ಎನ್ ಟಿ ರಾಮಾರಾವ್ ಗೆ ಗುಡಿ ಕಟ್ಟಿಸಿದ ಅಭಿಮಾನಿ

ನಟರತ್ನ ನಂದಮೂರಿ ತಾರಕ ರಾಮರಾವ್ ಅವರ ಅಭಿಮಾನಿಯೊಬ್ಬ ಅವರ ಹೆಸರಿನಲ್ಲಿ ಗುಡಿಯೊಂದನ್ನು ಕಟ್ಟಿಸಿದ್ದಾನೆ. ಎನ್ಟಿಆರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಅಭಿಮಾನಿಗೆ ಸಹಾಯ ಮಾಡಿದ್ದರಂತೆ. ಈಗ ಗುಡಿ ಕಟ್ಟಿಸಿ ಕೃತಾರ್ಥರಾಗಿದ್ದಾರೆ.
"ತೊಂದರೆಯಲ್ಲಿರುವವರಿಗೆ ಸಹಾಯ ಮಾಡಿದವರನ್ನು ಕೊನೆ ಉಸಿರಿರುವವರೆಗೂ ಮರೆಯ ಬಾರದು" ಎಂಬ ತನ್ನ ತಾಯಿಯ ಮಾತಿಗೆ ಆತ ಬೆಲೆಕೊಟ್ಟು ಎನ್ಟಿಆರ್ ಗುಡಿ ಕಟ್ಟಿಸಿದ್ದಾಗಿ ಆಂಧ್ರದಲ್ಲಿ ಸುದ್ದಿಯಾಗಿದೆ. ಈ ಹಿಂದೆ ತಮಿಳುನಾಡಿನಲ್ಲಿ ತಾರೆಗಳಾದ ನಮಿತಾ, ಖುಷ್ಬು ಅವರಿಗೆ ಮಂದಿರ ಕಟ್ಟಿಸಲಾಗಿತ್ತು. ಬಳಿಕ ರಜನಿಕಾಂತ್ ಹೆಸರಲ್ಲೂ ಗುಡಿ ಕಟ್ಟಿಸಿದರು.
ಚಿತ್ತೂರು ಜಿಲ್ಲೆಯ ಕಂಚೆನಪಲ್ಲಿಯ ಪೆನುಮಚ್ಚ ಶ್ರೀನಿವಾಸುಲು ಅವರೇ ಈ ಸಾಹಸ ಮಾಡಿರುವುದು. ಈಗಾಗಲೆ ಗುಡಿಯೂ ಸಿದ್ಧವಾಗಿದ್ದು ಎನ್ಟಿಆರ್ ಅವರ ಹೆಸರಲ್ಲಿ ನಿತ್ಯ ಅರ್ಚನೆ, ಕ್ಷೀರಾಭಿಷೇಕ, ಅಷ್ಟೋತ್ತರ ನಡೆಯುತ್ತಿದೆಯಂತೆ.
ಶ್ರೀನಿವಾಸುಲು ಅವರು ಆರ್ಥಿಕವಾಗಿ ಬಡವರಾದರೂ ಅಭಿಮಾನಿದಲ್ಲಿ ಆಗರ್ಭ ಶ್ರೀಮಂತ. 1985ರಲ್ಲಿ ಬೀಸಿದ ಚಂಡಮಾರುತಕ್ಕೆ ಇವರ ಮನೆಮಠ ಎಲ್ಲವೂ ನೆಲಸಮವಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎನ್ಟಿಆರ್ ಅವರು ಭೇಟಿ ನೀಡಿ ನಿರಾಶ್ರಿತರಿಗೆ ಬಟ್ಟೆ, ಅಕ್ಕಿ, ಅಡುಗೆ ಪಾತ್ರೆಗಳು, ಪಡಿತರ ಪದಾರ್ಥಗಳನ್ನು ಸರಬರಾಜು ಮಾಡಿದ್ದರಂತೆ.
"ಕಷ್ಟದಲ್ಲಿದ್ದ ತಮ್ಮನ್ನು ಆಪದ್ಭಾಂಧವರಂತೆ ಎನ್ಟಿಆರ್ ರಕ್ಷಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರನ್ನು ಆರಾಧಿಸುತ್ತಿದ್ದೇನೆ. ನಮ್ಮ ಪಾಲಿಗೆ ಅವರೇ ದೇವರು. ಪ್ರತಿದಿನ ಕೂಲಿ ಮಾಡಿದ ದುಡ್ಡಿನಲ್ಲಿ ಸ್ವಲ್ಪ ಭಾಗವನ್ನು ಉಳಿಸಿ ಈ ಗುಡಿ ಕಟ್ಟಿಸಿದ್ದೇನೆ" ಎನ್ನುತ್ತಾರೆ ಶ್ರೀನಿವಾಸುಲು.
ಇವರ ಸಾಹಸವನ್ನು ನೋಡಿದ ಯಾರೋ ಒಬ್ಬರು ತಮ್ಮ ಕೈಲಾದ ಧನಸಹಾಯ ಮಾಡಿ ಎನ್ಟಿಆರ್ ವಿಗ್ರಹವನ್ನು ಪ್ರತಿಷ್ಠಾಪಿಸಿದರಂತೆ. ಪ್ರತಿದಿನ ಇಲ್ಲಿ ಪೂಜೆಗಳು ನಡೆಯುತ್ತಿದ್ದು, ದಿನ ಕಳೆದಂತೆ ಈ ದೇವಸ್ಥಾನಕ್ಕೆ ಬರುವ ಭಕ್ತ ಮಹಾಶಯರು ಸಂಖ್ಯೆಯೂ ಹೆಚ್ಚುತಿದೆಯಂತೆ.


Click it and Unblock the Notifications











