»   » ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬ ಸಂಭ್ರಮ

ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬ ಸಂಭ್ರಮ

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ ಮುಳುಗಿದೆ. 62ನೇ ವಸಂತಕ್ಕೆ ಕಾಲಿರಿಸಿರುವ ಪ್ರೀತಿಯ ಅಂಬಿಯಣ್ಣನಿಗೆ ಎಲ್ಲೆಡೆಯಿಂದ ಅಭಿಮಾನಪೂರ್ವಕ ಶುಭ ಹಾರೈಕೆಗಳು ಹರಿದು ಬರುತ್ತಿದೆ. ಹುಟ್ಟುಹಬ್ಬದ ಖುಷಿಯಲ್ಲಿ ಮಾತನಾಡಿದ ಅಂಬರೀಷ್, 'ಇದು ನನಗೆ ಅಭಿಮಾನಿಗಳು ನೀಡಿರುವ ಮರುಹುಟ್ಟು, ಎಲ್ಲರ ಪ್ರೀತಿವಿಶ್ವಾಸ ಹೀಗೆ ಮುಂದುವರೆಸಿಕೊಂಡು ಹೋಗುತ್ತೇನೆ, ನಾನು ಎಂದಿದ್ದರೂ ನಿಮ್ಮ ಪ್ರೀತಿಯ ರೆಬೆಲ್ ಸ್ಟಾರ್' ಎಂದರು.

ಬೆಂಗಳೂರಿನ ಜೆಪಿ ನಗರದಲ್ಲಿರುವ ಅಂಬರೀಷ್ ನಿವಾಸದ ಮುಂದೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು ಅಂಬರೀಷ್ ಅವರ ಹೆಸರಿನಲ್ಲಿ ಕೇಕ್ ಗಳನ್ನು ತಂದಿದ್ದಾರೆ, ಅಂಬರೀಷ್ ಗೆ ಜಯಘೋಷ ಹಾಕುತ್ತಿದ್ದಾರೆ. ಅಂದ ಹಾಗೆ, ಅಂಬರೀಷ್ ಹುಟ್ಟುಹಬ್ಬ ಸಂಭ್ರಮ ನಿನ್ನೆಯಿಂದಲೆ ಆರಂಭಗೊಂಡಿದೆ. ಬುಧವಾರ ಪೇಜಾವರ ಶ್ರೀಗಳಿಗೆ ಅಂಬಿ ದಂಪತಿ ಪಾದಪೂಜೆ ಸಲ್ಲಿಸಿದ್ದಾರೆ, ರವಿಶಂಕರ್ ಗುರೂಜಿ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.

ಅನಾರೋಗ್ಯ ಪೀಡಿತರಾಗಿ ಆತಂಕದ ಕ್ಷಣಗಳನ್ನು ಎದುರಿಸಿದ್ದ ಅಂಬರೀಷ್ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಇಂದು ಅತ್ಯಂತ ಸಂಭ್ರಮದ ದಿನ ಎನಿಸಿದೆ. ಅಂಬರೀಷ್ ಅವರ ಸಿನಿ ಪಯಣದ ಕೆಲವು ಮೆಲುಕುಗಳು ಇಲ್ಲಿವೆ

ಅಂಬರೀಷ್ ಮುಂದಿನ ಚಿತ್ರದಲ್ಲಿ ಯಾವ ಪಾತ್ರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿರುವ ಅಂಬರೀಶ್ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಈಗಾಗಲೇ ಬಹಿರಂಗವಾಗಿದೆ. ಈ ಚಿತ್ರದಲ್ಲಿ ಅಂಬಿ ಅವರದು ಬೆಂಗಳೂರು ನಿರ್ಮಾಪಕ ಕೆಂಪೇಗೌಡನ ಪಾತ್ರದಲ್ಲಿ ಝಗಮಗಿಸಲಿದ್ದಾರೆ.

ಈ ಹಿಂದೆ ಅವರು ಕಲ್ಲರಳಿ ಹೂವಾಗಿ ಚಿತ್ರದಲ್ಲಿ ಮದಕರಿ ನಾಯಕನ ಪಾತ್ರ ಪೋಷಿಸಿದ್ದರು. ಈಗ ಮತ್ತೊಮ್ಮೆ ಕೃಷ್ಣದೇವರಾಯನ ಸಾಮಂತ ರಾಜನಾಗಿ ತೆರೆಯ ಮೇಲೆ ಕತ್ತಿ ಝಳಪಿಸಲಿದ್ದಾರೆ. ಸುಖಧರೆ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ಮಹೇಶ್ ಸುಖಧರೆ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರವಿದು.

ಫೇಮಸ್ ಡೈಲಾಗ್ ನಿಂದ ಕೆರಿಯರ್ ಶುರು

1975ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರದಲ್ಲಿ ಜಲೀಲನ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಅಂಬರೀಷ್, 'ಮೇರೆ ಸಪನ್ನೋಂಕಿ ರಾಣಿ ಕಬ್ ಆಯಗಿ ತು' ಎಂದು ಆರತಿ ಅವರನ್ನು ಛೇಡಿಸುತ್ತಾ ಯಾಕೆ ಬುಲ್ ಬುಲ್ ಮಾತಾಡ್ಕಿಲ್ವ ಎನ್ನುವುದು ದಶಕಗಳು ಕಳೆದರೂ ಅಚ್ಚಳಿಯದೇ ಉಳಿದಿದೆ ಹಾಗೂ ಅಂಬರೀಷ್ ಕೆರಿಯರ್ ಗೆ ಈ ಚಿತ್ರ ಬುನಾದಿ ಹಾಕಿಕೊಟ್ಟಿತು.

ರೆಬೆಲ್ ಆದರೂ ಲವ್ಲಿ ಬಾಯ್ ಅಂಬರೀಷ್

ರೆಬೆಲ್ ಪಾತ್ರಗಳ ಮೂಲಕ ಜನಮೆಚ್ಚುಗೆ ಗಳಿಸಿದರೂ ಲವ್ಲಿ ಬಾಯ್ ಆಗಿ ಸುಮಲತಾ ಅವರ ಮನಸ್ಸು ಗೆದ್ದರು ಟಿಎಸ್ ನಾಗಾಭಾರಣ ಅವರ ಆಹುತಿ ಚಿತ್ರದ ಶೂಟಿಂಗ್ ವೇಳೆ ಇಬ್ಬರಲ್ಲೂ ಇದ್ದ ಸ್ನೇಹ ಪ್ರೀತಿಯಾಗಿ ಬದಲಾಯಿತಂತೆ

ಅಂಬರೀಷ್ ಮದುವೆ ಸಂಭ್ರಮ

1991ರ ಡಿಸೆಂಬರ್ 9 ರಂದು ತಮ್ಮ 39ನೇ ವಯಸ್ಸಿನಲ್ಲಿ ಸುಮಲತಾ ಅವರನ್ನು ವರಿಸಿದ ಅಂಬರೀಷ್ ಅವರಿಗೆ ಅಭಿಷೇಕ್ ಎಂಬ ಪುತ್ರನಿದ್ದಾನೆ. ಅಪಾರ ಅಭಿಮಾನಿ ಸಮೂಹವಿದೆ.

ಅಂಬರೀಷ್ ಹಾಗೂ ವಿಷ್ಣುವರ್ಧನ್ ಜೋಡಿ

ಕುಚಿಕು ಕುಚಿಕು ನಾನು ಚಡ್ಡಿ ದೋಸ್ತ್ ಕಣೋ ಎಂದು ಹಾಡಿ ಕುಣಿದ ಅಂಬರೀಷ್ ಹಾಗೂ ವಿಷ್ಣುವರ್ಧನ್ ಇಬ್ಬರದ್ದು ಗಳಸ್ಯ ಕಂಠಸ್ಯ ಗೆಳೆತನ. ಇಬ್ಬರ ಗೆಳೆತನ ಚಿತ್ರರಂಗಕ್ಕೆ ಮಾದರಿಯಾಗಿದೆ.

ಪರಭಾಷೆ ನಟ ನಟಿಯರ ಜತೆ ಬಾಂಧವ್ಯ

ಅಂಬರೀಷ್ ಅವರಿಗೆ ಕನ್ನಡ ಚಿತ್ರರಂಗವಷ್ಟೇ ಅಲ್ಲ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಚಿತ್ರರಂಗದಲ್ಲೂ ಆಪ್ತರಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ಚಿರಂಜೀವಿ, ಶತ್ರುಘ್ನ ಸಿನ್ಹಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಕಲಿಯುಗ ಕರ್ಣ, ಅಜಾತಶತ್ರು ಅಂಬಿ

ಕರ್ನಾಟಕದಲ್ಲಿ ಕಲಿಯುಗ ಕರ್ಣ, ಅಜಾತಶತ್ರು ಎಂದು ಕರೆಯಲ್ಪಡುವ ಅಂಬರೀಷ್ ಅವರು ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಸಂಧಾನಕಾರನ ಪಾತ್ರವನ್ನು ವಹಿಸಿಕೊಂಡು ಬಂದಿದ್ದಾರೆ. ಚಿತ್ರರಂಗದ ಸಮಸ್ಯೆ ಇರಬಹುದು, ಜನ ಸಾಮಾನ್ಯರ ಸಮಸ್ಯೆ ಇರಬಹುದು, ಅಂಬರೀಷ್ ಬಳಿ ಹೋದರೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿದೆ.

English summary
It's 62nd birthday celebration for our Karnataka Housing Minister and Sandalwood's ace actor Rebel Star Ambareesh. It is also the first birthday for Ambi after becoming the State minister.
Please Wait while comments are loading...