»   » ಕನ್ನಡ ಚಿತ್ರರಂಗಕ್ಕೆ 5 ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ಚಿತ್ರರಂಗಕ್ಕೆ 5 ರಾಜ್ಯೋತ್ಸವ ಪ್ರಶಸ್ತಿ

Written By:
Subscribe to Filmibeat Kannada

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನ ಭಾನುವಾರ (ಅಕ್ಟೋಬರ್ 30) ಪ್ರಕಟಿಸಿದೆ. ವಿವಿಧ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ 61 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

ಈ ಬಾರಿ ಕನ್ನಡ ಚಲನಚಿತ್ರ ರಂಗದ 5 ಜನ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಹಿರಿಯ ನಟಿ ಜೂಲಿ ಲಕ್ಷ್ಮಿ, ರೇವತಿ ಕಲ್ಯಾಣ್ ಕುಮಾರ್, ಹಿರಿಯ ನಟರಾದ ಶ್ರೀನಿವಾಸ ಮೂರ್ತಿ, ನಟ ಸತ್ಯಜಿತ್ ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಸಾ.ರಾ ಗೋವಿಂದು ಅವರಿಗೆ ಪ್ರಶಸ್ತಿ ಲಭಿಸಿದೆ.[2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ]

ಮಂಗಳವಾರ ನವೆಂಬರ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಮತ್ತು 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರಲಿದೆ.

ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿ, ರಾಜ್ಯೋತ್ಸವ ಪ್ರಶಸ್ತಿ ಪಡೆಯುತ್ತಿರುವ ಈ ಸಾಧಕರ ಒಂದು ಸಣ್ಣ ಪರಿಚಯ ಮುಂದಿದೆ ಓದಿ....

ಜೂಲಿ ಲಕ್ಷ್ಮಿ

ಕನ್ನಡದ ಹಿರಿಯ ನಟಿ ಜೂಲಿ ಲಕ್ಷ್ಮಿ, ಬರಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಹೀಗೆ ಐದು ಭಾಷೆಗಳಲ್ಲಿ ನಟಿಸಿರುವ ಪಂಚಭಾಷೆ ತಾರೆ. ತನ್ನ 15ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಸಿದ ಲಕ್ಷ್ಮಿ, ತಮಿಳಿನ 'ಜೀವನಾಂಶಂ' ಚಿತ್ರದಲ್ಲಿ ಮೊದಲ ಭಾರಿಗೆ ಬಣ್ಣ ಹಚ್ಚಿದ್ದರು. ಆದರೆ 1975 ರಲ್ಲಿ ಹಿಂದಿಯಲ್ಲಿ ಬಂದ ' ಜ್ಯೂಲಿ' ಚಿತ್ರದಿಂದ ಲಕ್ಷ್ಮಿ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧರಾದರು. ದೊರೆ-ಭಗವಾನ್ ನಿರ್ದೇಶನದ 'ಗೋವಾದಲ್ಲಿ ಸಿಐಡಿ 999' ಲಕ್ಷ್ಮಿಯವರ ಮೊದಲ ಕನ್ನಡ ಚಿತ್ರ. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅನಂತ್ ಸೇರಿದಂತೆ ಬಹುತೇಕ ಎಲ್ಲ ನಟರ ಜೊತೆ ಅಭಿನಯಿಸಿರುವ ಲಕ್ಷ್ಮಿಗೆ ಫಿಲ್ಮ್ ಫೇರ್ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ ಹಾಗೂ ತೆಲುಗಿನ ನಂದಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ.

ಶ್ರೀನಿವಾಸ ಮೂರ್ತಿ

ಶ್ರೀನಿವಾಸ ಮೂರ್ತಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ. ನಟ, ಖಳನಟನಾಗಿ ಅಭಿನಯಿಸಿರುವ ಶ್ರೀನಿವಾಸ ಮೂರ್ತಿ ಹೆಚ್ಚು ಖ್ಯಾತಿಯಾಗಿದ್ದು, ಪೋಷಕ ಪಾತ್ರಗಳಲ್ಲಿ. ಸುಮಾರು 40 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಿದ್ದಲಿಂಗಯ್ಯನವರ 'ಹೇಮಾವತಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಶ್ರೀನಿವಾಸ ಮೂರ್ತಿ, 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮನೆ ಮನೆ ರಾಮಾಯಣ', 'ಗುರುಶಿಷ್ಯರು', 'ಕವಿರತ್ನ ಕಾಳಿದಾಸ' ಅಂತಹ ಚಿತ್ರಗಳಲ್ಲಿ ಶ್ರೀನಿವಾಸ ಮೂರ್ತಿ ಅವರ ಅಭಿನಯ ಮೆಚ್ಚುವಂತದ್ದು. ಕೇವಲ ನಟನಾಗಿ ಮಾತ್ರವಲ್ಲದೇ, ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.

ಸಾ.ರಾ ಗೋವಿಂದು

ಸಾ.ರಾ ಗೋವಿಂದು ಕನ್ನಡದ ಖ್ಯಾತ ನಿರ್ಮಾಪಕರು ಹಾಗೂ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಅದ್ಯಕ್ಷರು. ಸುಮಾರು 35 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಸಾ.ರಾ ಗೋವಿಂದು, 'ಬೆಳ್ಳಿಕಾಲುಂಗುರ', 'ಮಿಂಚಿನ ಓಟ', 'ಕನಸುಗಾರ', 'ಭಗವಾನ್', 'ಲಾಲಿಹಾಡು' ಚಿತ್ರಗಳು ಸೇರಿದಂತೆ 18 ಕ್ಕೂ ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ. ಸದ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಿರಿಯ ಕಲಾವಿದ ಸತ್ಯಜಿತ್

ಸತ್ಯಜಿತ್ ಅವರು ಕಳೆದ 35 ವರ್ಷಗಳಿಂದ ಹಾಸ್ಯ ನಟನಾಗಿ, ಖಳನಟನಾಗಿ, ಪೋಷಕನಟನಾಗಿ ಅಭಿಮಾನಿಗಳನ್ನ ರಂಜಿಸಿದ್ದಾರೆ. 'ಭೂಮಿ ತಾಯಣೆ', ಅರುಣ ರಾಗ', 'ಬಂಧ ಮುಕ್ತ', 'ತಾಯಿಗೊಬ್ಬ ಕರ್ಣ', ಆಪ್ತಮಿತ್ರ', ದಾಸ', 'ವೀರಕನ್ನಡಿಗ' ಚಿತ್ರಗಳು ಸೇರಿದಂತೆ ಸುಮಾರು 650ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅವರಿಂದ ಹಿಡಿದು ಸುದೀಪ್, ದರ್ಶನ್, ಶಿವರಾಜ್ ಕುಮಾರ್ ಸೇರಿದಂತೆ ಎಲ್ಲ ನಟರ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ, ಗ್ಯಾಂಗ್ರಿನ್ ಗೆ ತುತ್ತಾದ ಸತ್ಯಜಿತ್ ಅವರು ತಮ್ಮ ಒಂದು ಕಾಲನ್ನ ಕಳೆದುಕೊಂಡಿದ್ದಾರೆ.

ರೇವತಿ ಕಲ್ಯಾಣ್ ಕುಮಾರ್ (ನಟ ಕಲ್ಯಾಣ್ ಕುಮಾರ್ ಪತ್ನಿ)

ರೇವತಿ ಕಲ್ಯಾಣ್ ಕುಮಾರ್, ಕನ್ನಡದ ಹಿರಿಯ ನಟ ಕಲ್ಯಾಣ್ ಕುಮಾರ್ ಅವರ ಪತ್ನಿ. ನಾಯಕಿಯಾಗಿ, ಬರಹಗಾರಾಗಿ, ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ನಾಟಕಗಳಲ್ಲಿ ನಿರ್ದೇಶಕರಾಗಿ ಹಾಗೂ ಬರಹಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. 'ಮಿಸ್ ಲೀಲಾವತಿ', 'ರತ್ನಗಿರಿ ರಹಸ್ಯ', 'ಕೈವಾರ ಮಹಾತ್ಮೆ' ಅಂತಹ ಚಿತ್ರಗಳಲ್ಲಿ ರೇವತಿ ಅಭಿನಯಿಸಿದ್ದಾರೆ.

English summary
Kannada and Culture department announced Rajyotsava award for the year 2016. The list contains 61 prominents. kannada actress lakshmi, Revathi kalyan kumar, Kfcc president sa ra Govindu, Senior Actor Sathyjith and Srinivas murthy gets Rajyotsava award 2016
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada