»   » 2008ರ ಉತ್ತಮ ಕನ್ನಡ ನಿರ್ದೇಶಕ ಯಾರು?

2008ರ ಉತ್ತಮ ಕನ್ನಡ ನಿರ್ದೇಶಕ ಯಾರು?

Posted By: *ಜಯಂತಿ
Subscribe to Filmibeat Kannada
Sumana Kitturu
ಕನ್ನಡ ಚಿತ್ರರಂಗದ ಪಾಲಿಗೆ 2008 ಚಾರಿತ್ರಿಕವಾದದ್ದು. ಈ ಹೆಮ್ಮೆ ಸಂಖ್ಯಾ ದೃಷ್ಟಿಗೆ ಸಂಬಂಧಿಸಿದ್ದು. ಲೆಕ್ಕ ಹಿಡಿದು ನೋಡಿ- ಹೆಚ್ಚೂ ಕಡಿಮೆ ಐವತ್ತು ಹೊಸ ನಿರ್ದೇಶಕರು ಉದ್ಯಮವನ್ನು ಪ್ರವೇಶಿಸಿದ್ದಾರೆ. ಅವರಲ್ಲಿ ಗಟ್ಟಿ ಕಾಳುಗಳನ್ನು ಹುಡುಕಲು ಹೋದರೆ 'ಸೈಕೊ" ಚಿತ್ರದ ದೇವದತ್ತ, 'ಅರಮನೆ"ಯ ನಾಗಶೇಖರ್, 'ಧಿಮಾಕು" ಚಿತ್ರದ ಮಗೇಶ್ ಕುಮಾರ್, ಮುಸ್ಸಂಜೆ ಮಾತು ಮಹೇಶ್, 'ತಾಜ್‌ಮಹಲ್"ನ ಚಂದ್ರು, 'ಪಯಣ"ದ ಕಿರಣ್‌ಗೋವಿ, 'ಸ್ಲಂಬಾಲ"ದ ಸುಮನಾ ಕಿತ್ತೂರು ಹಾಗೂ ವರ್ಷದ ಕೊನೆಯ ಕಟಾವು ಹಾಗೆ ಸುಮ್ಮನೆಯ ಪ್ರೀತಂ ಗುಬ್ಬಿ ಹೊಸ ನಿರ್ದೇಶಕರ ಪೈಕಿ ಭರವಸೆ ಇಟ್ಟುಕೊಳ್ಳಬಹುದಾದ ಪ್ರತಿಭೆಗಳು. ಒಂದೇ ವರ್ಷದಲ್ಲಿ ಇಷ್ಟೊಂದು ಪ್ರತಿಭೆಗಳು ಲೆಕ್ಕಕ್ಕೆ ಸಿಗುವುದು ಅಪರೂಪವೇ ಸರಿ.

ಸ್ಲಂಬಾಲ ಚಿತ್ರದ ಸುಮನಾ ಅವರನ್ನೇ ತೆಗೆದುಕೊಳ್ಳಿ. ಮಹಿಳಾ ನಿರ್ದೇಶಕಿ ಯೋಚಿಸಲೇ ಅಸಾಧ್ಯವಾದ ಭೂಗತಲೋಕದ ಕಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಅಗ್ಗಳಿಕೆ ಅವರದ್ದು. ರೌಡಿಸಂ ಕಥೆಯನ್ನು ಅತಿರೇಕವಿಲ್ಲದೆ ಸುಮನಾ ನಿರೂಪಿಸಿರುವ ರೀತಿ ಮಾಧ್ಯಮದ ಮೇಲಿನ ಅವರ ಹಿಡಿತಕ್ಕೆ ಸಾಕ್ಷ್ಯದಂತಿದೆ. ಇಂಥದೇ ಹಿಡಿತ ದೇವದತ್ತರ ಸೈಕೊ ಚಿತ್ರದಲ್ಲೂ ಕಾಣಬಹುದು. ಪ್ರಚಾರದ ತಂತ್ರಗಳನ್ನೂ ದೇವದತ್ತ ಅರಗಿಸಿಕೊಂಡಿದ್ದಾರೆ.

ಪ್ರಚಾರದ ಮಾತಿಗೆ ಬರುವುದಾದರೆ ಅರಮನೆ ಚಿತ್ರದ ನಿರ್ದೇಶಕ ನಾಗಶೇಖರ್ ಹೆಸರನ್ನು ಉಲ್ಲೇಖಿಸಲೇಬೇಕು. ಚಿತ್ರ ನಿರ್ದೇಶನದಷ್ಟೇ ಶ್ರದ್ಧೆಯಿಂದ ಪ್ರಚಾರತಂತ್ರಗಳನ್ನೂ ಅವರು ರೂಪಿಸಿದ್ದರು. ಸಿನಿಮಾದ ಗೆಲುವಿನಲ್ಲಿ ಆ ಪ್ರಚಾರ ಮುಖ್ಯ ಪಾತ್ರ ವಹಿಸಿರುವುದನ್ನು ಮರೆಯುವಂತಿಲ್ಲ.

ಅರಮನೆ ಚಿತ್ರದ ನಾಗಶೇಖರ್ ಅಭಿರುಚಿಯ ಮಟ್ಟಿಗೆ ಭಿನ್ನವಾಗಿ ಕಾಣಿಸುತ್ತಾರೆ. ಛಾಯಾಗ್ರಾಹಕನೊಬ್ಬನ ಮೂಲಕ ಸಂಬಂಧಗಳ ಅನ್ವೇಷಣೆಯಲ್ಲಿ ತೊಡಗುವ ಕಥನ ಕ್ರಮವೇ ವಿನೂತನವಾದುದು. ಇಂಥ ಕಥೆಯನ್ನು ಸಂಯಮದಿಂದ ನಿರೂಪಿಸಿರುವುದು ನಾಗಶೇಖರ್ ಅಗ್ಗಳಿಕೆ. ಹಾಗೆ ಸುಮ್ಮನೆ ಚಿತ್ರದ ಪ್ರೀತಂ ಗುಬ್ಬಿ ಅಭಿರುಚಿಯ ಬಗ್ಗೆ ಕೂಡ ಎರಡನೇ ಮಾತಿಲ್ಲ. ಆದರೆ ಪ್ರೀತಂ ಮುಂಗಾರುಮಳೆಯ ಗುಂಗಿನಿಂದ ಹೊರಬಂದರಷ್ಟೇ ಅವರು ಬೆಳೆಯಲು ಸಾಧ್ಯ.

ಧಿಮಾಕು ಚಿತ್ರದ ಮಗೇಶ್‌ಕುಮಾರ್ ಅವರದ್ದು ಜನಪ್ರಿಯ ಶೈಲಿ. ಹೀರೋಯಿಸಂ ಅನ್ನು ಜನರಂಜನೆಯ ರೀತಿಯಲ್ಲಿ ಧಿಮಾಕು ಚಿತ್ರದಲ್ಲಿ ಅವರು ಹೇಳಿರುವ ಕ್ರಮ ಆಕರ್ಷಕವಾದುದು. ಪಯಣದ ಕಿರಣ್ ಹಾಗೂ ಮುಸ್ಸಂಜೆ ಮಾತಿನ ಮಹೇಶ್‌ರನ್ನು ಕೂಡ ಇದೇ ಗುಂಪಿಗೆ ಸೇರಿಸಬಹುದು.

ಮೇಲಿನ ನಿರ್ದೇಶಕರಲ್ಲಿ ಕೆಲವರು ಗೆದ್ದಿದ್ದಾರೆ. ಹಲವರು ಸೋತಿದ್ದಾರೆ. ಆದರೆ ಅವರ ಪ್ರಯತ್ನಗಳಲ್ಲಿನ ಪ್ರಾಮಾಣಿಕತೆ, ಸಿನಿಮಾ ಮಧ್ಯಮದ ಬಗೆಗಿನ ಶ್ರದ್ಧೆ ಎದ್ದುಕಾಣುವಂತಹದ್ದು. ಈ ಹೊಸ ನಿರ್ದೇಶಕರ ನಡುವಣ ಮತ್ತೊಂದು ಸಾಮ್ಯತೆ- ಕನ್ನಡದ ಕಥೆಗಳ ಬಗೆಗಿನ ಬದ್ಧತೆ.

'ಕೃಷ್ಣಾ ನೀ ಲೇಟಾಗಿ ಬಾರೋ" ಚಿತ್ರದ ಮೋಹನ್ ಹಾಗೂ 'ಗುಲಾಮ" ಚಿತ್ರದ ರಂಗನಾಥ್ ಸಿನಿಮಾ ಬಿಡುಗಡೆ ಮೊದಲೇ ನಿರೀಕ್ಷೆಗಳನ್ನು ಹುಟ್ಟಿಸಿರುವ ನಿರ್ದೇಶಕರು. ರವಿಚಂದ್ರನ್ ಚಿತ್ರಗಳಿಗೆ ತೆರೆಮರೆಯಲ್ಲೇ ಜೀವತುಂಬುತ್ತಿದ್ದ ಮೋಹನ್ ಮೊದಲ ಬಾರಿ ನಿರ್ದೇಶನದ ತವಕ ತಲ್ಲಣಗಳಿಗೆ ತಮ್ಮನ್ನೊಡ್ಡಿಕೊಂಡಿದ್ದಾರೆ. ಸಂಭಾಷಣೆಕಾರ ಹಾಗೂ ಚಿತ್ರಕಥೆ ಲೇಖಕನಾಗಿ ಗಮನಸೆಳೆದಿರುವ ರಂಗನಾಥ್ 'ಗುಲಾಮ" ಮೂಲಕ ನಿರ್ದೇಶಕರಾಗಿದ್ದಾರೆ. ಎರಡು ಚಿತ್ರಗಳ ಬಗೆಗೂ ಒಳ್ಳೆಯ ಮಾತುಗಳಿವೆ.

2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada