»   » ಇಷ್ಟುದಿನ ಅಮೇರಿಕಾದಲ್ಲಿ ಅಂಬಿ ಮೋಜು ಮಾಡ್ಲಿಲ್ಲ, ಮತ್ತೇನ್ ಮಾಡ್ತಿದ್ರು?

ಇಷ್ಟುದಿನ ಅಮೇರಿಕಾದಲ್ಲಿ ಅಂಬಿ ಮೋಜು ಮಾಡ್ಲಿಲ್ಲ, ಮತ್ತೇನ್ ಮಾಡ್ತಿದ್ರು?

Posted By:
Subscribe to Filmibeat Kannada

''ನಾನು ಅಮೇರಿಕಾಗೆ ಮಜಾ ಮಾಡಲು, ಐಷಾರಾಮಿ ಜೀವನ ಮಾಡಲು ಹೋಗಿರ್ಲಿಲ್ಲ. ಮೋಜು ಮಾಡುವ ವಯಸ್ಸು ನನ್ನದಲ್ಲ'' ಅಂತ ಇಂದು ನಡೆದ ದಿಢೀರ್ ಪ್ರೆಸ್ ಮೀಟ್ ನಲ್ಲಿ ನಟ ಹಾಗೂ ಮಂಡ್ಯದ ಶಾಸಕ ಅಂಬರೀಶ್ ಹೇಳಿದರು.

''ಕನ್ನಡಿಗರ ಆಸೆ, ಆಕಾಂಕ್ಷೆ, ಪ್ರೀತಿಗೆ ಗೌರವ ನೀಡಿ ನಾನು 'ಅಕ್ಕ' ಸಮ್ಮೇಳನದಲ್ಲಿ ಭಾಗಿಯಾಗಲು ಅಮೇರಿಕಾಗೆ ತೆರಳಿದ್ದೆ'' ಅಂತ ರೆಬೆಲ್ ಸ್ಟಾರ್ ಕಾರಣ ನೀಡಿದರು. [ಬೆಂಗಳೂರಿನಲ್ಲಿ ಅಂಬರೀಶ್ ಪ್ರತ್ಯಕ್ಷ: ಮಧ್ಯಾಹ್ನ ದಿಢೀರ್ ಪ್ರೆಸ್ ಮೀಟ್]

ಹಾಗ್ನೋಡಿದರೆ, ಸೆಪ್ಟೆಂಬರ್ ಮೊದಲ ವಾರವೇ ಅಮೇರಿಕಾದ 'ಅಕ್ಕ' ಸಮ್ಮೇಳನ ಮುಗಿದುಹೋಯ್ತು. ಹಾಗಾದರೆ, ಇಲ್ಲಿಯವರೆಗೂ ಅಂಬಿ ಅಮೇರಿಕಾದಲ್ಲಿ ಏನು ಮಾಡ್ತಿದ್ರು? ಕಾವೇರಿ ನದಿ-ನೀರು ಹಂಚಿಕೆ ವಿಚಾರವಾಗಿ ಮಂಡ್ಯದಲ್ಲಿ ಪ್ರತಿಭಟನೆ 'ಕಾವೇರಿ'ದ್ದರೂ, ಅದೇ ಮಂಡ್ಯ ಕ್ಷೇತ್ರದ ಶಾಸಕರಾಗಿರುವ ಅಂಬಿ ಯಾಕೆ ಭಾಗಿಯಾಗಲಿಲ್ಲ? ಎಂಬ ಪ್ರಶ್ನೆ ಮಾಧ್ಯಮಗಳಿಂದ ಬಂತು. ಅದಕ್ಕೆ ಅಂಬರೀಶ್ ನೀಡಿರುವ ಸುದೀರ್ಘ ಸ್ಪಷ್ಟನೆ ಇಲ್ಲಿದೆ. ಓವರ್ ಟು ಅಂಬರೀಶ್......

ಅಮೇರಿಕಾಗೆ ಹೋಗಿದ್ದು ಯಾಕೆ?

''ಕಳೆದ ಹದಿನೈದು ವರ್ಷಗಳಿಂದ ಅಮೇರಿಕಾದ ಕನ್ನಡಿಗರು 'ಅಕ್ಕ' ಸಮ್ಮೇಳನಕ್ಕೆ ನನ್ನನ್ನ ಕರೆಯುತ್ತಿದ್ದರು. ಆದ್ರೆ ನಾನು ಹೋಗಲು ಆಗಿರಲಿಲ್ಲ. ನನಗೀಗ ವಯಸ್ಸು 64. ನಾನು ಅಮೇರಿಕಾಗೆ ಮೋಜು ಮಾಡಲು ಹೋಗಿರ್ಲಿಲ್ಲ. ಕನ್ನಡ ಜನತೆಯ ಆಸೆ, ಆಕಾಂಕ್ಷೆಯನ್ನ ತಲುಪಿಸಲು ಹೋಗಿದ್ದೆ'' - ಅಂಬರೀಶ್, ನಟ, ಮಂಡ್ಯ ಶಾಸಕ [ಕಾವೇರಿ ವಿಶೇಷ ಅಧಿವೇಶನ: 'ಮಂಡ್ಯದ ಗಂಡು' ಅಂಬರೀಶ್ ನಾಪತ್ತೆ]

ಅಮೇರಿಕಾ ಕನ್ನಡಿಗರಿಗೆ ಧನ್ಯವಾದ

''ಅಮೇರಿಕಾದ ಮೂರು ಕನ್ನಡ ಬಳಗಕ್ಕೆ ನಾನು ಒಪ್ಪಿಕೊಂಡಿದ್ದೆ. ಅಟ್ಲಾಂಟಿಕ್ ಸಿಟಿ, ಫೀನಿಕ್ಸ್ ಮತ್ತು ಬಾಲ್ಟಿಮೋರ್ ನ ಎಲ್ಲಾ ಕನ್ನಡಿಗರು ಬಹಳ ಸಂತೋಷ ವ್ಯಕ್ತ ಪಡಿಸಿದರು. ನನ್ನ ಜೊತೆ ಅನೇಕ ಕಲಾವಿದರು ಭಾಗವಹಿಸಿದ್ದರು. ಅದಕ್ಕೆ ನನ್ನ ಸಹನಟರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅವರ ಬಿಜಿ ಶೆಡ್ಯೂಲ್ ಏನೇ ಇದ್ದರೂ, ನನಗಾಗಿ ಬಂದು 'ಅಂಬಿ ವೈಭವ' ಕಾರ್ಯಕ್ರಮವನ್ನ ಮಾಡಿದರು. ಅಮೇರಿಕಾ ಕನ್ನಡಿಗರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ'' - ಅಂಬರೀಶ್, ನಟ, ಮಂಡ್ಯ ಶಾಸಕ

ಆರೋಗ್ಯ ತಪಾಸಣೆ ಇತ್ತು

''ಅಮೇರಿಕಾದಲ್ಲಿ ನನಗೆ ಆರೋಗ್ಯ ತಪಾಸಣೆ ಕೂಡ ಇತ್ತು. ನೀವೆಲ್ಲಾ ನೋಡಿದ್ದೀರಾ, ನನ್ನ ಎರಡನೇ ಜೀವನ ಇದು. ಒಂದು ಬಾರಿ ನನ್ನ ಹೆಣ ಹೋಗಿ ಜೀವಂತವಾಗಿ ವಾಪಸ್ ಬಂದೆ. ಅದೇ ನನ್ನ ತೃಪ್ತಿ. ನಿಮಗೆಲ್ಲಾ ಗೊತ್ತಿದೆ...ನೀವೇ ನೋಡಿದ್ದೀರಾ....ಡಾಕ್ಟರ್ ಗಳ appointment ತೆಗೆದುಕೊಳ್ಳಲು ಇಲ್ಲೇ ಎಷ್ಟು ಕಷ್ಟವಾಗುತ್ತದೆ. ಅಮೇರಿಕಾದಲ್ಲಿ ಎಷ್ಟು ಕಷ್ಟ ಆಗುತ್ತೆ ಅನ್ನೋದು ನನಗೆ ಗೊತ್ತು. ನಾನು ಕೂಡ ಹೆಲ್ತ್ ಚೆಕಪ್ ಮಾಡಿಸಿ, ಕನ್ನಡಿಗರನ್ನ ಭೇಟಿ ಮಾಡಿ ಬಂದಿದ್ದೇನೆ'' - ಅಂಬರೀಶ್, ನಟ, ಮಂಡ್ಯ ಶಾಸಕ

ಕಾವೇರಿ ವಿವಾದ ಹೊಸದಲ್ಲ

''ಕಾವೇರಿ ವಿವಾದ ಹೊಸದಲ್ಲ. ತುಂಬಾ ವರ್ಷಗಳಿಂದ ನಡೆಯುತ್ತಿದೆ. ಕರ್ನಾಟಕಕ್ಕೆ ಹೀಗೆ ಪದೇ ಪದೇ ಅನ್ಯಾಯ ಆಗುತ್ತಿರುವುದು ದುರಾದೃಷ್ಟಕರ. ಇದು ನಮ್ಮ ದೌರ್ಭಾಗ್ಯ'' - ಅಂಬರೀಶ್, ನಟ, ಮಂಡ್ಯ ಶಾಸಕ [ಅಂಬರೀಶಣ್ಣ...ಎಲ್ಲೇ ಇದ್ದರೂ ದಯವಿಟ್ಟು ಮಂಡ್ಯಗೆ ಬನ್ನಿ, ಪ್ಲೀಸ್..]

ಅಧಿಕಾರ, ಹಣದ ಆಸೆ ಇಲ್ಲ

''ಖಳನಟನಾಗಿ, ಪೋಷಕ ನಟನಾಗಿ, ನಾಯಕ ನಟನಾಗಿ ಇವತ್ತಿನ ದಿನ ಅಬ್ದುಲ್ ಕಲಾಂ ಮುಂದೆ ನಿಂತು ಪ್ರಮಾಣ ವಚನ ಸ್ವೀಕರಿಸಿ, ಇಲ್ಲಿ ಬಂದು ಸಚಿವ ಸಂಪುಟದಲ್ಲಿ ಕೆಲಸ ಮಾಡಿದ್ದೀನಿ. ಅಧಿಕಾರಕ್ಕಾಗಿ ಅಥವಾ ಹಣದ ಆಸೆಗಾಗಿ ನಾನು ಕೆಲಸ ಮಾಡಿಲ್ಲ'' - ಅಂಬರೀಶ್, ನಟ, ಮಂಡ್ಯ ಶಾಸಕ [ಅಂಬರೀಶ್ ವಿರುದ್ಧ ಆಕ್ರೋಶ: 'ದೊಡ್ಮನೆ ಹುಡ್ಗ' ಚಿತ್ರಕ್ಕೆ ಕಂಟಕ]

ಕರುನಾಡ ಜನರಿಗೆ ಕ್ಷಮೆ ಕೋರುತ್ತೇನೆ

''ಇವತ್ತು ನನ್ನ ದೌರ್ಭಾಗ್ಯ ಈ ಸಮಸ್ಯೆ ನಾನು ಇಲ್ಲದೇ ಇರುವಾಗ ಆಗಿದೆ. ನಾನು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗ್ಲಿಲ್ಲ ಅಂತ ನನ್ನ ಮನಸ್ಸಿನಲ್ಲೂ ಗಾಯ ಇದೆ. ಅದಕ್ಕೆ ನಾನು ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ'' - ಅಂಬರೀಶ್, ನಟ, ಮಂಡ್ಯ ಶಾಸಕ ['ದೊಡ್ಮನೆ ಹುಡ್ಗ' ರಿಲೀಸ್ ಗೆ ಮಂಡ್ಯದಲ್ಲಿ ಹ್ಯಾಂಡ್ ಬ್ರೇಕ್]

ರಾಜ್ಯಗಳ ರೈತರೇ ಸಮಸ್ಯೆ ಪರಿಹಾರ ಮಾಡಬೇಕು

''ನೂರು ಜನ ರಾಜಕಾರಣಿಗಳು ಬಂದರೂ ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯ ಇಲ್ಲ. ಎರಡೂ ರಾಜ್ಯಗಳ ರೈತರಿಗೆ ಬಿಟ್ಟುಬಿಟ್ಟರೆ ಸಮಸ್ಯೆ ಸುಲಭವಾಗಿ ಮುಗಿದುಹೋಗುತ್ತದೆ ಅಂತ 2006ರಲ್ಲಿ ಪ್ರಧಾನ ಮಂತ್ರಿಗಳಿಗೆ ನಾನು ಹೇಳಿದ್ದೆ'' - ಅಂಬರೀಶ್, ನಟ, ಮಂಡ್ಯ ಶಾಸಕ

ನೀರನ್ನ ಸೃಷ್ಟಿಸಲು ಸಾಧ್ಯವಿಲ್ಲ

''ಪ್ರಕೃತಿಗೆ ಬ್ಯಾರೋಮೀಟರ್ ಫಿಕ್ಸ್ ಮಾಡಲು ಸಾಧ್ಯ ಇಲ್ಲ. 1924 ಅಗ್ರೀಮೆಂಟ್ ಬಗ್ಗೆ ನನಗೆ ಸಮ್ಮತ ಇಲ್ಲ. ದುಡ್ಡು ಆಗಿದ್ದರೆ ಬ್ಯಾಂಕ್ ನಿಂದ ಸಾಲ ಮಾಡಿ ತರಬಹುದು. ಆದ್ರೆ ನೀರನ್ನ ಸಾಲ ತರೋಕೆ ಆಗಲ್ಲ. ನೀರನ್ನ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಮಳೆ ಬಾರದೇ ಇರುವಾಗ ಡಿಸ್ಟ್ರೆಸ್ ಫಾರ್ಮುಲಾ ಜಾರಿಗೆ ತರಬೇಕು'' - ಅಂಬರೀಶ್, ನಟ, ಮಂಡ್ಯ ಶಾಸಕ

ಉತ್ತರ ಕೊಡಲು ತಯಾರಿಲ್ಲ

''ಬೇಕಾದಷ್ಟು ಜನ ನನ್ನ ಮೇಲೆ ತುಂಬಾ ಮಾತನಾಡಿದ್ದಾರೆ. ಮಾತನಾಡುವವರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ನಮ್ಮ ಮನಸ್ಸಲ್ಲಿ ಇರುವುದನ್ನ ನಾವು ಹೇಳಬಹುದು ಅಷ್ಟೆ. ಮಾಧ್ಯಮಗಳಲ್ಲಿ ನನ್ನ ಬಗ್ಗೆ ಬಂದಿರುವ ಬಗ್ಗೆ ಕೂಡ ನಾನು ಉತ್ತರ ಕೊಡಲು ತಯಾರಿಲ್ಲ'' - ಅಂಬರೀಶ್, ನಟ, ಮಂಡ್ಯ ಶಾಸಕ

ಎದೆ ಬಗಿದು ತೋರಿಸಲು ಸಾಧ್ಯವಿಲ್ಲ

''ನಾನು ಇವತ್ತಿನ ಈ ಮಟ್ಟಕ್ಕೆ ಬರಬೇಕಾದರೆ ಮಂಡ್ಯ ಜನತೆಯ ಆಶೀರ್ವಾದ, ಅಭಿಮಾನ, ಪ್ರೀತಿ ಕಾರಣ. ಅವರ ಮೇಲೆ ಗೌರವ ನನಗೆ ಇದ್ದೇ ಇದೆ. ಹನುಮಂತನ ತರಹ ನಾನು ಎದೆ ಬಗಿದು ತೋರಿಸಲು ಸಾಧ್ಯವಿಲ್ಲ'' - ಅಂಬರೀಶ್, ನಟ, ಮಂಡ್ಯ ಶಾಸಕ

ಕಾವೇರಿ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ದುಃಖ ಇದೆ

''ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ನಾನು ಭಾಗವಹಿಸದೇ ಇರಲು ಕಾರಣ ಏನಪ್ಪಾ ಅಂದ್ರೆ ಕನ್ನಡಿಗರ ಪ್ರೀತಿ, ವಿಶ್ವಾಸ, ಆಸೆ. ಅದಕ್ಕಾಗಿ ನಾನು ಅಮೇರಿಕಾಗೆ ಹೋಗಿದ್ದೇ ಹೊರತು ಮೋಜು ಮಾಡಲು ಅಲ್ಲ. ಐಷಾರಾಮಿ ಜೀವನ ಮಾಡಲು ಹೋಗಿರ್ಲಿಲ್ಲ. ಕಾವೇರಿ ಹೋರಾಟದಲ್ಲಿ ನಾನು ಭಾಗವಹಿಸಲಿಲ್ಲ ಎಂಬ ದುಃಖ ಕೂಡ ನನ್ನಲ್ಲಿ ಇದೆ'' - ಅಂಬರೀಶ್, ನಟ, ಮಂಡ್ಯ ಶಾಸಕ

ಮುಖ್ಯಮಂತ್ರಿ ಒಳ್ಳೆಯ ತೀರ್ಮಾನ ಮಾಡಿದ್ದಾರೆ

''ಕಾವೇರಿ ಕರ್ನಾಟಕದ ಆಸ್ತಿ. ಮುಖ್ಯಮಂತ್ರಿಗಳು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಅದನ್ನ ಕೇಳಿ ಮನಸ್ಸಿಗೆ ಸ್ವಲ್ಪ ಸಂತೋಷ ಆಯ್ತು. ಹೀಗಾಗಿ ನಾನು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏನೇ ಆಗಲಿ, ಅಧಿಕಾರ ಹೋದರೂ ಪರ್ವಾಗಿಲ್ಲ, ನಾವು ಮಾತ್ರ ನೀರನ್ನ ಬಿಡಬಾರದು. ಕುಡಿಯಲು ನೀರು ಕೇಳುತ್ತಿದ್ದೇವೆ ಹೊರತು, ಸುಪ್ರೀಂ ಕೋರ್ಟ್ ಗೆ ಅವಮಾನ ಮಾಡುವ ಉದ್ದೇಶ ನಮ್ಮದಲ್ಲ'' - ಅಂಬರೀಶ್, ನಟ, ಮಂಡ್ಯ ಶಾಸಕ [ಸಿದ್ದರಾಮಯ್ಯ ಅವರ ನಿರ್ಧಾರವನ್ನು ಬೆಂಬಲಿಸಬೇಕಿದೆ: ಅಂಬರೀಷ್]

ಖುಷಿ ಆಗಿದೆ

''ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕು. ಕನ್ನಡಿಗರ ಹಿತರಕ್ಷಣೆಗೋಸ್ಕರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಒಳ್ಳೆ ತೀರ್ಮಾನ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಅಂತ ಸುಪ್ರೀಂ ಕೋರ್ಟ್ ಈಗ ಹೇಳಿದೆ. ಇದನ್ನ ಕೇಳಿ ಖುಷಿ ಆಯ್ತು'' - ಅಂಬರೀಶ್, ನಟ, ಮಂಡ್ಯ ಶಾಸಕ

ನನಗೂ ಮನುಷ್ಯತ್ವ ಇದೆ

''ಇನ್ನೊಮ್ಮೆ ಹೇಳುತ್ತಿದ್ದೇನೆ, ನಾನು ಮಜಾ ಮಾಡಲು ಹೋಗಿರ್ಲಿಲ್ಲ. ಐಷಾರಾಮಿ ಜೀವನ ಮಾಡಲು ಹೋಗಿರ್ಲಿಲ್ಲ. ಅದು ಯಾರ ದುಡ್ಡಿನಿಂದ ಹೋಗಿದ್ದೇನೆ? ಬಡವರ ಬೆವರಿನ ಹಣದಿಂದ ನಾನು ಸುಖವಾಗಿ ಜೀವನ ಮಾಡಿದ್ದೇನೆ. ನನಗೂ ಮನುಷ್ಯತ್ವ ಇದೆ. ನನಗೂ ಜನರ ಬಗ್ಗೆ ಕಾಳಜಿ ಇದೆ. ಕಾವೇರಿ ಹೋರಾಟದಲ್ಲಿ ನಾನು ಭಾಗವಹಿಸಲಿಲ್ಲ ಎಂಬ ನೋವು ಜನರಲ್ಲಿ ಇದ್ದರೆ ಎಲ್ಲರಿಗೂ ನಾನು ಮತ್ತೊಮ್ಮೆ ಕ್ಷಮೆ ಕೇಳುತ್ತಿದ್ದೇನೆ'' - ಅಂಬರೀಶ್, ನಟ, ಮಂಡ್ಯ ಶಾಸಕ

ಶುಕ್ರವಾರ ಮಂಡ್ಯಗೆ ಭೇಟಿ

''ಸೆಪ್ಟೆಂಬರ್ 30 ರಂದು ಶುಕ್ರವಾರ ಸುಪ್ರೀಂ ಕೋರ್ಟ್ ನಿಂದ ತೀರ್ಪು ಬಂದ್ಮೇಲೆ ನಾನು ಮಂಡ್ಯಗೆ ಹೋಗುತ್ತೇನೆ'' - ಅಂಬರೀಶ್, ನಟ, ಮಂಡ್ಯ ಶಾಸಕ

ಅಧಿಕಾರ ಬಿಟ್ಟು ಬಂದರೂ ಸೋಲಿಸಿದರು

''128 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಷ್ಟು ಜನಕ್ಕೆ ಮಂತ್ರಿ ಪದವಿ ಸಿಗುತ್ತೆ? ಆ ಅಧಿಕಾರವನ್ನೇ ತ್ಯಾಗ ಮಾಡಿ ನಾನು ಬಂದೆ. ಆದರೂ ನಾನು ಮಂಡ್ಯದಲ್ಲಿ ಸೋಲಲಿಲ್ಲವೇ? ಎಂ.ಎಲ್.ಎ ಆಗಿಯೂ ಸೋತೆ, ಎಂ.ಪಿ ಆಗಿಯೂ ಸೋತೆ. ಆದರೂ ನನಗೇನೂ ಬೇಸರ ಇಲ್ಲ. ಬೇಕು ಅಂತ ಇವತ್ತು ಆರಿಸಿದ್ದಾರೆ ಅದಕ್ಕೆ ಸಂತೋಷ ಇದೆ. ಮಂಡ್ಯ ಜನರ ಋಣ ನನ್ನ ಮೇಲೆ ಇದೆ. ನನ್ನ ಕೈಯಲ್ಲಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ'' - ಅಂಬರೀಶ್, ನಟ, ಮಂಡ್ಯ ಶಾಸಕ

ರಾಜಿನಾಮೆ ಕೊಟ್ಟಿದ್ದಾಗಿದೆ

''ನಾನು ರಾಜಿನಾಮೆ ಆಗಲೇ ಕೊಟ್ಟಿದ್ದೇನೆ. ಸ್ಪೀಕರ್ ಆಗ ಇರಲಿಲ್ಲ. ಜನರಿಗಾಗಿ ಎರಡು ಕೋಟಿ ರೂಪಾಯಿ ಎಂ.ಎಲ್.ಎ ಫಂಡ್ ಬರುತ್ತದೆ ಅಂತ ನಾನು ಕೂಡ ಸ್ವಲ್ಪ ತಡ ಮಾಡಿದೆ. ಆದ್ರೆ, ರಾಜಿನಾಮೆ ಕೊಟ್ಟ ಮೇಲೆ ಇವತ್ತಿನ ವರೆಗೂ ನಾನು ಸಂಬಳ ತೆಗೆದುಕೊಂಡಿಲ್ಲ. ಅಧಿಕಾರಕ್ಕಾಗಿ ನಾನು ರಾಜಕೀಯ ಮಾಡಲು ಬಂದಿಲ್ಲ. ಜನರ ಆಶೀರ್ವಾದ ನನ್ನ ಮೇಲಿದೆ. ಅವರಿಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಸ್ವಾರ್ಥದ ರಾಜಕೀಯ ನಾನು ಮಾಡಿಲ್ಲ. ದ್ವೇಷದ ರಾಜಕಾರಣ ನಾನು ಮಾಡಲ್ಲ'' - ಅಂಬರೀಶ್, ನಟ, ಮಂಡ್ಯ ಶಾಸಕ

ನಾನೂ ಮನುಷ್ಯನೇ!

''ನಾನು ಯಾಕೆ ಮಂಡ್ಯ ಜನತೆಯನ್ನ ಕಡೆಗಣಿಸಲಿ? ನನಗೆ ಇಷ್ಟೆಲ್ಲಾ ಕೊಟ್ಟಿರುವ ಜನತೆಯನ್ನ ನಾನು ಕಡೆಗಣಿಸಿದರೆ ನಾನು ಮನುಷ್ಯನಾ?'' - ಅಂಬರೀಶ್, ನಟ, ಮಂಡ್ಯ ಶಾಸಕ

English summary
Kannada Actor, Congress Politician, Mandya MLA Ambareesh has apologized all Kannadigas for not taking part in Cauvery Protest during the Press meet held at his residence in Jayanagar, Bengaluru today (September 28th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada