ಉಪೇಂದ್ರ ನಟನೆಯ 'ಕಬ್ಜ' ಚಿತ್ರತಂಡ ಸೇರಿದ ಕನ್ನಡದ ಯುವ ನಟ
ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಕಬ್ಜ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಏಳು ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
Recommended Video
ಉಪೇಂದ್ರ ನಟನೆಯ ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೆ ಬಹಿರಂಗವಾಗಿತ್ತು. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದೀಪ್, ಭಾರ್ಗವ್ ಬಕ್ಷಿ ಎಂಬ ಅಂಡರ್‌ವರ್ಲ್ಡ್ ಡಾನ್ ಆಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದೀಗ, ಕನ್ನಡದ ಯುವನಟ ಕಬ್ಜ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಯಾರದು? ಮುಂದೆ ಓದಿ...

ಕಬ್ಜ ಚಿತ್ರದಲ್ಲಿ ಅನೂಪ್ ರೇವಣ್ಣ
ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಿರ್ದೇಶಕ ಆರ್ ಚಂದ್ರು ಕಬ್ಜ ಚಿತ್ರದ ಮತ್ತೊಂದು ಪಾತ್ರವನ್ನು ಬಹಿರಂಗಪಡಿಸಿದ್ದಾರೆ. ಕಬ್ಜ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ರಾಜಕಾರಣಿ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ನಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅನೂಪ್ ರೇವಣ್ಣ ಇಂದು (ಫೆಬ್ರವರಿ 8) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಸ್ಟಾರ್ ಇಮೇಜ್ ನೀಡಲಿದೆ ಅನೂಪ್ ಪಾತ್ರ
ಅನೂಪ್ ರೇವಣ್ಣನ ಪಾತ್ರದ ಹೆಸರು ಹೇಳದ ಆರ್ ಚಂದ್ರು ''ಇದೊಂದು ಪ್ರಧಾನ ಪಾತ್ರ, ಈ ಸಿನಿಮಾ ಆದ್ಮೇಲೆ ಇದೇ ಹೆಸರಿನಲ್ಲಿ ಹೊಸ ಸಿನಿಮಾ ಆದರೂ ಅಚ್ಚರಿ ಇಲ್ಲ. ಕಬ್ಜ ಚಿತ್ರದಲ್ಲಿ ಅನೂಪ್ ಮಾಡಲಿರುವ ಪಾತ್ರ ಅವರ ವೃತ್ತಿ ಜೀವನದಲ್ಲಿ ಇಮೇಜ್ ಹೆಚ್ಚಿಸಲಿದೆ'' ಎಂದು ಭರವಸೆ ನೀಡಿದ್ದಾರೆ.

ಹಲವು ಸ್ಟಾರ್ ನಟರ ಇರಲಿದ್ದಾರೆ
''ಕಬ್ಜ ಚಿತ್ರದಲ್ಲಿ ಹಲವು ಕಲಾವಿದರು ನಟಿಸಲಿದ್ದಾರೆ. ಒಬ್ಬೊಬ್ಬರ ಹೆಸರನ್ನ ಬಹಿರಂಗಪಡಿಸುತ್ತೇನೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪರಭಾಷೆಯ ಸ್ಟಾರ್ಸ್ ಇರ್ತಾರೆ. ಸದ್ಯದಲ್ಲೇ ನಾಯಕಿ ಯಾರೆಂದು ಘೋಷಣೆ ಮಾಡಲಿದ್ದೇವೆ'' ಎಂದು ಚಂದ್ರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಶೂಟಿಂಗ್ ಆರಂಭ
''ಫೆಬ್ರವರಿ 25 ರಂದು ಉಪೇಂದ್ರ ಅವರ ಕಬ್ಜ ಚಿತ್ರೀಕರಣ ಮತ್ತೆ ಶುರು ಮಾಡಲಿದ್ದಾರೆ. ಈಗಾಗಲೇ ಶೇಕಡಾ 45 ರಷ್ಟು ಶೂಟಿಂಗ್ ಆಗಿದೆ. ಸದ್ಯ ಬೆಂಗಳೂರಿನ ಮಿನರ್ವ್ ಮಿಲ್‌ನಲ್ಲಿ ಸೆಟ್ ಹಾಕಲಾಗಿದ್ದು, 40 ದಿನ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಆಮೇಲೆ ಝಾರ್ಖಂಡ್, ಪಾಂಡಿಚೇರಿ, ಮುಂಬೈನಲ್ಲಿ ಶೂಟಿಂಗ್ ಆಗಲಿದೆ'' ಎಂದು ಚಂದ್ರು ತಿಳಿಸಿದ್ದಾರೆ.


Click it and Unblock the Notifications











