»   » ನಟ ಜಗ್ಗೇಶ್ ಗೆ ವಿಷ್ಣು ಅಭಿಮಾನಿ ಬರೆದಿರುವ ಬಹಿರಂಗ ಪತ್ರದಲ್ಲಿ ಏನಿದೆ?

ನಟ ಜಗ್ಗೇಶ್ ಗೆ ವಿಷ್ಣು ಅಭಿಮಾನಿ ಬರೆದಿರುವ ಬಹಿರಂಗ ಪತ್ರದಲ್ಲಿ ಏನಿದೆ?

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ರವರ ಹೆಸರಿನಲ್ಲಿ 'ನಾಗರಹಾವು' ಚಿತ್ರತಂಡ ಪ್ರಚಾರ ಮಾಡುತ್ತಿರುವ ಕುರಿತಾಗಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟ ಜಗ್ಗೇಶ್ ಒಂದು ಟ್ವೀಟ್ ಮಾಡಿದ್ದರು.

  ''5 ವರ್ಷ ಹಳೇ ಸಿನಿಮಾ ಪ್ರಚಾರಕ್ಕೆ ವಿಷ್ಣುವರ್ಧನ್ ರವರನ್ನು ಬಳಸಿಕೊಳ್ಳುವ ಬದಲು, ಅವರ ಸ್ಮಾರಕ ಇಲ್ಲೇ ಉಳಿಸುವುದಕ್ಕೆ ಹೋರಾಟ ಮಾಡಬಹುದಲ್ಲವೇ'' ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ನಟ ಜಗ್ಗೇಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. [ವಿಷ್ಣುವರ್ಧನ್ ಹೆಸರಲ್ಲಿ ಪ್ರಚಾರ.! ನಟ ಜಗ್ಗೇಶ್ ಹೇಳಿದ ಮಾತೇನು.?]

  ಕೆಲವರಿಗೆ ಜಗ್ಗೇಶ್ ಹೇಳಿದ ಮಾತಿನಲ್ಲಿ ಅರ್ಥ ಇದೆ ಅಂತ ಅನಿಸಿದ್ರೂ, ವಿಷ್ಣು ಅಭಿಮಾನಿಗಳು ಮಾತ್ರ 'ನವರಸ ನಾಯಕ'ನ ಮೇಲೆ ಕೋಪಗೊಂಡಿದ್ದಾರೆ. ಅದರಲ್ಲೂ ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ, ನಟ ಜಗ್ಗೇಶ್ ರವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ.

  ''ಮಾನ್ಯ ಜಗ್ಗೇಶ್ ಅವರು ಒಂದು ಟ್ವೀಟ್ ಮಾಡಿದ್ದಾರೆ. ''ತೆಲುಗು ಬಿಡ್ಡ ದುಡ್ಡು ಮಾಡೋಕೆ ವಿಷ್ಣು ಹೆಸರನ್ನು ಬಳಸಿಕೊಳ್ಳುವುದು ಬಿಟ್ಟು, ಸ್ಮಾರಕಕ್ಕೆ ಬೆಂಬಲಿ ಕೊಡಲಿ'', ಈ ರೀತಿ ಟ್ವೀಟ್ ಮಾಡಿರುವುದು 'ನಾಗರಹಾವು' ಚಿತ್ರದ ನಿರ್ಮಾಪಕರ ಬಗ್ಗೆ ಅನ್ನುವುದು ಗಮನಾರ್ಹ.

  ಮಾನ್ಯ ಜಗ್ಗೇಶ್ ಅವರೇ,
  ವಿಷ್ಣು ಸ್ಮಾರಕ ನಿಮಗೆ ನೆನಪಾಗಬೇಕಾದರೆ ಒಬ್ಬ ತೆಲುಗು ನಿರ್ಮಾಪಕನ ನೆಪ ಬೇಕಾಗಿದ್ದು ಮಾತ್ರ ದುರಂತ. ಧನ್ಯೋಸ್ಮಿ ಸ್ವಾಮಿ. ಕನಿಷ್ಠ ಆ ನೆಪದಲ್ಲಾದರೂ ನಿಮಗೆ ವಿಷ್ಣು ನೆನಪಾದರಲ್ಲವಾ ಅದೇ ಕನ್ನಡಿಗರ ಮತ್ತು ವಿಷ್ಣು ಅಭಿಮಾನಿಗಳ ಪುಣ್ಯ.

  ಅಲ್ರೀ, 'ನಾಗರಹಾವು' ಚಿತ್ರವನ್ನು ವಿಷ್ಣು ಅಭಿಮಾನಿಗಳಿಗೆ 201ನೇ ಚಿತ್ರವನ್ನಾಗಿ ಕೊಡುತ್ತಿರುವ ಆ ತೆಲುಗು ಬಿಡ್ಡ ಮತ್ತೆ ಅಭಿಮಾನಿಗಳಿಗೆ ವಿಷ್ಣು ದರ್ಶನ್ ಮಾಡಿಸಿ ಅಸಂಖ್ಯಾತ ಅಭಿಮಾನಿಗಳ ಮೈಮನಗಳಲ್ಲಿ ರೋಮಾಂಚನ ತಂದಿದ್ದಾರೆ. ಆ ಚಿತ್ರದ ಮೂಲಕ ಅಕಾಲಿಕವಾಗಿ ದಾದಾ ಅಗಲಿದೆ ನೋವನ್ನು ವಿಷ್ಣು ಅಭಿಮಾನಿಗಳು ಮರೆಯಲೆತ್ನಿಸುತ್ತಿದ್ದಾರೆ.

  ಈ ನಿರ್ಮಾಪಕರು, ಆದಷ್ಟು ಸೊಗಸಾಗಿ ವಿಷ್ಣು ಅವರನ್ನು ಮತ್ತೆ ಮನೆ ಮನಗಳಿಗೆ ತಲುಪಿಸುತ್ತಿದ್ದಾರೆ ಗೊತ್ತಾ ನಿಮಗೆ? ['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]

  ಅವರ ಬಗ್ಗೆ ಬಿಡಿ, ನೀವ್ ಹೇಳಿ, ನಿಮಗೆ ಸ್ಮಾರಕದ ಬಗ್ಗೆ ಇವತ್ತು ನೆನಪಾಯಿತಾ? ಇಷ್ಟು ದಿನ ಸ್ಮಾರಕ ನಿಮಗೆ ನೆನಪಾಗಲಿಲ್ಲವೇ.? ನಿಮ್ಮದೇ ಸರ್ಕಾರ ನೀಡಿದ್ದ ಜಮೀನದು. ಆತುರಾತುರವಾಗಿ ಪರಾಮರ್ಶೆ ಮಾಡದೆ ಆ ಜಮೀನಿನಲ್ಲಿ ಸಂಸ್ಕಾರ ಮಾಡಿದ್ದರಿಂದಲೇ ಇವತ್ತು ಸ್ಮಾರಕ ವಿಳಂಬವಾಗುತ್ತಿದೆ ಎಂಬ ತಿಳುವಳಿಕೆ ನಿಮ್ಮ ತರಹದ ರಾಜಕಾರಣಿಗಳಿಗೆ ಇಲ್ಲದಿರುವುದು ಆಶ್ಚರ್ಯವೇನೂ ಇಲ್ಲ ಬಿಡಿ. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

  ವಿಷ್ಣು ಅಗಲಿ ಆರೂವರೆ ವರ್ಷಗಳಾದರೂ, ನಿಮಗೆ ಮತ್ತು ನಿಮ್ಮ ಚಿತ್ರರಂಗಕ್ಕೆ ಅವರ ನೆನಪೇ ಇಲ್ಲ. ಒಂದೇ ಒಂದು ಧ್ವನಿ ಸ್ಮಾರಕದ ಪರವಾಗಿ ಕೇಳಿ ಬರುತ್ತಿಲ್ಲ.! ಇದನ್ನೆಲ್ಲಾ ಮರೆತಿರುವ ನೀವು 'ನಾಗರಹಾವು' ಚಿತ್ರತಂಡ, ವಿಷ್ಣು ಅವರನ್ನು ಮನೆ ಮನಗಳಿಗೆ ಮತ್ತೆ ತಲುಪಿಸುತ್ತಿರುವ ಸಂಕಟ ತಾಳಿಕೊಳ್ಳಲಾರದೆ ಅವರನ್ನು ಗುರಿಯಾಗಿಸಿಕೊಂಡು ಮಾತನ್ನಾಡಿರುವುದರ ಹಿಂದಿನ ಮರ್ಮ ನಮಗೆ ತಿಳಿಯದ್ದೇನಲ್ಲ ಬಿಡಿ.!

  ರೀಮೇಕುಗಳಲ್ಲಿ ಅಭಿನಯಿಸುವಾಗ, ಆಮದು ಬೆಡಗಿಯರ ಜೊತೆ ಮೈ ಕುಣಿಸುವಾಗ ನಿಮಗೆ ತೆಲುಗು ಬಿಡ್ಡರ ಬಗ್ಗೆ ಆಕ್ಷೇಪಣೆ ಇರಲಿಲ್ಲ ಅಲ್ವಾ.! ಈಗ ತೆಲುಗು ಬಿಡ್ಡ, ವಿಷ್ಣು ಅವರನ್ನು ಪರಭಾಷೆಗಳಿಗೂ ಸೆಡ್ಡು ಹೊಡೆಯುವ ತರ ಹೊರ ತರುತ್ತಿದ್ದರೆ ಮಾತ್ರ ಆಕ್ಷೇಪಿಸ್ತಿದ್ದೀರಿ ಯಾಕೆ.? ಕಿಬ್ಬೊಟ್ಟೆ ಸಂಕಟವೇ ಸ್ವಾಮಿ.! ಬದುಕಿದ್ದಾಗ ಅವರಿಗೆ ಗಾಂಧಿನಗರ ಕೊಟ್ಟ ನೋವು ಸಾಕು. ಈಗಲಾದರೂ ನೆಮ್ಮದಿಯಾಗಿರಲಿ ಬಿಡಿ.!

  ಪ್ರಿಯ ಜಗ್ಗೇಶ್ ಅವರೇ ನಿಮಗೆ ಕನಿಷ್ಠ ಗೌರವಾದರೂ ವಿಷ್ಣು ಮೇಲೆ ಇದ್ದರೆ ಕೂಡಲೆ ಚಿತ್ರರಂಗದವರ ಸಮೇತ ಸ್ಮಾರಕದ ಹೋರಾಟಕ್ಕೆ ಅಭಿಮಾನಿಗಳ ಜೊತೆ ಕೈಜೋಡಿಸಿ. ಇಲ್ಲವಾದರೆ ಸುಮ್ಮನಿರಿ. ಆದರೆ ವಿಷ್ಣು ಹೆಸರಲ್ಲಿ ಆಗುತ್ತಿರುವ ಕೆಲಸಗಳಿಗೆ ಕಲ್ಲು ಹಾಕಬೇಡಿ.''

  ನಿಮ್ಮ,
  ವೀರಕಪುತ್ರ ಶ್ರೀನಿವಾಸ
  ಡಾ.ವಿಷ್ಣು ಸೇನಾ ಸಮಿತಿ (ರಿ)

  ವೀಕರಪುತ್ರ ಶ್ರೀನಿವಾಸ ಬರೆದಿರುವ ಪತ್ರಕ್ಕೆ, ನಟ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಅದು ಮತ್ತೊಂದು ಟ್ವೀಟ್ ಮೂಲಕವೇ...

  ಅದೇನೇ ಇರಲಿ, ಏಟು-ಪ್ರತಿ ಏಟು-ತಿರುಗೇಟು ಅಂತ ವಾದ-ವಿವಾದಕ್ಕೆ ನಾಂದಿ ಹಾಡದೆ, ಒಬ್ಬರ ಮೇಲೊಬ್ಬರು ಕೆಸರೆರಚದೆ, ಎಲ್ಲರೂ ಕೈ ಜೋಡಿಸಿದರೆ, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಶುಭ ಘಳಿಗೆ ಕೂಡಿಬರುವುದರಲ್ಲಿ ಸಂದೇಹವೇ ಇಲ್ಲ. ಏನಂತೀರಿ...

  English summary
  Veerakaputra Srinivasa from Dr.Vishnu Sena Samithi, has written open letter to Kannada Actor Jaggesh based on his tweet regarding Kannada Celebrities taking selfie with Dr.Vishnuvardhan's 3D Stand to promote 'Naagarahaavu' Film.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more