»   » ವರ್ಷದ ಗೀತರಚನೆಕಾರ ಯೋಗರಾಜ ಭಟ್!

ವರ್ಷದ ಗೀತರಚನೆಕಾರ ಯೋಗರಾಜ ಭಟ್!

Posted By: *ಜಯಂತಿ
Subscribe to Filmibeat Kannada

ಹರಿಕೃಷ್ಣರ ಹೆಸರನ್ನು "ವರ್ಷದ ಸಂಗೀತ ನಿರ್ದೇಶಕ" ಸ್ಥಾನಕ್ಕೆ ಹೆಚ್ಚು ಯೋಚನೆಯಿಲ್ಲದೆ ಕೂರಿಸಬಹುದು. "ಎದ್ದೇಳು ಮಂಜುನಾಥಾ"ದ ಅನೂಪ್ ಸೀಳಿನ್, "ಸವಾರಿ"ಯ ಮಣಿಕಾಂತ್ ಕದ್ರಿ, "ಪರಿಚಯ"ದ ಜೆಸ್ಸಿ ಗಿಫ್ಟ್, "ಮನಸಾರೆ"ಯ ಮನೋಮೂರ್ತಿ ಕೂಡ ಯಶಸ್ಸು ಕಂಡಿದ್ದಾರಾದರೂ ಹರಿಕೃಷ್ಣರ ಯಶಸ್ಸು ಇವರೆಲ್ಲರಿಗೂ ಮಿಗಿಲಾದದ್ದು. "ಅಂಬಾರಿ", "ಜಂಗ್ಲಿ", "ರಾಜ್" ಹಾಗೂ ಇತ್ತೀಚಿನ "ರಾಮ್" ಚಿತ್ರದ ಗುನುಗುವ ಟ್ಯೂನ್‌ಗಳ ಸರದಾರ ಹರಿಕೃಷ್ಣ ಅವರೇ. ಹಾಗಾಗಿ ಹರಿಕೃಷ್ಣ ವರ್ಷದ ನಂಬರ್ 1 ಸಂಗೀತ ನಿರ್ದೇಶಕ.

ಗೀತ ರಚನೆಕಾರರ ವಿಷಯಕ್ಕೆ ಬಂದರೆ ಯಥಾಪ್ರಕಾರ ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ, ನಾಗೇಂದ್ರಪ್ರಸಾದ್ ಕಾಣಿಸುತ್ತಾರೆ. "ರಾಜ್" ಚಿತ್ರದಲ್ಲಿನ "ಪಾರೂ" ಗೀತೆ ವರ್ಷದ ಹಿಟ್ ಹಾಡುಗಳಲ್ಲೊಂದು. ಇದರ ಕರ್ತೃ ಕವಿರಾಜ್. "ಪರಿಚಯ" ಚಿತ್ರದಲ್ಲಿನ ಕವಿರಾಜ್ ಗೀತೆಗಳು ಜನಪ್ರಿಯವಾಗದಿದ್ದರೂ ಅವುಗಳ ಸಾಹಿತ್ಯ ಚೆನ್ನಾಗಿಯೇ ಇತ್ತು. ಉಳಿದಂತೆ ಜಯಂತರ ಫಾರ್ಮು ಚಾರ್ಮು ಮುಂದುವರಿದಿದೆ. "ಮನಸಾರೆ" ಹಾಗೂ "ಮಳೆಯಲಿ ಜೊತೆಯಲಿ" ಚಿತ್ರಗಳಲ್ಲಿನ ಅವರ ಗೀತೆಗಳು ಕ್ಲಿಕ್ಕಾಗಿವೆ. ಹಾಗೆಂದು ವರ್ಷದ ಗೀತರಚನೆಕಾರ ಸ್ಥಾನಕ್ಕೆ ಜಯಂತರನ್ನು ಕೂರಿಸಿದರೆ ತಪ್ಪಾದೀತು. ಆ ಸ್ಥಾನಕ್ಕೆ ಸೂಕ್ತ ಆಯ್ಕೆ ಯೋಗರಾಜಭಟ್.

ಜಂಗ್ಲಿ ಚಿತ್ರದ "ಹಳೆ ಕಬ್ಣ ಹಳೆ ಬಾಟ್ಲಿ" ಹಾಡಿನ ಜನಪ್ರಿಯತೆ ದೊಡ್ಡದು. ಸಾಹಿತ್ಯದ ವಿದ್ಯಾರ್ಥಿಯೂ ಆಗಿರುವ ಯೋಗರಾಜಭಟ್ಟರು ತಮ್ಮಿಷ್ಟದ ಸಾಹಿತ್ಯ ಕೃತಿಗಳ ಎಳೆಗಳನ್ನು ಸಿನಿಮಾದಲ್ಲಿ ಕಸಿ ಮಾಡುವಲ್ಲಿ ಜಾಣರು. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಕವಿತೆಯೊಂದರ ಸಾಲಿನಿಂದ ಪ್ರೇರಿತವಾದ ಈ ಹಾಡು ಹೊಸಗಾಲದ ಹುಡುಗರ ನಡುವಿನಿಂದಲೇ ಮೂಡಿಬಂದಿತ್ತು. (ಡಿಸೆಂಬರ್ 27ರಂದು ನಡೆದ ಜಿಎಸ್ಸೆಸ್ ಕಾವ್ಯದ ಹಬ್ಬ "ಚೈತ್ರೋದಯ"ದಲ್ಲಿ ಕವಿತೆಯನ್ನು ನಟ-ನಿರ್ಮಾಪಕ ಬಿ.ಸುರೇಶ್ ಅದ್ಭುತವಾಗಿ ವಾಚಿಸಿದ್ದರು).

ಯೋಗರಾಜಭಟ್ಟರ ಮತ್ತೊಂದು ಯಶಸ್ವಿ ಗೀತೆ- ವರ್ಷದ ಕೊನೆಯಲ್ಲಿ ತೆರೆಕಂಡಿರುವ "ರಾಮ್" ಚಿತ್ರದಲ್ಲಿನ ಹೊಸ ಗಾನಬಜಾನ! ಯುವಪೀಳಿಗೆಯ ಎದೆಬಡಿತ ಹೆಚ್ಚಿಸುವಂತಿರುವ ಈ ಗೀತೆ ಪುನೀತ್-ಪ್ರಿಯಾಮಣಿ ಅದ್ಭುತ ನೃತ್ಯದಿಂದ ಕಳೆಗಟ್ಟಿದೆ.

"ಜಂಗ್ಲಿ" ಹಾಗೂ "ರಾಮ್" ಚಿತ್ರಗಳ ಯಶಸ್ಸಿನಲ್ಲಿ ಯೋಗರಾಜಭಟ್ಟರ ಗೀತೆಗಳ ಪಾತ್ರವೂ ಇದೆ. ಇಂಥ ನಿರ್ಣಾಯಕ ಯಶಸ್ಸು ಉಳಿದ ಯಾವ ಗೀತರಚನೆಕಾರರಿಗೂ ದೊರೆತಿಲ್ಲ. ಹಾಗಾಗಿ ಯೋಗರಾಜ ಭಟ್ ವರ್ಷದ ಗೀತರಚನೆಕಾರ. ನಿರ್ದೇಶಕನೊಬ್ಬ ಗೀತರಚನೆಕಾರನಾಗಿ ಗಮನಸೆಳೆಯುವುದು ವಿಶಿಷ್ಟವಾಗಿ ಕಾಣಿಸುತ್ತದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada