»   » ಪ್ರೇಕ್ಷಕರಿಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ; ಜಗ್ಗೇಶ್

ಪ್ರೇಕ್ಷಕರಿಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ; ಜಗ್ಗೇಶ್

Posted By: *ಶಿ.ಜು. ಪಾಶಾ, ಶಿವಮೊಗ್ಗ
Subscribe to Filmibeat Kannada

ಪ್ರೇಕ್ಷಕರ ಕೊರತೆಯಿಂದಾಗಿ ಕನ್ನಡ ಚಿತ್ರರಂಗ ಇಂದು ಬಡವಾಗಿದ್ದು, ಇದೇ ರೀತಿ ಮುಂದುವರೆದಲ್ಲಿ ಮುಂದಿನ ಎರಡು ಮೂರು ವರ್ಷದಲ್ಲಿ ಕನ್ನಡ ಚಿತ್ರರಂಗವನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ನಾಯಕ ನಟ ಹಾಗೂ ಕೆ.ಎಸ್.ಆರ್.ಟಿ.ಸಿ.ಉಪಾಧ್ಯಕ್ಷ ಜಗ್ಗೇಶ್ ವಿಷಾದ ವ್ಯಕ್ತಪಡಿಸಿದರು.ವಾರ್ತಾ ಇಲಾಖೆ, ಜಿಲ್ಲಾಡಳಿತ ಮತ್ತು ಬೆಳ್ಳಿಮಂಡಲದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಚಿತ್ರರಂಗದಲ್ಲಿ ಹಲವು ಸಮಸ್ಯೆಗಳಿದ್ದು, ಸಾಕಷ್ಟು ದಿನಗಳಿಂದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿದ್ದರೂ ಹಿಂದಿನ ಎಲ್ಲಾ ಸರ್ಕಾರಗಳು ತಾತ್ಸಾರ ಮಾಡುತ್ತಿದ್ದವು. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಿನಿಮಾ ರಂಗಕ್ಕೆ ವಿಶೇಷ ಗೌರವ ನೀಡಿದ್ದು, ಬಜೆಟ್‌ನಲ್ಲಿಯೂ 19 ಕೋಟಿ ರೂ.ಗಳಷ್ಟು ಹಣವನ್ನು ಸಿನಿಮಾ ರಂಗಕ್ಕೆ ಮೀಸಲಿಟ್ಟಿದೆ. ಇಷ್ಟು ದಿನ ಯಾವ ಸರ್ಕಾರವು ಕೊಡದಷ್ಟು ಗೌರವವನ್ನು ಬಿಜೆಪಿ ಸರ್ಕಾರ ನೀಡಿದೆ ಎಂದರು.

ಜೊತೆಗೆ, ಬೇರೆ ಭಾಷೆಯ ಚಿತ್ರಗಳಂತೆ ಕನ್ನಡ ಚಿತ್ರವನ್ನೂ ಕೂಡ ಕಷ್ಟಪಟ್ಟು ಮಾಡಿರುತ್ತೇವೆ. ಆದರೆ, ನಕಲಿ ಡಿವಿಡಿ, ವಿಸಿಡಿಗಳ ಹಾವಳಿಯಿಂದಾಗಿ ಪ್ರೇಕ್ಷಕರು ಸಹ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸದೇ ನಕಲಿ ಕ್ಯಾಸೆಟ್‌ಗಳಲ್ಲಿ ಸಿನಿಮಾ ನೋಡಿ ನಿರ್ಮಾಪಕರಿಗೆ ಹಾಕಿದ ಹಣವೂ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಗೂಂಡಾ ಕಾಯ್ದೆಯನ್ನು ಸಹ ಜಾರಿಗೆ ತರುವ ಮೂಲಕ ಸಹಾಯ ಮಾಡಿದ್ದಾರೆ. ಇದರಿಂದಾಗಿ, ಕನ್ನಡ ಚಿತ್ರಗಳಿಗೆ ಸಾಕಷ್ಟು ಅನುಕೂಲವಾಗಿರುವುದಾಗಿ ಅಭಿಪ್ರಾಯಪಟ್ಟರು.

ಪ್ರೇಕ್ಷಕರ ಮನಸ್ಥಿತಿ ಹೇಗಿದೆ ಎಂದರೆ, ಕನ್ನಡ ಚಿತ್ರಗಳು ಟಿವಿಯಲ್ಲಿ ಬರುತ್ತದೆ. ಇನ್ಯಾಕೆ ಚಿತ್ರಮಂದಿರಕ್ಕೆ ಹೋಗಬೇಕು ಎನ್ನುತ್ತಾರೆ. ಆದರೆ, ಟಿವಿಯಲ್ಲಿ ಹಾಕುವುದೇ ಹಳೆಯ ಕನ್ನಡ ಸಿನಿಮಾಗಳಾಗಿರುತ್ತದೆ. ಹೀಗಾಗಿ, ಪ್ರೇಕ್ಷಕರು ಮನೆಯಿಂದ ಹೊರಬಂದು ಕನ್ನಡ ಸಿನಿಮಾಗಳನ್ನು ಚಲನಚಿತ್ರ ಮಂದಿರಗಳಲ್ಲಿ ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿದೆ ಎಂದರೆ, ಬರೀ ಬಂಡವಾಳ ಹಾಕುವುದೇ ಆಗಿದೆ. ಆದರೆ, ಗಳಿಕೆ ಕಡಿಮೆಯಾಗಿದ್ದು, ಹಾಕಿದ ಬಂಡವಾಳವೂ ವಾಪಸ್ ಬಾರದ ಪರಿಸ್ಥಿತಿ ಇದೆ. ಜೊತೆಗೆ, ಹಂಚಿಕೆದಾರರ ಸಮಸ್ಯೆಯೂ ಸಾಕಷ್ಟಿದೆ. ಆದರೆ, ಅಕ್ಕಪಕ್ಕದ ರಾಜ್ಯದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಅಲ್ಲಿನ ಸ್ಥಳೀಯ ಭಾಷೆಯ ಚಿತ್ರಕ್ಕೆ, ಸಾಹಿತ್ಯಕ್ಕೆ, ಅಲ್ಲಿನ ಸ್ಥಳೀಯ ಪತ್ರಿಕೆಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅದೇ ರೀತಿ ಇಲ್ಲಿಯೂ ಸಹ ಸ್ಥಳೀಯ ಭಾಷೆಗೆ ಪ್ರಾಶಸ್ತ್ಯ ನೀಡುವ ಮೂಲಕ ಕನ್ನಡ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸಿದ್ದರೆ, ಹಿರಿಯನಟ ಶ್ರೀನಿವಾಸ್‌ಮೂರ್ತಿ, ಹಾಸ್ಯನಟ ಕೋಮಲ್, ನಟಿಯರಾದ ರಶ್ಮಿ, ನೀತುಶ್ರೀ, ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ, ನಗರಸಭಾಧ್ಯಕ್ಷ ಎನ್.ಜೆ.ರಾಜಶೇಖರ್, ಜಿ.ಪಂ.ಅಧ್ಯಕ್ಷ ಹೆಚ್.ಸಿ.ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada