»   » ಅಂಬರೀಶಣ್ಣ...ಎಲ್ಲೇ ಇದ್ದರೂ ದಯವಿಟ್ಟು ಮಂಡ್ಯಗೆ ಬನ್ನಿ, ಪ್ಲೀಸ್..

ಅಂಬರೀಶಣ್ಣ...ಎಲ್ಲೇ ಇದ್ದರೂ ದಯವಿಟ್ಟು ಮಂಡ್ಯಗೆ ಬನ್ನಿ, ಪ್ಲೀಸ್..

Posted By:
Subscribe to Filmibeat Kannada

''ಕಾವೇರಿ ನೀರನು ಕುಡಿದು...ಕಬ್ಬಿನ ಹಾಲಲಿ ಬೆಳೆದು...ಕನ್ನಡ ನುಡಿಯನು ನುಡಿದು...ಈ ಮಣ್ಣಲ್ಲಿ ಮುತ್ತನು ತೆಗೆವ ಗಂಡು...ಈ ಮಂಡ್ಯದ ಗಂಡು...ಮುತ್ತಿನ ಚೆಂಡು...ನಾ ನಿಮ್ಮೂರ ಬಂಧು...ನಿಮ್ಮ ಮರೆಯೋಲ್ಲ ಎಂದೂ....''

- ಹೀಗಂತ ಹಾಡುತ್ತಾ, ಕೈಯಲ್ಲಿ ಕರುನಾಡ ಬಾವುಟ ಹಿಡಿದು ಬೆಳ್ಳಿ ತೆರೆ ಮೇಲೆ ಸ್ಟೆಪ್ ಹಾಕುವ ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಇಂದು ಮಂಡ್ಯ ನೆನಪಾಗುತ್ತಿಲ್ಲವಾ ಎಂಬ ಪ್ರಶ್ನೆ ಸದ್ಯ ಸಕ್ಕರೆ ನಾಡಿನ ಜನತೆಯ ಮನಸ್ಸಿನಲ್ಲಿ ಕೊರೆಯುತ್ತಿದೆ.

ಕಳೆದ ಹತ್ತು ದಿನಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ನಾಡಿನೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಮಂಡ್ಯದಲ್ಲಿ ನಿಷೇದಾಜ್ಞೆ ಹೇರಿದ್ದರೂ, 'ಕಾವೇರಿ ಕಿಚ್ಚು' ಮಾತ್ರ ಕೊಂಚ ಕೂಡ ಕಡಿಮೆ ಆಗಿಲ್ಲ. ಭಾರತದಾದ್ಯಂತ 'ಕಾವೇರಿ' ಚರ್ಚೆಯ ವಿಷಯವಾಗಿದೆ. ಹೀಗಿದ್ದರೂ, ಅಂಬರೀಶ್ ಮಾತ್ರ ಇದುವರೆಗೂ ಮಂಡ್ಯದತ್ತ ತಿರುಗಿ ನೋಡಿಲ್ಲ.!

ಅಂಬರೀಶ್ ಗಾಗಿ ಜನ ಕಾಯ್ತಿದ್ದಾರೆ.!

ಎಂತಹ ವಿಪರ್ಯಾಸ ನೋಡಿ, ಇಡೀ ಮಂಡ್ಯದ ರೈತಾಪಿ ವರ್ಗ ಬೀದಿಗಿಳಿದು ಹೋರಾಡುತ್ತಿದ್ದರೂ, ಅದೇ ಮಂಡ್ಯ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಇದುವರೆಗೂ ಆ ಕಡೆ ಮುಖ ಮಾಡಿಲ್ಲ. ಅಂಬರೀಶ್ ಯಾವಾಗ ಬರುತ್ತಾರೋ ಅಂತ ಜನ ಎದುರು ನೋಡ್ತಿದ್ದಾರೆ.

ಪ್ಲೀಸ್ ಮಂಡ್ಯಗೆ ಬನ್ನಿ ಎನ್ನುತ್ತಿರುವ ಹೋರಾಟಗಾರರು

''ಅಂಬರೀಶಣ್ಣ....ಎಲ್ಲೇ ಇದ್ದರೂ ದಯವಿಟ್ಟು ಮಂಡ್ಯಗೆ ಬನ್ನಿ....ಪ್ಲೀಸ್ ಪ್ಲೀಸ್'' ಅಂತ ಪೋಸ್ಟರ್ ಹಾಗೂ ಬ್ಯಾನರ್ ಗಳನ್ನ ಹಿಡಿದು ಹೋರಾಟಗಾರರು ಮಂಡ್ಯದಲ್ಲಿ ಇಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. [ಕಡೆಗೂ ಕಾವೇರಿ ಹೋರಾಟದ ಬಗ್ಗೆ ತುಟ್ಟಿ ಬಿಚ್ಚಿದ ಮಂಡ್ಯದ 'ಅಣ್ತಮ್ಮ' ಯಶ್]

ಹೋರಾಟಗಾರರ ಹೊಸ ವರಸೆ....

''ಅಂಬರೀಶಣ್ಣ...ಪ್ಲೀಸ್ ಮಂಡ್ಯಗೆ ಬನ್ನಿ'' ಅಂತ ಹೋರಾಟಗಾರರು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವುದರ ಹಿಂದೆ ಬೇರೆ ಅರ್ಥ ಇದೆ. ಬೇಕಾದರೆ ನೀವೇ ಪೋಸ್ಟರ್ ಗಳನ್ನ ನೋಡಿ....''ನಾವು ನಿಮ್ಮನ್ನು ನೀರು ಕೇಳಲ್ಲ. ಬೆಳೆಯ ನಷ್ಟಕ್ಕೆ ಪರಿಹಾರ ಕೇಳಲ್ಲ. ಮೈಶುಗರ್ ಆರಂಭ ಮಾಡಿಸಿ ಎಂದು ಕೇಳಲ್ಲ. ರಸ್ತೆ ರಿಪೇರಿ ಮಾಡಿಸಿ ಎಂದು ಕೇಳಲ್ಲ. ಮಂಡ್ಯದ ಜನತೆ ನಿಮ್ಮನ್ನು ನೋಡಲು ತುಂಬ ಆಸೆಯಾಗಿದೆ. ಎಲ್ಲಿದ್ದರೂ ಪ್ಲೀಸ್..ಪ್ಲೀಸ್ ಬನ್ನಿ'' ಎಂದು ಬರೆದಿರುವ ಪೋಸ್ಟರ್ ಗಳನ್ನ ಹಿಡಿದು ಮಂಡ್ಯದಲ್ಲಿರುವ ಕನ್ನಡ ಪರ ಹೋರಾಟಗಾರರು ಇಂದು ಪ್ರತಿಭಟಿಸಿದರು.

ನಮ್ಮ ದೌರ್ಭಾಗ್ಯ.!

ಇದೇ ವೇಳೆ ಸಿದ್ದರಾಮಯ್ಯ ರವರಿಂದ ಪ್ರಾಪ್ತಿ ಆಗಿರುವ 'ಭಾಗ್ಯ'ಗಳ ಪಟ್ಟಿಯನ್ನೂ ಹಿಡಿದು ಹೋರಾಟಗಾರರು ಧಿಕ್ಕಾರ ಕೂಗಿದರು. [ಕಾವೇರಿ ಗಲಭೆ : ಕನ್ನಡ ಸಿನಿ ತಾರೆಯರ 'ಶಾಂತಿ' ಸಂದೇಶ]

ಭಾಗ್ಯಗಳ ಪಟ್ಟಿಯಲ್ಲಿ ಏನಿದೆ?

''ರೈತರಿಗೆ ಆತ್ಮಹತ್ಯೆ ಭಾಗ್ಯ, ನಿಷ್ಠಾವಂತರಿಗೆ ನೇಣಿನ ಭಾಗ್ಯ, ಪ್ರಾಮಾಣಿಕರಿಗೆ ವರ್ಗಾವಣೆ ಭಾಗ್ಯ, ಭ್ರಷ್ಟರಿಗೆ ರಕ್ಷಣೆ ಭಾಗ್ಯ, ಭೂಗಳ್ಳರಿಗೆ ಕ್ಲೀನ್ ಚಿಟ್ ಭಾಗ್ಯ, ನೀರು ಕೇಳಿದರೆ ಬಾಸುಂಡೆ ಭಾಗ್ಯ, ಕಾವೇರಿಗಾಗಿ ಹೋರಾಡಿದರೆ ಗುಂಡಿನ ಭಾಗ್ಯ, ಇವರನ್ನು ಆರಿಸಿದ್ದು ನಮ್ಮ ದೌರ್ಭಾಗ್ಯ''

ಅಂಬರೀಶ್ ಎಲ್ಲಿದ್ದಾರೆ?

ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆದ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಹಾಗೂ ಆರೋಗ್ಯ ತಪಾಸಣೆಗಾಗಿ ಅಂಬರೀಶ್ ಅಮೇರಿಕಾಗೆ ತೆರಳಿದ್ದರು.

ಅಮೇರಿಕಾದಿಂದಲೇ ಪತ್ರ ಬರೆದಿದ್ದರು.!

ರೈತರು ಸಂಯಮ ಕಳೆದುಕೊಳ್ಳದೆ ಶಾಂತಿಯುತವಾಗಿ ಹೋರಾಟ ಮಾಡಬೇಕೆಂದು ಕೋರಿ ಅಮೇರಿಕಾದಿಂದಲೇ ಅಂಬರೀಶ್ ಪತ್ರ ಬರೆದಿದ್ದರು.

English summary
Mandya witnessed a unique protest today, where protesters were pleading, ''Ambareesh, where ever you are please come to Mandya'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada