For Quick Alerts
  ALLOW NOTIFICATIONS  
  For Daily Alerts

  ತೆನೆ ಹೊರೆ ಇಳಿಸಿ ಕೆಜೆಪಿ ಕೈಹಿಡಿದ ಪೂಜಾಗಾಂಧಿ

  By Rajendra
  |

  ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧಿಕೃತ ಘೋಷಣೆಗೆ ಹಾವೇರಿಯಲ್ಲಿ ವೇದಿಕೆ ಸಿದ್ಧವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪಕ್ಷದ ಘೋಷಣೆಗೂ ಮುನ್ನವೇ ನಟಿ ಪೂಜಾಗಾಂಧಿ ಶುಕ್ರವಾರ (ಡಿ.7) ಸಂಜೆ ಕೆಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು.

  ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಬಿಎಸ್ ವೈ ಅವರ ಜನಸಂಪರ್ಕ ಕಚೇರಿಯಲ್ಲಿ ಸಿಹಿಯನ್ನು ಸ್ವೀಕರಿಸುವ ಮೂಲಕ ಪೂಜಾಗಾಂಧಿ ಅವರು ಕೆಜೆಪಿಗೆ ಸೇರಿದರು. ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನೂ ಆಡಿದರು.

  ಕೆಜೆಪಿಗೆ ಸೇರುತ್ತಿರುವುದು ಬಹಳ ಖುಷಿಯಾಗಿದೆ. ಈಗಾಗಲೆ ಮಹಿಳೆಯರಿಗಾಗಿ ಹೋರಾಟ ಮಾಡಿದ್ದೇನೆ. ಇನ್ನು ಮುಂದೆಯೂ ಜನಸೇವೆ ಮುಂದುವರಿಸುತ್ತೇನೆ. ಹಾಗಾಗಿ ಹೊಸ ಪಕ್ಷ ಕೆಜೆಪಿಗೆ ಸೇರಿದ್ದೇನೆ. ಇಲ್ಲೂ ಅಷ್ಟೇ ತಮ್ಮ ಜನಸೇವೆ ಮುಂದುವರಿಯುತ್ತದೆ ಎಂದರು.

  ಯಡಿಯೂರಪ್ಪ ಅವರನ್ನು ಭೇಟಿಯಾದೆ. ಅವರ ಉತ್ಸಾಹ, ಜನಪರ ಕಾಳಜಿ ನೋಡಿ ಖುಷಿಯಾಯಿತು. ತಾವು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಬೇಕು ಅನ್ನಿಸಿತು. ಹಾಗಾಗಿ ಕೆಜೆಪಿಗೆ ಸೇರುತ್ತಿದ್ದೇನೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಾಮಾಜಿಕ ನ್ಯಾಯ ಎಂಬ ತತ್ವಗಳನ್ನು ತಾವು ಪಾಲಿಸಲಿದ್ದೇನೆ.

  ಕರ್ನಾಟಕದ ಜನರ ಸಪೋರ್ಟ್ ತಮಗೆ ಹೀಗೆಯೇ ಇರಲಿ. ತಾವು ಜೆಡಿಎಸ್ ತೊರೆದದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿದ ಪೂಜಾ, ಸ್ವಾಭಿಮಾನ ಎಲ್ಲರಿಗೂ ಮುಖ್ಯ. ಎರಡು ತಿಂಗಳ ಹಿಂದೆ ಏನು ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ನಾನು ಮತ್ತೊಮ್ಮೆ ಬಿಡಿಸಿ ಹೇಳಬೇಕಾಗಿಲ್ಲ ಎಂದರು.

  ತಾವು ಬರಲಿರುವ ವಿಧಾನಸಭಾ ಚುನಾವಣೆಗೆ ನಿಲ್ಲುತ್ತಿದ್ದೀರಾ ಎಂಬ ಪ್ರಶ್ನೆಗೆ, ಹೌದು ತಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಆದರೆ ಎಲ್ಲಿ, ಯಾವಾಗ ಎಂಬುದನ್ನು ಮುಂದೆ ತಿಳಿಸುತ್ತೇನೆ ಎಂದು ಒಂದಷ್ಟು ಸಸ್ಪೆನ್ಸ್ ಕ್ರಿಯೇಟ್ ಮಾಡಿದರು.

  ಜೆಡಿಎಸ್ ತೊರೆದ ಬಗ್ಗೆ ಮೌನ ಮುರಿದ ಪೂಜಾಗಾಂಧಿ, ಪಕ್ಷ ಅಂದರೆ ಒಂದು ಮನೆ ಇದ್ದಂತೆ. ಅಲ್ಲೇ ತಮಗೆ ಬೆಲೆ ಸಿಗಲಿಲ್ಲ ಎಂದ ಮೇಲೆ ಏನು ಪ್ರಯೋಜನ. ಸ್ವಾಭಿಮಾನದಿಂದ ಹೊರಬಂದಿದ್ದೇನೆ. ಅಲ್ಲೇನು ಜನಸೇವೆ ಮಾಡುತ್ತಿದ್ದೆ. ಇಲ್ಲಿಯೂ ಅದನ್ನೇ ಮುಂದುವರಿಸುತ್ತೇನೆ ಎಂದು ಹೇಳಿ ಸೆಂಟಿಮೆಂಟ್ ಟಚ್ ಕೊಟ್ಟರು.

  ಆದಿಯಿಂದ ಅಂತ್ಯದವರೆಗೂ ಕನ್ನಡದಲ್ಲೇ ಮಾತನಾಡಿದರೂ ಇನ್ನೂ ಯಾಕೋ ಏನೋ ಅವರ ಭಾಷೆ ಸುಧಾರಿಸಿಲ್ಲದ ಅಂಶವೂ ಬೆಳಕಿಗೆ ಬಂತು. ಯುವಕರು, ಮಹಿಳೆಯರು, ಜನಸೇವೆ ಎಂಬ ಮಾತುಗಳು ಪದೇ ಪದೇ ಅವರ ಬಾಯಿಯಿಂದ ಹೊರಹೊಮ್ಮುತ್ತಿದ್ದವು.

  ಫ್ಲ್ಯಾಶ್ ಬ್ಯಾಕ್: ಜೆಡಿಎಸ್ ಪಕ್ಷಕ್ಕೆ ಪೂಜಾಗಾಂಧಿ ಸೇರ್ಪಡೆಯಾಗಿದ್ದನ್ನು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ 'ದಂಡುಪಾಳ್ಯ ಗ್ಯಾಂಗ್ ರಾಣಿ' ಎಂದು ಟೀಕಿಸಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ್ದ ಎಚ್ ಡಿ ಕುಮಾರಸ್ವಾಮಿ, ಚಿತ್ರನಟಿಯರನ್ನು ಇಟ್ಟುಕೊಂಡು ಜೆಡಿಎಸ್ ಪಕ್ಷವನ್ನು ಕಟ್ಟುವ ಅನಿವಾರ್ಯ ಹಾಗೂ ಅಗತ್ಯ ನನಗಿಲ್ಲ. ನಮ್ಮ ಪಕ್ಷಕ್ಕೆ ಗ್ಲಾಮರ್ ಅಗತ್ಯವಿಲ್ಲ ಎಂದಿದ್ದರು.

  ಪೂಜಾಗಾಂಧಿ ಅವರಿಗೆ ಸ್ವಲ್ಪ ಕನ್ನಡ ಭಾಷೆಯ ತೊಂದರೆ ಇದೆ. ಸಮಾರಂಭವೊಂದರಲ್ಲಿ ಕುಮಾರಸ್ವಾಮಿ ನನಗೆ ಜೆಡಿಎಸ್ ಪಕ್ಷವೆಂಬ ಮನೆಯಲ್ಲಿ ಜಾಗ ನೀಡಿದ್ದಾರೆ ಎಂದು ಹೇಳಿದ್ದರು. ಇದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ಪೂಜಾಗಾಂಧಿಗೆ ಮನೆ ನೀಡಿದ್ದಾರೆ ಎಂದು ವರದಿ ಮಾಡಿದ್ದವು. ಇದು ವಿಕೃತ ಮನಸ್ಸಿನವರು ಮಾಡುತ್ತಿರುವ ಕೆಲಸ ಎಂದು ಕಿಡಿಕಾರಿದ್ದರು. ಪೂಜಾಗಾಂಧಿ ಜೆಡಿಎಸ್ ತೊರೆಯಲು ಇದೇ ಕಾರಣ ಎನ್ನಲಾಗಿದೆ. (ಒನ್ಇಂಡಿಯಾ ಕನ್ನಡ)

  English summary
  Mungaaru Male fame Kannada actress Pooja Gandhi on Friday (December 07) formally joined Karnataka Janata Party (KJP) by taking membership of the party in Malleshwaram office. Earlier the actor is in JD(S). But H D Kumaraswamy asks the actor not to associate with the party any longer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X