»   »  ನಂಜನಗೂಡಿನಲ್ಲಿ 'ವಿಸ್ಮಯ ಪ್ರಣಯ'

ನಂಜನಗೂಡಿನಲ್ಲಿ 'ವಿಸ್ಮಯ ಪ್ರಣಯ'

Posted By:
Subscribe to Filmibeat Kannada

ಕಪಿಲ ನದಿ ತೀರದ ನಂಜುಂಡೇಶ್ವರನ ನೆಲೆವೀಡು ನಂಜನಗೂಡು. ಅಲ್ಲೊಂದು ಸುಂದರ ಮನೆ. ತಾಯಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ಕುಟುಂಬವದು. ಆ ಮನೆಗೆ ನಾಯಕನ ಆಗಮನ. ಈ ನಾಯಕ ಆ ಮನೆಗೆ ಅಪರಿಚಿತನಲ್ಲ. ಮನೆಯೊಡತಿಯ ಸ್ನೇಹಿತಳ ಮಗ.

ನಾಯಕ ಆ ಮನೆಯಲ್ಲಿ ನೀಡಿದ ಉಪಚಾರವನ್ನು ಸ್ವೀಕರಿಸಿದ ನಂತರ ಮನೆಯೊಡತಿಯ ಬಳಿ 'ನಾನು ನಿಮ್ಮ ಎರಡನೇ ಮಗಳನ್ನು ಮದುವೆಯಾಗಬೇಕೆಂದಿದ್ದೇನೆ' ಅನ್ನುತ್ತಾನೆ. ವಿಷಯ ತಿಳಿದ ತಾಯಿ ಹಿರಿಮಗಳ ಕಡೆ ನೋಡುತ್ತಾಳೆ. ತಾಯಿಯ ನೋಟಕ್ಕೆ ಉತ್ತರವಾಗಿ ಹಿರಿಮಗಳು 'ಈ ಮದುವೆಗೆ ನನ್ನ ಅಭ್ಯಂತರವಿಲ್ಲ. ನನಗೆ ಮದುವೆಯಾಗಲು ಮನಸ್ಸಿಲ್ಲ' ಅನ್ನುವ ದೃಶ್ಯವನ್ನು ನಂಜನಗೂಡಿನ ಖಾಸಗಿ ನಿವಾಸವೊಂದರಲ್ಲಿ 'ವಿಸ್ಮಯ ಪ್ರಣಯ' ಚಿತ್ರಕ್ಕಾಗಿ ನಿರ್ದೇಶಕ ಮೋಹನ್ ಮಲ್ಲಪಳ್ಳಿ ಚಿತ್ರೀಕರಿಸಿಕೊಂಡರು.

ಹೇಮಾಚೌಧರಿ, ರಾಜ್‌ಸಾಗರ್, ಮಯೂರಿ ಹಾಗೂ ಕಾವ್ಯಶ್ರೀ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ರಾಜ್‌ಸಾಗರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ವಿಸ್ಮಯ ಪ್ರಣಯ' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ರಾಜ್‌ಸಾಗರ್ ಚಿತ್ರಕ್ಕೆ ಕಥೆ ಬರೆದಿರುವುದಲ್ಲದೆ, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಮಯೂರಿ ಹಾಗೂ ಕಾವ್ಯಶ್ರೀ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ ಹೇಮಾಚೌಧರಿ, ಇಂದ್ರನ್, ರಾಮಿರೆಡ್ಡಿ, ಅಪೂರ್ವ, ಕರಿಬಸವಯ್ಯ, ರೇಖಾದಾಸ್, ಮಿಮಿಕ್ರಿ ರಾಜ್‌ಗೋಪಾಲ್ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ. ಬಹಳ ವರ್ಷಗಳ ನಂತರ ಮೋಹನ್ ಮಲ್ಲಪಳ್ಳಿ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ.

ಚಿತ್ರಕಥೆ ಹಾಗೂ ಸಂಭಾಷಣೆ ಮೋಹನ್ ಮಲ್ಲಪಳ್ಳಿ ಅವರೇ ಬರೆದಿದ್ದಾರೆ. ಕೆ.ವಿಶ್ವನಾಥ್ ಸಂಗೀತ, ಮ್ಯಾಥ್ಯೂರಾಜನ್ ಛಾಯಾಗ್ರಹಣ, ಗಿರೀಶ್‌ಕುಮಾರ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ ಹಾಗೂ ಬಿ.ಕೃಷ್ಣ ಅವರ ನಿರ್ಮಾಣ ನಿರ್ವಹಣೆ 'ವಿಸ್ಮಯ ಪ್ರಣಯ' ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada