»   » ಅವನಿ - ಒಂದು ನಿರ್ವ್ಯಾಜ ಪ್ರೇಮಕಥೆಯ ಅದ್ಭುತ ದೃಶ್ಯಕಾವ್ಯ

ಅವನಿ - ಒಂದು ನಿರ್ವ್ಯಾಜ ಪ್ರೇಮಕಥೆಯ ಅದ್ಭುತ ದೃಶ್ಯಕಾವ್ಯ

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇಲ್ಲಿರುವ ಸುಂದರವಾದ ಚಿತ್ರಗಳು ಸಾವಿರಾರು ಕಥೆಯನ್ನು ಹೊಂದಿದೆ. ಒಂದೊಂದು ಚಿತ್ರಗಳು ಒಂದೊಂದು ವಿಭಿನ್ನ ಕಥೆಯನ್ನು ಹೇಳುತ್ತಾ ಹೋಗುತ್ತವೆ.

  ಇತ್ತೀಚಿಗಿನ ಸೆಲ್ಫಿ ದಿನಗಳಲ್ಲಿ ಇಂತಹ ಅದ್ಭುತ ಫೊಟೋಗಳನ್ನು ಫೇಸ್ ಬುಕ್ಕಿನಲ್ಲಿ ಅಪ್ ಲೋಡ್ ಮಾಡಿ, ಅದಕ್ಕೊಂದು ಸುಂದರವಾದ ಕಥೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಬೆಂಗಳೂರಿನ ಹುಡುಗ ಪ್ರೊಫೆಶನಲ್ ಫೊಟೋಗ್ರಾಫರ್ ಅರ್ಜುನ್ ಕಾಮತ್ ಎಂಬುವವರು.

  ಅಂದಹಾಗೆ ಬರೀ ಫೊಟೋಗಳ ಮೂಲಕ ಇಡೀ ಕಥೆಯನ್ನು ಹೇಳ ಹೊರಟಿರುವುದು ಇದೇ ಮೊದಲು. ಇದುವರೆಗೂ ಯಾರೂ ಮಾಡದ ಪ್ರಯತ್ನವನ್ನು ಛಾಯಾಗ್ರಾಹಕ ಅರ್ಜುನ್ ಅವರು ಮಾಡಿದ್ದು, ನೀವು ಕಥೆ ಓದಬೇಕಾದ ಪ್ರಸಂಗವೇ ಇಲ್ಲ ಬಿಡಿ. ಬರೀ ಚಿತ್ರಗಳೇ ಇಡೀ ಕಥೆಯನ್ನು ಹೇಳುತ್ತವೆ. ಅಷ್ಟು ಸುಂದರವಾಗಿರುವ ಚಿತ್ರಗಳು ಒಂದಕ್ಕೊಂದು ಪೈಪೋಟಿ ನೀಡುವಂತಿವೆ.

  ಭಾರತದಲ್ಲಿನ ಸಾಮಾಜಿಕ ಸಂಘ‍ರ್ಷ ಮತ್ತು ವರದಕ್ಷಿಣೆ ಎಂಬ ಪಿಡುಗು ಹೇಗಿದೆ?. ಒಬ್ಬ ಹೆಣ್ಣು ಮದುವೆಯಾಗಿ ತನ್ನ ಗಂಡನ ಮನೆಗೆ ಹೋದ ಮೇಲೆ ಆಕೆಯನ್ನು ವರದಕ್ಷಿಣೆ ಎಂಬ ಪೆಡಂಭೂತ ಹೇಗೆ ಕಾಡುತ್ತದೆ ಎಂಬುದನ್ನು 'ಅವನಿ' ಎಂಬ ಕಾಲ್ಪನಿಕ ಚಿತ್ರದ ಮೂಲಕ ಬಹಳ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ.

  ಒಂದು ಮದುವೆ, ಗಂಡ, ಹೆಂಡತಿ ಮತ್ತು ಅತ್ತೆ (ಗಂಡನ ತಾಯಿ) ಎಂಬ ಮೂರೇ ಮೂರು ಪಾತ್ರಗಳ ನಡುವೆ ಕಥೆ ಸುತ್ತುತ್ತದೆ. ಚಿತ್ರದ ನಾಯಕಿ ಅವನಿ, ಅವನಿಯ ಗಂಡ ಆದಿಶೇಷ, ಹಾಗೂ ಆದಿಶೇಷನ ತಾಯಿ 'ಅವನಿ' ಚಿತ್ರದ ಹೈಲೈಟ್.

  ನಿರ್ಮಾಣ, ನಿರ್ದೇಶನ ಮತ್ತು ಕ್ಯಾಮರಾ ಕೈಚಳಕ ತೋರಿರುವ ಅರ್ಜುನ್ ಕಾಮತ್ ಅವರ 'ಅವನಿ' ಎಂಬ ಸೀರಿಸ್ ಆಫ್ ಪೋಟೋ ಸ್ಟೋರಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...(ಚಿತ್ರ ಕೃಪೆ: ಅರ್ಜುನ್ ಕಾಮತ್- ಛಾಯಾಗ್ರಾಹಕ ಅರ್ಜುನ್ ಅವರ ಅನುಮತಿ ಪಡೆದುಕೊಂಡು ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ.)

  ಅರ್ಜುನ್ ಕಾಮತ್ ಬಳಗ

  ಕಥಾ ನಾಯಕಿ ಅವನಿಯ ಪಾತ್ರದಲ್ಲಿ ಅವಂತಿಕಾ ಮಿಶ್ರ ನಟಿಸಿದರೆ, ಆದಿಶೇಷನ ಪಾತ್ರದಲ್ಲಿ ಅರವಿಂದ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಪ್ರೊಡಕ್ಷನ್ ಡಿಸೈನ್ ನ ಜವಾಬ್ದಾರಿಯನ್ನು ನಿಶಿತಾ ಕರುಂಭೈ ಅವರು ವಹಿಸಿಕೊಂಡರೆ, ಕಾಸ್ಟ್ಯೂಮ್ ಮತ್ತು ಸ್ಟೈಲಿಂಗ್ ಅಮ್ರಿತಾ ರಾಜವೇಲು ವಹಿಸಿಕೊಂಡಿದ್ದಾರೆ.

  ಸುಂದರಿ ಅವನಿ

  ತುಂಬಾ ಸುಂದರಿ ಹಾಗೂ ಬುದ್ಧಿವಂತ ಹುಡುಗಿ ನಾಯಕಿ 'ಅವನಿ' ಮದುವೆಯ ಕಲ್ಪನೆಯ ವಿರುದ್ಧ ತಮ್ಮ ಹಳ್ಳಿಯಲ್ಲಿ ಹುಡುಗಿಯರಿಗಾಗಿ ಒಂದು ಶಾಲೆಯನ್ನು ತೆರೆಯಲು ಬಯಸುತ್ತಾಳೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ಅಪ್ಪ-ಅಮ್ಮನ ಇಚ್ಛೆಯಂತೆ ಆದಿಶೇಷ ಎಂಬುವವರನ್ನು ಮದುವೆಯಾಗುತ್ತಾಳೆ. ಇಲ್ಲಿಂದ ಆದಿಶೇಷ ಮತ್ತು ಅವನಿಯ ಸುಂದರ ಪ್ರೇಮ ಕಥೆ ಆರಂಭವಾಗುತ್ತಿದ್ದು, ಪ್ರೀತಿ-ಪ್ರೇಮ-ಸಂಬಂಧ-ಕಷ್ಟ ಇದೆಲ್ಲವನ್ನು ಛಾಯಾಗ್ರಾಹಕ ಅರ್ಜುನ್ ಕಾಮತ್ ಅವರು ತಮ್ಮ ಫೊಟೋಗ್ರಫಿಯಲ್ಲಿ ಕಥೆ ಹೇಳುತ್ತಾ ಚೆಂದವಾಗಿ ತೋರಿಸಿದ್ದಾರೆ.

  'ಅವನಿ' ಕಾಲ್ಪನಿಕ ಕಥೆ

  ಅಂದಹಾಗೆ ಫೇಸ್ ಬುಕ್ ನಲ್ಲಿ ಭಾರಿ ಖ್ಯಾತಿ ಆಗಿರುವ 'ಅವನಿ' ಎಂಬ ಕಾಲ್ಪನಿಕ ಕಥೆ ಪ್ರಸ್ತುತ ಸಮಾಜದ ಆಗು-ಹೋಗುಗಳನ್ನು ಬಿಂಬಿಸುತ್ತದೆ. ಎಂದು 'ಅವನಿ' ಚಿತ್ರದ ನಿರ್ಮಾಪಕ ಸದ್ಯಕ್ಕೆ ಲಾಸ್ ಏಂಜಲೀಸ್ ನಲ್ಲಿ ಸಿನಿಮಾ ಮತ್ತು ಟಿವಿ ಪ್ರೊಡಕ್ಷನ್ಸ್ ಬಗ್ಗೆ ಅಧ್ಯಯನ ನಡೆಸುತ್ತಿರುವ ‍ಅದ್ಭುತ ಛಾಯಾಗ್ರಾಹಕ ಅರ್ಜುನ್ ಕಾಮತ್ ಅವರು ನುಡಿಯುತ್ತಾರೆ.

  ಪಿಡುಗಿನ ವಿರುದ್ಧ ಸಣ್ಣ ಕಾಳಜಿ

  'ನಾವು ದಿನಾ ಬೆಳಗ್ಗೆ ಇಂತಹ ಸಮಾಜ ಘಾತುಕ ಪಿಡುಗುಗಳ ಬಗ್ಗೆ ಟಿವಿ, ಪೇಪರ್ ಮತ್ತು ಇನ್ನಿತರೇ ಮಾಧ್ಯಮಗಳಲ್ಲಿ ಓದುತ್ತೇವೆ ಹಾಗೂ ಕೇಳುತ್ತೇವೆ. ಆದರೆ ಅದು ಯಾರ ಮನಸ್ಸಿನ ಮೇಲೂ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆದರೆ ಒಬ್ಬ ಆರ್ಟಿಸ್ಟ್ ತಮ್ಮ ನಟನೆಯ ಮೂಲಕ ಇಂತಹ ವಿಷಯಗಳನ್ನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿದರೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಅನ್ನೋದು ನನ್ನ ಅಭಿಪ್ರಾಯ. ಆದರೆ ನಾನು ಈ ಸಮಸ್ಯೆಗಳ ಬಗ್ಗೆ ಬೋಧನೆ ಮಾಡುತ್ತಿಲ್ಲ. ಇದು ನನ್ನ ಸಣ್ಣ ಕಾಳಜಿ ಅಷ್ಟೆ ಎಂದು ಅರ್ಜುನ್ ನುಡಿಯುತ್ತಾರೆ.

  ಕಥೆಯ ಮೂಲಕ ಹೇಳ ಹೊರಟ ಅರ್ಜುನ್

  ಈ ಪುರುಷ ಪ್ರಧಾನ ಸಮಾಜದಲ್ಲಿ ವಯಸ್ಸು, ವರದಕ್ಷಿಣೆ, ಲಿಂಗ ತಾರತಮ್ಯ, ಹಾಗೂ ಗಂಡು ಮಗು ಬೇಕೆಂಬ ಧೋರಣೆ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಬರೀ ಬೋಧನೆ ಮಾಡಿ, ಭಾಷಣ ಬಿಗಿದರೆ ಸಾಮಾನ್ಯ ಜನರು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವ ಈ ದಿನಗಳಲ್ಲಿ ಒಂದು ಫೊಟೋ ಹಾಕಿ ಅದಕ್ಕೆ ಕಥೆ ಕಟ್ಟಿದರೆ ಅತೀ ವೇಗವಾಗಿ ಅದರಲ್ಲಿರುವ ಸಾಮಾಜಿಕ ಸಂದೇಶಗಳು ಜನರನ್ನು ತಲುಪುತ್ತವೆ ಎಂಬ ಭರವಸೆಯಲ್ಲಿ ಇಂತಹ ಅದ್ಭುತ ಯೋಜನೆಯನ್ನು ಹಾಕಿಕೊಂಡಿದ್ದಾಗಿ ಅರ್ಜುನ್ ತಿಳಿಸುತ್ತಾರೆ.

  ದಿನಕ್ಕೊಂದು ಫೊಟೋ

  ಪ್ರತೀ ದಿನ ಒಂದೊಂದು ಸುಂದರ ಚಿತ್ರಗಳನ್ನು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿ ಚಿತ್ರಕ್ಕನುಸಾರವಾಗಿ ಚೆಂದವಾದ ಕಥೆ ಕಟ್ಟಿ ಅದನ್ನು ಸಾಮಾನ್ಯ ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾದ ಛಾಯಾಗ್ರಾಹಕ ಅರ್ಜುನ್ ಕಾಮತ್ ಅವರ ಈ ಅಮೋಘ ಕಾರ್ಯಕ್ಕೆ ಇಡೀ ಫೇಸ್ ಬುಕ್ ನಾದ್ಯಂತ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

  ಗಂಡ ಹತ್ತಿರವಿದ್ದರೆ ಹೆಂಡತಿ ಸೇಫ್

  ಕಾಟ ಕೊಡುವ ಅತ್ತೆಯಂದಿರಿದ್ದರೆ, ಹೆಂಡತಿಗೆ ತನ್ನ ಗಂಡ ಹತ್ತಿರವಿದ್ದರೆ, ತಾನು ಸುರಕ್ಷಿತ ಎಂಬ ಭಾವನೆ ಮೂಡುತ್ತದೆ. ಆದರೆ ಗಂಡ ಕೆಲಸದ ನಿಮಿತ್ತ ಪರ ಊರಿಗೆ ಹೊರಟರೆ ಹೆಂಡತಿಯ ಕಷ್ಟ ಹೇಳತೀರದು. ಅರ್ಜುನ್ ಅವರ ಕತೆಯಲ್ಲಿಯೂ ನಾಯಕಿ ಅವನಿಗೆ ತನ್ನ ಅತ್ತೆಯಿಂದ ಕಷ್ಟ ಸಿಗತೊಡಗುತ್ತದೆ. ನರಕ ಜೀವನವನ್ನು ಅನುಭವಿಸುತ್ತಾಳೆ.

  ಹೆಣ್ಣಿಗೆ ಹೆಣ್ಣೇ ಶತ್ರು

  ಒಂದು ಹುಡುಗಿ ಮದುವೆ ಆಗಿ ಗಂಡನ ಮನೆಗೆ ಕಾಲಿಟ್ಟ ತಕ್ಷಣ ಆಕೆಗೆ ಕಷ್ಟದ ದಿನಗಳು ಆರಂಭವಾಗುತ್ತದೆ. ಅರ್ಥ ಮಾಡಿಕೊಳ್ಳುವ ಅತ್ತೆಯಂದಿರು ಇದ್ದರೆ ಚೆನ್ನ. ಇಲ್ಲವಾದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಒಂದು ಹುಡುಗಿ ಇನ್ನೊಂದು ಹುಡುಗಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲ.

  ಗಂಡು ಮಗು ಬೇಕೆಂಬ ಧೋರಣೆ

  ತನ್ನ ಮಗನಿಗೆ ಹುಟ್ಟುವ ಕಂದಮ್ಮ ಗಂಡಾಗಿರಬೇಕು, (ಆ ಸಂದರ್ಭದಲ್ಲಿ 'ಅತ್ತೆ' ಅನ್ನೋ ವ್ಯಕ್ತಿತ್ವ ಕೂಡ ಒಂದು ಹೆಣ್ಣು ಅನ್ನೋ ಸತ್ಯನಾ ಮರೆತುಹೋಗಿರುತ್ತೆ). ಒಂದು ವೇಳೆ ಹುಟ್ಟಿದ ಮಗು ಹೆಣ್ಣಾದರೆ ಆಕೆಗೆ ಕಷ್ಟದ ದಿನಗಳು ಆರಂಭ. ಇಲ್ಲಿ ಕಥಾ ನಾಯಕಿ 'ಅವನಿ'ಗೂ ಅದೇ ಸಮಸ್ಯೆ ಒದಗಿ ಬರುತ್ತದೆ.

  ಮನೆಯಿಂದ ಹೊರನಡೆಯಬೇಕಾದ ಪರಿಸ್ಥಿತಿ

  ಹೆಣ್ಣು ಮಗುವೆಂಬ ಕಾರಣಕ್ಕೆ ಗಂಡನ ತಾಯಿಯಿಂದ ತಿರಸ್ಕೃತರಾಗಿ ಮನೆಯಿಂದ ಹೊರನಡೆಯುವ ಅವನಿ ದಂಪತಿಗಳು ಕಾಡು ಸೇರುತ್ತಾರೆ. ಅಲ್ಲಿಯೂ ಕಷ್ಟದ ದಿನಗಳು ಬರುತ್ತವೆ. ಅತ್ತೆ ಮಗುವನ್ನು ಕೊಲ್ಲಿಸಲು ಪ್ರಯತ್ನ ಪಡುತ್ತಾರೆ. ಇದು ಬರೀ ವರದಕ್ಷಿಣೆ ಮತ್ತು ಲಿಂಗ ತಾರತಮ್ಯ ಎಂಬ ಪಿಡುಗಿನಿಂದ ಒಂದು ಹೆಣ್ಣಿನ ಬಾಳಲ್ಲಿ ಎಷ್ಟೆಲ್ಲಾ ಕಷ್ಟಗಳು ಒದಗಿ ಬರುತ್ತದೆ ಎಂಬುದನ್ನು ಅರ್ಜುನ್ ಅವರು ರಸವತ್ತಾಗಿ ತಮ್ಮ ಅದ್ಭುತ ಚಿತ್ರಗಳ ಮೂಲಕ ಬಣ್ಣಿಸಿದ್ದಾರೆ.

  ಹೆಚ್ಚಿನ ಕಥೆಯನ್ನು ಓದಬೇಕೆ?

  ಛಾಯಾಗ್ರಾಹಕ ಅರ್ಜುನ್ ಕಾಮತ್ ಅವರ ಅದ್ಭುತ ಚಿತ್ರಗಳ ಕಥೆಯನ್ನು ಓದಬೇಕೆ? ಹಾಗಿದ್ದರೆ, ಈ ಫೇಸ್ ಬುಕ್ಕಿಗೆ ನೀವು ಒಮ್ಮೆ ಭೇಟಿ ಕೊಡಲೇಬೇಕು. ಪೂರ್ತಿ ಕಥೆ ಓದಲು ಈ ಲಿಂಕ್ ಕ್ಲಿಕ್ ಮಾಡಿ...

  English summary
  Photographer Arjun Kamath has been captivating audiences and leaving them wanting for more of his photo-story "Avani" on Facebook.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more