For Quick Alerts
  ALLOW NOTIFICATIONS  
  For Daily Alerts

  ಫಿಲ್ಮಿಬೀಟ್‌ನಲ್ಲಿ ವಿಷ್ಣುವರ್ಧನ್ ಸಮಾಧಿ ಬಗ್ಗೆ ನಟ ಅನಿರುಧ್ ಬೇಸರದ ನುಡಿ

  |

  ನಟ ವಿಷ್ಣುವರ್ಧನ್ ಕುಟುಂಬ ಇನ್ನು ಕೂಡ ವಿಷ್ಣುವರ್ಧನ್ ಸಮಾಧಿ ವಿಚಾರದಲ್ಲಿ ಹೋರಾಡುತ್ತಲೇ ಇದೆ. ವಿಷ್ಣು ವರ್ಧನ್ ಅವರನ್ನು ಕಳೆದುಕೊಂಡು 12ವರ್ಷ ಆಗುತ್ತಾ ಬಂದರೂ ಇನ್ನೂಕೂಡ ಒಂದು ಸಮಾಧಿ ಆಗಿಲ್ಲ ಎಂಬ ಕೊರಗು ವಿಷ್ಣುವರ್ಧನ್ ಕುಟುಂಬಕ್ಕೆ ಇದೆ. ಹಾಗಿದ್ದರೆ ವಿಷ್ಣು ಸಮಾಧಿ ತಡವಾಗಲು ಕಾರಣ ಏನು? ನಿಜಕ್ಕೂ ಇಲ್ಲಿ ಆಗುತ್ತಿರುವ ಅಡೆತಡೆಗಳು ಏನು? ಸರ್ಕಾರ ವಿಷ್ಣು ಸಮಾಧಿಗೆ ಸಹಕಾರ ಕೊಟ್ಟಿದ್ಯಾ? ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ನಟ ಅನಿರುಧ್. ಫಿಲ್ಮಿಬೀಟ್ ಬಳಿ ತಮ್ಮ ಮನಸ್ಸಿನ ವೇದನೆ ಹಾಗೂ ವಿಷ್ಣುವರ್ಧನ್ ಅವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ನಮ್ಮ ಪ್ರಶ್ನೆಗೆ ಅನಿರುಧ್ ಉತ್ತರ ನಿಜಕ್ಕೂ ಬೇಸರ ಉಂಟು ಮಾಡುತ್ತೆ. ವಿಷ್ಣು ಸಮಾಧಿ ಬಗ್ಗೆ ಕುಟುಂಬದ ಬೇಸರ ಏನು ಅನ್ನೋದನ್ನ ಮುಂದೆ ಓದಿ

  ಮೈಸೂರಿನಲ್ಲಿ ಆಗುತ್ತಿರುವ ವಿಷ್ಣು ಸಮಾಧಿ ಯಾವ ಹಂತದಲ್ಲಿದೆ?

  ವಿಷ್ಣುವರ್ಧನ್ ಸಾವನಪ್ಪಿ ಮುಂದಿನ ಡಿಸೆಂಬರ್‌ಗೆ 12 ವರ್ಷ ಆಗುತ್ತೆ. ಇನ್ನು ಕೂಡ ಸಮಾಧಿಗೆ ಒಂದು ತಾರ್ಕಿಕ ಅಂತ್ಯ ಕಂಡಿಲ್ಲ. ಅಪ್ಪಾಜಿ ಹುಟ್ಟಿದ ಸ್ಥಳದಲ್ಲಿ ಒಂದು ನೆಲೆ ಸಿಕ್ಕಿದೆ. ಅದು ಕೂಡ ಎಷ್ಟೋ ಒದ್ದಾಡಿ, ಹೋರಾಟ ಮಾಡಿ, ಕಚೇರಿಗಳಿಗೆ ಅಲೆದು ಅಪ್ಪಾಜಿ ಸಮಾಧಿಯನ್ನು ಸರ್ಕಾರ ಕಟ್ಟಿಸುತ್ತಿದೆ. ಮುಂದಿನ ವರ್ಷ ಸೆಪ್ಟೆಂಬರ್‌ಗೆ ಸಮಾಧಿ ಪೂರ್ಣಗೊಳ್ಳುತ್ತೆ ಅಂತ ಸರ್ಕಾರ ಭರವಸೆ ನೀಡಿದೆ. ಅದಕ್ಕಾಗಿ ಎದುರು ನೋಡುತ್ತಿದ್ದೇವೆ.

  ಬೆಂಗಳೂರಿನಲ್ಲಿ ಸಮಾಧಿ ಕಟ್ಟಲು ಯಾಕೆ ಸಾಧ್ಯವಾಗಲಿಲ್ಲಾ?

  ಬೆಂಗಳೂರಿನಲ್ಲಿಯೇ ಅಪ್ಪಾಜಿ ಸಮಾಧಿ ಮಾಡಬೇಕು ಎಂದು ನಮ್ಮೆಲ್ಲರ ಆಸೆ ಇದೆ. ಆದರೆ ಇದು ಹೇಗೆ ಸಾಧ್ಯ? ಇಷ್ಟು ವರ್ಷವು ನಾವು ಅದಕ್ಕಾಗಿ ಪ್ರಯತ್ನ ಮಾಡಿದ್ದೇವೆ. ಗೊತ್ತಿಲ್ಲದ ಜಾಗ, ನೋಡಿರದ ಸರ್ಕಾರಿ ಕಚೇರಿಗಳು, ವಿಧಾನಸೌದ, ಎಲ್ಲಾ ಕಡೆ ಕೂಡ ಅಲೆದು ಚಪ್ಪಲಿ ಸವಿಸಿದ್ದೇವೆ. ಅದೆಷ್ಟೋ ಅಧಿಕಾರಿಗಳು, ಸಂಬಂಧ ಪಟ್ಟ ವ್ಯಕ್ತಿಗಳು, ಸರ್ಕಾರಿ ಆಫೀಸರ್‌ಗಳು, ರಾಜಕಾರಣಿಗಳು ಎಲ್ಲರಲ್ಲೂ ಒಂದು ಜಾಗಕ್ಕಾಗಿ ಬೇಡಿಕೊಂಡಿದ್ದೇವೆ. ಸತತ 6 ವರ್ಷ ಬೆಂಗಳೂರಿನಲ್ಲಿ ಸಮಾಧಿ ಮಾಡಲು ಜಾಗಕ್ಕಾಗಿ ಅಲೆದಿದ್ದೇವೆ. ಒಬ್ಬರು ಕೂಡ ಸಪೋರ್ಟ್ ಮಾಡಲಿಲ್ಲ. ಸರ್ಕಾರ ಒಂದಷ್ಟು ಜಾಗಗಳನ್ನು ತೋರಿಸಿತ್ತು. ಆದರೆ ಆ ಜಾಗಗಳಿಗೆ ಹೋಗಲು ಸರಿಯಾದ ವ್ಯವಸ್ಥೆ ಇರಲಿಲ್ಲ, ಕಾಡು ಮುಳ್ಳಿನ ದಾರಿ, ಯಾವುದೋ ಬೆಟ್ಟದ ಮೇಲಿನ ಜಾಗ, ಗಾಡಿಗಳೇ ಓಡಾಡಲು ಸಾಧ್ಯವಾಗದ ಜಾಗಗಳನ್ನು ತೋರಿಸಿ ಸಮಾಧಿ ಕಟ್ಟಿಕೊಡುತ್ತೇವೆ ಎಂದರು. ಅಭಿಮಾನಿಗಳ ದಾದ ವಿಷ್ಣು ಅಪ್ಪಾಜಿಯ ಸಮಾಧಿ ಅಂತಹ ಜಾಗದಲ್ಲಿ ಮಾಡಲು ನಾವು ಸಿದ್ದವಿರಲಿಲ್ಲ.

  ಸರ್ಕಾರದಿಂದ ಯಾವ ಸಹಕಾರವು ಸಿಗಲಿಲ್ಲವಾ?

  2009ರಿಂದಲೂ ಆದಂತಹ ಎಲ್ಲಾ ಸಿಎಂ ಗಳ ಬಳಿಯೂ ಈ ಬಗ್ಗೆ ಮಾತನಾಡಿದ್ದೇವೆ. ಸಮಾಧಿಗೆ ಒಂದಷ್ಟು ಜಾಗ ಕೊಡಿ ಎಂದು ಕೇಳಿಕೊಂಡಿದ್ದೇವೆ. ಯಾವುದೇ ಜಾಗ ಸಿಕ್ಕರೂ ಅದಕ್ಕೆ ಸಾಕಷ್ಟು ಅಡೆತಡೆಗಳು ಆಗುತ್ತಿದ್ದವು. ಕೋರ್ಟ್ ಕೇಸ್‌ಗಳನ್ನು ನಾವು ಎದುರಿಸುತ್ತಿದ್ದೇವೆ. ಅಭಿಮಾನ್ ಸ್ಟುಡಿಯೋ ಅಕ್ಕ ಪಕ್ಕದಲ್ಲೆ ಒಂದಷ್ಟು ಜಾಗಗಳು ಫೈನಲ್ ಆಗಿದ್ದವು. ಅಲ್ಲಿ ನಾವು ಇನ್ನೇನು ಸಮಾಧಿ ಕಟ್ಟಬೇಕು ಎಂದು ನಕ್ಷೆಗಳನ್ನು ತಯಾರು ಮಾಡುವಷ್ಟರಲ್ಲಿ ಯಾರಾದರು ಬಂದು ತಕರಾರು ಮಾಡುತ್ತಿದ್ದರು. ಕೊನೆಯದಾಗಿ ಸರ್ಕಾರ ನಗರದ ಬಿಜಿಎಸ್ ಕಾಲೇಜ್‌ ಮುಂಭಾಗದಲ್ಲಿ ಸಮಾಧಿಗೆ ಜಾಗ ನಿಗದಿ ಮಾಡಿತ್ತು. ಅಲ್ಲಿ ಎಲ್ಲಾ ಸ್ವಚ್ಚ ಮಾಡಿ, ಶಂಕುಸ್ಥಾಪನೆ ದಿನವೇ ನಮಗೆ ಸ್ಟೇ ಆರ್ಡರ್ ಬರುತ್ತೆ. ಅದು ಫಾರೆಸ್ಟ್ ಬಫರ್ ಝೋನ್ ಹೀಗಾಗಿ ಇಲ್ಲಿ ಸಮಾಧಿ ಮಾಡುವಂತಿಲ್ಲ ಎಂದು ಪರಿಸರವಾದಿಗಳು ಸ್ಟೇ ತಂದಿದ್ರು. ಹೀಗೆ ಸತತ 6 ವರ್ಷ ಬೆಂಗಳೂರಿನಲ್ಲಿ ಅಪ್ಪಾಜಿ ಸಮಾಧಿಗಾಗಿ ಅಲೆದಿದ್ದೇವೆ ಆದರೂ ಸಾಧ್ಯವಾಗಿಲ್ಲ.

  ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಮಾಡಲು ಯಾಕೆ ಆಗಲಿಲ್ಲಾ?

  ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿ ಮಾಡಲು ಅಭಿಮಾನಿಗಳು ತುಂಬಾ ಪ್ರಯತ್ನ ಪಟ್ಟರು. ನಾನು ಭಾರತೀ ಅಮ್ಮ ಕೂಡ ಪ್ರಯತ್ನ ಮಾಡಿದ್ದೇವೆ. ಸ್ವತಃ ಬಾಲಣ್ಣ ಕುಟುಂಬದ ಜೊತೆ ಮನವಿ ಕೂಡ ಮಾಡಿದ್ದೇವೆ. ಅಂಬರೀಶ್ ಕೂಡ ಇದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈಗಲೂ ಅಭಿಮಾನಿಗಳು ಈ ಬಗ್ಗೆ ಪ್ರಯತ್ನಿಸುತ್ತಿದ್ದಾರೆ. ಅಪ್ಪಾಜಿ ಸಮಾಧಿ ವಿಚಾರಕ್ಕೆ ತಡೆ ಬರುತ್ತಲೇ ಇದೆ. ಅಭಿಮಾನಿಗಳಿಗೆ ಈ ಬಗ್ಗೆ ಬೇಸರ ಇದೆ. ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ಕರೆದು ನಾನು ಮೀಟಿಂಗ್ ಮಾಡಿದ್ದೆ. ಆಗ ನಾನು ಹೇಳಿದ್ದೆ ಬೆಂಗಳೂರಿನಲ್ಲಿ ಸಮಾಧಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೈಸೂರಿನಲ್ಲಿ ಮಾಡೋಣ, ಒಂದು ವೇಳೆ ಬೆಂಗಳೂರಿನಲ್ಲಿ ಆಗುವ ಸಾಧ್ಯತೆಗಳು ಕಂಡುಬಂದರೇ ಮೈಸೂರಿನಲ್ಲಿ ಸಮಾಧಿ ಮಾಡಲು ಒಂದು ಹೆಜ್ಜೆ ಮುಂದೆ ಹೋಗಲ್ಲ ಎಂದು. ಆದರೆ ಅದು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೈಸೂರಿನಲ್ಲಿ ಸಮಾಧಿ ಕೆಲಸ ನಡೆಯುತ್ತಿದೆ.

  ಇಂಡಸ್ಟ್ರಿ ಕಡೆಯಿಂದ ಬೆಂಬಲ ಯಾವ ರೀತಿ ಇತ್ತು?

  ಕನ್ನಡದಲ್ಲಿ ಅಪ್ಪಾಜಿ 224ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಈಗಲೂ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ಒಬ್ಬ ದೊಡ್ಡ ನಟನ ಸಮಾಧಿಗೆ ಯಾರೂ ಸಪೋರ್ಟ್ ಮಾಡಿಲ್ಲ. ಅಂಬರೀಶ್ ಇದ್ದಾಗ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು. ಬೇರೆ ಯಾರು ಕೂಡ ಮಾಡಿಲ್ಲ. ಮಾಧ್ಯಮದ ಮುಂದೆ ಕೂತು ಮಾತನಾಡುತ್ತಾರೆ, ಸಮಾಧಿ ಮಾಡೇ ಮಾಡುತ್ತೇವೆ ಎಂದು ಹೇಳಿಕೆ ಕೊಡುತ್ತಾರೆ. ಅವೆಲ್ಲವೂ ಅಲ್ಲಿಗಷ್ಟೇ ಸೀಮಿತವಾಗಿತ್ತು. ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವವರೆಗೆ ಅವರ ಪ್ರಯತ್ನ ಇರುತ್ತಿತ್ತು. ಯಾರೊಬ್ಬರು ಇಲ್ಲಿಯವರೆಗೂ ಭಾರತೀ ಅಮ್ಮ ಆಗಲಿ ನನ್ನ ಬಳಿ ಆಗಲಿ ಈ ಬಗ್ಗೆ ಮನೆಗೆ ಬಂದು ಕೂತು ಮಾತನಾಡಿಲ್ಲ. ಏನು ಮಾಡಬೇಕು, ಯಾವ ರೀತಿ ಸಹಕಾರ ನೀಡಬೇಕು ಎಂಬ ಬಗ್ಗೆ ಕೇಳಿಲ್ಲ. ಮುಂದೆ ಸಿಕ್ಕಾಗಷ್ಟೇ ಮಾತನಾಡುತ್ತಾರೆ ಸುಮ್ಮನಾಗುತ್ತಾರೆ. ಅಪ್ಪಾಜಿ ಇದ್ದಾಗ ಎಲ್ಲರೂ ಹಿಂದೆ ಮುಂದೆ ಇದ್ದರು, ಈಗ ಯಾರು ಇಲ್ಲ ಎಂದಷ್ಟೇ ನಾನು ಹೇಳುತ್ತೇನೆ.

  Actor Anirudh talks about Vishnuvardhan Memorial injustice

  ಡಾ ರಾಜ್, ಅಂಬರೀಶ್, ಪುನೀತ್ ಸಮಾಧಿಗೆ ಜಾಗ ಕೂಡಲೇ ನಿಗಧಿ ಆಗಿದೆ. ಇದೇ ವಿಷ್ಣುವರ್ಧನ್ ಸಮಾಧಿ ವಿಚಾರದಲ್ಲಿ ಯಾಕೆ ಆಗಿಲ್ಲ.ವಿಷ್ಣು ಕುಟುಂಬಕ್ಕೆ ಈ ಬಗ್ಗೆ ಬೇಸರ ಇದೆಯಾ?

  ಖಂಡಿತಾ ಇದೆ. ಅಪ್ಪಾಜಿ ವಿಚಾರದಲ್ಲಿ ಕೇವಲ ಸ್ಮಾರಕ ಅಷ್ಟೇ ಅಲ್ಲ, ಎಲ್ಲಾ ವಿಚಾರದಲ್ಲೂ ತಾರತಮ್ಯ ನಡೀತಾ ಇದೆ. ಡಾ ರಾಜ್, ಅಂಬರೀಶ್ , ಪುನೀತ್ ಎಲ್ಲರೂ ಕೂಡ ಮೇರು ನಟರು. ಅವರಿಗೆ ಸಲ್ಲುವ ಗೌರವ ಸಂದಿದೆ ಈ ಬಗ್ಗೆ ಖುಷಿ ಇದೆ. ಆದರೆ ವಿಷ್ಣು ಅಪ್ಪಾಜಿ ಏನು ಅನ್ಯಾಯ ಮಾಡಿದ್ದಾರೆ. ಜನರನ್ನು ರಂಜಿಸಿದ್ದೆ ತಪ್ಪಾಯ್ತಾ? ಅಥವಾ ಅವರು ಚಿತ್ರರಂಗಕ್ಕೆ ಏನು ಕೊಡುಗೆ ಕೊಟ್ಟಿಲ್ಲವೇ? ಅಪ್ಪಾಜಿಗೂ ಗೌರವ ಕೊಡಿ, ಅವರು ಚಿತ್ರರಂಗಕ್ಕಾಗಿ ದುಡಿದಿದ್ದಾರೆ. ಕೊನೆ ಉಸಿರು ಇರುವವರೆಗೂ ಕಲೆಗಾಗಿಯೇ ಜೀವನ ಮುಡಿಪಿಟ್ಟಿದ್ದರು. ಅಂತವರಿಗೆ ಈ ರೀತಿ ಮೋಸಗಳು, ತಾರತಮ್ಯ ಆಗುತ್ತಿರೋದನ್ನು ಹೇಗೆ ಸಹಿಸೋದಕ್ಕೆ ಸಾಧ್ಯ ಹೇಳಿ?

  ಬೇರೆ ವಿಚಾರದಲ್ಲೂ ಅನ್ಯಾಯ ಆಗಿದೆ ಅಂದ್ರೆ ಯಾವರೀತಿ?

  ಸಮಾಧಿ ವಿಚಾರದಲ್ಲಿ ಸಾಕಷ್ಟು ಅನ್ಯಾಯ ಆಗಿದೆ. ಯಾರೊಬ್ಬರೂ ಬೆಂಬಲ ನೀಡಿಲ್ಲ. ಇಂಡಸ್ಟ್ರಿಯಿಂದಲೂ ಕಡೆಗಣನೆ ಆಗಿದೆ. ಸರ್ಕಾರದಿಂದಲೂ ಆಗಿದೆ. ಹಾಗೇ ಸ್ಯಾಂಡಲ್‌ವುಡ್‌ನ ಆರ್ಟಿಸ್ಟ್ ಅಸೋಸಿಯೇಷನ್ ಕಡೆಯಿಂದಲೂ ಇದೇ ಭೇದಭಾವ ಕಂಡುಬಂದಿದೆ. ಇದು ನಮ್ಮ ಕುಟುಂಬಕ್ಕೆ ಹೇಳಲಾಗದ ನೋವು ತಂದಿದೆ. ಅಪ್ಪಾಜಿ ಸಿನಿಮಾ ರಂಗಕ್ಕೆ ಎಷ್ಟೇ ಕೊಡುಗೆ ಕೊಟ್ಟರೂ ಕಲಾವಿದರ ಸಂಘದಲ್ಲಿ ಅಪ್ಪಾಜಿ ಹೆಸರಿಲ್ಲ. ಡಾ ರಾಜ್‌ಕುಮಾರ್, ಅಂಬರೀಶ್ ಹೆಸರಿರುವಾಗ ವಿಷ್ಣುವರ್ಧನ್ ಹೆಸರು ಯಾಕೆ ಇಲ್ಲಾ? ಈ ಬಗ್ಗೆ ಹಿಂದೆ ದೊಡ್ಡಣ್ಣ ಕೂಡ ಮಾತನಾಡಿದ್ದಾರೆ. ಆದರೆ ಇಲ್ಲಿಯವರೆಗೂ ಅಪ್ಪಾಜಿ ಹೆಸರು ಹಾಕಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದು ನಮ್ಮ ಕುಟುಂಬದ ಎಲ್ಲರಿಗೂ ಬೇಸರ ತಂದಿದೆ. ಎಷ್ಟೇ ಈ ಬಗ್ಗೆ ಹೇಳಿಕೊಂಡರು ನಮಗೆ ಸರಿಯಾದ ಉತ್ತರವು ಸಿಗುತ್ತಿಲ್ಲ. ಈ ರೀತಿ ತಾರತಮ್ಯ ಮಾಡಿ ಏನು ಸಿಗುತ್ತೆ ಅಂತ ಗೊತ್ತಾಗುತ್ತಿಲ್ಲ.

  ನಿಮ್ಮ ಕುಟುಂಬಕ್ಕೆ ಬೇರೆ ಬೇಸರ ಏನಾದರೂ ಇದೆಯಾ?

  ಹೌದು. ಅಪ್ಪಾಜಿಗೆ ಯಾಕೆ ಇಷ್ಟು ಅನ್ಯಾಯ ಆಗುತ್ತಿದೆ ಗೊತ್ತಿಲ್ಲ. ಫಿಲ್ಮ್ ಚೇಂಬರ್‌ನಲ್ಲೂ ಅಪ್ಪಾಜಿಗೆ ಒಂದು ಸ್ಥಾನ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ನಾವು ಫಿಲ್ಮ್ ಚೇಂಬರ್ ಪ್ರವೇಶ ಪಡೆಯುವ ಜಾಗದಲ್ಲಿ ಡಾ ರಾಜ್‌ ಅವರ ಒಂದು ಸ್ಟ್ಯಾಚ್ಯು ಇದೆ. ಅದರ ಪಕ್ಕದಲ್ಲೆ ಅಪ್ಪಾಜಿ ಅವರ ಒಂದು ಸ್ಟ್ಯಾಚ್ಯು ಇಡಲು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು. ಸರಿ ಅಂತ ನಾನು ಹೋಗಿ ಸಂಬಂಧ ಪಟ್ಟವರ ಬಳಿ ಈ ಬಗ್ಗೆ ಮಾತನಾಡಿದೆ. ಆಗ ಅವರು ಹೇಳಿದ ಉತ್ತರ ನಿಜಕ್ಕೂ ದುಃಖವಾಯಿತು. ವಿಷ್ಣುವರ್ಧನ್ ಸ್ಟ್ಯಾಚ್ಯು ಇಡಬೇಕು ಎಂದಾದರೇ ಸಂಬಂಧ ಪಟ್ಟವರಿಂದ ಸಹಿ ಸಂಗ್ರಹ ಮಾಡಿ ಎಂದರು. ಇಂತಹ ಒಬ್ಬ ಮಹಾನ್ ನಟನಿಗೆ ಸಹಿ ಸಂಗ್ರಹದ ಸಾಕ್ಷ್ಯ ಬೇಕಾ ಎಂದು ಅನ್ನಿಸಿದರೂ ಸಹ ನಾನು ಮಾಡಿದೆ. ಸಹಿ ಸಂಗ್ರಹಿಸಿ ತೆಗೆದುಕೊಂಡು ಹೋಗಿ ಕೊಟ್ಟು ವರ್ಷವೇ ಆಯಿತು. ಆದರೇ ಇನ್ನು ಕೂಡ ಅಭಿಮಾನಿಗಳ ಆಸೆ ಈಡೇರಿಲ್ಲ. ಇದು ಅಭಿಮಾನಿಗಳ ನೆಚ್ಚನ ನಟ ದಾದಾ ಅಂತ ಮನಪೂರ್ತಿಯಾಗಿ ಕರೆಯುತ್ತಿದ್ದ ನಟನಿಗೆ ಮಾಡುವ ಅವಮಾನ ಅಲ್ಲವೇ ?

  ಭಾರತೀ ವಿಷ್ಣುವರ್ಧನ್ ಅವರು ಈ ಬಗ್ಗೆ ಏನು ಹೇಳುತ್ತಾರೆ?

  ಅವರ ಮನಸ್ಸಿನಲ್ಲಿರೋ ನೋವಿಗೆ ಲೆಕ್ಕವೇ ಇಲ್ಲ. ಸಮಾಧಿ ವಿಚಾರದಲ್ಲಿ ತುಂಬಾ ನೊಂದಿದ್ದಾರೆ. ಚಿತ್ರರಂಗಕ್ಕೆ ರಾಜ್ ಕುಟುಂಬ ಆಗಲೀ, ಅಂಬರೀಶ್, ಶಂಕರ್ ನಾಗ್, ಪುನೀತ್ ಹೀಗೆ ಎಲ್ಲರೂ ಅವರವರ ಕೊಡುಗೆ ನೀಡಿದ್ದಾರೆ. ಹಾಗೇ ಅಪ್ಪಾಜಿ ಕೂಡ ನೀಡಿದ್ದಾರೆ. ಆದರೇ ವಿಷ್ಣು ಅವರಿಗೆ ಆದ್ಯತೆ ನೀಡುತ್ತಿಲ್ಲ ಯಾಕೆ? ಎಲ್ಲರಿಗೂ ಒಂದೇ ಆದ್ಯತೆ ಕೊಡಿ ಅಂತ ಅಮ್ಮ ಪದೇ ಪದೇ ಮಾತನಾಡುತ್ತಿರುತ್ತಾರೆ. ಅದರೆ ಅದು ಕೇಳಿಸಿಕೊಳ್ಳುವ ವರೆಗೆ ಅಷ್ಟೆ. ಆಮೇಲೆ ಅದು ಲೆಕ್ಕಕ್ಕೆ ಇಲ್ಲ ಬಿಡಿ.

  ಅಭಿಮಾನಿಗಳಿಗೆ ಬೆಂಗಳೂರು ಬಿಟ್ಟು ಮೈಸೂರಿನಲ್ಲಿ ಸಮಾಧಿ ಮಾಡುತ್ತಿರುವುದಕ್ಕೆ ಬೇಸರ ಇದೆ.

  ಖಂಡಿತಾ ಇರುತ್ತೆ. ನಮಗೂ ಇದೆ. ಹಾಗಂತ ಏನು ಮಾಡಲು ಸಾಧ್ಯ. ಅಪ್ಪಾಜಿ ಸಮಾಧಿ ವಿಚಾರದಲ್ಲಿ ಆಳಕ್ಕೆ ಯಾರು ಇಳಿಯುತ್ತಾರೋ ಅವರಿಗಷ್ಟೆ ಈ ಹೋರಾಟದ ಮುಳ್ಳು ದಾರಿ ಗೊತ್ತಿರುತ್ತೆ. ಕೆಲವರು ಅಭಿಮಾನಿಗಳು ಮತ್ತು ನಮ್ಮ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ನಾವೇ ಸ್ವ ಇಚ್ಚೆಯಿಂದ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ. ಇದರ ಹಿಂದಿನ ಪ್ರಯತ್ನ ನಮಗಷ್ಟೇ ಗೊತ್ತು. ಎಲ್ಲಾದರು ಸರಿ ಅಪ್ಪಾಜಿ ಸಮಾಧಿ ಒಂದು ಆಗಲಿ ಎಂದು ನಾವು ಪ್ರಯತ್ನಿಸುತ್ತಿದ್ದೇವೆ ಅಷ್ಟೆ.

  ಮೈಸೂರಿನಲ್ಲಿ ಸಮಾಧಿ ಬಳಿ ವಿಷ್ಣುವರ್ಧನ್ ಸಮಾಧಿ ಕೆಲಸಗಳು ಹೇಗೆ ಸಾಗುತ್ತಿದೆ?

  ಸರ್ಕಾರದಿಂದ 5 ಮುಕ್ಕಾಲು ಎಕ್ಕರೆ ಜಾಗ ಸಿಕ್ಕಿದೆ. ಇದರಲ್ಲಿ ಸಮಾಧಿ ಕೆಲಸಗಳು ನಡೆಯುತ್ತಿದೆ. ಇನ್ನು 9 ತಿಂಗಳು ಬೇಕು ಮುಗಿಸೋದಕ್ಕೆ. 11 ಕೋಟಿ ಸರ್ಕಾರದಿಂದ ಮಂಜೂರು ಆಗಿದೆ. ಆದರೆ ಇದರಲ್ಲಿ ಕುಟುಂಬದವರ ವೈಯುಕ್ತಕ ಮಾಲಿಕತ್ವ ಇಲ್ಲ. ಎಲ್ಲವೂ ಸರ್ಕಾರ ನೋಡಿಕೊಳ್ಳುತ್ತಿದೆ. ನಾವು ಕೂಡ ಕಾಳಜಿ ವಹಿಸುತ್ತಿದ್ದೇವೆ. ಸಮಾಧಿ ಜಾಗದಲ್ಲೇ ಅಪ್ಪಾಜಿ ಅವರ ಫೋಟೋ ಗ್ಯಾಲರಿ ಇರಲಿದೆ. ಇದರಲ್ಲಿ 700 ಚಿತ್ರಗಳನ್ನು ಹಾಕಬಹುದಾಗಿದೆ. ಹಾಗೇ ಆಡಿಟೋರಿಯಂ ವ್ಯವಸ್ಥೆ ಕೂಡ ನಡೆಯುತ್ತಿದೆ. ಇದರಿಂದ ನಾಟಕಗಳು, ಕಿರುಚಿತ್ರ ಪ್ರದರ್ಶಿಸಬಹುದಾಗಿದೆ. ಮುಂದಿನ ಪೀಳಿಗೆಗೂ ಇದು ಸಹಕಾರಿ. ಈ ಸಮಾಧಿ ಜಾಗ ಎಲ್ಲರಿಗೂ ಸ್ಪೂರ್ತಿ ಆಗಬೇಕು, ಪ್ರೇಕ್ಷಣೀಯ ಸ್ಥಳ ಆಗಬೇಕು ಅಂದುಕೊಂಡಿದ್ದೇವೆ. ಅಂದುಕೊಂಡಂತೆ ಆದರೆ ಮುಂದಿನ ವರ್ಷ ಸಮಾಧಿ ಸಂಪೂರ್ಣ ಆಗುತ್ತೆ.

  ಅಭಿಮಾನಿಗಳಿಗೆ, ಚಿತ್ರೋದ್ಯಮಕ್ಕೆ ಏನು ಹೇಳುತ್ತೀರಾ?

  ಅಭಿಮಾನಿಗಳು ನಾವೆಲ್ಲ ಒಂದಾಗಿ ಇರಬೇಕು. ಇದೇ ಅಪ್ಪಾಜಿ ಕನಸಾಗಿತ್ತು. ಹಾಗೆ ಪುಣೆಯಲ್ಲಿ ಇರುವಂತೆ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಅಪ್ಪಾಜಿ ಹೆಸರಲ್ಲಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದ ಜಾಗ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಶಿಫಾರಸ್ಸು ನೀಡಬೇಕು. ಇದೊಂದು ಆದರೆ ಎಲ್ಲರಿಗೂ ಉಪಯೋಗ ಆಗಲಿದೆ. ಇದಕ್ಕೂ ಕೂಡ ಸಾಕಷ್ಟು ಅಡಚಣೆಗಳು ಉಂಟಾಗಿದೆ. ವಿಷ್ಣುವರ್ಧನ್ ಹೆಸರನ್ನೇ ಯಾಕೆ ಇಡಬೇಕು ಎಂದು ಪ್ರಶ್ನೆಗಳು ಬಂದಿದೆ. ಆದರೂ ನಮ್ಮ ಪ್ರಯತ್ನ ನಾವು ಬಿಟ್ಟಿಲ್ಲ. ಅಭಿಮಾನಿಗಳು ಕೂಡ ಈ ಬಗ್ಗೆ ಪ್ರಯತ್ನಿಸುತ್ತಿದ್ದಾರೆ.

  English summary
  Interview with Actor Anirudh. Actor talks about Vishnuvardhan Memorial injustice and why it is delayed construction. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X