»   » ಅಮೂಲ್ಯ ಜೊತೆ ಗಣೇಶ್ ಮತ್ತೆ ಚೆಲುವಿನ ಚಿತ್ತಾರ

ಅಮೂಲ್ಯ ಜೊತೆ ಗಣೇಶ್ ಮತ್ತೆ ಚೆಲುವಿನ ಚಿತ್ತಾರ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಚಿಲಿಪಿಲಿ ಬೆಡಗಿ ಅಮೂಲ್ಯ ತೆರೆಯ ಮೇಲೆ ಮತ್ತೊಮ್ಮೆ ಚೆಲುವಿನ ಚಿತ್ತಾರ ಬಿಡಿಸಲಿದ್ದಾರೆ. ಈ ಜೋಡಿಯನ್ನು ಮತ್ತೊಮ್ಮೆ ಒಂದು ಮಾಡುತ್ತಿರುವುದು ನಿರ್ಮಾಪಕ ಕೆಎ ಸುರೇಶ್ ಹಾಗೂ ನಿರ್ದೇಶಕ ಮಂಜು ಸ್ವರಾಜ್.

ಇದೇ ಆಗಸ್ಟ್ ನಲ್ಲಿ ಗಣೇಶ್ ಮತ್ತು ಅಮೂಲ್ಯ ಜೋಡಿಯ ಚಿತ್ರ ಸೆಟ್ಟೇರುತ್ತಿದೆ. 'ಮನಸಾಲಜಿ' ಚಿತ್ರದ ಬಳಿಕ ಅಮೂಲ್ಯ ಚಿತ್ರರಂಗಕ್ಕೆ ವಿದಾಯ ಘೋಷಿಸಿದ್ದರು. ಚಿತ್ರರಂಗದ ಸಹವಾಸ ಸಾಕಪ್ಪ ಎಂದು ಅವರು ದೂರ ಸರಿದಿದ್ದರು. ಈಗ ಮತ್ತೊಮ್ಮೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ ಎನ್ನುತ್ತವೆ ಗಾಂಧಿನಗರ ಮೂಲಗಳು.

ಕಲಾ ಸಾಮ್ರಾಟ್ ಬಿರುದಾಂಕಿತ ಎಸ್ ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ' (2007) ಚಿತ್ರ ಸೂಪರ್ ಹಿಟ್ ಆಗಿತ್ತು. ಅದಾಗಿ ಐದು ವರ್ಷಗಳ ಬಳಿಕ ಮತ್ತೆ ಗಣೇಶ್ ಗೆ ಜೋಡಿಯಾಗುತ್ತಿದ್ದಾರೆ ಅಮೂಲ್ಯ. ಈ ಚಿತ್ರಕ್ಕಾಗಿ ಗಣೇಶ್ ತಮ್ಮ ದೇಹದ ತೂಕವನ್ನು ಐದು ಕಿ.ಲೋಗಳಷ್ಟು ಇಳಿಸಲಿದ್ದಾರೆ ಎಂಬ ಸುದ್ದಿಯೂ ಇದೆ.

'ಮನಸಾಲಜಿ' ಚಿತ್ರ ತೋಪಾದ ಬಳಿಕವೂ ಅಮೂಲ್ಯ ಅವರಿಗೆ ಹಲವಾರು ಆಫರ್‌ಗಳು ಬಂದಿದ್ದವು. ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಶೈಲೂ', ಶೈಲೇಂದ್ರ ಬಾಬು ಅವರ 'ಆಟ', ಯೋಗರಾಜ್ ಭಟ್‌ ಅವರ ಚಿತ್ರಕ್ಕೂ ಆಫರ್‌ಗಳು ಬಂದಿದ್ದವು. ಆದರೆ ಓದಿನ ಕಡೆಗೆ ಅಮೂಲ್ಯ ಹೆಚ್ಚು ಗಮನಹರಿಸಿರುವ ಕಾರಣ ಆಕೆ ಬಂದ ಅವಕಾಶಗಳನ್ನೆಲ್ಲಾ ಬೇಡ ಎಂದಿದ್ದರು.

"ಚಿತ್ರರಂಗದಲ್ಲಿ ನೆಮ್ಮದಿ ಇಲ್ಲ. ಅಮೂಲ್ಯ ಓದ ಬೇಕು ಎಂದು ನಿರ್ಧರಿಸಿದ್ದಾರೆ. ಆಕೆಯ ನಿರ್ಧಾರಕ್ಕೆ ನಮ್ಮ ಕುಟುಂಬದ ಬೆಂಬಲ ಇದ್ದೇ ಇದೆ" ಎಂದಿದ್ದರು ಅಮೂಲ್ಯ ಸಹೋದರ ದೀಪಕ್. ಅಮೂಲ್ಯ ಅವರು ಎಂದೂ ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಕೊಂಡಿರಲಿಲ್ಲ. ಕಾಲೇಜಿಗೆ ರಜೆ ಇದ್ದಾಗ ಮಾತ್ರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು. ಹಾಲಿಡೇ ಹೀರೋಯಿನ್ ಎನ್ನಿಸಿಕೊಂಡಿದ್ದರು.

ಚಿತ್ರ ನಿರ್ದೇಶಕ ರತ್ನಜ ಅವರೊಂದಿಗಿನ ಚುಂಬನ ವಿವಾದ ಆಕೆಯ ಮನಸ್ಸಿಗೆ ತೀವ್ರ ಘಾಸಿ ಮಾಡಿತ್ತು. ಆ ಆಘಾತದಿಂದ ಅಮೂಲ್ಯ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಆಗ ಮತ್ತೊಂದು ವಿವಾದ ಅಮೂಲ್ಯ ಮೇಲೆ ಬಂದೆರಗಿತ್ತು. ತಮಿಳು ಚಿತ್ರರಂಗದ ನಿರ್ಮಾಪರೊಬ್ಬರ ಮಗನೊಂದಿಗೆ ಮದುವೆಯಾಗಿದೆ ಎಂಬುದು.

ಶೂಟಿಂಗ್ ಸಮಯದಲ್ಲೇ ಇಬ್ಬರೂ ಕದ್ದುಮುಚ್ಚಿ ಲವ್ ಮಾಡುತ್ತಿದ್ದರು. ಅವರಿಬ್ಬರ ವಿವಾಹಕ್ಕೆ ಹೀರೋ ತಂದೆ ವಿರೋಧಿಸಿದ್ದರು. ಇಬ್ಬರೂ ಪೊಲೀಸ್ ಠಾಣೆಗೆ ಹೋಗಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯನ್ನು ಕೆಲವು ತಮಿಳು ಮಾಧ್ಯಮಗಳು ಪ್ರಕಟಿಸಿದ್ದವು. ಸುದ್ದಿಯ ಜೊತೆಗೆ ಅಮೂಲ್ಯ ಫೋಟೋವನ್ನು ಪ್ರಕಟಿಸಲಾಗಿತ್ತು.

ಈ ಎಲ್ಲಾ ಕಿರಿಕಿರಿಗಳಿಂದ ಬೇಸತ್ತಿದ್ದ ಅಮೂಲ್ಯ, ಸಾಕಪ್ಪಾ ಸಾಕು ಚಿತ್ರರಂಗದ ಸಹವಾಸ ಎಂದಿದ್ದರು. ಸದ್ಯಕ್ಕೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಡಿಗ್ರಿ ಓದುತ್ತಿರುವ ಅಮೂಲ್ಯ ಈಗ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದಾರಾ? ಯಾವುದಕ್ಕೂ ಕೊಂಚ ಸಮಯ ಕಾದರೆ ಅಸಲಿ ವಿಷಯ ಹೊರಬೀಳಬಹುದು. (ಏಜೆನ್ಸೀಸ್)

English summary
If reports are to be believed, Amoolya, who made her debut in Ganesh starrer Cheluvina Chittara, is all set to pair up with the Golden Star, who is basking in the success of his recent movie Romeo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada