»   » ನಟಿ ಅನು ಪ್ರಭಾಕರ್ ವಿಚ್ಛೇದನ ಕೋರಿ ಅರ್ಜಿ

ನಟಿ ಅನು ಪ್ರಭಾಕರ್ ವಿಚ್ಛೇದನ ಕೋರಿ ಅರ್ಜಿ

By: ಯಾದವ್, ಬೆಂಗಳೂರು
Subscribe to Filmibeat Kannada

ಸ್ಯಾಂಡಲ್ ವುಡ್ ತಾರೆ 'ಅಭಿನಯ ಸರಸ್ವತಿ' ಅನು ಪ್ರಭಾಕರ್ ಅವರ ಸುದೀರ್ಘ ಹನ್ನೆರಡು ವರ್ಷಗಳ ದಾಂಪತ್ಯ ಜೀವನ ಮುರಿದುಬೀಳುವ ಹಂತಕ್ಕೆ ಬಂದಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ವಿಚ್ಛೇದನ ಕೋರಿ ಅನು ಪ್ರಭಾಕರ್ ಹಾಗೂ ಅವರ ಪತಿ ಕೃಷ್ಣಕುಮಾರ್ ಅರ್ಜಿ ಸಲ್ಲಿಸಿದ್ದಾರೆ.

ಇಬ್ಬರೂ ಪರಸ್ಪರ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿ ಗುರುವಾರ (ಜ.30) ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ಹಿಂದು ವಿವಾಹ ಕಾಯಿದೆ 13 (ಬಿ) ಪ್ರಕಾರ ಅರ್ಜಿ ಸಲ್ಲಿಸಲಾಗಿದೆ. ಅಭಿನಯ ಶಾರದೆ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರ ಜೊತೆ 2002ರಲ್ಲಿ ಅನು ಪ್ರಭಾಕರ್ ಮದುವೆಯಾಗಿತ್ತು.

ಇವರಿಬ್ಬರದ್ದೂ ಅನುರೂಪ ದಾಂಪತಿಗಳಾಗಿದ್ದರೂ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಮಾಧ್ಯಮಗಳಿಂದಲೂ ಈ ಜೋಡಿ ಸದಾ ಅಂತರ ಕಾಪಾಡಿಕೊಂಡು ಬಂದಿತ್ತು. ಇದೀಗ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸುದ್ದಿಯಾಗಿದ್ದಾರೆ. ಜಯಂತಿ ಅವರು ಸೊಸೆ ಎಂಬುದಕ್ಕಿಂತಲೂ ಹೆಚ್ಚಾಗಿ ಮಗಳಂತೆ ಅನು ಪ್ರಭಾಕರ್ ಅವರನ್ನು ಕಾಣುತ್ತಿದ್ದರು.

ಅನು ಪ್ರಭಾಕರ್ ರು.1 ಕೋಟಿ ಪರಿಹಾರ ಒಪ್ಪಂದ

ಇನ್ನೊಂದು ಮೂಲದ ಪ್ರಕಾರ ಇಬ್ಬರೂ ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ರು.1 ಕೋಟಿ ಪರಿಹಾರ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಕೊರತೆ, ಭಿನ್ನಾಭಿಪ್ರಾಯಗಳ ಕಾರಣ ದಾಂಪತ್ಯ ಜೀವನ ಹಳಿ ತಪ್ಪಿದೆ ಎನ್ನುತ್ತವೆ ಮೂಲಗಳು.

ಹಿರಿಯ ನಟಿ ಜಯಂತಿ ಮೌನ ವೇದನೆ

ತಮ್ಮ ವಿಚ್ಛೇದನ ಸುದ್ದಿಯ ಬಗ್ಗೆ ಅನು ಪ್ರಭಾಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮಾತನಾಡಲು ಜಯಂತಿ ಅವರಿಗೂ ಇಷ್ಟವಿಲ್ಲ. ತಮ್ಮ ಮಗ ಹಾಗೂ ಸೊಸೆಯ ಸಂಸಾರ ಹೀಗಾಯಿತಲ್ಲಾ ಎಂಬ ನೋವು ಅವರನ್ನು ಬಾಧಿಸುತ್ತಿದೆ.

ಪತಿ ಜೊತೆ ಒಟ್ಟಾಗಿ ಹೊರಗಡೆ ಸುತ್ತಾಡುವುದಿಲ್ಲವಂತೆ

ಈ ಹಿಂದೆಯೇ ಅನು ಪ್ರಭಾಕರ್ ದಾಂಪತ್ಯ ಜೀವನದಲ್ಲಿ ಎದ್ದಿರುವ ಹಾಲಾಹಲದ ಬಗ್ಗೆ ಸಾಕಷ್ಟು ಗಾಸಿಪ್ ಸುದ್ದಿಗಳು ಹರಿದಾಡಿದ್ದವು. ಅನುಪ್ರಭಾಕರ್ ಹಾಗೂ ಅವರ ಪತಿ ಕೃಷ್ಣಮೂರ್ತಿ ಒಟ್ಟಾಗಿ ಹೊರಗಡೆ ಸುತ್ತಾಡುವುದಿಲ್ಲ.

ಈ ಹಿಂದೆಯೇ ಸಂಬಂಧ ಹಳಸಿದ ಸುದ್ದಿ ಇತ್ತು

ಪತಿಯೊಂದಿಗೆ ಯಾವುದೇ ಕಾರ್ಯಕ್ರಮಗಳಿಗೂ ಅನು ಪ್ರಭಾಕರ್ ಹೋಗುವುದಿಲ್ಲ. ಅವರಿಬ್ಬರ ನಡುವೆ ಸಂಬಂಧ ಹಳಸಿದೆ. ಇಬ್ಬರ ನಡುವೆ ಮನಸ್ಥಾಪ ಮುಗಿಲು ಮುಟ್ಟಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅನು ದಂಪತಿ ಸದ್ಯದಲ್ಲೇ ಬೇರೆ-ಬೇರೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಡಾ.ವಿಷ್ಣುವರ್ಧನ್ ಜೊತೆ ಹಲವು ಚಿತ್ರಗಳಲ್ಲಿ ಅಭಿನಯ

ಡಾ.ವಿಷ್ಣುವರ್ಧನ್ ಜೊತೆಗೆ ಅನು ಪ್ರಭಾಕರ್ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೂರಪ್ಪ, ಜಮೀನ್ದಾರ್ರು, ಹೃದಯವಂತ, ಸಾಹುಕಾರ, ವರ್ಷ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ.

ಅನುಗೆ ಹೆಸರು ತಂದಂತಹ ಚಿತ್ರಗಳು

ಕೆಲವು ತಮಿಳು ಚಿತ್ರಗಳಲ್ಲೂ ಅಭಿನಯಿಸಿರುವ ಅನು ಪ್ರಭಾಕರ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಚಿತ್ರಗಳೆಂದರೆ ಶಾಪ, ತವರಿಗೆ ಬಾ ತಂಗಿ, ನನ್ ಹೆಂಡ್ತಿ ಮದುವೆ, ನವಶಕ್ತಿ ವೈಭವ, ಪ್ರೀತಿ ಪ್ರೇಮ ಪ್ರಣಯ ಮುಂತಾದವು.

ಎಂ.ಎ ಪರೀಕ್ಷೆಗೆ ಕುಳಿತಿದ್ದ ಅನು ಪ್ರಭಾಕರ್

ಅನು ಪ್ರಭಾಕರ್ ಅವರು 2013ರ ಮೇ ತಿಂಗಳಲ್ಲಿ ಎಂ.ಎ.ಪರೀಕ್ಷೆಗೆ ಕುಳಿತಿದ್ದರು. ಕರ್ನಾಟಕ ವಿವಿಯಲ್ಲಿ ತಮ್ಮ ದೊಡ್ಡಪ್ಪ, ಚಿಕ್ಕಪ್ಪ ಪದವಿ ಮುಗಿಸಿದ್ದಾರೆ. ತಾನೂ ಇದೇ ವಿವಿಯಲ್ಲಿ ಪದವಿ ಮುಗಿಸಬೇಕು ಎಂಬ ಆಸೆ ಇತ್ತು. ಹಾಗಾಗಿ ಕರ್ನಾಟಕ ವಿವಿಯನ್ನು ಆಯ್ಕೆ ಮಾಡಿಕೊಂಡೆ ಎಂದಿದ್ದರು. ಮೊದಲ ವರ್ಷದ ಕೆಲವು ಪತ್ರಿಕೆಗಳನ್ನು ಅವರು ಪಾಸು ಮಾಡಬೇಕಾಗಿದೆ.

ಗರ್ಭದ ಗುಡಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ

ಪ್ರಸ್ತುತ ಅನು ಪ್ರಭಾಕರ್ ಅವರು ಓಂ ಸಾಯಿಪ್ರಕಾಶ್ ಅವರ 'ಗರ್ಭದ ಗುಡಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವೈದ್ಯೆಯಾಗಿ ಕಾಣಿಸುತ್ತಿರುವುದು ವಿಶೇಷ.

English summary
The popular Kannada actress Anu Prabhakar has decided to break her relationship with her husband Krishna Kumar. The couple applied for divorce with mutual consent in the family court in Bangalore. The court may hearing the divorce petition on Jan 30, 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada