For Quick Alerts
  ALLOW NOTIFICATIONS  
  For Daily Alerts

  ಯಶವಂತಪುರ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ನಟಿ ಭಾವನಾ

  |

  ಸಿನಿಮಾ ಹಾಗೂ ರಾಜಕೀಯದ ಸಂಬಂಧವನ್ನು ವಿಶೇಷವಾಗಿ ವಿವರಿಸುವ ಅಗತ್ಯವಿಲ್ಲ. ಸಿನಿಮಾ ನಟರಾಗಿದ್ದವರು, ಸಿಎಂಗಳಾಗಿ, ಕೇಂದ್ರ ಮಂತ್ರಿಗಳಾಗಿ ಆಳಿದ್ದಾರೆ, ಈಗಲೂ ಮಂತ್ರಿಗಳಾಗಿ, ಶಾಸಕರಾಗಿ, ಸರ್ಕಾರದ ವಿವಿಧ ಆಯಕಟ್ಟಿನ ಜಾಗಗಳಿಗೆ ಆಯ್ಕೆಯಾಗಿ ಆಡಳಿತ ನೀಡುತ್ತಿದ್ದಾರೆ.

  ಕರ್ನಾಟಕದಲ್ಲಿ ಚುನಾವಣೆ ಕಾವೇರುತ್ತಿರುವ ಸಂದರ್ಭದಲ್ಲಿ ಹಲವರು ಚುನಾವಣೆ ಟಿಕೆಟ್‌ಗಳಿಗಾಗಿ ರಾಜಕೀಯ ಪಕ್ಷಗಳ ಬಾಗಿಲು ಬಡಿಯುತ್ತಿದ್ದಾರೆ. ಇದರಲ್ಲಿ ಸಿನಿಮಾ ನಟ-ನಟಿಯರೂ ಸಹ ಇದ್ದಾರೆ.

  ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳಿಂದ ಈಗಾಗಲೇ ಕೆಪಿಸಿಸಿಯು ಅರ್ಜಿ ಆಹ್ವಾನ ಮಾಡಿದ್ದು, ಹಲವು ಹೊಸ ಮುಖಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿವೆ. ಅದರಲ್ಲಿ ನಟಿ ಭಾವನಾ ರಾಮಣ್ಣ ಸಹ ಒಬ್ಬರು.

  ಕೆಲವಾರು ವರ್ಷಗಳಿಂದಲೂ ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿರುವ ಭಾವನಾ, ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಹಿರಿಯೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಆದರೆ ಇವರಿಗೆ ಟಿಕೆಟ್ ನೀಡಲಾಗಿರಲಿಲ್ಲ, ಇದರಿಂದ ಮುನಿಸಿಕೊಂಡು ಹಿರಿಯ ನಾಯಕರಿದ್ದ ಸಭೆಯಿಂದ ಹೊರ ನಡೆದಿದ್ದರು.

  ಬಳಿಕ ಬಿಜೆಪಿ ಸೇರ್ಪಡೆ ಆಗಿದ್ದ ಭಾವನಾ, 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಆ ನಂತರ ಎಐಸಿಸಿಯ ರಣ್ಬೀದ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

  ಇದೀಗ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್‌ಗಾಗಿ ಭಾವನಾ ಯತ್ನಿಸುತ್ತಿದ್ದು, ಈ ಬಾರಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಬೇಕೆಂದು ಭಾವನ ಅರ್ಜಿ ಸಲ್ಲಿಸಿದ್ದಾರೆ. ಯಶವಂತಪುರ ಕ್ಷೇತ್ರದಿಂದ ಕಳೆದ ಬಾರಿ ಎಸ್‌ಟಿ ಸೋಮಶೇಖರ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಆ ಬಳಿಕ ಅವರು ಬಿಜೆಪಿ ಸೇರ್ಪಡೆಯಾಗಿ ಅಲ್ಲಿ ಮಂತ್ರಿ ಸಹ ಆಗಿದ್ದಾರೆ ಹಾಗಾಗಿ ಆ ಕ್ಷೇತ್ರದಲ್ಲಿ ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಇಲ್ಲದಾಗಿದೆ. ಇದರ ಲಾಭ ಪಡೆಯಲು ನಿಶ್ಚಯಿಸಿದಂತಿರುವ ಭಾವನಾ, ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಬೇಕೆಂದು ಮನವಿ ಸಲ್ಲಿಸಿದ್ದಾರೆ.

  ಯಶವಂತಪುರ ಟಿಕೆಟ್‌ಗೆ ಮನವಿ ಸಲ್ಲಿಸಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಭಾವನಾ, ''ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದೇನೆ. ವರಿಷ್ಟರು ಟಿಕೆಟ್ ನೀಡುವ ವಿಶ್ವಾಸ ಇದೆ. ಈ ಹಿಂದೆಯೂ ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದೆ. ಪಕ್ಷದ ಎಲ್ಲಾ ನಾಯಕರ ಕೃಪಾಕಟಾಕ್ಷ ನನ್ನ ಮೇಲೆ ಇದೆ. ಶಾಸಕಳಾಗಿ ಆಯ್ಕೆ ಆದರೆ ಜನರಿಗೆ ಇನ್ನಷ್ಟು ಹತ್ತಿರ ಆಗಬಹುದು, ಜನರ ಸೇವೆ ಮಾಡಬಹುದು. ಟಿಕೆಟ್ ನೀಡಿದರೆ ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತೇನೆ'' ಎಂದಿದ್ದಾರೆ.

  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್​ ಪಡೆಯುವ ಸಲುವಾಗಿ 500ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಕಳೆದ 10 ದಿನಗಳಿಂದ ಸುಮಾರು 1100ಕ್ಕೂ ಹೆಚ್ಚು ಆಕಾಂಕ್ಷಿಗಳು 5 ಸಾವಿರ ರೂ. ಶುಲ್ಕ ಪಾವತಿಸಿ ಅರ್ಜಿಗಳನ್ನು ಖರೀದಿಸಿದ್ದಾರೆ. ಈ ಪೈಕಿ ಕೇವಲ 500 ನಾಯಕರು ಮಾತ್ರ ಠೇವಣಿ ಬಾಂಡ್‌ನೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಇರುವ ಕೆಲವು ಶಾಸಕರು ಇನ್ನೂ ಅರ್ಜಿ ಸಲ್ಲಿಸಿಲ್ಲ, ಹಾಗೂ ಕೆಲವು ಕ್ಷೇತ್ರಗಳಿಂದಲೂ ಅರ್ಜಿ ಬಂದಿಲ್ಲ ಹಾಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಮುಂದೂಡಿದೆ ಕೆಪಿಸಿಸಿ.

  English summary
  Actress Bhavana Ramanna file application for Yashwantpura constituency congress ticket. In 2018 she did not get congress ticket.
  Wednesday, November 16, 2022, 11:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X