»   » 'ನನ್ Life ಅಲ್ಲಿ' ಸಾರಥಿ ರಾಮ್ ದೀಪ್ ಸಂದರ್ಶನ

'ನನ್ Life ಅಲ್ಲಿ' ಸಾರಥಿ ರಾಮ್ ದೀಪ್ ಸಂದರ್ಶನ

Posted By:
Subscribe to Filmibeat Kannada

ಇದು ಹೊಸಬರ ಹೊಸ ಪ್ರಯತ್ನ. ಈ ಚಿತ್ರದ ಟ್ರೇಲರ್ ಈಗಾಗಲೆ ಯೂಟ್ಯೂಬ್ ನಲ್ಲಿ ಹವಾಮಾನವನ್ನೇ ಬದಲಾಯಿಸಿದೆ. ಸಣ್ಣ ಬಜೆಟ್ ನ ಈ ಚಿತ್ರದ ಟ್ರೇಲರ್ ಎರಡು ಲಕ್ಷದ ಹತ್ತಿರ ಹತ್ತಿರ ಸಾಗುತ್ತದೆ ಎಂದರೆ ನೀವೇ ಊಹಿಸಿ. ಹೊಸತನಕ್ಕೆ, ವಿಭಿನ್ನತೆಗೆ ಹಾತೊರೆಯುತ್ತಿರುವ ಪ್ರೇಕ್ಷಕರಿಗೆ ಈ ಚಿತ್ರ ಖಂಡಿತ ನಿರಾಸೆಪಡಿಸಲ್ಲ ಎನ್ನುತ್ತದೆ ಚಿತ್ರತಂಡ.

ಚಿತ್ರವು ತಾಂತ್ರಿಕವಾಗಿಯೂ ಪ್ರೌಢವಾಗಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ, ಮನೋಹರ್ ಜೋಶಿ ಅವರ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣ ಅವರ ಸಂಕಲನ, ಮನೋಜ್ ಗಲಗಲಿ ಸಂಭಾಷಣೆ ಹಾಗೂ ಲೋಕೇಶ್ ಅವರ ಸಹಾಯಕ ನಿರ್ದೇಶನ ಕಮ್ ಚಿತ್ರಕಥೆ ಚಿತ್ರಕ್ಕಿದೆ. [ನಮ್ ಆಫೀಸಲ್ಲಿ 'ನನ್ Life ಅಲ್ಲಿ' ತಂಡ]

ನಿವೇದಿತಾ, ವೆಂಕಟೇಶ್ ಬಾಬು, ಅನಿಲ್ ಯುವರಾಜ್ ಮತ್ತು ಜೈಪಾಲ್ ಚಿತ್ರದ ನಿರ್ಮಾಪಕರು. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಹಾಗೂ ರಮೇಶ್ ಅರವಿಂದ್ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಚಿತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗೆ ಚಿತ್ರತಂಡ ಸಖತ್ ಖುಷಿಯಾಗಿದ್ದು ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇಷ್ಟಕ್ಕೂ ಈ ಚಿತ್ರದಲ್ಲಿ ಏನಿದೆ ಅಂತಹ ವಿಶೇಷಗಳು. ಚಿತ್ರದ ನಿರ್ದೇಶಕ ರಾಮ್ ದೀಪ್ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ.

'ನನ್ Life ಅಲ್ಲಿ' ಚಿತ್ರದ ಮೂಲಕ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು?

ಎರಡೂವರೆ ಗಂಟೆಗಳ ಸಮಯ ಹೇಗೆ ಮುಗಿಯಿತು ಎಂಬುದೇ ಗೊತ್ತಾಗಲ್ಲ. ಒಂದೇ ಒಂದು ಕ್ಷಣವೂ ಚಿತ್ರ ಬೋರು ಹೊಡೆಸಲ್ಲ. ಸಾಮಾನ್ಯವಾಗಿ ಚಿತ್ರ ಮುಗಿದ ಬಳಿಕ ಪ್ರೇಕ್ಷಕರ ಮುಖವೂ ಬಾಡಿರುತ್ತದೆ. ಆದರೆ ಈ ಚಿತ್ರ ನೋಡಿದ ಬಳಿಕ ಪ್ರೇಕ್ಷಕರ ಮುಖ ಅರಳುತ್ತದೆ ಎಂಬ ಭರವಸೆಯನ್ನಂತೂ ಕೊಡುತ್ತೇನೆ.

ಚಿತ್ರದ ಪ್ಲಸ್ ಪಾಯಿಂಟ್ ಗಳ ಬಗ್ಗೆ ಹೇಳಿ?

ತುಂಬಾನೆ ಇದೆ. ತಾಂತ್ರಿಕವಾಗಿ ಹೇಳಬೇಕು ಎಂದರೆ ಮನೋಹರ ಜೋಶಿ ಅವರ ಕ್ಯಾಮೆರಾ ವರ್ಕ್ಸ್ ಇರಬಹುದು, ಸಂತೋಷ್ ರಾಧಾಕೃಷ್ಣನ್ ಅವರ ವಿಎಫ್ಎಕ್ಸ್ ಸ್ಪೆಷಲ್ ಎಫೆಕ್ಟ್ಸ್ ಇರಬಹುದು, ಸಿಂಧು ಲೋಕನಾಥ್ ಕಾಣಿಸುವ ರೀತಿ ಆಗಿರಬಹುದು. ಅವರ ಈ ಹಿಂದಿನ ಚಿತ್ರಗಳ ಲುಕ್ ಇಲ್ಲಿರಲ್ಲ. ಅದಕ್ಕಿಂತಲೂ ಕ್ಯೂಟ್ ಆಗಿ ಕಾಣಿಸುತ್ತಾರೆ. ಮುಖ್ಯವಾಗಿ ಮನೋಜ್ ಗಲಗಲಿ ಅವರ ಸಂಭಾಷಣೆ. ಉತ್ತರ ಕರ್ನಾಟಕ ಭಾಷೆಯ ಸೊಗಡು ಅವರ ಸಂಭಾಷಣೆಯಲ್ಲಿ ಕೇಳಿ ಆನಂದಿಸಬಹುದು. ಅದನ್ನು ಕೇಳುವುದೇ ಚೆನ್ನ.

ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಅವನೀಶ್ ಲೋಕನಾಥ್ ಅವರ ಸಂಗೀತ. ಅವರ ಹಿನ್ನೆಲೆ ಸಂಗೀತದ ಕಾರಣ ಚಿತ್ರ ವೇಗವಾಗಿ ಸಾಗುತ್ತದೆ. ಕೇವಲ ಒಂದೂವರೆ ಗಂಟೆಯಲ್ಲೇ ಚಿತ್ರ ಮುಗಿದ ಅನುಭವ ಪ್ರೇಕ್ಷಕರಿಗೆ ಆಗುತ್ತದೆ. ಅಷ್ಟರ ಮಟ್ಟಿಗೆ ಅವರ ಸಂಗೀತ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಈ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಹಾಯ ಸಹಕಾರ ಎಷ್ಟರ ಮಟ್ಟಿಗಿದೆ?

ಪೂರ್ತಿ ಪ್ರಮಾಣದಲ್ಲಿ ಸಿಕ್ಕಿದೆ. ಬನಶಂಕರಿ ಕಾಂಪ್ಲೆಕ್ಸ್ ನ ಅವರ ಲಿರಿಕ್ಸ್ ಆಫೀಸ್ ನಲ್ಲೇ ಈ ಚಿತ್ರದ ಕಥೆ ಜನ್ಮ ತಾಳಿದ್ದು. ನಾವೆಲ್ಲರೂ ಒಟ್ಟಿಗೆ ಅಲ್ಲೇ ಕುಳಿತು ಕೆಲಸ ಮಾಡಿದ್ದೇವೆ. ಈಗಲೂ ನಿಮ್ಮ ಆಫೀಸಿಗೂ ಒಟ್ಟಿಗೆ ಅಲ್ಲಿಂದಲೇ ಹೊರಟಿದ್ದು.

4. ಹಾಡುಗಳ ಮೇಕಿಂಗ್ ಬಗ್ಗೆ ಏನು ಹೇಳ್ತೀರಾ?

ಈ ಚಿತ್ರದ ಕೊರಿಯೋಗ್ರಾಫರ್ ವಿದ್ಯಾಸಾಗರ್ ಬಗ್ಗೆ ಹೇಳಲೇಬೇಕು. ಈಗವರು 'ಕಾಫಿ ವಿತ್ ಮೈ ವೈಫ್' ಚಿತ್ರದ ನಿರ್ದೇಶಕರು. ನಮಗೂ ಅವರಿಗೂ ವೇವ್ ಲೆಂತ್ ತುಂಬಾ ಚೆನ್ನಾಗಿ ಮ್ಯಾಚ್ ಆಗುತ್ತಿತ್ತು. ಈ ಹಾಡು ಈ ರೀತಿ ಬೇಕು ಎಂದ ತಕ್ಷಣ ಅವರು ನಮಗೆ ಹೇಗೆ ಬೇಕೋ ಹಾಗೆ ಕೊರಿಯೋಗ್ರಫಿ ಮಾಡುತ್ತಿದ್ದರು. ಒಂದು ಹಾಡನ್ನು ಸ್ಪೆಷಲ್ ಎಫೆಕ್ಟ್ ನಲ್ಲಿ ಗ್ರೀನ್ ಮ್ಯಾಟ್ ಹಾಕಿಕೊಂಡು ಚಿತ್ರೀಕರಿಸಿದ್ದೇವೆ. ಈ ಹಾಡಿನಲ್ಲಿ ರಮೇಶ್ ಅರವಿಂದ್ ಹಾಗೂ ಶ್ರೀನಗರ ಕಿಟ್ಟಿ ಇದ್ದಾರೆ. ಅವರದು ಗೆಸ್ಟ್ ಅಫಿಯರೆನ್ಸ್.

5. ಚಿತ್ರಕ್ಕೆ ಆನ್ ಲೈನ್ ನಲ್ಲಿ ಇಷ್ಟು ಬೇಗ ಜನಪ್ರಿಯತೆ ಹೇಗೆ ಸಿಕ್ಕಿತು?

ಮೂಲತಃ ನಾವೆಲ್ಲ ಸಾಫ್ಟ್ ವೇರ್ ಇಂಜಿನಿಯರ್ಸ್ ಆಗಿದ್ದ ಕಾರಣ ಇದು ಸಾಧ್ಯವಾಯಿತು ಎಂದು ಭಾವಿಸುತ್ತೇನೆ. ನಮ್ಮ ಅಸೋಸಿಯೇಟ್ ಲೋಕಿ ಆಗಬಹುದು, ಅಜನೀಶ್ ಸೇರಿದಂತೆ ಎಲ್ಲಾ ತಂತ್ರಜ್ಞರ ಸಹಕಾರ ಇದೆ. ಆನ್ ಲೈನಲ್ಲಿ ಫೇಸ್ ಬುಕ್ ಒಂದೇ ಅಲ್ಲ. StumbleUpon, ಹೈಟೆಕ್, ಹೈಫೈ ಅಂತ ಇದೆ. ಈ ರೀತಿ ಸಾಕಷ್ಟು ಸಾಮಾಜಿಕ ತಾಣಗಳಿವೆ. ಇವೆಲ್ಲವನ್ನೂ ನಾವು ಸಮರ್ಥವಾಗಿ ಬಳಸಿಕೊಂಡೆವು. ಅತ್ಯಂತ ಕಡಿಮೆ ಸಮಯದಲ್ಲಿ ನಾವು ಗುರಿ ತಲುಪಿದೆವು.

ಒಂದು ದಿನ ಎಲ್ಲರೂ ಕುಳಿತು ಪ್ರತಿಯೊಬ್ಬರಿಗೂ ಯೂಟ್ಯೂಬ್ ಲಿಂಕ್ ಕಳುಹಿಸಿ, ಅದು ಹೇಗಿದೆ ತಮ್ಮ ಅಭಿಪ್ರಾಯ ತಿಳಿಸಲು ಕೋರಿದೆವು. ಹೊಸಬರು ಬಂದಾಗ ಎಲ್ಲರೂ ಆಕರ್ಷಿತರಾಗಲ್ಲ. ಇಲ್ಲ ಏನೋ ವಿವಾದ ಆಗಿರಬೇಕು. ಏನೂ ಇಲ್ಲದೆ ನಮ್ಮ ಚಿತ್ರ ಎಲ್ಲರ ಮೆಚ್ಚುಗೆ ಗಳಿಸಿತು. ಅದು ಎಲ್ಲರಿಗೂ ಇಷ್ಟವಾಯಿತು. ಅದು ಹಾಗೆ ಒಬ್ಬರಿಂದ ಮತ್ತೊಬ್ಬರಿಗೆ ರವಾನೆಯಾಗಿ ವೈರಲ್ ಆಯಿತು.

6. ತಮ್ಮ ಚಿತ್ರಕ್ಕೆ ಮೊಬೈಲ್ ತಂತ್ರಜ್ಞಾನವನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದ್ದೀರಿ?

ನಾವು ಯಾವುದೇ ಹೊಸ ಆಪ್ ಕ್ರಿಯೇಟ್ ಮಾಡಲಿಲ್ಲ. ಈಗಿರುವ WhatsApp ನಂತಹ ಆಪ್ ಗಳನ್ನು ಬಳಸಿಕೊಂಡಿದ್ದೇವೆ. ನಮ್ಮ ಪರಿಚಿತರಿಗೆ ಮೆಸೇಜ್ ಕಳುಹಿಸಿದ್ದೇವೆ. ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ ಯುಎಸ್, ಸೌದಿ ಅರೇಬಿಯಾ, ಆಸ್ಟ್ರೇಲಿಯಾದಿಂದಲೂ ನಮಗೆ ಸಾಕಷ್ಟು ಮೆಚ್ಚುಗೆ ಮಹಾಪೂರವೇ ಹರಿದುಬಂತು. ಇನ್ನೂ ಗ್ರಾಮೀಣ ಪ್ರದೇಶಗಳ ಕಡೆಗೆ ಅಷ್ಟಾಗಿ ಗಮನಹರಿಸಿಲ್ಲ.

7. ಚಿತ್ರ ಯಾವ ಬಿಡುಗಡೆ ಮಾಡುತ್ತಿದ್ದೀರಿ?

ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೀವಿ. ಆದರೆ ಡೇಟ್ ಇನ್ನೂ ಪಕ್ಕಾ ಆಗಿಲ್ಲ. ಬಹುಶಃ ಸೆಪ್ಟೆಂಬರ್ 19ಕ್ಕೆ ಬಿಡುಗಡೆ ಮಾಡಬೇಕೆಂದಿದ್ದೇವೆ.

8. ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂದಿದ್ದೀರಾ?

ನಲವತ್ತಕ್ಕಿಂತಲೂ ಹೆಚ್ಚಿಗೆ ಬೇಡ ಎಂದುಕೊಂಡಿದ್ದೇವೆ. ಅದರ ಮೇಲೆ ನಾವು ಹೋಗುವುದೂ ಇಲ್ಲ. ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳೇ ನಮಗೆ ಹೆಚ್ಚಿನ ಬಲ. ಸಾಮಾನ್ಯವಾಗಿ ಕನ್ನಡ ಚಿತ್ರಗಳಿಗೆ ಬೆಳಗಿನ ಶೋ ಕೊಡುತ್ತಾರೆ. ಆ ಸಮಯದಲ್ಲಿ ಯಾರೂ ಬರುವುದೂ ಇಲ್ಲ. ಈ ಸಮಯದಲ್ಲೇ ಬಿಡುಗಡೆ ಮಾಡಿ. ಈ ಡೇಟ್ ನಲ್ಲೇ ರಿಲೀಸ್ ಮಾಡಿ ಎಂದು ಸ್ವತಃ ಮಲ್ಟಿಫ್ಲೆಕ್ಸ್ ನವರೇ ನಮಗೆ ಸಲಹೆ ನೀಡಿದರು.

9. ಬೆಂಗಳೂರಿನ ಹೊರಗೆ ಎಲ್ಲೆಲ್ಲಿ ಚಿತ್ರ ತೆರೆಕಾಣುತ್ತಿದೆ?

ಮೈಸೂರು, ಮಂಡ್ಯ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ ಧಾರಾವಾಡ, ಗುಲ್ಬರ್ಗ, ಚಿತ್ರದುರ್ಗ, ಭದ್ರಾವತಿ, ಬಿಜಾಪುರ, ಹಾಸನ, ಬಾಗಲಕೋಟೆ ಎಲ್ಲಾ ಕಡೆಗೂ ಬಿಡುಗಡೆಯಾಗುತ್ತಿದೆ.

10. ಚಿತ್ರೀಕರಣ ಕರ್ನಾಟಕದ ಯಾವ ತಾಣಗಳಲ್ಲಿ ನಡೆಯಿತು?

ಉಡುಪಿ, ಕನಕಪುರ, ಸಕಲೇಶಪುರದ ಹತ್ತಿರ ಅಂಬಳ ಎಂಬ ಸ್ಥಳವಿದೆ. ಅಲ್ಲಿಂದ ಒಂದೈದು ಕಿ.ಮೀ ದೂರ. ಅಲ್ಲಿಗೆ ಯಾವುದೇ ರೀತಿಯ ವಾಹನ ಸೌಲಭ್ಯವಿಲ್ಲ. ಕಾಲ್ನಡಿಗೆಯಲ್ಲೇ ಹೋಗಿ ಜಿನು ಜಿನುಗೋ ಮಳೆಯಯಲಿ ಎಂಬ ಹಾಡನ್ನು ಚಿತ್ರೀರಿಸಿದ್ದೇವೆ. ಕ್ಯಾಮೆರಾ, ಜಿಮ್ಮಿ ಜಿಪ್ ಎಲ್ಲವನ್ನೂ ನಾವೇ ಹೊತ್ತುಕೊಂಡು ಹೋಗಿ ಚಿತ್ರೀಕರಿಸಿದ್ದೇವೆ. ನಿಜಕ್ಕೂ ಅದೊಂದು ವಂಡಲ್ ಫುಲ್ ಎಕ್ಸ್ ಪೀರಿಯನ್ಸ್.

11. ಶ್ರೀನಗರ ಕಿಟ್ಟಿ ಹಾಗೂ ರಮೇಶ್ ಅರವಿಂದ್ ಚಿತ್ರದಲ್ಲಿದ್ದಾರಲ್ಲಾ?

ನಮ್ಮಂತಹ ಹೊಸಬರಿಗೆ ಬೆನ್ನುತಟ್ಟುವ ಸಲುವಾಗಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಕೇವಲ ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ.

12. ಸಾಫ್ಟ್ ವೇರ್ ವೃತ್ತಿ ಬಿಟ್ಟು ಬಣ್ಣದ ಪ್ರಪಂಚಕ್ಕೆ ಅಡಿಯಿಟ್ಟಿದ್ದೀರಾ ನಿಮ್ಮ ಆಯ್ಕೆ ಸರಿ ಅನ್ನಿಸುತ್ತಿದೆಯೇ?

ಪ್ರಶ್ನೆ ತುಂಬಾ ಇಂಟರೆಸ್ಟಿಂಗ್ ಆಗಿದೆ. ಆದರೆ ಉತ್ತರ ಹೇಳುವುದು ತುಂಬಾ ಕಷ್ಟ. ಅಲ್ಲಿದ್ದಾಗ ಅಲ್ಲಿ ಚೆನ್ನಾಗಿ ಇದ್ದೇ ಇರುತ್ತದೆ. ಅಲ್ಲಿದ್ದಾಗ ಆ ಕೆಲಸವನ್ನು ನಾನು ಎಂಜಾಯ್ ಮಾಡುತ್ತಿದ್ದೆ. ಈಗ ಈ ಕೆಲಸವನ್ನು ಇಷ್ಟಪಡುತ್ತಿದ್ದೇನೆ. ಎಂಜಾನ್ ಮಾಡಕ್ಕೆ ಆಗುತ್ತದೆ ಎಂದಾಗ ಮಾಡಬೇಕು. ಆಗಲ್ಲ ಎಂದಾಗ ಬೇರೆ ಏನನ್ನಾದರೂ ಮಾಡಲೇಬೇಕು. ಆ ಕೆಲಸ ಒಂದೇ ತರಹ ಅನ್ನಿಸುತ್ತಿತ್ತು. ಹಾಗಾಗಿ ಆ ಕೆಲಸ ಬಿಟ್ಟೆ. ಬದಲಾಣೆ ಬೇಕು ಅನ್ನಿಸುತ್ತಿತ್ತು. ಇದು ಫ್ಯಾಷನ್ ಅದು ಪ್ರೊಫೆಷನ್.

ಎಂಟು ವರ್ಷಗಳ ಕಾಲ ಆ ವೃತ್ತಿ ನನ್ನನ್ನು ಚೆನ್ನಾಗಿಯೇ ತಿಂದು ಬಿಡ್ತು. ಈ ವೃತ್ತಿಯೂ ಮೂರು ವರ್ಷ ತಗೊಂಡಿದೆ. ಈ ಚಿತ್ರದ ಕಥೆ ನನ್ನ ಲೈಫ್ ಗೆ ತುಂಬಾ ಹತ್ತಿರವಾಗಿದೆ. ನನ್ನ ಕಾಲೇಜ್ ಡೇಸ್ ನ ಒಂದು ಎಳೆಯನ್ನು ತೆಗೆದುಕೊಂಡು ಇನ್ನೊಂದು ಕೋನದಲ್ಲಿ ಕಥೆಯನ್ನು ಹೆಣೆದಿದ್ದೇವೆ.

13. ವಿದೇಶಗಳಲ್ಲೂ ಚಿತ್ರ ಬಿಡುಗಡೆ ಮಾಡುತ್ತಿದ್ದೀರಾ?

ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಬೇಕು ಎಂಬ ಆಲೋಚನೆ ಇದೆ. ಸಿಂಗಲ್ ಶಾಟ್ ನಲ್ಲಿ ಇಡೀ ಜಗತ್ತಿಗೆ ತಮ್ಮ ಸಿನಿಮಾ ತೋರಿಸಬೇಕು ಎಂದು ಪ್ಲಾನ್ ಮಾಡಿದ್ದೇವೆ. ಯುಎಸ್, ಸಿಂಗಪುರ, ಆಸ್ಟ್ರೇಲಿಯಾ, ಅರಬ್ ರಾಷ್ಟ್ರಗಳು ಹೀಗೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ.

English summary
An interview with 'Nan Life Alli' director Ramdeep, who has created new waves in Sandalwood through his refreshingly new cinema on the block, cutting apart conventional story telling methods in KFI. Anish Tejeshwar and Sindhu Loknath are in the lead.
Please Wait while comments are loading...