ಹೈದರಾಬಾದ್ ನಲ್ಲಿ ಗಾಯಗೊಂಡ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಗಾಯಗೊಂಡಿದ್ದಾರೆ. ಚಿತ್ರೀಕರಣದಲ್ಲಿ ಭಾಗವಹಿಸಬೇಕಾದರೆ ಅವರ ಎಡಮೊಳಕೈಗೆ ಪೆಟ್ಟಾಗಿದೆ. ತೆಲುಗು 'ಮಿರ್ಚಿ' ಚಿತ್ರದ ರೀಮೇಕ್ ನಲ್ಲಿ ಅವರು ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಹೈದರಾಬಾದಿನಲ್ಲಿ ನಡೆಯುತ್ತಿದೆ.
ಈ ಬಗ್ಗೆ ಸುದೀಪ್ ಟ್ವೀಟಿಸಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಸುಧಾರಿಸಿಕೊಂಡಿದ್ದೇನೆ ಎಂದಿದ್ದಾರೆ. ಅವರಿಗೆ ಪಟ್ಟಾಗಿದ್ದರೂ ಅದನ್ನು ಲೆಕ್ಕಿಸದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಅಪ್ ಡೇಟ್ಸ್ ಸಹ ಕೊಡುತ್ತೇನೆ ಎಂದಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಿನಿಮಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸುದೀಪ್ ಭಾಗವಹಿಸಿದ್ದರು. ಹಾಗಾಗಿ 'ಮಿರ್ಚಿ' ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಶನಿವಾರ ಬೆಳಗ್ಗೆಯಿಂದ ಚಿತ್ರೀಕರಣ ಆರಂಭವಾಗಿದೆ.
ಶುಕ್ರವಾರ (ಸೆ.27) ರಾತ್ರಿ ಸುದೀಪ್ ಗಾಯಗೊಂಡಿದ್ದಾರೆ. ಅವರು ನೋವನ್ನೂ ಲೆಕ್ಕಿಸದೆ ಇಂದೂ ಸಹ ಶೂಟಿಂಗ್ ನಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ತುಂಬಿದ್ದಾರೆ. ನೋವು ನಿವಾರಕ ಗುಳಿಗೆ ತೆಗೆದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತವೆ ಮೂಲಗಳು.
ಚಿತ್ರದ ಪಾತ್ರವರ್ಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಮ್ಯಕೃಷ್ಣ ಸಹ ಇದ್ದಾರೆ. ಸುದೀಪ್ ಅವರಿಗೆ ತಂದೆಯಾಗಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ ಎಂಬುದು ಸದ್ಯದ ಮಾಹಿತಿ. ಇದೇ ಮೊದಲ ಬಾರಿಗೆ ನಲ್ಲ ಮಲ್ಲರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ.
ಇದು ತೆಲುಗಿನ ಯಶಸ್ವಿ ಮಾಸ್ ಮಸಲಾ ಚಿತ್ರ 'ಮಿರ್ಚಿ' ರೀಮೇಕ್. ಮೂಲ ಚಿತ್ರದಲ್ಲಿ ಪ್ರಭಾಸ್, ಸತ್ಯರಾಜ್, ಅನುಷ್ಕಾ ಶೆಟ್ಟಿ, ರಿಚಾ ಗಂಗೋಪಾಧ್ಯಾಯ ಮುಂತಾದವರು ಅಭಿನಯಿಸಿದ್ದರು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ರು.103 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ.
ಈ ಚಿತ್ರದ ಆಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ. ಇಬ್ಬರು ಹೀರೋಗಳು ಎಂದ ಮೇಲೆ ನಾಯಕಿಯರೂ ಇಬ್ಬರು ಇರಲೇಬೇಕಲ್ಲವೆ? ಸುದೀಪ್ ಗೆ ಜೋಡಿ ಯಾರೆಂದು ಬಹುತೇಕ ಗೊತ್ತಾಗಿದೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿ ಹುಡುಕುವುದೇ ಪ್ರಯಾಸದ ಕೆಲಸ. (ಏಜೆನ್ಸೀಸ್)


Click it and Unblock the Notifications











