'ಅವತಾರ್ ದ ವೇ ಆಫ್ ವಾಟರ್' ಕನ್ನಡ ವರ್ಷನ್ ಮೊದಲ ದಿನ ಎಷ್ಟು ಹಣ ಗಳಿಸಿತು?

ಜೇಮ್ಸ್ ಕ್ಯಾಮೆರೂನ್ ಅವರ ದೃಶ್ಯಕಾವ್ಯ 'ಅವತಾರ್ ದ ವೇ ಆಫ್ ವಾಟರ್' ನಿನ್ನೆ ( ಡಿಸೆಂಬರ್ 16 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಅವತಾರ್ ಬೃಹತ್ ಯಶಸ್ಸಿನ ಬಳಿಕ ಬರೋಬ್ಬರಿ ಹದಿಮೂರು ವರ್ಷಗಳ ಬಳಿಕ ಬಂದ ಚಿತ್ರದ ಈ ಸೀಕ್ವೆಲ್ ಮೊದಲ ದಿನವೇ ವಿಶ್ವದಾದ್ಯಂತ 1150 ಕೋಟಿ ಗಳಿಸುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಇನ್ನು ಭಾರತದಲ್ಲಿ ಸಹ ಹಾಲಿವುಡ್ ತನ್ನ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದು, ಅವತಾರ್ ದ ವೇ ಆಫ್ ವಾಟರ್ ದೇಶದಲ್ಲಿ ಬೃಹತ್ ನಿರೀಕ್ಷೆಯೊಂದಿಗೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇನ್ನು ಈ ಬಾರಿ ಇಂಗ್ಲಿಷ್ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಹ ಪ್ಯಾಂಡೊರಾ ಜಗತ್ತನ್ನು ಚಿತ್ರಮಂದಿರಗಳಲ್ಲಿ ಅನುಭವಿಸಬಹುದಿತ್ತು.
ಮೇಲಿನ ಎಲ್ಲಾ ಭಾಷೆಗಳಲ್ಲೂ ಅವತಾರ್ ದ ವೇ ಆಫ್ ವಾಟರ್ ತ್ರೀಡಿ ವರ್ಶನ್ ನಲ್ಲೂ ಲಭ್ಯವಿತ್ತು. ಮೊದಲಿಗೆ ಅವತಾರ್ 2 ಚಿತ್ರದ ಬಿಡುಗಡೆ ದಿನ ಘೋಷಣೆಯಾದಾಗ ಕನ್ನಡದಲ್ಲೂ ಚಿತ್ರ ಬರಲಿದೆ ಎಂದು ಪೋಸ್ಟರ್ ಹಂಚಿಕೊಂಡಿದ್ದ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಮಾತ್ರ ಕನ್ನಡ ವರ್ಷನ್ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದಿದ್ದ ಕನ್ನಡ ಡಬಿಂಗ್ ಪ್ರಿಯರು ಅವತಾರ್ ದ ವೇ ಆಫ್ ವಾಟರ್ ಅನ್ನು ಕನ್ನಡದಲ್ಲೂ ಬಿಡುಗಡೆಗೊಳಿಸಲೇಬೇಕು ಎಂದು ಪಟ್ಟು ಹಿಡಿದು ಟ್ರೆಂಡ್ ಮಾಡಿದ್ದರು.
ಕನ್ನಡಿಗರ ಹಠಕ್ಕೆ ಸೋತ ಅವತಾರ್ ನಿರ್ಮಾಪಕರು ಚಿತ್ರವನ್ನು ಕನ್ನಡದಲ್ಲೂ ಡಬ್ ಮಾಡಿ ಟ್ರೈಲರ್ ಬಿಡುಗಡೆಗೊಳಿಸಿದರು ಹಾಗೂ ಕನ್ನಡದಲ್ಲಿ ಸಹ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಗೊಂಡಿತು. ಮೊದಲ ದಿನ ರಾಜ್ಯಾದ್ಯಂತ ಸುಮಾರು ಎಪ್ಪತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ಅವತಾರ್ ದ ವೇ ಆಫ್ ವಾಟರ್ ಕನ್ನಡ ವರ್ಷನ್ 12 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಕೆಲವರು ಇದು ಉತ್ತಮ ಕಲೆಕ್ಷನ್ ಎಂದರೆ, ಇನ್ನೂ ಕೆಲವರು ಪರವಾಗಿಲ್ಲ, ಕಡಿಮೆಯಾಯಿತು ಎಂದೂ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











