»   » ಅರ್ಜುನ್ ಸರ್ಜಾ ಆಕ್ಷನ್ ಕಟ್‍‌ನಲ್ಲಿ ಧ್ರುವ ಸರ್ಜಾ

ಅರ್ಜುನ್ ಸರ್ಜಾ ಆಕ್ಷನ್ ಕಟ್‍‌ನಲ್ಲಿ ಧ್ರುವ ಸರ್ಜಾ

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕನ್ನಡದಲ್ಲಿ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈಗಾಗಲೆ ಅವರು ಚಿತ್ರ ನಿರ್ಮಾಣ ಹಾಗೂ ನಿರ್ದೇಶದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲು ಹೊರಟಿರುವುದು ಇದೇ ಮೊದಲು.

ತಮ್ಮ ನಿರ್ದೇಶನದಲ್ಲಿ ಮೂಡಿಬರಲಿರುವ ಚೊಚ್ಚಲ ಕನ್ನಡ ಚಿತ್ರಕ್ಕೆ ಹೀರೋ ಧ್ರುವ ಸರ್ಜಾ. ಈಗಾಗಲೆ 'ಅದ್ದೂರಿ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಧ್ರುವ ಅವರ ಅಭಿನಯ ಅರ್ಜುನ್ ಸರ್ಜಾ ಅವರ ಮನಸನ್ನೂ ಗೆದ್ದಿದ್ದೆ.

ಇತ್ತೀಚೆಗೆ ಅರ್ಜುನ್ ಸರ್ಜಾ ಅಭಿನಯಿಸಿದ ಕನ್ನಡ ಚಿತ್ರ 'ಪ್ರಸಾದ್'. ಅಶೋಕ್ ಖೇಣಿ ನಿರ್ಮಾಣದ ಈ ಭಾವನಾತ್ಮಕ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅರ್ಜುಜ್ ಆಕ್ಷನ್ ಕಟ್ ಹೇಳಲಿರುವ ಚಿತ್ರವನ್ನು 'ಅದ್ದೂರಿ' ಚಿತ್ರದ ನಿರ್ಮಾಪಕ ಸಿಎಂಆರ್ ಶಂಕರ್ ರೆಡ್ಡಿ ಅವರೇ ನಿರ್ಮಿಸಲಿದ್ದಾರಂತೆ.

ಅವರು ಈ ಹಿಂದೆ ನವರಸ ನಾಯಕ ಜಗ್ಗೇಶ್, ಕೋಮಲ್ ಹಾಗೂ ಅರ್ಚನಾ ಗುಪ್ತಾ ಮುಖ್ಯಭೂಮಿಕೆಯಲ್ಲಿದ್ದ 'ಲಿಫ್ಟ್ ಕೊಡ್ಲಾ' ಚಿತ್ರವನ್ನೂ ನಿರ್ಮಿಸಿದ್ದರು. ಆದರೆ ಆ ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಸಾಧಿಸಲಿಲ್ಲ. ಅದರೆ 'ಅದ್ದೂರಿ' ಚಿತ್ರ ಮಾತ್ರ ಅವರ ಕೈಬಿಡಲಿಲ್ಲ.

ಅರ್ಜುನ್ ಸರ್ಜಾ ನಿರ್ದೇಶಿಸಲಿರುವ ಚಿತ್ರ ಶ್ರಾವಣ ಮಾಸದಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಅರ್ಜುನ್ ನಿರ್ದೇಶನದ ತಮಿಳು, ತೆಲುಗು ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗದಿದ್ದರೂ ಒಂದು ಮಟ್ಟಿಗೆ ಯಶಸ್ವಿಯಾಗಿವೆ. ಹಾಗಾಗಿ ಕನ್ನಡದಲ್ಲಿ ಅವರ ನಿರ್ದೇಶನದ ಚಿತ್ರದ ಬಗ್ಗೆ ಕುತೂಹಲ ಇದ್ದೇ ಇದೆ.

ಇನ್ನೊಂದು ವಿಶೇಷ ಎಂದರೆ 'ಅದ್ದೂರಿ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಉತ್ತಮ ಪ್ರತಿಕ್ರಿಯೆ ಧ್ರುವ ಮುಂದಿನ ಚಿತ್ರಕ್ಕೆ ಸಾಕಷ್ಟು ಬಲತಂದಿದೆ. ತಮ್ಮ ಮುಂದಿನ ಚಿತ್ರಕ್ಕೆ ಧ್ರುವ ಸರ್ಜಾ ರು. 54 ಲಕ್ಷ ಸಂಭಾವನೆ ಸಿಕ್ಕಿದೆಯಂತೆ. ಇದು ಗಾಂಧಿನಗರದಲ್ಲಿ ಸದ್ಯಕ್ಕೆ ಕೇಳಿಬರುತ್ತಿರುವ ಮಾತು. ನಂಬುವುದು ಬಿಡುವುದು ನಿಮಗೇ ಬಿಟ್ಟಿದ್ದು. (ಏಜೆನ್ಸೀಸ್)

English summary
Action King Arjun Sarja has decided to take up direction in Kannada this time. He has directing film for his sister son Dhruv Sarja who has become very popular in one week time from 'Addhuri' stupendous success.
Please Wait while comments are loading...