For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ದಿಕ್ಕಿನಲ್ಲಿ ವಿಷ್ಣುವರ್ಧನ್ ಪಯಣ

  By Staff
  |

  ಬೆಂಗಳೂರು, ಡಿ. 30 : ಕಳೆದ ಮೂವತ್ತೇಳು ವರ್ಷಗಳಿಂದ ಕನ್ನಡ ಸಿನಿಮಾ ಜಗತ್ತಿನಲ್ಲಿ ತನ್ನದೆ ಆದ ಛಾಪು, ಮತಾಪು ಮೂಡಿಸಿದ್ದ ಮೈಸೂರಿನ ಸಂಪತ್ ಕುಮಾರ್ ಅಲಿಯಾಸ್ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರು ಪಂಚಭೂತಗಳಲ್ಲಿ ಲೀನವಾದರು. ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಉತ್ತರಹಳ್ಳಿಯಲ್ಲಿರುವ ಬಾಲಣ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಹಿಂದೂ ಧರ್ಮದ ವಿಧಿವಿಧಾನದ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು.

  ಶ್ರೀರಂಗಪಟ್ಟಣದ ಜ್ಯೋತಿಷಿ ಪಂಡಿತ ಭಾನುಪ್ರಕಾಶ್ ನೇತೃತ್ವದಲ್ಲಿ ಮಂತ್ರ ಮತ್ತು ವೇದಘೋಷಗಳ ಮೂಲಕ ಅಂತ್ಯಕ್ರಿಯೆ ಕಾರ್ಯಕ್ರಮ ಸಾಂಗೋಪಾಂಗವಾಗಿ ನೆರವೇರಿತು. ವಿಷ್ಣುವರ್ಧನ್ ಅವರ ಚಿತೆಗೆ ಅವರ ಅಣ್ಣ ರವಿ ಅವರು ಸಂಜೆ 8ಗಂಟೆ 8 ನಿಮಿಷಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ವಿಷ್ಣು ಅವರ ಪರಲೋಕ ಯಾತ್ರೆಗೆ ಚಾಲನೆ ನೀಡಿದರು. ವಿಷ್ಣುವರ್ಧನ್ ಅವರ ಚಿತೆಗೆ ಅಳಿಯ ನಟ ಅನಿರುದ್ಧ, ನಟ ಶ್ರೀಧರ್ ಇಲ್ಲವೇ ಅವರ ಹೆಣ್ಣು ಮಕ್ಕಳಾದ ಕೀರ್ತಿ ಅಥವಾ ಚಂದನಾ ಸಿದ್ಧಾರ್ಥ್ ಅವರು ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆಗೆ ವಿಷ್ಣು ಅವರ ಅಣ್ಣ ರವಿ ಕಾರ್ಯವನ್ನು ನೆರವೇರಿಸಿದರು.

  ಭಾರತಿ ವಿಷ್ಣುವರ್ಧನ್ ಹಾಗೂ ಅವರ ಕುಟುಂಬದ ಬಂಧು ಬಾಂಧವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅಂಬರೀಷ್, ಸಚಿವರಾದ ಕರುಣಾಕರರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು, ಆರ್ ಅಶೋಕ್, ಸಂಸದ ಅನಂತಕುಮಾರ್, ಶಾಸಕಿ ಶೋಭಾ ಕರಂದ್ಲಾಜೆ ಸೇರಿ ಗಣ್ಯಾತಿಗಣ್ಯರು, ವಿಷ್ಣುವರ್ಧನ್ ಅವರ ಅಪಾರ ಹಿತೈಷಿಗಳು, ಸ್ನೇಹಿತರು ಹಾಗೂ ಲಕ್ಷಾಂತರ ಅಭಿಮಾನಿಗಳು ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ವಿಷ್ಣು ಅವರ ಆತ್ಮದ ಗೆಳೆಯ ಅಂಬರೀಷ್, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ, ಹಿರಿಯ ನಟ ಶಿವರಾಂ, ಅರ್ಜುನ್ ಸರ್ಜಾ, ಅವಿನಾಶ್, ಗುರುಕಿರಣ್, ಶ್ರೀನಾಥ್, ರಾಕ್ ಲೈನ್ ವೆಂಕಟೇಶ್, ಕೊಬ್ರಿ ಮಂಜು ಸೇರಿದಂತೆ ಚಿತ್ರರಂಗದ ಎಲ್ಲರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

  ಪಾರ್ಥೀವ ಶರೀರದ ಅಂತಿಮಯಾತ್ರೆ ನಡೆಯುತ್ತಿರುವ ಸಂದರ್ಭದಲ್ಲಿ ಕೂಡಾ ಅಭಿಮಾನಿಗಳು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟು ಮಾಡಿದರು. ಪಾರ್ಥಿವ ಶರೀರದ ಅಂತಿಮ ಯಾತ್ರೆಯ ದಾರಿಯುದ್ದಕ್ಕೂ ಅಭಿಮಾನಿಗಳು ತೀವ್ರ ಗಲಾಟೆ ನಡೆಸಿದರು. ಡಿವಿಜಿ ರಸ್ತೆ, ಗಾಂಧಿ ಬಜಾರ್, ರಾಮಕೃಷ್ಣ ಆಶ್ರಮದ ವೃತ್ತ, ಜಯನಗರಗಳಲ್ಲಿ ಕಲ್ಲು ತೂರಾಟ ನಡೆಯಿತು. ಸ್ಟೂಡಿಯೋ ಒಳಗೆ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ ಒಳಗೆ ನುಗ್ಗಿಬರಲು ಪ್ರಯತ್ನಿಸುತ್ತಿದ್ದ ಅಭಿಮಾನಿಗಳನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಸ್ಟುಡಿಯೋ ಒಳಗೆ ಬಿಡದ ಕಾರಣ ಕೆಳ ಅಭಿಮಾನಿಗಳು ಎರಡು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಟಿವಿ ವಾಹಿನಿಗೆ ಸೇರಿದ ವಾಹನ ಕೂಡ ಜಖಂಗೊಂಡಿದೆ.

  ವಿಷ್ಣು ಸಿಟಿ : ಅಗಲಿದ ಕಲಾವಿದನ ನೆನಪಿನಲ್ಲಿ ಹೆಸರುಘಟ್ಟದ ಸಮೀಪ ಸ್ಮಾರಕ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಸ್ಮಾರಕವೂ ಚಿತ್ರ ನಿರ್ಮಾಣ ಚಟುವಟಿಕೆಗಳ ಕೇಂದ್ರವಾಗಲಿದ್ದು, ಹೈದರಾಬಾದ್ ನಲ್ಲಿರುವ ರಾಮೋಜಿರಾವ್ ಫಿಲಂ ಸಿಟಿ ಮಾದರಿಯಲ್ಲಿ ಇರುತ್ತದೆ ಎಂದು ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ ಹೇಳಿದ್ದಾರೆ.

  ವಿಧಾನ ಪರಿಷತ್ ನಲ್ಲಿ ಬುಧವಾರ ನಟ ವಿಷ್ಣುವರ್ಧನ್ ಅವರಿಗ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಈ ಇಂಗಿತ ನೀಡಿದ್ದಾರೆ. ಉದ್ದೇಶಿತ ಸ್ಮಾರಕಕ್ಕೆ ಸರಕಾರ 10 ಕೋಟಿ ರುಪಾಯಿಗಳನ್ನು ಮೀಸಲಿಡುವ ಇಚ್ಚೆ ವ್ಯಕ್ತಪಡಿಸಿದೆ. ಇದದ ಜೊತೆಯಲ್ಲಿ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ವಿಷ್ಣು ಸ್ಮಾರಕ ನಿರ್ಮಿಸುವ ಸಲುವಾಗಿ ಸರಕಾರ ಎರಡು ಎಕರೆ ಜಮೀನನ್ನು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ಧಾನ ಮಾಡಿದ್ದಾರೆ. ಜತೆಗೆ, ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರ ಹೆಸರಿನಲ್ಲಿ ಜೀವಮಾನ ಪ್ರಶಸ್ತಿಯೊಂದನ್ನು ಸ್ಥಾಪಿಸುವ ಇಂಗಿತವನ್ನು ಸರಕಾರ ವ್ಯಕ್ತಪಡಿಸಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X