For Quick Alerts
  ALLOW NOTIFICATIONS  
  For Daily Alerts

  ಶೇಷಾದ್ರಿ ವಿರುದ್ಧ ವೈರಸ್ ವೀರು ಫೇಸ್ ಬುಕ್ ನಲ್ಲಿ ಕಿಡಿ

  By Harshitha
  |

  ಖಳನಟರಿಗೆ ಪ್ರಶಸ್ತಿ ಕೊಡಬೇಕು ಅಂತೇನೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ದನಿಯೆತ್ತಿದರು. ಆದಕ್ಕೆ ಅಡ್ಡಗಾಲು ಹಾಕಿರುವ ನಿರ್ದೇಶಕ ಪಿ.ಶೇಷಾದ್ರಿ ಗಾಂಧಿನಗರದಲ್ಲಿ ಹೊಸ ಗದ್ದಲ ಎಬ್ಬಿಸಿದ್ದಾರೆ.

  ದರ್ಶನ್ ಅಭಿಪ್ರಾಯ ಸರಿ ಅಂತ ನವರಸ ನಾಯಕ ಜಗ್ಗೇಶ್, ನಿರ್ದೇಶಕ ಶಶಾಂಕ್ ಚಾಲೆಂಜಿಂಗ್ ಸ್ಟಾರ್ ಜೊತೆ ಕೈಜೋಡಿಸಿದ್ದಾರೆ. ಇದೀಗ ಇದೇ ಲಿಸ್ಟ್ ಗೆ ಸೇರ್ಪಡೆಯಾಗಿರುವ 'ಪ್ರೀತಿ ಗೀತಿ ಇತ್ಯಾದಿ' ಚಿತ್ರದ ನಿರ್ದೇಶಕ ವೀರೇಂದ್ರ ಅಲಿಯಾಸ್ ವೈರಸ್ ವೀರು, 'ವಿಲನ್ ಗಳಿಗೆ ಪ್ರತ್ಯೇಕ ಪ್ರಶಸ್ತಿ ಬೇಡ' ಅನ್ನುವವರ ವಿರುದ್ಧ ಫೇಸ್ ಬುಕ್ ನಲ್ಲಿ ಸಮರ ಸಾರಿದ್ದಾರೆ.

  ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ವೈರಸ್ ವೀರು ಅಪ್ ಡೇಟ್ ಮಾಡಿರುವ ಸ್ಟೇಟಸ್ ಇಲ್ಲಿದೆ.....

  ತಪ್ಪೇನು...?

  ನಾಯಕ, ನಾಯಕಿ, ಪೋಷಕನಟ, ಪೋಷಕ ನಟಿಯರಿಗೆ ಪ್ರಶಸ್ತಿ ಕೊಡುವಂತೆ, ಖಳನಟರಿಗೆ ರಾಜ್ಯ ಪ್ರಶಸ್ತಿ ಕೊಡುವುದರಲ್ಲಿ ತಪ್ಪೇನು...?

  ಉತ್ತಮ ಚಿತ್ರ ಎಂದು ಪ್ರಶಸ್ತಿ ಕೊಟ್ಟರೆ ಸಾಕಲ್ಲ, ಉತ್ತಮ ನಿರ್ದೇಶಕ ಪ್ರಶಸ್ತಿಯ ಅವಶ್ಯಕತೆಯೇನು..? ಒಂದು ಚಿತ್ರವನ್ನು 'ಉತ್ತಮ ಚಿತ್ರ' ಎಂದು ಆರಿಸಿದ ನಂತರ, ಮತ್ಯಾವುದೋ ಚಿತ್ರದ 'ಚಿತ್ರಕಥೆಗೆ' ಉತ್ತಮ ಚಿತ್ರಕಥೆ ಎಂದೋ, ಇನ್ನಾವುದೋ ಚಿತ್ರದ ಮಾತುಗಳಿಗೆ 'ಉತ್ತಮ ಸಂಭಾಷಣೆ' ಪ್ರಶಸ್ತಿಯನ್ನ ಕೊಡುವ - ತೆಗೆದುಕೊಳ್ಳುವ ಹಂಗೇನಕ್ಕೆ..?

  ಬೇರೊಂದು ಸಿನೆಮಾದ ಛಾಯಾಗ್ರಾಹಕ 'ಉತ್ತಮ ಛಾಯಾಗ್ರಹಣಕ್ಕಾಗಿ' ರಾಜ್ಯಪ್ರಶಸ್ತಿ ಪಡೆಯುವುದು ಎಲ್ಲಿಯ ನ್ಯಾಯ..? ಒಂದು ಚಿತ್ರದ ಸಂಗೀತಕ್ಕೆ ಉತ್ತಮ ಸಂಗೀತ ನಿರ್ದೇಶಕ ಎಂದು ಪ್ರಶಸ್ತಿ ಕೊಟ್ಟಮೇಲೆ, ಮತ್ಯಾವುದೋ ಚಿತ್ರದ ಮತ್ಯಾವುದೋ ಹಾಡಿಗೆ ಉತ್ತಮ ಗಾಯಕ ಎಂಬ ಪ್ರಶಸ್ತಿ, ಇನ್ನಾವುದೋ ಚಿತ್ರದ ಇನ್ನಾವುದೋ ಹಾಡಿಗೆ ಉತ್ತಮ ಸಾಹಿತ್ಯ ಪ್ರಶಸ್ತಿ ಕೊಡುವುದೆಂತಕ್ಕೆ..?

  ಆ ಪ್ರಕಾರವಾಗಿ ಒಂದು ಉತ್ತಮ ಚಿತ್ರವೆಂದ ಮೇಲೆ ಎಲ್ಲವನ್ನೂ ಉತ್ತುತ್ತುತ್ತುತ್ತಮವಾಗಿ ಮಾಡಿ ಎಲ್ಲಾ ವಿಭಾಗದಲ್ಲೂ ಪ್ರಶಸ್ತಿ ಬಾಚಿಕೊಳ್ಳುವಂತಿರಬೇಕು ಅಲ್ಲವೇ..? ಅಲ್ಲವೇ ಅಲ್ಲ, ಯಾವ ಸಿನೆಮಾದಲ್ಲಿ ಏನೇನ್ ಚೆನ್ನಾಗಿರ್ತದೋ ಅದಕ್ಕೆ ಪ್ರಶಸ್ತಿ ಕೊಡೋದು ಕರೆಕ್ಟು ಅಂತೀರಿ... ನಿಮ್ ಮಾತೂ ಸರೀನೇ ಬಿಡಿ..!

  ಈ ಎಲ್ಲಾ ಪ್ರಶಸ್ತಿಗಳು ಯಾವ ಮಾನದಂಡದಲ್ಲಿ ಕೊಡಲ್ಪಡುತ್ತವೆ..? ಅದರ ಹಿಂದೆ ಯಾರು ಇರುತ್ತಾರೆ, ಹೇಗೆಲ್ಲಾ ಒಂದು ಚಿತ್ರವನ್ನು ಅಳೆದು ತೂಗಿ ಪ್ರಶಸ್ತಿ ಕೊಡ್ತಾರೆ..? ಅದರಲ್ಲಿ ಎಷ್ಟು ಪಾರದರ್ಶಕತೆ ಇದೆ..? ಸಿನೆಮಾ ಪ್ರಶಸ್ತಿಗಳು ಎಂದರೆ ಜನಗಳು ನೋಡಿ ಮೆಚ್ಚಿದಂಥವುಗಳನ್ನು ಪರಿಗಣಿಸಬೇಕೋ.. ಅಥವ ಪ್ರಶಸ್ತಿಗಳಿಗಾಗಿಯೇ ಮಾಡಿ, ಮುಖ್ಯವಾಹಿನಿಯ ಜನರನ್ನು ಯಾವ ಥರದಲ್ಲೂ ತಲುಪದ ಚಿತ್ರಗಳನ್ನು ಪರಿಗಣಿಸಿ ಕೊಡಲಾಗ್ತದೋ..? ಅದು ಹೇಗಾದ್ರೂ ಇರಲಿ ಬಿಡಿ...

  ಈಗ, ಖಳನಟರಿಗೆ ರಾಜ್ಯ ಪ್ರಶಸ್ತಿ ಕೊಡೋದ್ರ ವಿರುದ್ದ ಒಬ್ಬರು 'ಉಡುದಾರ' ಸರಿಮಾಡಿಕೊಂಡು ಗುರ್ರ್ ಗುಟ್ಟಿ ಮಾತನಾಡಿದ್ದಾರೆ... ಅವರಿಗೆ ಮತ್ತೊಬ್ಬರು "ಬಲೇ ಗೆಳೆಯ, ಚೆನ್ನಾಗ್ ಹೇಳ್ದೆ..!" ಅಂತ ಬೆಂಬಲಕ್ಕೆ ನಿಂತು 'ತಮ್ಮ ಉಡುದಾರವನ್ನೊಮ್ಮೆ ತಡಕಾಡಿ ಮೇಲೇರಿಸಿಕೊಳ್ತಾರೆ..!' ಅವರ ಪ್ರಕಾರ ಇಂದು ಖಳನಟನಿಗೆ ಪ್ರಶಸ್ತಿ ಕೊಟ್ಟರೆ ನಾಳೆ "ಹಾಸ್ಯನಟನ್ನು ಪರಿಗಣಿಸಬೇಕಾಗುತ್ತದೆ" ಹೀಗೇ ಕೊಡುತ್ತಾ ಹೋದಲ್ಲಿ ಪ್ರಶಸ್ತಿಗೆ ಬೆಲೆ ಇರುವುದಿಲ್ಲ..! ಅದರಲ್ಲಿ ತಪ್ಪೇನು..? [ಶೇಷಾದ್ರಿ ವಿರುದ್ಧ 'ನವರಸ ನಾಯಕ'ನ ಟ್ವಿಟ್ಟರ್ ಪ್ರಹಾರ]

  ಜನರನ್ನು ನಕ್ಕುನಗಿಸುವುದು ಸುಲಭದ ಕೆಲಸವಲ್ಲ.., ನೀವು ಬರವಣಿಗೆಯಲ್ಲಿ ಕೊಟ್ಟದ್ದನ್ನ ಜನರಿಗೆ ಕಮ್ಯುನಿಕೇಟ್ ಮಾಡಿ ನಗಿಸುವ ನಟನ ಪ್ರತಿಭೆಗೆ ಪ್ರಶಸ್ತಿ ಕೊಟ್ಟರೆ ನಿಮ್ಮ ಗಂಟೇನು ಹೋಗ್ತದೆ..? ನಿಮ್ಮ ಕಲ್ಪನೆಯನ್ನ ಕಣ್ಣೆದುರು ಕಟ್ಟಿಕೊಡೋ ನಟ/ಪಾತ್ರ ಯಾವುದೇ ಆದರೂ, ಅದು ಉತ್ತಮವಾಗಿ ಮೂಡಿಬಂದಲ್ಲಿ, ಅದಕ್ಕೊಂದು ಪ್ರಶಸ್ತಿ ಒಲಿದು ಬಂದರೆ ಅಪಚಾರವಲ್ಲ..!

  ಖಳನಟರಿಗೆ ಪ್ರಶಸ್ತಿ ಕೊಡುವುದರಿಂದ ಪ್ರಶಸ್ತಿ ನಿಂತ ನೀರಿನಂತೆ ಒಂದೇ ಕಡೆ ನಿಲ್ತದೆ ಅನ್ನೋ ಥರ ಮಾತಾಡ್ತಾರಲ್ಲ, ಪ್ರತೀವರ್ಷ ರಾಜ್ಯಸರ್ಕಾರ ನೀಡುವ ಪ್ರಶಸ್ತಿಗಳಲ್ಲಿ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಯಾವುದಾದರೊಂದು ವಿಭಾಗದಲ್ಲಿ 'ಕಟ್ಟಿಟ್ಟ ಬುತ್ತಿಯಂತೆ ಪ್ರಶಸ್ತಿಗಳನ್ನು ಎತ್ತೆತ್ತಿ ಕೊಡುವುದು' ಹೇಗೆ...!? ಆ ಕೆಲವು ಹೆಸರುಗಳು ಪ್ರತೀವರ್ಷ ಪ್ರಶಸ್ತಿಪಟ್ಟಿಯಲ್ಲಿ ತಪ್ಪದೇ ಕಾಣಿಸಿಕೊಳ್ಳುವುದು ಹೇಗೆ..? ಅವರು ಮಾಡಿದ ಚಿತ್ರಗಳನ್ನು ಅದೆಷ್ಟು ಚಿತ್ರಮಂದಿರಗಳಲ್ಲಿ ತೆರೆಕಾಣಿಸಿರುತ್ತಾರೋ, ಅದೆಷ್ಟು ಜನ ನೋಡಿರುತ್ತಾರೋ..?

  ಆದರೂ ಅವರು ಮಾತ್ರ ಪ್ರತೀ ವರ್ಷ ಪ್ರಶಸ್ತಿಪಟ್ಟಿಯಲ್ಲಿ ಅಜರಾಮರವಾಗಿದ್ದಾರೆ..! ಅವರ ಯೋಗ್ಯತೆಗೆ ದಕ್ಕುವ ಪ್ರಶಸ್ತಿಯನ್ನು ಸ್ವೀಕರಿಸುವ ಹಕ್ಕು ಸ್ವಾತಂತ್ರ ಅವರದ್ದಾದರೇ, ಮಿಕ್ಕವರಿಗೆ ದಕ್ಕಬೇಕಾದ್ದಕ್ಕೆ ಹಳ್ಳ ಹಿಡಿಸುವ ಪ್ರಯತ್ನವೇಕೋ...?

  ಒಂದು ಪ್ರಶಸ್ತಿ ಪಟ್ಟಿಯಲ್ಲಿ ಅಥವ ಅಂತರರಾಷ್ಟ್ರೀಯ ಫಿಲ್ಮ್ ಫೇಸ್ಟಿವಲ್ ನಲ್ಲಿ ಕೆಲವರ ಸಿನೆಮಾಗಳಿಲ್ಲವೆಂದಲ್ಲಿ, ಆ ಪ್ರಶಸ್ತಿ ಸಮಾರಂಭ ಅಥವಾ ಫಿಲ್ಮ್ ಫೇಸ್ಟಿವಲ್ ನೆಡೆಯುವುದಕ್ಕೆ ಸಂಚಕಾರ ತರುವಷ್ಟು ಬಲಾಢ್ಯರು ಈ ರಂಗದೊಳಗೆ ಇರಬಹುದು(?), ಬಡಕಲಾವಿದನೊಬ್ಬ ಹೇಗೋ ಗುರುತಿಸಿಕೊಂಡು ತನಗೊಂದು 'ಬಿಡಿಗಾಸಿನ ಪ್ರಶಸ್ತಿ-ಗೌರವ' ಬರುತ್ತೆ ಅಂತ ಬಾಯಿಬಿಡುವುದು ಅಪರಾಧವಾಗಬಹುದೇನೋಪಾ...!? [ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ]

  ಅವರಿಗೆ ಮತ್ತು ಇತರರಿಗೆ ಇರುವಂತೆ, ಮಿಕ್ಕವರಿಗೂ ಅವರ ಯೋಗ್ಯತೆಗೆ ತಕ್ಕುದಾದ ಒಂದು ಪ್ರಶಸ್ತಿಯನ್ನ ಪಡೆಯುವ ನೈತಿಕ ಹಕ್ಕು ಇದೆ ಎಂಬುದನ್ನು ಮರೆತು ಸುಮ್ಮನಿರಬೇಕೇನೋ..!?

  ಕೌರವರಿಲ್ಲದೇ ಪಾಂಡವರಿಗೇನು ಬೆಲೆ ಇದೆ..? ರಾವಣನಿಲ್ಲದೇ ಇದ್ದಲ್ಲಿ ರಾಮನ ಸಾಧನೆ ಏನು..? ಕಂಸನಿಲ್ಲದ ಹೊರತು ಕೃಷ್ಣನ ಕಥೆಗೆ ಎಷ್ಟು ಮಹತ್ವ ಇರುತ್ತಿತ್ತು..? ಹಿರಣ್ಯಕಶ್ಯಪುವಿಲ್ಲದ ಪ್ರಹ್ಲಾದನಿಗೇನು ಖ್ಯಾತಿ ಸಿಗುತ್ತಿತ್ತು..? ಗಬ್ಬರ್ ಸಿಂಗ್ ಇಲ್ಲದೇ ಇದ್ರೆ, ಜೈ-ವೀರು ಲೆಕ್ಖಕ್ಕಿಲ್ಲ., ಸಾಹುಕಾರ್ ಸಿದ್ದನಿಲ್ಲದೇ ಯಾವ ಸಂಪತ್ತಿನ ವಿರುದ್ಧ ಸವಾಲ್ ಹಾಕಬೇಕಿತ್ತು ರಾಜಣ್ಣ..? ದುರುಳ ಶ್ರೀಮಂತ ಭೂತಯ್ಯ ಮತ್ತವನ ಮಗ ಅಯ್ಯು ವಿನಃ ಗುಳ್ಳನ ಒಳ್ಳೆಯತನಕ್ಕೆ-ಅಸಹಾಯಕತೆಗೆ ಯಾರು ಮನ ಮಿಡಿಯುತ್ತಿದ್ದರು..? ತನ್ನನ್ನು ಮದುವೆಯಾಗಲಿಲ್ಲ ಎಂದು ನೀಲಾಂಬರಿ ಪ್ರತಿಕಾರ ತೀರಿಸಿಕೊಳ್ಳಲು ನಿರ್ಧರಿಸದೇ ಇದ್ದಲ್ಲಿ ಪಡೆಯಪ್ಪನ ಪಾತ್ರ ಎಷ್ಟು interesting ಆಗಿರುತ್ತಿತ್ತು..? ['ಖಳನಟರಿಗೆ ಪ್ರಶಸ್ತಿ ನೀಡಿದ್ರೆ ಯಾರ ಗಂಟೇನು ಹೋಗಲ್ಲ']

  ಖಳನಾಯಕನೆಂದರೆ ಸಿನೆಮಾದ ಅತೀ ಮುಖ್ಯ ಭಾಗ, ನಾಯಕನಿಗಿಂತ ಒಂದು ಕೈ ಮೇಲಾದ ಭಾಗವಾದು, ಹಾಗಿದ್ದಲ್ಲಿ ಮಾತ್ರ ನಾಯಕನ ಅವಶ್ಯಕತೆ ಮತ್ತು ನಾಯಕನ ಪಾತ್ರ ತೆರೆಯಮೇಲೆ ಹೆಚ್ಚು ಆಸಕ್ತಿದಾಯಕ..! ಒಂದು ಕಮರ್ಷಿಯಲ್ ಮನರಂಜನಾತ್ಮಕ ಚಿತ್ರ - ಕಥೆ ಅಂದರೆ, ಅದರಲ್ಲಿ protagonist - antagonist ಇರಲೇಬೇಕೆಂಬ theory ಗ ಎಳ್ಳು ನೀರು ಬಿಟ್ಟು ಪ್ರಶಸ್ತಿಗೋಸ್ಕರ ಚಿತ್ರ ಮಾಡುವ ಗಣ್ಯರು ಯಾರೂ ಕೋಪಮಾಡಿಕೊಳ್ಳಬಾರದಾಗಿ ವಿನಂತಿ..

  ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಿಮ್ಮನ್ನ ಎದುರುಹಾಕಿಕೊಂಡು ನನಗೇನೂ ಲಾಭವಿಲ್ಲ...! ಆದರೆ ಪ್ರಶಸ್ತಿಗಳ ಲಾಭ ಲಾಬಿ ಲಬಲಬೋ ವಿಚಾರದಲ್ಲಿ ಚರ್ಚೆ ಹುಟ್ಕೊಂಡಿದೆ... ನಿಮ್ಮ ಮಾತೇ ನಿಲ್ಲಬೇಕು ಅಂದ್ರೆ ನಿಲ್ಲುಸ್ಕೊಳಿ, ಬೇರೆಯವರ ಮಾತುಗಳನ್ನೂ ಕೇಳಿಬಿಡಿ..! - ವೈರಸ್ ವೀರು

  (ಕೃಪೆ - ವೈರಸ್ ವೀರು ಫೇಸ್ ಬುಕ್)

  English summary
  Kannada Director P.Sheshadri has created new controversy by writing letter to Karnataka Government to not to add 'Best Villain' Category Award. Annoyed with this, Kannada Director Veerendra has taken his Facebook account to react upon the issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X