For Quick Alerts
  ALLOW NOTIFICATIONS  
  For Daily Alerts

  ಗುರುಕಿರಣ್ ಮನೆಯಲ್ಲಿ ಅಂದು ಪುನೀತ್ ಹೇಗಿದ್ದರು ಕಣ್ಣಾರೆ ಕಂಡ ನಟನ ಭಾವನಾತ್ಮಕ ಪತ್ರ

  |

  ಪುನೀತ್ ರಾಜ್‌ಕುಮಾರ್ ನಿಧನದ ಹಿಂದಿನ ದಿನ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕೊನೆಯ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಸಾಕಷ್ಟು ಕಲಾವಿದರು ಕೂಡ ಹಾಜರಿದ್ದರು. ಸುಮಲತಾ ಅಂಬರೀಶ್, ರಮೇಶ್ ಅರವಿಂದ್, ಆಶ್ವಿನಿ ಪುನೀತ್‌ ರಾಜ್‌ಕುಮಾರ್ ಹೀಗೆ ಹಲವರು ಅಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ಪುನೀತ್ ಹಾಡು ಹಾಡಿ, ಡ್ಯಾನ್ಸ್ ಮಾಡಿ, ತುಂಬಾ ಸಂತಸದ ಸಮಯವನ್ನು ಕಳೆದಿದ್ದರು. ಇದೇ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ, ಗಾಯಕ ಅನಿರುಧ್ ಕೂಡ ಭಾಗಿ ಯಾಗಿದ್ದರು. ಪುನೀತ್ ಬಳಿ ಸಾಕಷ್ಟು ಸಮಯ ಕಳೆದಿದ್ದರು. ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ಕೂಡ ನಡೆಸಿದ್ದರು. ಕೊನೆಯ ಕ್ಷಣದವರೆಗೂ ಕಾರ್ಯಕ್ರಮದಲ್ಲಿ ಪುನೀತ್ ಹೇಗಿದ್ದರು ಎಂಬ ಬಗ್ಗೆ ಇದೀಗ ಅನಿರುಧ್ ಪತ್ರದ ಮುಖೇನ ತಿಳಿಸಿದ್ದಾರೆ. ಹಾಗಿದ್ರೆ ಅನಿರುಧ್ ಹಂಚಿಕೊಂಡಿರುವ ಮಾಹಿತಿಯಲ್ಲಿ ಏನಿದೇ ಅಂತ ನೋಡೋದಾದರೆ.

  ಗುರುಕಿರಣ್ ಮನೆಯಲ್ಲಿ ಅಂದು ಪುನೀತ್ ಹೇಗಿದ್ದರು ? ಕಣ್ಣಾರೆ ಕಂಡ ನಟನ ಭಾವನಾತ್ಮಕ ಪತ್ರ

  "ಪ್ರತಿ ವರ್ಷದಂತೆ ಈ ಸಲವೂ ಹೆಸರಾಂತ ಸಂಗೀತ ನಿರ್ದೇಶಕ ಮತ್ತು ನಮ್ಮ ಕುಟುಂಬದ ಗೆಳೆಯರಾದ ಗುರುಕಿರಣ್ ರವರ ಹುಟ್ಟುಹಬ್ಬದ ಸಂಭ್ರಮಕ್ಕೆ ಹೋಗಿದ್ದೆವು. ಅಲ್ಲಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾದೆ. ಅವರು, ನುರಿತ ಕಲಾವಿದರಾದ ರಮೇಶ್ ಅರವಿಂದ್ ಮತ್ತು ನಾನು ಒಟ್ಟಿಗೆ ಕುಳಿತುಕೊಂಡೆವು. ನನ್ನ ಅರ್ಧಾಂಗಿ ಕೀರ್ತಿಯವರು ಪುನೀತ್ ಪತ್ನಿ ಅಶ್ವಿನಿಯವರ ಜೊತೆ ಕುಳಿತರು.

  ಸಮಾರಂಭದಲ್ಲಿ ಚೆನ್ನಾಗಿ ಕಾಲ ಕಳೆದೆವು. ಸಿನೆಮಾ, ವ್ಯಾಯಾಮ ಹಾಗೂ ಎಷ್ಟೋ ಇನ್ನಿತರ ವಿಷಯಗಳ ಕುರಿತು ಮಾತನಾಡಿದೆವು. ಅವರಿಗೆ ವ್ಯಾಯಾಮ ಬಹಳ ಮೆಚ್ಚಿನ ವಿಷಯವೆಂಬುದನ್ನು ಕಂಡುಕೊಂಡೆ. ಇತ್ತೀಚೆಗೆ ತಾನು ಎಪ್ಪತ್ತು ಕಿಲೋಮೀಟರಗಳಷ್ಟು ಸೈಕಲ್ ಹೊಡೆದದ್ದನ್ನು ಹೇಳಿಕೊಂಡ ಪುನೀತ್, ನಾವು ಯಾವಾಗಲೂ ನಮ್ಮ ವಯಸ್ಸನ್ನು ಸವಾಲಿಗೊಡ್ಡುತ್ತಿರಬೇಕು ಎಂದರು. ಅವರು ಹೇಳಿದ್ದನ್ನು ಕೇಳಿದ ಮೇಲೆ ನಾನು, ಅವರು ಈಜು, ಸೈಕಲ್ ಹೊಡೆಯುವುದು ಮತ್ತು ಮ್ಯಾರಥಾನ್ ಓಟವನ್ನು ಒಳಗೊಂಡ 'ಐರನ್ ಮ್ಯಾನ್ ವರ್ಲ್ಡ್ ಚಾಂಪಿಯನ್ ಶಿಪ್' ಸ್ಪರ್ಧೆಗೆ ಪ್ರಯತ್ನಿಸಬಹುದು ಎಂದು ಸಲಹೆ ಮಾಡಿದೆ. ಆ ಸ್ಪರ್ಧೆಯಲ್ಲಿ ಭಾಗವಹಿಸುವವರು ಚೆನ್ನಾಗಿ ತರಬೇತಿ ಪಡೆದ ತರಬೇತುದಾರರ ಕೆಳಗೆ ಕಡ್ಡಾಯವಾಗಿ ಸರಿಯಾದ ತರಬೇತಿ ಪಡೆಯಬೇಕೆಂಬುದರ ಬಗ್ಗೆ ಚರ್ಚಿಸಿದೆವು.

  ಪುನೀತ್ ಏನಾದರೂ ಸ್ಪರ್ಧಿಸುವುದೆಂದು ನಿರ್ಧರಿಸಿದರೆ ಅಲ್ಲಿಯೂ ಜಯಗಳಿಸುವರೆಂದು ನನಗೆ ನಿಶ್ಚಿತವಾಗಿ ತಿಳಿದಿತ್ತು. ಇದೊಂದು ವಿಶೇಷವಾದ ಕ್ಷಣಗಳಲ್ಲಿ ಒಂದು ಎಂದೆನಿಸಿ ನಮ್ಮ ಫೋಟೋ ತೆಗೆದುಕೊಳ್ಳಬೇಕೆಂಬ ಆಸೆಯಾಯ್ತು ನನಗೆ. ಆದರೆ, ಅದು ಹೇಗೋ ತೆಗೆಯಲು ಆಗಲೇ ಇಲ್ಲ. ಸಮಾರಂಭದಲ್ಲಿ ನಕ್ಕು, ನಲಿದು ಒಟ್ಟಿಗೆ ಊಟ ಮಾಡಿದೆವು. ಪುನೀತ್ ಸುಮಾರು 11:30ರ ಹೊತ್ತಿಗೆ ಹೊರಟರು, ನಾವೂ ಸ್ವಲ್ಪ ಹೊತ್ತಿನಲ್ಲೇ ಹೊರಟೆವು. ಅದರ ಮರುದಿನ ನಾನು ಕೇಳಿದ್ದು ಮಾತ್ರ ನಿಜಕ್ಕೂ ಆಘಾತಕರವಾಗಿತ್ತು. ಸುಪ್ರಸಿದ್ಧ ನಟ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ, ಯುವಜನರ ಆಶೋತ್ತರಗಳ ಪ್ರತೀಕ, ರಾಷ್ಟ್ರಪ್ರಶಸ್ತಿ ವಿಜೇತ, ಸೂಪರ್ ಸ್ಟಾರ್, ಲೋಕೋಪಕಾರಿ, ಕಿಂಚಿತ್ತೂ ಅಹಂಕಾರವಿಲ್ಲದ ಮನುಷ್ಯ, ಒಬ್ಬ ಅತ್ಯುತ್ತಮ ಕಲಾವಿದ, ಗಾಯಕ ಮತ್ತು ನಿರ್ಮಾಪಕ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನಮ್ಮ ಅಪ್ಪು, ಇನ್ನಿರಲಿಲ್ಲ!

  ಕೆಲವೇ ಗಂಟೆಗಳ ಹಿಂದೆ ಯಾರು ಅಷ್ಟು ಶಕ್ತಿಯುತವಾಗಿ, ಉತ್ಸಾಹಭರಿತರಾಗಿದ್ದರೋ, ಆ ವ್ಯಕ್ತಿ ಈಗ ಚಲನೆಯೇ ಇಲ್ಲದವರಾಗಿದ್ದರು. ಕಿಲಕಿಲನೆ ನಗುತ್ತಾ ಸಮಾರಂಭವನ್ನು ಆಸ್ವಾದಿಸಿದ ಅಶ್ವಿನಿ ಸಂಪೂರ್ಣವಾಗಿ ದುಃಖದಲ್ಲಿ ಮುಳುಗಿಹೋಗಿದ್ದರು. ನಾನು, ನನ್ನ ಹೆಂಡತಿ ಮತ್ತು ಮಕ್ಕಳು ದಿಗ್ಭ್ರಮೆಗೊಳಗಾಗಿದ್ದೆವು. ಪುನೀತ್ ಅವರು ತಮ್ಮ ನಿತ್ಯದ ವ್ಯಾಯಾಮದ ನಂತರ ದೇಹದಲ್ಲಿ ಅಸೌಖ್ಯ ಅನುಭವಿಸಿದರೆಂದು ಕೇಳಿದಾಗ ನನ್ನ ಮನಸ್ಸಿನಲ್ಲಿ ಎಷ್ಟೋ ಪ್ರಶ್ನೆಗಳು ಸುಳಿದಾಡತೊಡಗಿದವು.

  ಅವರು ವ್ಯಾಯಾಮ ಇಷ್ಟಪಡುತ್ತಿದ್ದರು, ಆದರೆ ಕೆಲವೊಮ್ಮೆ ಎಷ್ಟು ಪ್ರಮಾಣದ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇನ್ನೆಷ್ಟು ಮಾಡಿದರೆ ಅಪಾಯಕರವೆಂದು ದೃಢಪಡುವ ನಡುವಿನ ಸೂಕ್ಷ್ಮ ರೇಖೆಯನ್ನು ಎಳೆಯುವುದು ಕಷ್ಟ. ಏಕೆಂದರೆ, ಸಾಮಾನ್ಯವಾಗಿ ಎಲ್ಲ ಕಲಾವಿದರೂ ಪರದೆಯ ಮೇಲೆ ಚೆನ್ನಾಗಿ ಕಾಣಬೇಕೆಂಬ ಅತಿದೊಡ್ಡ ಒತ್ತಡದಲ್ಲಿ ಸಿಲುಕಿರುತ್ತಾರೆ. ಅದರರ್ಥ, ನಾಯಕರು ಸಿಕ್ಸ್ ಪ್ಯಾಕ್ ದೇಹ ಧರಿಸುವುದು ಮತ್ತು ನಾಯಕಿಯರು ಸದಾ ಎಲ್ಲರಿಗಿಂತ ತೆಳ್ಳಗಿರುವುದು. ಇದನ್ನು ಹೊಂದಲು ಕಲಾವಿದರು ವಿಪರೀತ ಮಟ್ಟದ ಪಥ್ಯ ಮತ್ತು ವ್ಯಾಯಾಮ ಮಾಡಲು ತೊಡಗುತ್ತಾರೆ. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಎಲ್ಲರೂ, ನಟ, ನಟಿಯರು ಮತ್ತು ಅಭಿಮಾನಿಗಳು, ಈ ಪ್ರವೃತ್ತಿಯನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಬೇಕು. ಆದಷ್ಟು ಬೇಗ ಈ ಪ್ರವೃತ್ತಿ ಮಾಯವಾಗಲೆಂದು ಆಶಿಸುತ್ತೇನೆ. ನಾವೆಷ್ಟೇ ಯೋಚಿಸಿದರೂ, ಚರ್ಚಿಸಿದರೂ ಮತ್ತೀಗ ವಿನಂತಿಸಿಕೊಂಡರೂ, ಆಗಿರುವ ನಷ್ಟವನ್ನು ಸರಿಪಡಿಸಲಾಗುವುದಿಲ್ಲ ಎಂಬುದು ಕಟು ಸತ್ಯ.

  ನನ್ನ ಅತ್ತೆಯವರಾದ ಭಾರತಿ ಅಮ್ಮ ಪುನೀತ್ ಅವರ ಜೊತೆ ಒಂದೆರಡು ಚಲನಚಿತ್ರಗಳಲ್ಲಿ ಹಾಗೂ ಅವರ ತಂದೆ ಡಾ. ರಾಜಕುಮಾರ್ ಅವರ ಜೊತೆಯಲ್ಲಿ ಅಸಂಖ್ಯಾತ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಾವನವರಾದ ಡಾ. ವಿಷ್ಣುವರ್ಧನ್ ಅವರೂ ಡಾ. ರಾಜಕುಮಾರ್ ಅವರೊಂದಿಗೆ ನಟಿಸಿದ್ದಲ್ಲದೇ ಅವರ ಬಹುದೊಡ್ಡ ಅಭಿಮಾನಿಗಳಲ್ಲಿ ಒಬ್ಬರಾಗಿದ್ದರು. ನನ್ನ ಅತ್ತೆ, ಮಾವನವರು ಡಾ. ರಾಜಕುಮಾರ್ ಅವರ ಮಕ್ಕಳನ್ನು ತಮ್ಮ ಮಕ್ಕಳಂತೆ ಪರಿಗಣಿಸಿದ್ದರು. ಎರಡೂ ಕುಟುಂಬಗಳು ಹಿಂದೆಯೂ ಅನ್ಯೋನ್ಯವಾಗಿದ್ದವು ಮತ್ತು ಈಗಲೂ ಅನ್ಯೋನ್ಯವಾಗಿವೆ. ಹಾಗಾಗಿಯೇ ನಾನು ಪುನೀತ್ ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೂ ಅದೇ ಅಕ್ಕರೆಯನ್ನು ಹಂಚಿಕೊಂಡಿದ್ದೇವೆ.

  ಅಶ್ವಿನಿಯವರು ತಮ್ಮ ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ದೊಡ್ಡ ಮಗಳು ಧೃತಿ ಅಮೆರಿಕದಲ್ಲಿ ವಿದ್ಯಾರ್ಥಿವೇತನದಲ್ಲಿ ಓದುತ್ತಿರುವಳೆಂದು ಹೇಳಿದ್ದರು. ತಂದೆಯ ಸಾವಿನ ಸುದ್ದಿ ಕೇಳಿ, ತನ್ನನ್ನು ಎಂದಿನಂತೆ ಬರಮಾಡಿಕೊಂಡು ಪ್ರೀತಿಯ ಮಳೆ ಸುರಿಸಲು ಅವರಿರುವುದಿಲ್ಲ ಎಂಬ ಸತ್ಯದ ಜೊತೆ ಇಪ್ಪತ್ತನಾಲ್ಕು ಗಂಟೆ ಇರಬೇಕಾದ ಆ ಪುಟ್ಟ ಹುಡುಗಿಯ ಪರಿಸ್ಥಿತಿ ಎಷ್ಟು ಘೋರವಾಗಿರುತ್ತದೆಂಬುದನ್ನು ನನಗೆ ಊಹಿಸಲೂ, ಜೀರ್ಣಿಸಿಕೊಳ್ಳುವುದೂ ಕಷ್ಟ. ಪುನೀತ್ ಅವರಿಗೆ ಮರಣೋತ್ತರ ಗೌರವ ಸಲ್ಲಿಕೆಯ ಆಲೋಚನೆಯೇ ಭೀಕರವಾಗಿದೆ. ನಾವು ಅನುಭವಿಸುತ್ತಿರುವ ನಷ್ಟವನ್ನು ವರ್ಣಿಸುವುದು ಅಸಾಧ್ಯವಾಗಿದೆ. ಒಂದು ರೀತಿಯಲ್ಲಿ ಮರಗಟ್ಟಿ ಹೋಗಿ, ಸಂಪೂರ್ಣ ಶೂನ್ಯತೆ ಆವರಿಸಿದೆ" ಎಂದು ಭಾವನಾತ್ಮಕವಾಗಿ ಅಂದು ನಡೆದ ಒಂದಷ್ಟು ಮಾತುಕತೆಗಳು ಹಾಗೂ ಅವತ್ತಿನ ಕಾರ್ಯಕ್ರಮದಲ್ಲಿ ಪುನೀತ್ ಹೇಗಿದ್ದರು ಎಂಬ ಬಗ್ಗೆ ಅನಿರುಧ್ ಮಾಹಿತಿ ಹಂಚಿಕೊಂಡಿದ್ದಾರೆ.

  English summary
  Actor Anirudh remembers His Last Conversation With Puneeth Rajkumar. Anirudh writes emotional letter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X