For Quick Alerts
  ALLOW NOTIFICATIONS  
  For Daily Alerts

  ಮಕ್ಕಳ ಚಲನಚಿತ್ರೋತ್ಸವಕ್ಕೆ ಅರ್ಜುನ್ ಸರ್ಜಾ ಗೆಸ್ಟ್

  By Harshitha
  |

  ಓದು...ಓದು...ಅಂತ ಅಪ್ಪ ಅಮ್ಮನಿಂದ ಕೇಳಿ ಕೇಳಿ ಸಾಕಾಗಿದ್ದ ಮಕ್ಕಳಿಗೆ ಇಲ್ಲಿದೆ ಗುಡ್ ನ್ಯೂಸ್. ಓದಿನ ಜೊತೆಗೆ ಕೊಂಚ ಮೈಂಡ್ ರಿಲೀಫ್ ಮಾಡಿಕೊಳ್ಳಲಿ ಅಂತ ಮಕ್ಕಳಿಗಾಗೇ ಸರ್ಕಾರ ಈ ಬಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನ ಆಯೋಜಿಸ್ತಾಯಿದೆ.

  ಇದೇ ತಿಂಗಳ 14 ರಿಂದ 20ನೇ ತಾರೀಖಿನವರೆಗೆ ರಾಜ್ಯಾದ್ಯಂತ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ನಡೆಯಲಿದೆ. ಅಸಲಿಗೆ ಇಡೀ ಭಾರತದಲ್ಲೇ ಸರ್ಕಾರದ ವತಿಯಿಂದ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿರುವುದು ಇದೇ ಮೊದಲು..!

  ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನ ಅದ್ಧೂರಿಯಾಗಿ ಆಯೋಜಿಸೋಕೆ ನಿರ್ಧರಿಸಿರೋ ಕರ್ನಾಟಕ ಸರ್ಕಾರ ನವೆಂಬರ್ 13 ರಂದು ಅಂಬೇಡ್ಕರ್ ಭವನದಲ್ಲಿ ಅದ್ಧೂರಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವವನ್ನ ಉದ್ಘಾಟಿಸಿದ್ರೆ, ಮುಖ್ಯ ಅತಿಥಿಯಾಗಿ ಅರ್ಜುನ್ ಸರ್ಜಾ ಭಾಗವಹಿಸಲಿದ್ದಾರೆ ಅಂತ ವಾರ್ತಾ, ಮೂಲಸೌಕರ್ಯ ಅಭಿವೃಧಿ ಮತ್ತು ಹಜ್ ಸಚಿವ ರೋಷನ್ ಬೇಗ್ ತಿಳಿಸಿದ್ರು.

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಚಲನಚಿತ್ರೋತ್ಸವವನ್ನ ಏರ್ಪಡಿಸಲಾಗ್ತಿದೆ.

  ಭಾರತದ ಎರಡು ಚಿತ್ರಗಳು ಸೇರಿದಂತೆ ವಿವಿಧ ದೇಶಗಳ ಒಟ್ಟು 15 ಚಿತ್ರಗಳು ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಹಾಗಂತ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳೋ ಚಿತ್ರಗಳು ಮಕ್ಕಳಿಗೆ ಮತ್ತು ಮನರಂಜನೆಗಷ್ಟೇ ಸೀಮಿತವಾಗಿಲ್ಲ. ಮನರಂಜನೆಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಸಾಹಸ, ಬುದ್ಧಿ ವಿಕಸನ, ಲಿಂಗ ತಾರತಮ್ಯ ಮುಂತಾದ ವಿಷಯಗಳನ್ನೊಳಗೊಂಡಿರೋ ಒಟ್ಟು 15 ಚಿತ್ರಗಳನ್ನ ಆಯ್ಕೆ ಮಾಡಲಾಗಿದೆ.

  ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಆಯ್ಕೆಯಾಗಿರುವ ಬಹುಪಾಲು ಚಿತ್ರಗಳ ನಿರ್ದೇಶಕರು ಮಹಿಳೆಯರೇ..! ರಾಜ್ಯಾದ್ಯಂತ ಈ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ನಡೆಯಲಿರೋದ್ರಿಂದ ಈ ಬಾರಿ 30 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಸ್ಯಾಟೆಲೈಟ್ ಮೂಲಕವೇ ಪ್ರದರ್ಶನ ಮಾಡಲು ವ್ಯವಸ್ಥೆ ಮಾಡಿರುವುದು ಮತ್ತೊಂದು ವಿಶೇಷ.

  ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಬರೀ ಸಿಟಿ ಮಕ್ಕಳಿಗೆ ಮಾತ್ರವಲ್ಲ, ಗ್ರಾಮೀಣ ಮಕ್ಕಳಿಗೂ ತಲುಪಬೇಕು ಅನ್ನೋ ಕಾರಣಕ್ಕೆ 9 ಚಿತ್ರಗಳ ಡಿವಿಡಿ ರೈಟ್ಸ್ ನ ಸರ್ಕಾರ ಪಡೆದುಕೊಂಡಿದ್ಯಂತೆ.

  ಜಿಲ್ಲಾಧಿಕಾರಿಗಳನ್ನೊಳಗೊಂಡ ಸಮಿತಿಯ ಮೂಲಕ ಈ ಡಿವಿಡಿಗಳನ್ನು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಮತ್ತು ಬಾಲಭವನಕ್ಕೆ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಅಂತಾರೆ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್. ಹಾಗಾದ್ರೆ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರೋ ಚಿತ್ರಗಳು ಯಾವ್ಯಾವು..?

  6 ರಿಂದ 10 ವರ್ಷದ ಮಕ್ಕಳಿಗಾಗಿ ಪ್ರದರ್ಶಿತವಾಗಲಿರೋ ಚಿತ್ರಗಳು

  1. ಬ್ರೆಜಿಲ್ ದೇಶದ ರೊಸಾನೆ ಸ್ವರ್ತ್ ಮನ್ ನಿರ್ದೇಶನದ ಚೈನಾ

  2. ಮಂಗೋಲಿಯಾದ ಕೋರೋಲ್ ದೋರ್ಜ್ ನಿರ್ದೇಶನದ ಯಲೋ ಕೋಲ್ಟ್

  3. ಝೆಕ್ ರಿಪಬ್ಲಿಕ್‌ನ ವೆರಾ ಸಿಂವೊಕ ನಿರ್ದೇಶನದ ಪನಿ ಕ್ಲುಕಿ

  4. ಝೆಕ್ ರಿಪಬ್ಲಿಕ್‌ನ ಪೀಟರ್ ಔಕ್ರೋಪೆಕ್ ನಿರ್ದೇಶನದ ಬ್ಲೂ ಟೈಗರ್

  5. ಝೆಕ್ ರಿಪಬ್ಲಿಕ್‌ನ ಕರೆಲ್ ಝೆಮಾನ್ ನಿರ್ದೇಶನದ ಜರ್ನಿ ಆಫ್ ದಿ ಬಿಗಿನಿಂಗ್ ಆಫ್ ಟೈಮ್

  6. ಭಾರತದ ಶಿಲ್ಪಾ ರಾನಡೆ ನಿರ್ದೇಶನದ ಗೂಪಿ ಗವ್ವಯ್ಯ ಬಾಘ ಬಜ್ಜಯ್ಯ

  7. ಅಮೆರಿಕಾದ ಎಲೆನಾರ್ ಲಿಂಡೊ ನಿರ್ದೇಶನದ ಟಚಿಂಗ್ ವೈಲ್ಡ್ ಹಾರ್ಸಸ್

  8. ಭಾರತದ ಬತುಲ್ ಮುಕ್ತಿಯಾರ್ ನಿರ್ದೇಶನದ ಕಫಲ್

  9. ಭಾರತದ ಹಿರೇನ್ ಬೋರಾ ನಿರ್ದೇಶನದ ಖೋಬ್

  11 ರಿಂದ 16 ವರ್ಷದ ಮಕ್ಕಳಿಗಾಗಿ ಪ್ರದರ್ಶಿತವಾಗಲಿರೋ ಚಿತ್ರಗಳು

  1. ಚೈನಾದ ರಿಚರ್ಡ್ ಬೊವೆನ್ ನಿರ್ದೇಶನದ ಸಿಂಡ್ರೆಲ್ಲಾ ಮೂನ್

  2. ಇರಾನ್‌ನ ಮಾಜಿದ್ ಮಾಜಿದ್ ನಿರ್ದೇಶನದ ಚಿಲ್ಡ್ರನ್ ಆಫ್ ಹೆವೆನ್

  3. ಹಂಗೇರಿಯ ಝಾಲ್ಟ್ ಬರ್ನಾತ್ ನಿರ್ದೇಶನದ ಇನ್ ದ ನೇಮ್ ಆಫ್ ಶರ್ಲಾಕ್ ಹೋಮ್ಸ್

  4. ಸ್ವಿಟ್ಜರ್ ಲ್ಯಾಂಡ್ ನ ಟೋಬಿಯಾಸ್ ಇನೆಚೆನ್ ನಿರ್ದೇಶನದ ಕ್ಲಾರಾ ಅಂಡ್ ದಿ ಸೀಕ್ರೆಟ್ ಆಫ್ ದಿ ಬಿಯರ್ಸ್

  5. ಝೆಕ್ ರಿಪಬ್ಲಿಕ್‌ನ ಕರೆಲ್ ಝೆಮಾನ್ ನಿರ್ದೇಶನದ ಜರ್ನಿ ಆಫ್ ದಿ ಬಿಗಿನಿಂಗ್ ಆಫ್ ಟೈಮ್

  6. ಗ್ರೀನ್‌ಲ್ಯಾಂಡ್‌ನ ಮೈಕ್ ಮ್ಯಾಗಿಡ್ಸನ್ ನಿರ್ದೇಶನದ ಇನುಕ್

  7. ಭಾರತದ ಪೃಥ್ವಿ ಕೊಣನೂರ್ ನಿರ್ದೇಶನದ ಅಲೆಗಳು

  8. ಭಾರತದ ಹಿರೇನ್ ಬೋರಾ ನಿರ್ದೇಶನದ ಖೋಬ್ (ಫಿಲ್ಮಿಬೀಟ್ ಕನ್ನಡ)

  English summary
  Karnataka government is organising International Children's Film Festival in Karnataka. Chief Minister Siddaramaiah will inaugurate the film festival on November 13th and Kannada actor Arjun Sarja will grace the occasion. Children across 30 districts will get the chance to watch 17 films of India and abroad at a time through satellite telecast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X