ಜೂಲಿ ರೀಮೇಕ್: ನಾಯಕಿ ತಮಿಳು ನಟಿ ಪೂರ್ಣಾ
ಪೂರ್ಣ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ನಟಿ ಶಮ್ನಾ ಕಾಸಿಮ್, 1974ರಲ್ಲಿ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದ್ದ 'ಜೂಲಿ' ಚಿತ್ರದ ರೀಮೇಕ್ ನಲ್ಲಿ ನಟಿಸಲಿದ್ದಾರೆ. 'ಚಟ್ಟಕ್ಕರಿ' ಎಂಬ ಹೆಸರೂ ಕೂಡ ಇದೇ ಚಿತ್ರದ್ದು. ಹಿಂದಿಯಲ್ಲಿ ನಟಿ 'ಲಕ್ಷ್ಮೀ' ನಟಿಸಿದ್ದ ಈ ಪಾತ್ರ ಯಾರೂ ಎಂದೂ ಮೆರಯಾಗದು. ಇದೀಗ ಆ ಚಿತ್ರದ ರೀಮೇಕ್ ಬರಲಿದೆ.
ಅಂದು 'ಜೂಲಿ' ಚಿತ್ರವನ್ನು ನಿರ್ದೇಶಿಸಿದ್ದು ನಿರ್ದೇಶಕ ಸೇತುಮಾಧವನ್. ಈಗ ರೀಮೇಕ್ ಆಗುತ್ತಿರುವ ಈ ಚಿತ್ರವನ್ನು ಅವರ ಮಗ ಸಂತೋಷ್ ಸೇತುಮಾಧವನ್ ನಿರ್ದೇಶಿಸುತ್ತಿದ್ದಾರೆ. 'ರೇವತಿ ಕಲಾ ಮಂದಿರ್' ಬ್ಯಾನರ್ ಅಡಿಯಲ್ಲಿ ಈ ರೀಮೇಕ್ ಚಿತ್ರದ ನಿರ್ಮಾಣವಾಗಲಿದೆ. ನಾಯಕನಾಗಿ 'ಲಿವಿಂಗ್ ಟುಗೇದರ್' ಖ್ಯಾತಿಯ ಮೋಹನ್ ನಟಿಸಲಿದ್ದಾರೆ.
ಜಿ ಸುರೇಶ್ ಕುಮಾರ್ ನಿರ್ಮಾಪಕರಾಗಿರುವ ಇದಕ್ಕೆ ಚಿತ್ರಕಥೆಯನ್ನು ವಿನು ಅಬ್ರಹಾಂ ಬರೆಯಲಿದ್ದಾರೆ. ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ಪೂರ್ಣಾ, ಮೊದಲಬಾರಿಗೆ ಮಲೆಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಬಹಳಷ್ಟು ಕೋನಗಳ ಅಭಿನಯವನ್ನು ನಿರೀಕ್ಷಿಸುತ್ತಿದ್ದು ಸಾಕಷ್ಟು ಜನರು ಈ ಪಾತ್ರವನ್ನು ಬಯಸಿದ್ದರು. ಆದರೆ ಕೊನೆಯಲ್ಲಿ ಪೂರ್ಣಾ ಪಾಲಿಗೆ ದಕ್ಕಿದೆ.
ಈ ಚಿತ್ರದ ಶೂಟಿಂಗ್ ಮಾರ್ಚ್ 10, 2012ರಂದು 'ಊಟಿ'ಯಲ್ಲಿ ಪ್ರಾರಂಭವಾಗಲಿದೆ. ಅಂದು 1974ರಲ್ಲಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದ ಜೂಲಿ, ಈಗ ಮತ್ತೆ ಬರುತ್ತಿದೆ ಎಂಬ ಸುದ್ದಿಗೇ ಸಿನಿಪ್ರೇಕ್ಷಕರಿಗೆ ಪುಳಕ ಪ್ರಾರಂಭವಾಗಲಿದೆ. ಆ ಚಿತ್ರದ ಮೂಲಕ ನಟಿ 'ಲಕ್ಷ್ಮೀ' ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು ಹಾಗೂ ನಂತರ ಅವರ ಹೆಸರು 'ಜೂಲಿ ಲಕ್ಷ್ಮೀ'ಎಂದೇ ಬದಲಾಯಿತು. ಇನ್ನು ಬರಲಿರುವ ರೀಮೇಕ್ ಚಿತ್ರದಲ್ಲಿ ನಟಿ ಪೂರ್ಣಾ ಮೋಡಿ ಹೇಗಿರುವುದೋ ಏನೋ! (ಏಜೆನ್ಸೀಸ್)


Click it and Unblock the Notifications











