»   »  ಗುಲಾಬಿ ಟಾಕೀಸ್‌ಗೆ ಸ್ವರ್ಣಕಮಲ ತಪ್ಪಿದ್ದೇಕೆ?

ಗುಲಾಬಿ ಟಾಕೀಸ್‌ಗೆ ಸ್ವರ್ಣಕಮಲ ತಪ್ಪಿದ್ದೇಕೆ?

By: *ಜಯಂತಿ
Subscribe to Filmibeat Kannada

ಪ್ರಕಾಶ್ ರೈಗೆ ಸ್ವರ್ಣಕಮಲ ತಂದುಕೊಟ್ಟಿರುವ 'ಕಾಂಜೀವರಂ' ಚಿತ್ರ ನೋಡಿದವರೆಲ್ಲ ಅದನ್ನು ಮೆಚ್ಚಿಕೊಂಡು ರೈಗೆ ಶಹಬ್ಭಾಸ್‌ಗಿರಿ ಕೊಡುತ್ತಿರುವುದು, ಕನ್ನಡಿಗನ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಿರುವುದು ಸರಿಯಷ್ಟೇ. ಆ ಹೆಮ್ಮೆಯ ನಡುವೆಯೂ ಕೆಲವು ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆ ಕಾಂಜೀವರಂಗೆ ಸ್ವರ್ಣಕಮಲ ಬರಬಹುದಾಗಿತ್ತಾದರೆ ಅಪ್ಪಟ ಕನ್ನಡ ಚಿತ್ರ 'ಗುಲಾಬಿ ಟಾಕೀಸ್'ಗೂ ಬರಬೇಕಿತ್ತಲ್ಲವೇ?

ಕಾಂಜೀವರಂ ಅಪರೂಪದ ಚಿತ್ರ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ನಿರ್ದೇಶಕರ ಬದ್ಧತೆ, ನಟನ ಪ್ರತಿಭೆ, ನಿರ್ಮಾಣದಲ್ಲಿನ ಪ್ರೀತಿ, ಅದ್ಭುತ ಕಥೆ- ಎಲ್ಲವೂ ಮೇಳೈಸಿರುವ ಚಿತ್ರವದು. ಆದರೆ ಭಾವುಕ ನೆಲೆಗಟ್ಟಿನ ಕಾಂಜೀವರಂ ಕಮರ್ಷಿಯಲ್ ಹಾಗೂ ಕಲಾತ್ಮಕ ಎರಡೂ ಬಗೆಯ ಪ್ರೇಕ್ಷಕರನ್ನು ತಲುಪುವ ಉದ್ದೇಶದ ಚಿತ್ರ. ಹಾಗಾಗಿಯೇ ಕಥೆಯಲ್ಲಿ ಭಾವುಕತೆಯ ವಿಜೃಂಭಣೆ ಹೆಚ್ಚು. ಬಡತನವನ್ನು ಕೂಡ ಸುಂದರವಾಗಿ ಕಾಣಿಸುವ ಚಿತ್ರವದು.

ಗುಲಾಬಿ ಹಾಗಲ್ಲ. ಈ ಕ್ಷಣದ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಚಿತ್ರವದು. ಕೆಲವರ ಪ್ರಕಾರ ಗಿರೀಶ್‌ರ ಈವರೆಗಿನ ಚಿತ್ರಗಳಲ್ಲಿ ಗುಲಾಬಿ ಅತ್ಯುತ್ತಮವಾದುದು. ಹಾಗಾದರೆ ಗುಲಾಬಿ ಟಾಕೀಸ್ ಸ್ವರ್ಣದ ಸ್ಪರ್ಧೆಯಲ್ಲಿ ಹಿಂದೆ ಬಿದ್ದುದು ಎಲ್ಲಿ? ಒಂದು ಸುದ್ದಿಮೂಲ ಹೀಗನ್ನುತ್ತದೆ...

ರಾಷ್ಟ್ರಪ್ರಶಸ್ತಿ ಆಯ್ಕೆಗೆ ಸಿನಿಮಾಗಳನ್ನು ನೋಡುವಾಗ ಗುಲಾಬಿ ಟಾಕೀಸ್ ಪ್ರದರ್ಶನದಲ್ಲಿ ಎರಡು ಸಲ ಅಡಚಣೆ ಉಂಟಾಗಿತ್ತಂತೆ. ಹದಿನಾರು ಎಂಎಂ ಸಿನಿಮಾಗಳನ್ನು ಪ್ರದರ್ಶಿಸುವಾಗ ಅವುಗಳನ್ನು ಸಿನಿಮಾಸ್ಕೋಪ್‌ಗೆ ಹೊಂದಿಸಿಕೊಳ್ಳುವುದು ರೂಢಿ. ಈ ಪ್ರಕ್ರಿಯೆಯಲ್ಲಿ ಉಂಟಾದ ತೊಡಕು ಗುಲಾಬಿಯ ಸರಾಗ ಪ್ರದರ್ಶನಕ್ಕೆ ತಡೆ ಉಂಟುಮಾಡಿದೆ. ಹಲವು ವಿರಾಮಗಳಿಂದಾಗಿ ಸಿನಿಮಾ ಆಯ್ಕೆಗಾರರನ್ನು ಸರಿಯಾಗಿ ಮುಟ್ಟುವುದು ಸಾಧ್ಯವಾಗಲಿಲ್ಲ. ಎಷ್ಟೇ ಅದ್ಭುತ ಚಿತ್ರವಾದರೂ ಬಿಟ್ಟು ಬಿಟ್ಟು ನೋಡಿದಲ್ಲಿ ಅದರ ಪರಿಣಾಮ ಅಷ್ಟಕ್ಕಷ್ಟೆ. ಈ ತಾಂತ್ರಿಕ ಸತ್ಯವೇ ಗುಲಾಬಿಯನ್ನು ಪೋಟಿಯಲ್ಲಿ ಹಿಂದಾಗಿಸಿದೆ.

ಗುಲಾಬಿ ಸ್ವರ್ಣಕಮಲ ಪಡೆಯದಿದ್ದರೂ ಕನ್ನಡಿಗನ ಚಿತ್ರವೊಂದಕ್ಕೇ ಉನ್ನತ ಸಮ್ಮಾನ ಸಂದಿತಲ್ಲ ಎನ್ನುವುದು ಉಳಿದಿರುವ ಸಮಾಧಾನ. ಅಂದಹಾಗೆ, ಸದ್ಯ ಗಿರೀಶರು ಅಮರೇಶ ನುಗಡೋಣಿಯವರ ಕಥೆಯನ್ನಾಧರಿಸಿದ ಕನಸೆಂಬೊ ಕುದುರೆಯನೇರಿ ಚಿತ್ರದಲ್ಲಿ ಮುಳುಗಿದ್ದಾರೆ. ಗುಲಾಬಿಯಲ್ಲಿ ತಪ್ಪಿದ ಚಿನ್ನ ಈ ಸಲವಾದರೂ ಸಿಗಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada