For Quick Alerts
ALLOW NOTIFICATIONS  
For Daily Alerts

ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!

By ಹರಾ
|

ಕನ್ನಡಿಗರ ಹೆಮ್ಮೆಗಾಗಿ, ಗರ್ವದ ಪ್ರತೀಕವಾಗಿ, ಅಭಿಮಾನದಿಂದ ಅಭಿಮಾನ್ ಸ್ಟುಡಿಯೋ ಕಟ್ಟಿದ ನಿಷ್ಠಾವಂತ ನಟ ಬಾಲಕೃಷ್ಣ. ಹಾಸ್ಯಬ್ರಹ್ಮ ಬಾಲಕೃಷ್ಣ ಮೋಡದ ಮರೆಯಲ್ಲಿ ಮರೆಯಾದ ನಂತ್ರ, ಅಭಿಮಾನ್ ಸ್ಟುಡಿಯೋ ಕೂಡ ಕನ್ನಡಿಗರ ಹೃದಯದಲ್ಲಿ ಮರೆಯಾಗಿತ್ತು.

2009, ಡಿಸೆಂಬರ್ 31 ರಂದು ಚಂದನವನದ ಹೆಮ್ಮೆಯ 'ಮುತ್ತಿನ ಹಾರ' ಕಳಚಿ ಬಿದ್ದಾಗ, ಡಾ.ರಾಜ್ ಕುಮಾರ್ ಸ್ಮಾರಕದಂತೆ, ವಿಷ್ಣು ಹೆಸ್ರಲ್ಲೂ ಸ್ಮಾರಕ ನಿರ್ಮಾಣ ಆಗ್ಬೇಕಂತ ನಿರ್ಧಾರವಾದಾಗ, ಚಿತ್ರರಂಗದ ಗಣ್ಯರಿಗೆ ಮತ್ತು ಸರ್ಕಾರಕ್ಕೆ ತಕ್ಷಣ ಹೊಳೆದದ್ದು ಇದೇ ಅಭಿಮಾನ್ ಸ್ಟುಡಿಯೋ.

ಅದಾಗ್ಲೇ ಚಿತ್ರರಂಗಕ್ಕೆ ಬೇಡವಾಗಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕಕ್ಕೆ ಯಾವುದೇ ಅಡ್ಡಿ ಆಗೋದಿಲ್ಲ ಅಂತ ಭಾವಿಸಿದ್ದ ಗಾಂಧಿನಗರದ ಹಿರಿಯರು, ರಾಜಕೀಯ ಮುತ್ಸದಿಗಳು ಅಂತ್ಯಸಂಸ್ಕಾರಕ್ಕೆ ಆಯ್ದುಕೊಂಡದ್ದು ಅಭಿಮಾನ್ ಸ್ಟುಡಿಯೋ. [ಡಾ.ವಿಷ್ಣು ಸ್ಮಾರಕಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು]

ಸ್ಥಳ ಆಯ್ಕೆ ಆಗಿ ಸಾಹಸಸಿಂಹನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿತ್ತೇ ಹೊರತು, ಅಭಿಮಾನ್ ಸ್ಟುಡಿಯೋ ಜಾಗದ ಮೇಲಿದ್ದ ಕೇಸ್ ಬಗ್ಗೆ ಎಚ್ಚರವಹಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ದೊಡ್ಡ ಅಡ್ಡಗಾಲು ಬೀಳೋಕೆ ಶುರುವಾಗಿದ್ದೇ ಇಲ್ಲಿಂದ..!!

ಆರು ವರ್ಷಗಳಿಂದ ವಿವಾದದ ಕೇಂದ್ರಬಿಂದುವಾಗಿರುವ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಹಾದಿ ಈಗ ಸುಗಮ ಆಗುವ ಹಂತದಲ್ಲಿದೆ. ಆದ್ರೆ, ಇಲ್ಲಿಯವರೆಗೂ ಸ್ಮಾರಕಕ್ಕೆ ಅಡ್ಡಿಪಡಿಸಿದವರು ಯಾರು? ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಗದ್ದಲಗಳೆಷ್ಟು? ಬಾಲಣ್ಣನ ಮಕ್ಕಳು ಕಿತ್ತಾಡುತ್ತಿರುವುದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ...

ಸ್ಟುಡಿಯೋ ಮೇಲ್ವಿಚಾರಕರಿಗೆ ಮಾಹಿತಿ ಇರಲಿಲ್ಲ..!

ಸ್ಟುಡಿಯೋ ಮೇಲ್ವಿಚಾರಕರಿಗೆ ಮಾಹಿತಿ ಇರಲಿಲ್ಲ..!

ನೀವು ನಂಬುತ್ತೀರೋ..ಬಿಡುತ್ತೀರೋ..ಗೊತ್ತಿಲ್ಲ. ಆದ್ರೆ ಒಂದಂತೂ ಸತ್ಯ. ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣು ಅಂತ್ಯಸಂಸ್ಕಾರ ನಡೆಯಲಿದೆ ಅಂತ ಜಗಜ್ಜಾಹೀರಾಗಿದ್ದರೂ, ಸ್ಟುಡಿಯೋ ಮೇಲ್ವಿಚಾರಕ ದಿ.ಬಾಲಕೃಷ್ಣ ಪುತ್ರ ಗಣೇಶ್ ಗೆ ಮಾಹಿತಿ ಇರಲಿಲ್ಲ. ಅವರನ್ನ ಖುದ್ದು ಸಂಪರ್ಕಿಸಿ ಯಾರೂ ಅನುಮತಿ ಪಡೆದಿರಲಿಲ್ಲ. ಕೊನೆ ಕ್ಷಣದಲ್ಲಿ ಮಾತುಕತೆ ನಡೆಸಿದ ಚಿತ್ರರಂಗದ ಹಿರಿಯರು, ವಿಷ್ಣು ಸ್ಮಾರಕ ಪ್ರತಿಷ್ಠಾನಕ್ಕೆ ಎಕರೆಗೆ 1 ಕೋಟಿಯಂತೆ 2 ಎಕರೆ ಖರೀದಿಸಲು ಮುಂದಾದರು.

ಸ್ಟುಡಿಯೋ ಮೇಲಿದ್ದ ಕೇಸ್ ಮರೆತೇಹೋಯ್ತು..!

ಸ್ಟುಡಿಯೋ ಮೇಲಿದ್ದ ಕೇಸ್ ಮರೆತೇಹೋಯ್ತು..!

ಬಂದ ಅವಕಾಶವನ್ನ ಹಿಂದುಮುಂದು ನೋಡದೆ ಒಪ್ಪಿಕೊಂಡ ಗಣೇಶ್, ಸ್ಟುಡಿಯೋ ಮೇಲಿದ್ದ ಕೇಸ್ ನ ಅಕ್ಷರಶಃ ಮರೆತೇಬಿಟ್ಟರು. ಅದನ್ನ ಸರ್ಕಾರಕ್ಕಾಗಲಿ ಅಥವಾ ಅಂಬರೀಷ್ ಗಮನಕ್ಕೆ ತರುವ ಹೊತ್ತಿಗೆ ಅಭಿಮಾನ್ ಸ್ಟುಡಿಯೋ ಒಡಲಲ್ಲಿ ವಿಷ್ಣು ಒಂದಾಗಿಬಿಟ್ಟಿದ್ದರು. [ಬದುಕಿದ್ದಾಗ, ಸತ್ತಮೇಲೂ ವಿಷ್ಣುಗೆ ಅನ್ಯಾಯ: ಅಂಬಿ ಬಾಂಬ್]

 10 ಎಕರೆ ಪ್ರದೇಶದ ಮೇಲೆ ಇನ್ಜಂಕ್ಷನ್ ಆರ್ಡರ್

10 ಎಕರೆ ಪ್ರದೇಶದ ಮೇಲೆ ಇನ್ಜಂಕ್ಷನ್ ಆರ್ಡರ್

ಕೇವಲ ಮಾತುಕತೆ ಆಗಿದ್ದ ವ್ಯವಹಾರ ಲಿಖಿತ ರೂಪಕ್ಕೆ ಬರುವ ಹೊತ್ತಿಗೆ ಅಭಿಮಾನ್ ಸ್ಟುಡಿಯೋದ ಕೇಸ್ ಹಿಸ್ಟರಿ ಹೊರಗೆ ಬಂತು. ಬಾಲಕೃಷ್ಣ ಪುತ್ರಿಯರಿಗೆ ಗೊತ್ತಿಲ್ಲದಂತೆ, ಪುತ್ರರು ಮಾರಾಟ ಮಾಡಿದ್ದ 10 ಎಕರೆ ಭೂಮಿಯ ಮೇಲೆ ಕೋರ್ಟ್ ಇನ್ಜಂಕ್ಷನ್ ಆರ್ಡರ್ ವಿಧಿಸಿತ್ತು. ಇದೇ 10 ಎಕರೆಯಲ್ಲಿ ವಿಷ್ಣು ಸ್ಮಾರಕಕ್ಕೆ ಮೀಸಲಾಗಿದ್ದ 2 ಎಕರೆ ಭೂಮಿ ಸೇರಿದ್ದರಿಂದ ಸ್ಮಾರಕ ನಿರ್ಮಾಣ ಅಸಾಧ್ಯವಾಯ್ತು. [ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಈಗ ದಾರಿ ಸಲೀಸು]

ಕಷ್ಟ ಪಟ್ಟು ಬಾಲಣ್ಣ ನಿರ್ಮಾಣ ಮಾಡಿದ 'ಅಭಿಮಾನ್'

ಕಷ್ಟ ಪಟ್ಟು ಬಾಲಣ್ಣ ನಿರ್ಮಾಣ ಮಾಡಿದ 'ಅಭಿಮಾನ್'

ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೇ ನಂ.23 ರಲ್ಲಿ 1970 ಮಾರ್ಚ್ 27 ರಂದು ಸರ್ಕಾರ, ಸ್ಟುಡಿಯೋಗಂತ 20 ಎಕರೆ ಜಮೀನು ಮಂಜೂರು ಮಾಡಿತ್ತು. ಅಭಿಮಾನಿಗಳಿಂದ 100 ರೂಪಾಯಿ ದೇಣಿಗೆ ಸಂಗ್ರಹಿಸಿ, ಜೀವಿತಾವಧಿಯಲ್ಲಿ ದುಡಿದಿದ್ದನ್ನೆಲ್ಲಾ ಸುರಿದು, ಅತ್ಯಂತ ಕಷ್ಟದಿಂದ ಬಾಲಣ್ಣ ಕಟ್ಟಿದ ಸ್ಟುಡಿಯೋ 'ಅಭಿಮಾನ್'.

10 ಎಕರೆಗಾಗಿ ಬಾಲಣ್ಣನ ಮಕ್ಕಳ ಕಿತ್ತಾಟ

10 ಎಕರೆಗಾಗಿ ಬಾಲಣ್ಣನ ಮಕ್ಕಳ ಕಿತ್ತಾಟ

ಸ್ಟುಡಿಯೋಗಾಗಿ ಹಗಲಿರುಳು ಕಾವಲು ಕಾಯ್ತಿದ್ದ ಬಾಲಣ್ಣ ತೀರಿಕೊಂಡ ನಂತ್ರ ಅಭಿಮಾನ್ ಸ್ಟುಡಿಯೋನ ಕೇಳೋರೂ ಇರ್ಲಿಲ್ಲ. ಶೂಟಿಂಗ್ ಗಳು ನಡೀತಿರ್ಲಿಲ್ಲ. ಅಪ್ಪನ ಬಳಿಕ ಅಭಿಮಾನ್ ಸ್ಟುಡಿಯೋದ ಆಡಳಿತ ವಹಿಸಿಕೊಂಡ ಮಗ ಗಣೇಶ್ ಗೆ ಆದಾಯ ಬರ್ತಿರ್ಲಿಲ್ಲ. ಹೀಗಾಗಿ ಬಾಲಣ್ಣ ಮರೆಯಾದ ನಾಲ್ಕೇ ವರ್ಷಗಳಲ್ಲಿ ಸ್ಟುಡಿಯೋ ನಮ್ಮ ಹೆಸರಿಗೆ ವರ್ಗಾವಣೆ ಆಗ್ಬೇಕು ಅಂತ ಮಕ್ಕಳಾದ ಗಣೇಶ್ ಮತ್ತು ಶ್ರೀನಿವಾಸ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಅಂದುಕೊಂಡಿದ್ದನ್ನ ಸಾಧಿಸಿದರು. ಸ್ವಂತ ಸಹೋದರಿಯರನ್ನೇ ಮರೆತು ಸ್ಟುಡಿಯೋದ 10 ಎಕರೆ ಭೂಮಿಯನ್ನ ಮಾರಿಬಿಟ್ಟರು.

ಕೋರ್ಟ್ ಮೆಟ್ಟಿಲೇರಿದ ಪುತ್ರಿ ಗೀತಾಬಾಲಿ

ಕೋರ್ಟ್ ಮೆಟ್ಟಿಲೇರಿದ ಪುತ್ರಿ ಗೀತಾಬಾಲಿ

ಸ್ಟುಡಿಯೋದಲ್ಲಿ ಮೂಲ ಸೌಕರ್ಯದ ಸಮಸ್ಯೆ ಇರುವುದರಿಂದ ಜಮೀನನ್ನು ಮಾರಿ, ಬಂದ ಹಣದಿಂದ ಸ್ಡುಡಿಯೋ ಏಳಿಗೆಗಾಗಿ ಶ್ರಮಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟು ಗಂಡು ಮಕ್ಕಳು 10 ಎಕರೆಯನ್ನ ಮಾರಿದರು. ಬಂದ ಹಣದಲ್ಲಿ ಸಿಗುವುದೆಲ್ಲಾ ಕೃಷ್ಣನ ಲೆಕ್ಕ. ಉಂಡುಹೋದ ಕೊಂಡುಹೋದ ಅಂತ ಸರ್ಕಾರಕ್ಕೆ ಮಾತ್ರವಲ್ಲದೆ ಒಡಹುಟ್ಟಿದ ಸಹೋದರಿಯರಿಗೂ ಅದ್ಯಾವಾಗ ದಾರಿತಪ್ಪಿಸಿದ್ರೋ, ಆಗ್ಲೇ ಬಾಲಕೃಷ್ಣ ಪುತ್ರಿ ಗೀತಾಬಾಲಿ ಕೋರ್ಟ್ ಮೆಟ್ಟಿಲೇರಿದ್ದು. ಇದೆಲ್ಲಾ ನಡೆದದ್ದು ಡಾ.ವಿಷ್ಣುವರ್ಧನ್ ಅಭಿಮಾನ್ ಸ್ಟುಡಿಯೋದ ಮಣ್ಣಲ್ಲಿ ಮಣ್ಣಾಗುವ ಮುನ್ನವೇ.

ಅಪ್ಪನ ಆಸೆ ಈಡೇರಿಸುವ ಸಲುವಾಗಿ ಕಾದಾಟ

ಅಪ್ಪನ ಆಸೆ ಈಡೇರಿಸುವ ಸಲುವಾಗಿ ಕಾದಾಟ

ಸಕಲ ಸೌಲಭ್ಯಗಳಿರುವ ದೊಡ್ಡ ಸ್ಟುಡಿಯೋ ಕಟ್ಟಬೇಕು ಅಂತ ಬೆಟ್ಟದಷ್ಟು ಕನಸುಹೊತ್ತು ಕೊನೆಯ ಘಳಿಗೆವರೆಗೂ ಬೆವರು ಹರಿಸಿದವರು ಬಾಲಣ್ಣ. ಆದ್ರೆ, ಹಣಕ್ಕಾಗಿ ಅರ್ಧಕರ್ಧ ಸ್ಟುಡಿಯೋ ಜಾಗವನ್ನ ಮಾರಿದ ಮಕ್ಕಳು ಅಪ್ಪನ ಆಸೆಗೆ ಕೊಳ್ಳಿ ಇಟ್ಟರು. ತಂದೆಯ ಋಣಕ್ಕಾಗಿ, ಅಪ್ಪನ ಮೇಲಿನ ಆಸೆ ನೆರವೇರಿಸುವ ಸಲುವಾಗಿ ಪುತ್ರಿ ಗೀತಾಬಾಲಿ ಕೋರ್ಟ್ ಮೆಟ್ಟಿಲೇರಿ ಈಗಲೂ ಹೋರಾಟ ನಡೆಸುತ್ತಿದ್ದಾರೆ.

ಎಲ್ಲರ ಮನೆಯ ದೋಸೆ ತೂತೇ.!

ಎಲ್ಲರ ಮನೆಯ ದೋಸೆ ತೂತೇ.!

ಅಪ್ಪ ದುಡಿದ ಆಸ್ತಿಗಾಗಿ ಮಕ್ಕಳು ಕಿತ್ತಾಡುವ ಪರಿಸ್ಥಿತಿ ಹಾಸ್ಯಬ್ರಹ್ಮ ಬಾಲಕೃಷ್ಣ ಕುಟುಂಬದಲ್ಲೂ ಇದೆ. ನೀ ಕೊಡೆ ನಾ ಬಿಡೆ ಅಂತ ಸಹೋದರ ಮತ್ತು ಸಹೋದರಿಯರ ನಡುವೆ ಸಮರ ನಡೆಯುತ್ತಲೇ ಇದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ, ಬಾಲಣ್ಣನ ಮಕ್ಕಳ ಜಗಳದಲ್ಲಿ ವಿಷ್ಣು ಸಮಾಧಿ ಅನಾಥವಾಗಿದೆ. ಅಷ್ಟೇ ಅಲ್ಲ, ಬಾಲಣ್ಣ ಕಂಡ ಕನಸು ಕನಸಾಗೇ ಉಳಿದಿದೆ.

ಯಾರೂ ಎಚ್ಚರ ವಹಿಸಲಿಲ್ಲ.!

ಯಾರೂ ಎಚ್ಚರ ವಹಿಸಲಿಲ್ಲ.!

ಡಾ.ವಿಷ್ಣುವರ್ಧನ್ ಅಂತ್ಯ ಸಂಸ್ಕಾರದ ಕಾರ್ಯಗಳ ಬಗ್ಗೆ ಗಮನ ಹರಿಸುವುದರ ಜೊತೆಗೆ, ಅಭಿಮಾನ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಕಾದಾಟದ ಬಗ್ಗೆ ಯಾರಾದರೂ ಒಬ್ಬರು ಗಮನ ಹರಿಸಿದ್ದರೂ, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಇಷ್ಟು ವರ್ಷ ಕಾಯುವ ಪರಿಸ್ಥಿತಿ ಬರುತ್ತಿರಲಿಲ್ಲ. [ಅಭಿಮಾನಿಗಳಿಂದ 'ಅಭಿಮಾನ'ದಲ್ಲೇ ಭದ್ರವಾದ ವಿಷ್ಣು ನೆಲೆ!]

ಇನ್ನಾದರೂ ದಾರಿ ಸುಗಮ?

ಇನ್ನಾದರೂ ದಾರಿ ಸುಗಮ?

ಕೌಟುಂಬಿಕ ಕಲಹದಿಂದ ಡಾ.ವಿಷ್ಣು ಸ್ಮಾರಕಕ್ಕೆ ಅಡ್ಡಿಯಾಗಬಾರದು ಅನ್ನುವ ಕಾರಣಕ್ಕೆ ಇನ್ಜಂಕ್ಷನ್ ಆರ್ಡರ್ ಇದ್ದರೂ, ಸ್ಮಾರಕಕ್ಕೆ ಮೀಸಲಾಗಿರುವ 2 ಎಕರೆ ಭೂಮಿಯನ್ನ ಬಿಟ್ಟುಕೊಡುವುದಾಗಿ ಪುತ್ರಿ ಗೀತಾಬಾಲಿ ಹೇಳಿದ್ದಾರೆ. ಇದು ನಿಜವೇ ಆದರೆ, ಕೆಲವೇ ತಿಂಗಳಲ್ಲಿ ಡಾ.ವಿಷ್ಣು ಸ್ಮಾರಕ ಪ್ರತಿಷ್ಠಾನಕ್ಕೆ ಚಾಲನೆ ಸಿಗಲಿದೆ.

English summary
Now that the Road blocks to build Dr.Vishnuvardhan Memorial is cleared, it`s time to know what was the road block. Abhiman Studio and Dr.Vishnuvardhan Memorial, a case in study

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more