»   » ಬಾಲಣ್ಣನ ಹೃದಯದಲ್ಲಿ ವಿಷ್ಣುಗೆ ಸ್ಥಾನ

ಬಾಲಣ್ಣನ ಹೃದಯದಲ್ಲಿ ವಿಷ್ಣುಗೆ ಸ್ಥಾನ

Posted By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಮೈಸೂರು ರಸ್ತೆ ಬಳಿಯ ಉತ್ತರ ಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲು ಕರ್ನಾಟಕ ಸರಕಾರ ತೀರ್ಮಾನಿಸಿದೆ. ಬುಧವಾರ ಸಂಜೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಹಾಗಂತ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ತಿಳಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದ 2 ಎಕರೆ ಜಮೀನಿನಲ್ಲಿ ಸುಮಾರು ರು.10 ಕೋಟಿ ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಅಭಿಮಾನ್ ಸ್ಟುಡಿಯೋ ಮಾಲೀಕರಿಗೆ ಬೇರೆಡೆ ಸ್ಥಳ ನೀಡುವುದಾಗಿ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಕನ್ನಡ ಚಿತ್ರರಂಗದ 'ಪಿತಾಮಹ' ಟಿ.ಎನ್.ಬಾಲಕೃಷ್ಣ ಅವರ ಕನಸಿನ ಕೂಸು ಅಭಿಮಾನ್ ಸ್ಟುಡಿಯೋ. ಈ ಸ್ಟುಡಿಯೋವನ್ನು ಬಾಲಕೃಷ್ಣ ಕಟ್ಟಲು ಪಟ್ಟಪಾಡು ಅಷ್ಟಿಷ್ಟಲ್ಲ.

1965ರಿಂದಲೂ ಬಾಲಣ್ಣ ಎದುರಿಸಿದ ಸವಾಲುಗಳು, ಸಮಸ್ಯೆಗಳು, ಪಟ್ಟ ಕಷ್ಟಗಳು ನೆನೆದರೆ ಕಣ್ತುಂಬಿ ಬರುತ್ತದೆ. ಮದರಾಸಿನ ಸ್ಟುಡಿಯೋಗಳಲ್ಲಿ ಕನ್ನಡದ ಕಲಾವಿದರಿಗೆ ಆಗುತ್ತಿದ್ದ ಅವಮಾನಗಳಿಂದ ಬೇಸತ್ತು ಬಾಲಣ್ಣ ಸ್ವಂತ ಸ್ಟುಡಿಯೋ ಕಟ್ಟಲು ನಿರ್ಧರಿಸಿದ್ದರು. ಅವರ ಅಭಿಮಾನದ, ಕನಸಿನ ಕೂಸೇ 'ಅಭಿಮಾನ್ ಸ್ಟುಡಿಯೋ'.

ರಾಜ್ಯದ ಮೂಲೆಮೂಲೆಗಳಿಂದ ಚಂದಾ ಎತ್ತಿ ತಮ್ಮ ಬೆವರಿನ ಹನಿಹನಿಯನ್ನೂ ಒಟ್ಟುಗೂಡಿಸಿ ಅಭಿಮಾನ್ ಸ್ಟುಡಿಯೋವನ್ನು ಬಾಲಣ್ಣ ಕಟ್ಟಿದರು. ಕನ್ನಡ ಚಿತ್ರರಂಗದ ಉದಾಸೀನತೆ ಒಳಗಾಗಿ ಬಾಲಣ್ಣನ ಕನಸಿನ ಕೂಸು ಅನಾಥವಾಗಿತ್ತು. ಪಾಳುಬಿದ್ದಿದ್ದ ಸ್ಟುಡಿಯೋವನ್ನು ಬಾಲಣ್ಣ ಅವರ ಮಗ ಶ್ರೀನಿವಾಸ್ ಒಂದು ಹಂತಕ್ಕೆ ಕೊಂಡೊಯ್ಯುವ ಸಾಹಸವನ್ನು ಮಾಡಿದ್ದರು. ಹಾಗಾಗಿ ಅಷ್ಟೋ ಇಷ್ಟೋ ಚಿತ್ರರಂಗದ ಚಟುವಟಿಕೆಗಳ ತಾಣವಾಗಿ ಅಭಿಮಾನ್ ಸ್ಟುಡಿಯೋ ಬದಲಾಗಿತ್ತು. ಇದೀಗ ವಿಷ್ಣುವರ್ಧನ್ ಅವರ ಸ್ಮಾರಕವಾಗಿ ಅಭಿಮಾನ್ ಸ್ಟುಡಿಯೋ ಬದಲಾಗುತ್ತಿದೆ.

ಬಾಲಣ್ಣನನ್ನು ಲಂಕೇಶ್ ನೆನೆದದ್ದು
ನಟ ಬಾಲಣ್ಣ ನಿಧನವಾದ ಸಂದರ್ಭದಲ್ಲಿ ಲೇಖಕ, ಪತ್ರಕರ್ತ ಪಿ. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಅವರನ್ನು ನೆನೆದು ಒಂದು ಲೇಖನ ಬರೆದಿದ್ದರು. ಆ ಲೇಖನದಲ್ಲಿ ಬಾಲಣ್ಣನ ಸ್ಟುಡಿಯೋ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆ ಆಯ್ದ ಭಾಗ ಇಲ್ಲಿದೆ ಓದಿ....ಬಾಲಕೃಷ್ಣ ಬಡವರಾಗೇ ಇದ್ದರು. ಶ್ರೀಮಂತರಾಗುವ ಉದ್ದೇಶ ಕೂಡ ಅವರಿಗೆ ಇದ್ದಂತಿರಲಿಲ್ಲ. ಅಭಿಮಾನ್ ಸ್ಟುಡಿಯೋ ಮಾಡಲೆತ್ನಿಸಿದ ಬಾಲಕೃಷ್ಣರಲ್ಲಿ ಎಲ್ಲವನ್ನೂ ಒಟ್ಟುಗೂಡಿಸಿ, ಮನವೊಲಿಸಿ, ಸಾಕಷ್ಟು ಹಣ ಸಂಗ್ರಹಿಸಿ ಸ್ಟುಡಿಯೋ ರೂಪಿಸುವ ಸಿದ್ಧತೆ, ಏಕಾಗ್ರತೆ ಇರಲಿಲ್ಲ. ಅವರಿಗಿದ್ದ ಸ್ವಾಭಿಮಾನ ಮತ್ತು ಅನುಭವಕ್ಕೆ ತಕ್ಕಂತಹ ಮುತ್ಸದ್ಧಿತನ, ವ್ಯವಹಾರ ಜ್ಞಾನ ಇರಲಿಲ್ಲ. ಇದು ಅವರ ಪ್ರತಿಭೆಯ ಮಿತಿ ಮತ್ತು ಅರ್ಥಪೂರ್ಣತೆಯತ್ತ ನಮ್ಮ ಗಮನಹರಿಸಬೇಕು.

ಕಿವುಡರಾದ ಮೇಲೂ ಅನುಭವದಿಂದ ಒಂದಿಷ್ಟೂ ತಪ್ಪದೇ, ಟೈಮಿಂಗ್ ಹೆಚ್ಚು-ಕಮ್ಮಿ ಮಾಡದೆ ಸಂಭಾಷಣೆ ಹೇಳಬಲ್ಲವರಾಗಿದ್ದ ಬಾಲಕೃಷ್ಣ ಒಂದು ರೀತಿಯ ಏಕತಾನದ ಅಭಿವ್ಯಕ್ತಿಯನ್ನು , ಯಾಂತ್ರಿಕ ಅಭಿನಯವನ್ನು ಕೂಡ ಬೆಳೆಸಿಕೊಂಡರು. ಚಿತ್ರ ವಿಮರ್ಶೆ, ಚರ್ಚೆ, ಆಕ್ಷೇಪಣೆ ಇಲ್ಲದ ಪರಿಸರದಲ್ಲಿ ಎಲ್ಲ ವೃತ್ತಿ ಕಲಾವಿದರೂ ರೂಢಿಸಿಕೊಳ್ಳುವ ಜಡತ್ವ ಇದು ; ಇದರಿಂದ ಹೊರಬರಲು ಕಲಾವಿದನಾದವನಿಗೆ ಸ್ಫೂರ್ತಿ, ಹಣ, ಪ್ರೋತ್ಸಾಹ ಎಲ್ಲ ಬೇಕಾಗುತ್ತದೆ. ಹೊಸಹೊಸ ಪ್ರಯೋಗ ಮಾಡುವ ಕುಶಲತೆ, ಅದಕ್ಕೆ ಸಾಕಷ್ಟು ವೇಳೆ ಬೇಕಾಗುತ್ತವೆ ; ಸದಾ ಜೀವನ ಸಾಗಿಸಲು ಹೋರಾಡುತ್ತಿದ್ದ ಬಾಲಕೃಷ್ಣ ಈ ಮ್ಯಾನರಿಸಂಗಳಲ್ಲೇ ತಂಗುತ್ತಿದ್ದರು ; ನಟಿಸುವುದನ್ನು ಸುಲಭ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಅಭಿಮಾನ್ ಸ್ಟುಡಿಯೋ ಉಳಿಸಿಕೊಳ್ರಪ್ಪ
ಬಾಲಣ್ಣ ಬದುಕಿದ್ದಾಗ ತಮ್ಮ ಅಭಿಮಾನ್ ಸ್ಟುಡಿಯೋ ಬಗ್ಗೆ ತಮ್ಮದೇ ಶೈಲಿಯಲ್ಲಿ ಹೇಳಿದ್ದರು. "ರಾಜಕಾರಣ ಅಂದ್ರೆ ಹುಡುಗಾಟವಲ್ರಪ್ಪ. ಒಳ್ಳೆ ಸಿನಿಮಾ ಕೊಟ್ರೆ ಜನ ಖಂಡಿತಾ ನೋಡ್ತಾರಪ್ಪ. ನಿಮಗೇಂತ ಮಾಡಿರೋ ಅಭಿಮಾನ್ ಸ್ಟುಡಿಯೋ ಉಳಿಸಿಕೊಳ್ರಪ್ಪ. ಬಂಗಾರದ ಮನುಷ್ಯನಂಥ ಚಿತ್ರ ತೆಗೆದು ಜನಕ್ಕೆ ಮಾದರಿ ಇಂಥ ಪಾತ್ರಗಳು ಅಂತ ಹೇಳ್ರಪ್ಪಾ ಎಂದಿದ್ದರು.

ಕಲಾವಿದರಿಗೆ ಜಾತಿ ರಾಜಕೀಯ ಯಾಕ್ರಪ್ಪಾ? ಕಾಮಿಡಿ ಹೆಸರಿನಲ್ಲಿ ಅಶ್ಲೀಲ ತುಂಬಿ ಚಿತ್ರರಂಗ ರಾಡಿ ಮಾಡಬೇಡ್ರಪ್ಪಾ. ರಾಜಕಾರಣದ ಸರ್ವಜ್ಞರು ನಾವು ಅನ್ನೋದಾದ್ರೆ ಚಿತ್ರರಂಗದಲ್ಲಿರೋ ರಾಜಕಾರಣಕ್ಕೆ ಫುಲ್ ಸ್ಟಾಪ್ ಹಾಕಿ. ಅದು ಬಿಟ್ಟು ಗೆದ್ದರೆ ಅಲ್ಲಿ ಬಿದ್ದರೆ ಇಲ್ಲಿ ಅಂತನ್ನ ಬೇಡಿ" ಎಂದು ಮಂಕಿ ಕ್ಯಾಪ್ ಸರಿಸಿ ಹೇಳಿದ್ದರು ಬಾಲಣ್ಣ.

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲು ಅವಕಾಶ ಕೊಟ್ಟ ಬಾಲಣ್ಣನ ಕುಟುಂಬಿಕರು ಅವರ ಗೌರವ, ಘನತೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಅಭಿಮಾನ್ ಸ್ಟುಡಿಯೋದ ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನವಾರಾಗಲಿದ್ದಾರೆ. ಬಾಲಣ್ಣನ ಹೃದಯವೇ ಆಗಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಗೆ ಸ್ಥಾನ ದೊರೆತಂತಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada