ ಆಪ್ತ ರಕ್ಷಕ ಚಿತ್ರ ಬಿಡುಗಡೆಗೂ ಮುನ್ನ ವಿಷ್ಣು ಸಾವಪ್ಪಿದ್ದು ಶೋಚನೀಯ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada