ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಗೇಮ್' ಶುರು
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ತೆರೆಯ ಮೇಲೆ ಹೊಸ ಆಟ ಆಡಲು ರೆಡಿಯಾಗಿದ್ದಾರೆ. ಅವರ ಹೊಸ ಚಿತ್ರ 'ಗೇಮ್' ಸೋಮವಾರ (ಫೆ.16) ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಈ ಬಾರಿ 'ಗೇಮ್'ನ ರೂವಾರಿ ಎಎಂಆರ್ ರಮೇಶ್.
ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ 'ಗೇಮ್' ಚಿತ್ರದ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ಎಎಂಆರ್ ರಮೇಶ್ ಅವರು ಮಾತನಾಡುತ್ತಾ, ಇದೊಂದು ಮರ್ಡರ್ ಮಿಸ್ಟರಿ ಸಿನಿಮಾ. ನೈಜ ಘಟನೆಗಳ ಆಧಾರವಾಗಿ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ ಎಂದರು. [ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹೊಸ ಕನ್ನಡ ಚಿತ್ರ ಪ್ರಕಟ]

ಗೇಮ್ ಚಿತ್ರ ಬಿಡುಗಡೆಯಾಗುವವರೆಗೂ ತಮ್ಮ ಚಿತ್ರದ ಕಥೆ ಏನು ಎಂದು ತಾವು ಬಾಯ್ಬಿಡಲ್ಲ. ಎಲ್ಲರೂ ಚಿತ್ರಮಂದಿರಕ್ಕೆ ಬಂದ ಮೇಲಷ್ಟೇ ಕಥೆ ಏನೆಂದು ಗೊತ್ತಾಗುತ್ತದೆ. ಅಲ್ಲಿಯವರೆಗೂ ತಾವು ಚಿತ್ರದ ಕಥೆಯ ಗುಟ್ಟನ್ನು ಬಿಟ್ಟುಕೊಟ್ಟು ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಲ್ಲ ಎಂದರು.
ಗೇಮ್ ಚಿತ್ರೀಕರಣ ಮಾರ್ಚ್ ನಲ್ಲಿ ಆರಂಭವಾಗಲಿದ್ದು, ಮೂವತ್ತು ದಿನಗಳ ಶೆಡ್ಯೂಲ್ ನಲ್ಲಿ ಶೂಟಿಂಗ್ ಮುಗಿಸಿ ಜೂನ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಮಾಡಿದ್ದಾರೆ ಎಎಂಆರ್ ರಮೇಶ್.
ಸಂದೀಪ್ ಚೌಟ ಅವರ ಸಂಗೀತ ಇರುವ 'ಗೇಮ್' ಚಿತ್ರವು ಮರ್ಡರ್ ಮಿಸ್ಟರಿ ಕಥೆಯನ್ನು ಒಳಗೊಂಡಿದೆ. ಅರ್ಜುನ್ ಜೊತೆ ಶಾಮ್ ಮತ್ತೊಬ್ಬ ನಾಯಕರಾಗಿ ಕಾಣಿಸಲಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ಅಜೆಂಡಾ ಇರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದಂತಹ ಆಟ ಆಡುತ್ತಿರುತ್ತಾರೆ ಎಂಬ ಕಥಾವಸ್ತುವನ್ನಿಟ್ಟುಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ. (ಏಜೆನ್ಸೀಸ್)


Click it and Unblock the Notifications











