»   » ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಒಂದು ಮುತ್ತಿನ ಕಥೆ

ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಒಂದು ಮುತ್ತಿನ ಕಥೆ

Posted By:
Subscribe to Filmibeat Kannada

ಹಲವಾರು ಪ್ರತಿಭೆಗಳನ್ನು ತಿದ್ದಿ ತೀಡಿ ಕನ್ನಡ ಚಿತ್ರರಂಗವನ್ನು ಸಂಪನ್ನಗೊಳಿಸುತ್ತಿರುವ ಕೀರ್ತಿ ಆದರ್ಶ ಫಿಲಂ ಹಾಗೂ ಟಿವಿ ಇನ್ಸ್ ಟಿಟ್ಯೂಟ್ ಗೆ ಸಲ್ಲುತ್ತದೆ. ಈವತ್ತು ಚಿತ್ರರಂಗದಲ್ಲಿ ಯಶಸ್ವಿ ನಾಯಕರಾಗಿ, ನಿರ್ದೇಶಕರಾಗಿ ಮತ್ತು ಬೇರೆ ಬೇರೆ ಮಜಲುಗಳಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಬಹುತೇಕರು ಈ ಸಂಸ್ಥೆಯಲ್ಲಿ ಕಲಿತು ಹೊರ ಬಂದವರೇ ಎಂಬುದು ಹೆಚ್ಚುಗಾರಿಕೆ.

ಡಿ.ರಾಜೇಂದ್ರ ಬಾಬು, ಸುನೀಲ್ ಕುಮಾರ್ ದೇಸಾಯಿ, ಜಗ್ಗೇಶ್, ರಾಮದಾಸು ನಾಯ್ಡು, ಮಹೇಶ್ ಬಾಬು, ಸಿ.ಪಿ. ಯೋಗೇಶ್ವರ್, ಚರಣ್ ರಾಜ್ ರಂತಹ ಪ್ರತಿಭಾವಂತರು ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ವಿದ್ಯಾರ್ಥಿಗಳು ಎಂಬುದನ್ನ ಸ್ಮರಿಸಬಹುದು. [ಚಿತ್ರಾಸಕ್ತರಿಗೊಂದು ವಿನೂತನ ತರಬೇತಿ ಸಂಸ್ಥೆ]

ಇಂಥಹಾ ಮಹತ್ವದ ಸಂಸ್ಥೆಗೀಗ 41ನೇ ವಾರ್ಷಿಕೋತ್ಸವದ ಸಂಭ್ರಮ. ಅದನ್ನು ಅದ್ದೂರಿಯಾಗಿ ನೆರವೇರಿಸಲು ಸಂಸ್ಥೆಯ ಪ್ರಾಂಶುಪಾಲರಾಗಿರುವ ನಿರ್ದೇಶಕ ಎಸ್. ನಾರಾಯಣ್ ಅಣಿಯಾಗಿದ್ದಾರೆ. ಇದೇ ಜುಲೈ 23ನೇ ತಾರೀಖಿನಂದು ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಲಿರುವ ಈ ಸಮಾರಂಭವನ್ನು ಯಶಸ್ವಿಗೊಳಿಸಲು ಹಳೆಯ ವಿದ್ಯಾರ್ಥಿಗಳೂ ಸಹ ಉತ್ಸುಕರಾಗಿದ್ದಾರೆ.

1973ರಲ್ಲಿ ಲಕ್ಷ್ಮೀ ಡಿಸ್ಟ್ರಿಬ್ಯೂಟರ್ಸ್ ಮಾಲೀಕರಾದ ಬಿಆರ್ ಸ್ವಾಮಿಯವರ ದೂರ ದೃಷ್ಟಿಯಿಂದ ಸ್ಥಾಪನೆಗೊಂಡ ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಚಿತ್ರರಂಗಕ್ಕೆ ಪ್ರತಿಭಾವಂತರನ್ನು ಪರಿಚಯಿಸುತ್ತಲೇ ಹಂತ ಹಂತವಾಗಿ ಬೆಳೆದು ಬಂದ ರೀತಿ ರೋಚಕವಾದದ್ದು.

ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದವರು

ಇದಕ್ಕೆಲ್ಲಾ ಈ ಸಂಸ್ಥೆಯ ಪ್ರಾಂಶುಪಾಲರುಗಳಾಗಿ ಜವಾಬ್ದಾರಿ ನಿರ್ವಹಿಸುತ್ತಾ ಬಂದಿರುವವರ ದೂರದೃಷ್ಟಿಯೂ ಪ್ರಮುಖ ಕಾರಣ. ಖ್ಯಾತ ನಿರ್ದೇಶಕರುಗಳಾದ ಗಿರೀಶ್ ಕಾಸರವಳ್ಳಿ, ಟಿ.ಎಸ್. ನಾಗಾಭರಣ, ಧನಂಜಯ, ಜಾನಕಿರಾಮ್, ಎಸ್.ಕೆ. ಭಗವಾನ್ ಮೊದಲಾದವರ ಹೆಸರನ್ನು ಆ ಸಾಲಿನಲ್ಲಿ ಉಲ್ಲೇಖಿಸಬಹುದು.

ಕಲಾಸಾಮ್ರಾಟ್ ಎಸ್. ನಾರಾಯಣ್ ಸಾರಥ್ಯ

ಇದೀಗ ಆ ಜವಾಬ್ದಾರಿಯನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇದೀಗ ಎಸ್. ನಾರಾಯಣ್ ಅವರು ಪ್ರಾಂಶುಪಾಲರಾಗಿ ಒಂದು ವರ್ಷವಷ್ಟೇ ಕಳೆದಿದೆ. ಈ ಅವಧಿಯಲ್ಲಿ ನಾರಾಯಣ್ ಸಾಕಷ್ಟು ಹೊಸ ಯೋಜನೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ.

ಹೊಸ ಹುರುಪಿನಲ್ಲಿ ಎಸ್ ನಾರಾಯಣ್

ಅವರ ಸಾರಥ್ಯದಲ್ಲಿಯೇ ಸಂಸ್ಥೆಯ 41ನೇ ವಾರ್ಷಿಕೋತ್ಸವ ನಡೆಯುತ್ತಿರುವ ಹುರುಪಿನಲ್ಲಿದ್ದ ನಾರಾಯಣ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮುಖಾಮುಖಿಯಾದರು.

ಪ್ರಾಂಶುಪಾಲರಾಗುವ ಅವಕಾಶ ಸಿಕ್ಕಿರುವುದೇ ಭಾಗ್ಯ

ಹಲವಾರು ಪ್ರತಿಭಾವಂತರನ್ನು ಪೊರೆದ ಕೀರ್ತಿ ಹೊಂದಿರುವ ಈ ಸಂಸ್ಥೆಗೆ ಪ್ರಾಂಶುಪಾಲರಾಗುವ ಅವಕಾಶ ಸಿಕ್ಕಿರುವುದೇ ಭಾಗ್ಯ ಎಂದು ಮಾತು ಶುರುವಿಟ್ಟ ನಾರಾಯಣ್ ಚಿತ್ರರಂಗದಲ್ಲಿ ದೊಡ್ಡ ಸ್ಥಾನಕ್ಕೇರುವವರು ಇಲ್ಲಿಂದ ಕಲಿತು ಹೋಗಬೇಕಿದೆ.

ನಾನೂ ಕೂಡಾ ವಿದ್ಯಾರ್ಥಿಯಂತೇ

ಹೀಗಾಗಿ ಉದ್ಯಮದ ಕದ ತಟ್ಟಲು ಹೊರಡುವ ಅವರನ್ನು ಸಂಪೂರ್ಣ ರೀತಿಯಲ್ಲಿ ತರಬೇತಿಗೊಳಿಸುವ ಹೊಣೆ ನಮ್ಮ ಮೇಲಿದೆ. ನಾನು ಇಲ್ಲಿ ಪ್ರಾಂಶುಪಾಲನ ಸ್ಥಾನದಲ್ಲಿ ಇದ್ದರೂ ನಾನೂ ಕೂಡಾ ವಿದ್ಯಾರ್ಥಿಯಂತೇ ಕಾರ್ಯ ನಿರ್ವಹಿಸುತ್ತಿದ್ದೇನೆ. ನನಗೆ ಗೊತ್ತಿಲ್ಲದ್ದನ್ನು ಕಲಿತು ಬಂದು ಇಲ್ಲಿನ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದೇನೆ ಎಂದರು.

ಜುಲೈ 23ರಂದು ವರ್ಣರಂಜಿತ ಕಾರ್ಯಕ್ರಮ

ಇದೇ 23ನೇ ತಾರೀಖಿನಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ವಸತಿ ಸಚಿವರಾದ ಅಂಬರೀಶ್, ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ರೋಷನ್ ಬೇಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ವಿಧಾನ ಪರಿಷತ್ ಸದಸ್ಯೆ ಜಯಮಾಲಾ, ಉಪಸಭಾಪತಿ ಪುಟ್ಟಣ್ಣ, ವಾರ್ತಾ ಇಲಾಖೆ ನಿರ್ದೇಶಕರಾದ ವಿಶು ಕುಮಾರ್, ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನಂ, ವಾಣಿಜ್ಯಮಂಡಳಿ ಅಧ್ಯಕ್ಷರಾದ ಹೆಚ್.ಡಿ. ಗಂಗರಾಜು, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎಮ್.ಎಸ್. ಸುರೇಶ್, ನಟ, ನಿರ್ದೇಶಕ ರವಿಚಂದ್ರನ್, ಸುದೀಪ್, ದುನಿಯಾ ವಿಜಯ್ ಮುಂತಾದವರು ಆಗಮಿಸಲಿದ್ದಾರೆ.

ಗಣ್ಯರಿಗೆ ಸನ್ಮಾನ ಕಾರ್ಯಕ್ರಮ

ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಕಲಿತು ಚಿತ್ರಂಗದಲ್ಲಿ ಯಶ ಕಂಡಿರುವ ಸುನೀಲ್ ಕುಮಾರ್ ದೇಸಾಯಿ, ರಾಮದಾಸು ನಾಯ್ಡು, ಮಹೇಶ್ ಬಾಬು, ಯೋಗೇಶ್ವರ್, ಚರಣ್ ರಾಜ್, ಪ್ರೀತಂ ಗುಬ್ಬಿ ಮುಂತಾದ ಹಳೇ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವೂ ಇದೆ. ಜೊತೆಗೆ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿರುವ ಗಿರೀಶ್ ಕಾಸರವಳ್ಳಿ, ನಾಗಾಭರಣ, ಧನಂಜಯ, ಜಾನಕಿರಾಮ್, ಭಗವಾನ್ ಅವರುಗಳಿಗೆ ಸನ್ಮಾನ ಸಮಾರಂಭವೂ ಇದೆ.

ಎರಡು ಗಂಟೆಗಳ ಕಾಲ ಅದ್ದೂರಿ ಮನರಂಜನೆ

ಇದಲ್ಲದೇಸಂಸ್ಥೆಯ ಪ್ರತಿಭೆಗಳಿಂದ ಎರಡು ಗಂಟೆಗಳ ಕಾಲ ಅದ್ದೂರಿ ಮನರಂಜನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಇವಿಷ್ಟೂ ವಿವರಗಳನ್ನು ಎಸ್. ನಾರಾಯಣ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಸದರಿ ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಸಂಸ್ಥಾಪಕರ ಪುತ್ರ ಮತ್ತು ಆಡಳಿತಾಧಿಕಾರಿಯಾಗಿರುವ ಲೋಕೇಶ್ ಮತ್ತು ವ್ಯವಸ್ಥಾಪಕ ನಿರ್ದೇಕರಾದ ಕಿರಣ್ ಅವರು ಉಪಸ್ಥಿತರಿದ್ದರು.

English summary
Adarsha film and TV Institute all set celebrates 41st anniversary in grand style on 25th July at chowdiah memorial hall, Bangalore. The institute founded by late B.R.P.Swamy in 1973 the Institute has gained great heights in its course of consistent growth.
Please Wait while comments are loading...