»   » ಶಂಕರನಾಗ್ ಹೋಗಿ ಇಂದಿಗೆ ಹದಿನೇಳು ವರ್ಷ?

ಶಂಕರನಾಗ್ ಹೋಗಿ ಇಂದಿಗೆ ಹದಿನೇಳು ವರ್ಷ?

Posted By: * ಮಹೇಶ್ ಮಲ್ನಾಡ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  Shankar Nag
  ಶಂಕರ್ ನಾಗ್ ಎಂದರೆ ಸಾಕು  ಕನ್ನಡಿಗರಲ್ಲಿ ಏನೋ ಒಂದು ರೀತಿ ಹುರುಪು ಮತ್ತು ಲವಲವಿಕೆ ಮೂಡುತ್ತದೆ. ಸಾಧನೆಯ ಉತ್ತುಂಗಕ್ಕೇರುವ ತವಕದಲ್ಲಿ ಅವಿರತವಾಗಿ ಪಾದರಸದಂತೆ ಕೆಲಸಮಾಡುತ್ತಿದ್ದ ಶಂಕರ್ ಮೇಲೆ ವಿಧಿಗೆ ಅದೇನು ಮುನಿಸೋ ಏನೋ . 1990ರ ಸೆ. 30ರಂದು  ತನ್ನ ಬಳಿಗೆ ಕರೆದುಕೊಂಡು ಬಿಟ್ಟಿತು.

  ಶಂಕರ್ ನಾಗ್ ಎಂದರೆ ಸಾಕು  ಕನ್ನಡಿಗರಲ್ಲಿ ಏನೋ ಒಂದು ರೀತಿ ಹುರುಪು ಮತ್ತು ಲವಲವಿಕೆ ಮೂಡುತ್ತದೆ. ಸಾಧನೆಯ ಉತ್ತುಂಗಕ್ಕೇರುವ ತವಕದಲ್ಲಿ ಅವಿರತವಾಗಿ ಪಾದರಸದಂತೆ ಕೆಲಸಮಾಡುತ್ತಿದ್ದ ಶಂಕರ್ ಮೇಲೆ ವಿಧಿಗೆ ಅದೇನು ಮುನಿಸೋ ಏನೋ . 1990ರ ಸೆ. 30ರಂದು  ತನ್ನ ಬಳಿಗೆ ಕರೆದುಕೊಂಡು ಬಿಟ್ಟಿತು.

  ತಮ್ಮ ಪತ್ನಿ ಅರುಂಧತಿ ಮತ್ತು ಅವರ ಮಗಳ ಕಾವ್ಯ ಜೊತೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಶಂಕರ್ ಅಂದು(ಸೆ.30) ಪ್ರಯಾಣಿಸುತ್ತಿದ್ದರು. ತಮ್ಮ ಮುಂದಿನ ಚಿತ್ರ ಜೋಕುಮಾರ ಸ್ವಾಮಿ ಬಗ್ಗೆ ನಿರ್ದೇಶಕ ಟಿ.ಎಸ್. ನಾಗಾಭರಣ ಜೊತೆ ಚರ್ಚಿಸಲು ಅವರು ತೆರಳುತ್ತಿದ್ದರು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಅವರ ಪಯಣವನ್ನು ಅದು ಬದಲಿಸಿತ್ತು. ಶಂಕರ್ ಇಲ್ಲ ಇಲ್ಲ ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಇಂದಿಗೂ ಕನ್ನಡ ಚಿತ್ರರಂಗಕ್ಕೆ ಕಷ್ಟವಾಗುತ್ತಿದೆ. 

  ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ'ಚಿತ್ರದಲ್ಲಿ ಗಂಡುಗಲಿ ಪಾತ್ರ ನಿರ್ವಹಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣ ಮಾಡಿದ ಶಂಕರ, ಕನ್ನಡಚಿತ್ರರಂಗ ಕಂಡ ಅಪರೂಪದ ನಟ, ನಿರ್ದೇಶಕ ಎಂಬುದು ನಿರ್ವಿವಾದ. ಸುಮಾರು 12ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು, ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಚಿತ್ರಗಳಲ್ಲಿ ಶಂಕರ್ ಅಭಿನಯಿಸಿದ್ದರು. ಹಿಂದಿಯಲ್ಲಿ ಕಾರ್ನಾಡರ ಉತ್ಸವ್ ಚಿತ್ರದಲ್ಲಿ ಕೂಡ ಪಾತ್ರವಹಿಸಿದ್ದರು.

  ನಿರ್ದೇಶಕನಾಗಿ ಶಂಕರ್ :

  ಮಿಂಚಿನ ಓಟ, ಆಕ್ಸಿಡೆಂಟ್, ಗೀತಾ, ಜನ್ಮಜನ್ಮದ ಅನುಬಂಧ,ನೋಡಿ ಸ್ವಾಮಿ ನಾವಿರೋದೇ ಚಿತ್ರಗಳಲ್ಲಿ ಶಂಕರ್ ತಮ್ಮ ನಿರ್ದೇಶನದ ಮ್ಯಾಜಿಕ್ ತೋರಿಸಿದ್ದಾರೆ. ಆರ್ .ಕೆ. ನಾರಾಯಣ್ ಅವರ 'ಮಾಲ್ಗುಡಿ ಡೇಸ್'ನಂಥ ಉತ್ತಮ ಕಥಾನಕಗಳನ್ನು ತೆರೆಗೆ ಅಳವಡಿಸಿದ್ದು ಇನ್ನೊಂದು ಸಾಧನೆ.

  'ರಂಗ'ಶಂಕರ :

  ಚಿತ್ರರಂಗದ ಜೊತೆಗೆ ತಮ್ಮ ಮೆಚ್ಚಿನ ನಾಟಕರಂಗದಲ್ಲಿ ಕೂಡ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಶಂಕರ್, ನೋಡಿ ಸ್ವಾಮಿ ನಾವಿರೋದೇ ಹೀಗೆ, ನಾಗಮಂಡಲ, ಅಂಜುಮಲ್ಲಿಗೆ ಮುಂತಾದ ನಾಟಕಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಮರಾಠಿ ನಾಟಕಗಳನ್ನಾಡುತ್ತಿದ್ದ ಶಂಕರ್ ಹಾಗೂ ಅರುಂಧತಿಯವರು ಕನ್ನಡ ನಾಟಕ ರಂಗಕ್ಕೆ ಬಂದದ್ದು  ನಿಜಕ್ಕೂ ಸಾರ್ಥಕ. ಶಂಕರನ ಕನಸಿನ ಕೂಸಾದ ರಂಗಮಂದಿರವನ್ನು ಕಟ್ಟಿ ಬೆಳೆಸುವ ಜವಾಬ್ದಾರಿಯನ್ನು, ಅರುಂಧತಿ ಪೂರೈಸಿದ್ದಾರೆ.  ರಂಗಶಂಕರ ಹಾಗೂ ಶಂಕರನ ಸಂಕೇತ್ ನಾಟಕ ತಂಡಕ್ಕೆ ಸಹೃದಯರ ಬೆಂಬಲ ಸದಾ ಇದ್ದೇ ಇದೆ.

  ಆದರೆ ಅಷ್ಟು ವರ್ಷ ತಾನಾಯಿತು ತನ್ನ ಪಾಡಾಯಿತು ಎನ್ನುತ್ತಾ ಜೀವಿಸಿದ ಶಂಕರ್ ಸಾಮಾನ್ಯನಲ್ಲ. ತನ್ನ ಪಾಲಿಗೆ ಒಲಿದ ಜನಮನ್ನಣೆ, ಯಶಸ್ಸನ್ನು  ಮುಡಿಗೇರಿಸಿಕೊಂಡು ಕುಣಿಯದೆ, ತೀರ ಸಾಮಾನ್ಯರಂತೆ ಎಲ್ಲರ ಕಷ್ಟಸುಖಗಳಿಗೆ ಸ್ಪಂದಿಸಿದ ರೀತಿ ಅದ್ಭುತ. ಅನೇಕ ಕನಸುಗಳನ್ನು ಹೊತ್ತು ಸಾಗುತ್ತಿದ್ದ(ಶರ ವೇಗದಲ್ಲಿ?) ಶಂಕರ್ ಒಮ್ಮೆಗೆ ಕಣ್ಮರೆಯಾಗಿದ್ದು ಮಾತ್ರ ದೊಡ್ಡ ನಷ್ಟ.

  ***

  ನನ್ನ ತಮ್ಮ ಶಂಕರ :

  ಅನಂತ್ ನಾಗ್ ಬರೆದಿರುವ 'ನನ್ನ ತಮ್ಮ ಶಂಕರ'ಪುಸ್ತಕ ಇತ್ತೀಚೆಗೆ ಓದಿದೆ. ಶಂಕರನ ಬಾಲಲೀಲೆಗಳಿಂದ ಶುರುವಾಗುವ ಕಥಾನಕವು ಅನೇಕ ಕಾರಣಕ್ಕೆ ಇಷ್ಟವಾಯಿತು. ಶಂಕರನ ಜೀವನದ ಒಳ-ಹೊರಗನ್ನು ತೋರುವ ಕಥೆಯಲ್ಲಿ ಎಲ್ಲೂ ಅತಿಯಾದ ವೈಭವೀಕರಣ ಇಲ್ಲ. ನಿರೂಪಣಾ ಶೈಲಿ ಸರಳ. ಕೆಲವೊಮ್ಮೆ ಆಪ್ತರ ಬಗ್ಗೆ ಬರೆಯುವಾಗ ದುಃಖ ಸ್ಫೋಟಗೊಂಡು, ವಿಷಯ ಹಾದಿ ತಪ್ಪುವ ಸಾಧ್ಯತೆಗಳೇ ಹೆಚ್ಚು. ಆದರೆ ಈ ಪುಸ್ತಕದಲ್ಲಿ ವಾಸ್ತವಿಕತೆಯ ಅರಿವಿನೊಂದಿಗೆ ಗತಜೀವನದ ಸಮೀಕರಣ ನಡೆದಿದೆ ಎನ್ನಬಹುದು.

  ಪುಸ್ತಕದಲ್ಲಿ ಶಂಕರನ ಒಳ್ಳೆಯತನದ ಚಿತ್ರಣವನ್ನು ಸ್ಥೂಲವಾಗಿ ನೀಡಿದ್ದಾರೆ ಅನಂತ್. ಆಶ್ರಮದಂತಹ ಗಂಭೀರವಾದ ಪರಿಸರವೂ ಕೂಡ ಹೇಗೆ ಮಗುವಿನ ನಗುವಿನಿಂದ ತಿಳಿಯಾಯಿತು ಎಂಬುದನ್ನು ಅನಂತ್ ಬರೆದಿದ್ದಾರೆ. ಚಿಕ್ಕಂದಿನಲ್ಲಿ ದೊರೆಯುವ ಒಳ್ಳೆಯ ಸಂಸ್ಕಾರ, ಮುಂದೆ ಹೇಗೆ ಉಪಯೋಗವಾಗುತ್ತದೆ ಎಂಬ ಅರಿವು ಮೂಡಿಸುವಲ್ಲಿ ಅನಂತ್ ಯಶಸ್ವಿಯಾಗಿದ್ದಾರೆ. ಬಾಲ್ಯದಿಂದಲೇ ಶಂಕರನಲ್ಲಿ ಮೂಡಿದ್ದ ಕಲಿಕೆಯ ಹಂಬಲ, ಅವನ ಧೈರ್ಯದ ಸ್ವಭಾವ , ಗುರು ಹಿರಿಯರಲ್ಲಿ ತೋರುತ್ತಿದ್ದ ಗೌರವ ಎಲ್ಲವನ್ನೂ ಅನಂತ್‌ನಾಗ್ ವಿವರಿಸಿದ್ದಾರೆ.

  ಕರಾವಳಿಯ ವಿಶಾಲವಾದ ಪರಿಸರದಲ್ಲಿ ಶಂಕರ ಬೆಳೆದ ಮೇಲೆ, ಮುಂಬಯಿಯ ಸಂಕುಚಿತ ಗಲ್ಲಿಗಳಲ್ಲಿ ಇಕ್ಕಟ್ಟಿನ ಚಾಳಿಯಲ್ಲಿ ವಾಸ ಮಾಡಿದ ಅನುಭವಗಳು ನಿಜಕ್ಕೂ ಸುಂದರವಾಗಿ ನಿರೂಪಿತವಾಗಿದೆ. ಕೊಂಕಣಿ, ಮರಾಠಿ, ಹಿಂದಿ ಹೀಗೆ ಅನೇಕ ಭಾಷೆಗಳ, ಸಂಸ್ಕೃತಿಯ ಪರಿಚಯದ ಲಾಭ ಮುಂದೆ ಶಂಕರನ ಜೀವನದ ಹೆಜ್ಜೆಯಲ್ಲಿ ಪ್ರತಿಬಿಂಬಿತವಾಗಿದೆ.

  ಶಂಕರ್ ಹಾಗೂ ಅನಂತ್‌ರ ಒಡನಾಟದ ಬಗ್ಗೆ ಸುವಿಸ್ತಾರವಾಗಿರುವ ಕಥನದಲ್ಲಿ ಕಾಣಬರುವ ಅಂಶವೆಂದರೆ, ಭಾವನಾಜೀವಿಯಾದ ಅನಂತ್ ತಾವು ಕಲಿತ ಸದ್ವಿದ್ಯೆಗಳನ್ನೆಲ್ಲಾ ತನ್ನ ಪ್ರೀತಿಯ ತಮ್ಮನಿಗೆ ಒಂದೊಂದಾಗಿ ಧಾರೆಯೆರೆದಿದ್ದು. ಅಣ್ಣ ತಮ್ಮನ ಪ್ರೀತಿಯ ಒಡನಾಟದ ಬಗ್ಗೆ ಪುಸ್ತಕದಲ್ಲಿ ಹಲವು ಘಟನೆಗಳಿವೆ.

  ಶಂಕರ್ ನಾಗ್ ಅವರು ಗಾಂಧೀಜಿ ತತ್ವಪಾಲಕ. ಗಾಂಧಿ ಹೇಳಿದಂತೆ ಬ್ಯಾಕ್ ಟು ವಿಲೇಜ್ ಅಂದ್ರೆ ನಗರದಿಂದ ದೂರದಲ್ಲಿ ಮನೆ ಮಾಡಿ ಸ್ವಾವಲಂಬಿಯಾಗಿ ಎನ್ನುವ ಸಂದೇಶವನ್ನು ಶಂಕರ್ ಇಷ್ಟಪಟ್ಟಿದ್ದರು. 'ಜೀವನ ಬಂದಂತೆ ನಾವು ಅನುಭವಿಸಬೇಕು', 'ಕೆರೆಯ ನೀರನು ಕೆರೆಗೆ ಚೆಲ್ಲಿ...' ಈ ರೀತಿಯ ತತ್ವಗಳು ಶಂಕರನ ಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಅನಂತ್ ಎತ್ತಿಹಿಡಿದಿದ್ದಾರೆ. 

  ಅನಂತ್ ಈ ಹೊತ್ತಿಗೆಗೆ 'ನನ್ನ ತಮ್ಮ ಶಂಕರ'ಎಂದು ಹೆಸರಿಟ್ಟು ತಮ್ಮನ ಜೊತೆಗಿನ ಒಡನಾಟದ ಬಗ್ಗೆ ಹೆಚ್ಚು ಬರೆದಿದ್ದಾರೆ. ಆದರೆ ಶಂಕರನ ವೈಯಕ್ತಿಕ ಬದುಕು, ಅವನ ಮಡದಿ, ಮಗು, ಅವಿರತ ದುಡಿಮೆಯ ನಡುವೆ ಸಾಂಸಾರಿಕವಾಗಿ ಅವನು ತೊಡಗಿಸಿಕೊಂಡ ರೀತಿ, ಮನೆಯವರ ಬೆಂಬಲದ ಬಗ್ಗೆ ಒಂದಿಷ್ಟು ಮಾಹಿತಿ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನಿಸುತ್ತದೆ.

  ಸದಾ ಹೊಸತನ ಶಂಕರ್ ವಿಶೇಷತೆ. ಕನಸುಗಳ ಬೆನ್ನತ್ತಿ ಸುತ್ತುತ್ತಿದ್ದ ಶಂಕರನು ಹಾಕಿಕೊಂಡ ಯೋಜನೆಗಳು ಅನೇಕ. ಸ್ಟುಡಿಯೋ ಆಯಿತು, ತೋಟದ ಮನೆ ಮಾಡಿ ವಾಸಮಾಡಿಯಾಗಿತ್ತು, ಡೈರಿ ಆರಂಭಿಸಿದ್ದು ಆಯಿತು. ಇದಕ್ಕಿಂತಲೂ ಹೆಚ್ಚಿನ ರೀತಿಯ ಯೋಜನೆಗಳ ಸರಮಾಲೆ ಶಂಕರನ ತಲೆಯಲ್ಲಿ ತುಂಬಿತ್ತು. ಆತನ ಯೋಜನೆಗಳನ್ನು ಪಟ್ಟಿ ಮಾಡುವುದಾದರೆ :

  ಕಂಟ್ರಿ ಕಬ್ಲ್ -ಸಾರ್ವಜನಿಕರಿಗಾಗಿ
  ಅಮ್ಯೂಸ್‌ಮೆಂಟ್ ಪಾರ್ಕ್-ನಂದಿ ಬೆಟ್ಟದ ಕೆಳಗೆ
  ನಂದಿ ಬೆಟ್ಟಕ್ಕೆ ರೋಪ್‌ವೇ
  ನಂದಿಬೆಟ್ಟದ ಪಕ್ಕದ ಬೆಟ್ಟದಲ್ಲಿ ಮೈಸೂರಿನ ಬೆಟ್ಟದಲ್ಲಿ ಸಿಗುವ ಮಾದರಿಯಲ್ಲಿ ಭರ್ಜರಿ ಹೋಟೆಲ್(ವಿದೇಶಿ ವಿನ್ಯಾಸದಲ್ಲಿ)
  ವಿದ್ಯುತ್ ಬಳಸದೆ ಇಟ್ಟಿಗೆ ತಯಾರಿಸುವ ಜರ್ಮನ್, ಹಾಲೆಂಡ್‌ನ ವಿಧಾನ ಅಳವಡಿಕೆ
  ಅಸ್ಟ್ರಿಯಾ ದೇಶದ ತಂತ್ರಜ್ಞಾನದ ಉಪಯೋಗಿಸಿ ಫ್ಯಾಬ್ರಿಕೇಟೆಡ್ ಶೀಟುಗಳ ಸಹಾಯದಿಂದ ಅಗ್ಗವಾಗಿ (45ಸಾವಿರ ) ಮನೆ ತಯಾರಿಸುವುದು.
  ಸಿದ್ಧ ಉಡುಪು ತಯಾರಿಕಾ ಘಟಕ ವಿದೇಶಿ ರಫ್ತು ಹೆಚ್ಚಿಸುವ ಯೋಜನೆ
  ಮೆಟ್ರೋ ರೈಲಿಗೆ ಚಾಲನೆ ನೀಡಲು ಪ್ರಯತ್ನ.

  ಹೆಸರಲ್ಲೇ ಶಂಕರನ ಒಳ್ಳೆತನವಿದೆ!

  ಶಂಕರ=ಶಂ(ಒಳ್ಳೆಯ)+ಕರ(ಹಸ್ತ)ಅಂದರೆ ಒಳ್ಳೆಯ ಹಸ್ತವುಳ್ಳವನು. ಬಾಲ್ಯದಲ್ಲಿ ತಂದೆಯಿಂದ ಕರೆಸಿಕೊಳ್ಳುತ್ತಿದ್ದ ಹೆಸರು 'ಅವಿನಾಶ'. ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more