twitter
    For Quick Alerts
    ALLOW NOTIFICATIONS  
    For Daily Alerts

    'ಸಲಗ'ಗಾಗಿ ಮೂರು ಸಿನಿಮಾ ಬಿಟ್ಟಿದ್ದೀನಿ, ಗೆದ್ದರಷ್ಟೆ ಉಳಿವು: ಕಾಕ್ರೂಚ್ ಸುಧಿ

    |

    'ಟಗರು' ಸಿನಿಮಾದ ಕಾಕ್ರೂಚ್ ಪಾತ್ರದಲ್ಲಿ ದೊಡ್ಡ ಮಟ್ಟದ ಗುರುತು ಪಡೆದುಕೊಂಡ ನಟ ಸುಧಿ ಈಗ 'ಸಲಗ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    ''ಕಾಕ್ರೂಚ್' ಪಾತ್ರ ಮಾಡಿದಾಗ ನನ್ನ ಬಗ್ಗೆ ಜನರಿಗೆ ನಿರೀಕ್ಷೆ ಇರಲಿಲ್ಲ. ಆ ಪಾತ್ರದಲ್ಲಿ ನಾನು ಚೆನ್ನಾಗಿ ನಟಿಸದೇ ಇದ್ದಿದ್ದರೂ ಜನರ್ಯಾರೂ ಕೇಳುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ, ಕಾಕ್ರೂಚ್ ಪಾತ್ರದಿಂದಾಗಿ ನನ್ನ ಮೇಲೆ ಕೆಲವರಾದರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ 'ಸಲಗ' ಸಿನಿಮಾದಲ್ಲಿ ನಾನು ಸರಿಯಾಗಿ ಮಾಡಿಲ್ಲವಾದರೆ ಜನ ಪ್ರಶ್ನೆ ಮಾಡುತ್ತಾರೆ'' ಎಂದಿದ್ದಾರೆ ಸುಧಿ.

    'ಸಲಗ' ಸಿನಿಮಾದಲ್ಲಿ ಸಾವಿತ್ರಿ ಹೆಸರಿನ ಪಾತ್ರವನ್ನು ನಾನು ಮಾಡಿದ್ದೀನಿ. ವಿಜಯಣ್ಣ (ದುನಿಯಾ ವಿಜಯ್) ಕೆಲವು ತಿಂಗಳ ಹಿಂದೆ ನನಗೆ ಕತೆ ಹೇಳಿದರು. ಕತೆ ಬಹಳ ಇಷ್ಟವಾಯಿತು. ಆಗಲೇ ನಿಶ್ಚಯಿಸಿದೆ ನಾನು ಈ ಸಿನಿಮಾದಲ್ಲಿ ಪಾತ್ರ ಮಾಡಲೇ ಬೇಕು ಎಂದು. ಈ ಪಾತ್ರಕ್ಕಾಗಿ ಮೂರು ಸಿನಿಮಾಗಳ ಪಾತ್ರವನ್ನು ಕೈಬಿಟ್ಟಿದ್ದೇನೆ. ಈ ಪಾತ್ರ ಗೆದ್ದರೆ ನನ್ನ ನಿರ್ಣಯ ಸರಿ ಎನಿಸಿಕೊಳ್ಳುತ್ತದೆ'' ಎಂದಿದ್ದಾರೆ ಸುಧಿ.

    Actor Sudhi Talked About His Role In Salaga Movie

    ''ವಿಜಯಣ್ಣ ಈ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಅವರು ಸುಮ್ಮನೆ ನಿರ್ದೇಶಕರಾಗಿಲ್ಲ, ಸಿನಿಮಾ ತೆಗೆಯುವ ಮುನ್ನ ಸಾಕಷ್ಟು ವಿಷಯಗಳ ಬಗ್ಗೆ ಕಲಿತುಕೊಂಡಿದ್ದಾರೆ. ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಇಷ್ಟು ವರ್ಷಗಳಿಂದ ಚಿತ್ರೀಕರಣ ಅದರ ಎಲ್ಲ ವಿಭಾಗಗಳನ್ನು ಹತ್ತಿರದಿಂದ ನೋಡಿರುವ ಅವರು ತಮ್ಮ ಮೊದಲ ಸಿನಿಮಾಕ್ಕೆ ಭಿನ್ನವಾದ ಟಚ್ ನೀಡಿದ್ದಾರೆ'' ಎಂದು ವಿಜಯ್‌ರ ನಿರ್ದೇಶಕತೆಯನ್ನು ಹೊಗಳಿದರು.

    ''ವಿಜಯಣ್ಣ ನಿರ್ದೇಶನದಲ್ಲಿ ನಾನು ಬಹಳ ಖುಷಿಯಿಂದ ಕೆಲಸ ಮಾಡಿದೆ. ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ಪಾತ್ರಧಾರಿಗಳಿಗೆ ಒಂದು ಚೌಕಟ್ಟಿರುತ್ತದೆ, ಅದು ವಿಜಯಣ್ಣನ ಸಿನಿಮಾದಲ್ಲಿ ಇರಲಿಲ್ಲ. ಬೇರೆ ನಿರ್ದೇಶಕರು ಏನೊ ಒಂದು ಸೀನ್, ಸಂಭಾಷಣೆ ಬರೆದುಕೊಟ್ಟಿರುತ್ತಾರೆ. ಅದನ್ನೇ ಹೇಳಬೇಕಿರುತ್ತದೆ. ಆದರೆ ವಿಜಯಣ್ಣ ಹಾಗೂ ಸಂಭಾಷಣೆಕಾರ ಮಾಸ್ತಿ ನಾಲ್ಕು ಸಾಲು ಬರೆದುಕೊಟ್ಟು, ದೃಶ್ಯವನ್ನು ವಿವರಿಸುತ್ತಿದ್ದರು, ನಾನು ಚಿತ್ರೀಕರಣದ ಸಮಯದಲ್ಲಿಯೇ ಅದನ್ನು ಇಂಪ್ರೊವೈಸ್ ಮಾಡುತ್ತಿದ್ದೆ. 'ನಿನಗೆ ಸರಿ ಎನ್ನಿಸಿದ್ದು ಮಾಡು ಸೂಕ್ತ ಎನಿಸಿದರೆ ಇಟ್ಟುಕೊಳ್ಳುವೆ ಇಲ್ಲವಾದರೆ ಎಡಿಟಿಂಗ್ ಸಮಯದಲ್ಲಿ ತೆಗೆದು ಹಾಕುವೆ' ಎಂದು ವಿಜಯ್ ಹೇಳಿದ್ದರು ಹಾಗಾಗಿ ಕೆಲವು ಫ್ರೀಯಾಗಿ ನಟನೆ ಮಾಡಿದೆ'' ಎಂದು ಚಿತ್ರೀಕರಣದ ಅನುಭವ ಹೇಳಿಕೊಂಡರು ಸುಧಿ.

    ''ಟಗರು' ತಂಡವೇ 'ಸಲಗ' ಸಿನಿಮಾವನ್ನೂ ಮಾಡಿದೆ, ಆದರೆ 'ಟಗರು'ಗೂ 'ಸಲಗ'ಕ್ಕೂ ಸಾಮ್ಯತೆ ಇಲ್ಲ. 'ಟಗರು' ಪೊಲೀಸ್ ಅಧಿಕಾರಿಯನ್ನು ವೈಭವೀಕರಿಸುವ ಕತೆ ಹೊಂದಿತ್ತು, ಆದರೆ ಈ ಸಿನಿಮಾ ಸಂಪೂರ್ಣವಾಗಿ ಭೂಗತಲೋಕದ ಬಗೆಗೆ ಇದೆ. ಇದೊಂದು ಪಕ್ಕಾ ಮನೊರಂಜನೆ ಸಿನಿಮಾ, ಸಿನಿಮಾದಲ್ಲಿ ದೊಡ್ಡ ಮಟ್ಟದ ಸಂದೇಶವನ್ನು ನಿರೀಕ್ಷಿಸುವಂತಿಲ್ಲ. ಹಾಗೆಂದು ತಪ್ಪು ಸಂದೇಶ ನೀಡುವ ಸಿನಿಮಾ ಇದಲ್ಲ. ಸಂದೇಶವನ್ನೇ ನೀಡಬೇಕೆಂದರೆ ಯಾವುದಾದರೂ ಕಾರ್ಯಾಗಾರವೊ, ಭಜನೆಯನ್ನೇ ಮಾಡಬಹುದಲ್ಲವೆ?'' ಎಂದು ಪ್ರಶ್ನೆ ಮಾಡಿದ್ದಾರೆ ಸುಧಿ.

    ''ಸದ್ಯಕ್ಕೆ 'ಸಲಗ' ಸೇರಿ ಒಂಬತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ದೊಡ್ಡ ಮಟ್ಟದ ಅಭಿಮಾನಿ ಬಳಗ ಎಂದೆಲ್ಲ ಇಲ್ಲ. ನಾನು ಸ್ಟಾರ್ ಸಹ ಅಲ್ಲ. ಆದರೆ ಕೆಲವರಾದರೂ ಒಳ್ಳೆಯ ಗೆಳೆಯರನ್ನು, ಹಿತೈಷಿಗಳನ್ನು ನಾನು ಸಿನಿಮಾರಂಗದಿಂದ ಸಂಪಾದನೆ ಮಾಡಿದ್ದೇನೆ. ಅವರನ್ನು ಉಳಿಸಿಕೊಂಡು ಹೋಗಬೇಕಿದೆ ಅಷ್ಟೆ. 'ಟಗರು' ಸಿನಿಮಾದ 'ಕಾಕ್ರೂಚ್' ಪಾತ್ರವನ್ನು ಹತ್ತನೇ ತರಗತಿ ಪರೀಕ್ಷೆ ಎಂದುಕೊಂಡರೆ 'ಸಲಗ'ದ ಪಾತ್ರ ದ್ವಿತೀಯ ಪಿಯುಸಿ ಪರೀಕ್ಷೆ ಎನ್ನಬಹುದು. ಈ ಪಾತ್ರ ಗೆದ್ದರೆ ನಾನು ಪಾಸಾಗಿ ಮುಂದೆ ಹೋಗುತ್ತೀನಿ'' ಎಂದು ತಮ್ಮ ವೃತ್ತಿ ಬದುಕಿನಲ್ಲಿ 'ಸಲಗ' ಸಿನಿಮಾದ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಹೇಳಿದ್ದಾರೆ.

    English summary
    Actor Sudhi talked about his role in Salaga movie. He praised Duniya Vijay's direction. Salaga movie is releasing on October 14.
    Friday, October 8, 2021, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X