ಪಲ್ಲವಿ ಚಿತ್ರಮಂದಿರದ ಕೊನೆಯ ಆಟಕ್ಕೆ ದಿನಗಣನೆ

ಇತ್ತೀಚಿನ ದಿನಗಳಲ್ಲಿ ಕನ್ನಡೇತರ ಚಿತ್ರಗಳಿಗೆ ಮೀಸಲಾಗಿದ್ದ ಪಲ್ಲವಿ ಚಿತ್ರಮಂದಿರವನ್ನು ಹೊಡೆದು ಹಾಕಿ ಅಲ್ಲೊಂದು ಸುಸಜ್ಜಿತ ಆಸ್ಪತ್ರೆ ಮುಂದಿನ ದಿನಗಳಲ್ಲಿ ತಲೆಎತ್ತಲಿದೆ.
ಮಾರ್ಚ್ 6, 1976 ರಂದು ಪಲ್ಲವಿ ಚಿತ್ರಮಂದಿರವನ್ನು ತುಮಕೂರು ಸಿದ್ದಗಂಗಾ ಶ್ರೀಗಳು ಮತ್ತು ವರನಟ ಡಾ. ರಾಜಕುಮಾರ್ ಉದ್ಘಾಟಿಸಿದ್ದರು. ಅಣ್ಣಾವ್ರ ಅಭಿನಯದ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಸಿನಿಮಾ ಪ್ರದರ್ಶನ ಆರಂಭಿಸಿದ ಪಲ್ಲವಿ ಚಿತ್ರಮಂದಿರದಲ್ಲಿ ಇದುವರೆಗೆ 400ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿವೆ.
ಚಿತ್ರಮಂದಿರ ಆರಂಭಿಸಿದಾಗಿಂದಲೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಪಲ್ಲವಿ ಚಿತ್ರಮಂದಿರ, ಸಂದರ್ಭಕ್ಕೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರೇಕ್ಷಕರ ಅಚ್ಚುಮೆಚ್ಚಿನ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಆ ಕಾಲದಿಂದಲೂ ಸುಸಜ್ಜಿತ ಚಿತ್ರಮಂದಿರ ಎಂದೇ ಖ್ಯಾತವಾಗಿದ್ದ ಪಲ್ಲವಿ ಚಿತ್ರಮಂದಿರದಲ್ಲಿ ಒಟ್ಟು 1,211 ಆಸನಗಳಿವೆ. ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆಂದೇ ಮೀಸಲಾಗಿದ್ದ ಸಮಯದಲ್ಲಿ ಪಲ್ಲವಿ ಚಿತ್ರಮಂದಿರ ಇತರ ಭಾಷೆಯ ಚಿತ್ರಗಳ ಪ್ರದರ್ಶನವನ್ನು ಆರಂಭಿಸಿತ್ತು.
ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಿಂದಾಗಿ ಏಕಪರದೆಯ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಚಿತ್ರ ಬಿಡುಗಡೆಯಾದ ಮೊದಲ ವಾರ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಾರೆ. ಆದರೆ ನಂತರದ ದಿನಗಳಲ್ಲಿ ಪ್ರೇಕ್ಷಕರ ಬರ ಎದುರಿಸಬೇಕಾಗಿದೆ.
ಈ ಕಾರಣದಿಂದಾಗಿ ಪಲ್ಲವಿ ಚಿತ್ರಮಂದಿರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಚಿತ್ರಮಂದಿರದ ಆಡಳಿತ ಮಂಡಳಿಯ ಅಧಿಕಾರಿಗಳು ಬೇಸರದಿಂದ ವಿವರಿಸುತ್ತಾರೆ.
ಸಂಪಂಗಿ ರಾಮನಗರದ ಕಾರ್ಪೋರೇಷನ್ ವೃತ್ತದ ಬಳಿ 33 ಸಾವಿರ ಚದರಡಿ ವಿಸ್ತೀರ್ಣದ ಪಲ್ಲವಿ ಚಿತ್ರಮಂದಿರ ಮುಂದಿನ ದಿನಗಳಲ್ಲಿ ಆಸ್ಪತ್ರೆಯಾಗಿ ಬದಲಾಗಲಿದೆ. ಈ ಸ್ಥಳದಲ್ಲಿ ಅದೇ ಹೆಸರಿನಲ್ಲಿ ಹತ್ತು ಅಂತಸ್ತಿನ ಸುಸಜ್ಜಿತ, ಹೈಟೆಕ್ ಆಸ್ಪತ್ರೆ ನಿರ್ಮಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಪಲ್ಲವಿ ಚಿತ್ರಮಂದಿರ ಹೊಡೆದು ಹಾಕುವುದರಿಂದ ಮುಖ್ಯವಾಗಿ ತೆಲುಗು ಚಿತ್ರಗಳಿಗೆ ಬಹು ದೊಡ್ಡ ಹೊಡೆತ ಬೀಳಲಿದೆ.


Click it and Unblock the Notifications











