For Quick Alerts
  ALLOW NOTIFICATIONS  
  For Daily Alerts

  ನಟ ಚೇತನ್ ವಿರುದ್ಧ ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ

  |

  'ಕಾಂತಾರ' ಸಿನಿಮಾ ವೀಕ್ಷಿಸಿ, ಭೂತಕೋಲ ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದಿದ್ದ ನಟ ಚೇತನ್ ಅಹಿಂಸ ವಿರುದ್ಧ ದೈವಾರಾಧಕರು, ಹಿಂದು ಸಂಘಟನೆಗಳ ಮುಖಂಡರು ಹಾಗೂ ಕೆಲವು ರಾಜಕಾರಣಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಭೂತಕೋಲ ಮೂಲನಿವಾಸಿಗಳ ಆಚರಣೆ, ಅವರು ಇಂಥ ಆಚರಣೆ ಮಾಡುವಾಗ ಹಿಂದೂ ಧರ್ಮವೇ ಹುಟ್ಟಿರಲಿಲ್ಲ, ಹಾಗಿರುವಾಗ ಇದನ್ನು ಹಿಂದೂ ಧರ್ಮದ ಆಚರಣೆ ಎನ್ನಲು ಹೇಗೆ ಸಾಧ್ಯ? ಎಂದು ಚೇತನ್ ಪ್ರಶ್ನೆ ಮಾಡಿದ್ದರು. ಚೇತನ್‌ರ ಹೇಳಿಕೆಯನ್ನು ಈಗಾಗಲೇ ಹಲವರು ವಿರೋಧಿಸಿದ್ದು, ಹಿಂದೂ ಜಾಗರಣಾ ವೇದಿಕೆ ಸದಸ್ಯರು ಕಾರ್ಕಳ ಪೊಲೀಸರ ಬಳಿ ದೂರು ಸಹ ದಾಖಲಿಸಿದ್ದಾರೆ.

  ಚೇತನ್ ಹೇಳಿಕೆ ವಿರುದ್ಧ ಪ್ರತಿಕ್ರಿಯಿಸಿರುವ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ''ಹಿಟ್ ಸಿನಿಮಾ ನೀಡಿ ನಟನಾಗಿ ಉಳಿಯುವ ಸಾಮರ್ಥ್ಯ ಚೇತನ್‌ಗೆ ಇಲ್ಲ, ಹಾಗಾಗಿ, ಹೀಗೆ ಆಗಾಗ್ಗೆ ಒಂದೊಂದು ಹೇಳಿಕೆಗಳನ್ನು ನೀಡುತ್ತಾ ಚಾಲ್ತಿಯಲ್ಲಿರುವ ಯತ್ನ ಮಾಡುತ್ತಿದ್ದಾರೆ. ಚೇತನ್‌ಗೆ ವೃತ್ತಿ ಮಾತ್ಸರ್ಯ'' ಎಂದಿದ್ದಾರೆ.

  ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ

  ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ

  ''ಭಾರತೀಯ ಸಂಸ್ಕೃತಿ ಬೇರೆ, ಮೂಲ ಭಾರತೀಯ ಸಂಸ್ಕೃತಿ ಬೇರೆ ಎನ್ನುವುದು ಎಡಚರ ಸಾಮಾನ್ಯ ಅಜೆಂಡ. ಬುಡಕಟ್ಟಾಗಲಿ ಯಾವುದೇ ಸಂಸ್ಕೃತಿಯಾಗಲಿ ಅದು ಹಿಂದೂ ಧರ್ಮದ ಅಂಗವೇ. 'ಕಾಂತಾರ' ಸಿನಿಮಾದಲ್ಲಿ ದೇವರಿಗಿಂತಲೂ ದೈವಕ್ಕೆ ಹೆಚ್ಚು ಬೆಲೆ ಎಂದೇ ಹೇಳಿದ್ದಾರೆ. ದೈವ ಸಹ ಹಿಂದೆ ವ್ಯಕ್ತಿಯಾಗಿದ್ದಾತ ಸಮಾಜಕ್ಕೆ ದುಡಿದು ದೈವವಾಗಿದ್ದಾರೆ. ಹಾಗಾಗಿ ದೈವವನ್ನು ಬಹಳ ಗೌರವಿಸುತ್ತಾರೆ. ಆ ಗೌರವ ದೇವರಿಗಿಂತಲೂ ಹೆಚ್ಚು. ಹಾಗೆಂದು ಅವರು ದೇವರನ್ನು ನಿರಾಕರಿಸುತ್ತಾರೆ ಎಂದೇನೂ ಇಲ್ಲ. ಎರಡೂ ಜೊತೆ-ಜೊತೆಯಾಗಿ ಸಾಗುತ್ತಿದೆ. ಆದರೆ ಚೇತನ್‌ಗೆ ಅಷ್ಟೆಲ್ಲಾ ಸಂಶೋಧನೆ ಮಾಡಲು ಪುರುಸೊತ್ತಿಲ್ಲ'' ಎಂದಿದ್ದಾರೆ.

  ಚೇತನ್‌ಗೆ ಹೊಟ್ಟೆ ಉರಿಯೇಕೆ? ಪ್ರಮೋದ್ ಮುತಾಲಿಕ್

  ಚೇತನ್‌ಗೆ ಹೊಟ್ಟೆ ಉರಿಯೇಕೆ? ಪ್ರಮೋದ್ ಮುತಾಲಿಕ್

  ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ''ಸಿನಿಮಾ ಬಗ್ಗೆ ಚೆತನ್‌ಗೆ ಯಾಕೆ ಹೊಟ್ಟೆ ಉರಿ? ಆತನಿಗೆ ಈ ಮಣ್ಣಿನ ಗುಣ ಗೊತ್ತಿಲ್ಲ. ಸೊಗಡು ಗೊತ್ತಿಲ್ಲ. ಆತ ಹುಟ್ಟಿದ್ದು ಎಲ್ಲೊ, ಬೆಳೆದಿದ್ದು ಎಲ್ಲೊ, ಈಗ ನಟ ಎಂದುಕೊಂಡು ಬಂದಿದ್ದಾರೆ. ಚೇತನ್ ಒಬ್ಬ ಕಮ್ಯೂನಿಸ್ಟ್‌ವಾದಿ, ನಾಸ್ತಿಕವಾದಿ. ಈ ದೇಶದ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿರುವ ಬುದ್ಧಿಜೀವಿಗಳಲ್ಲಿ ಚೇತನ್ ಸಹ ಒಬ್ಬ. ಚೇತನ್ ನೀಡಿರುವುದು ಮೂರ್ಖತನದ ಹೇಳಿಕೆ. ಕೂಡಲೇ ಆ ಹೇಳಿಕೆಯನ್ನು ಹಿಂಪಡೆಯಬೇಕು'' ಎಂದಿದ್ದಾರೆ.

  ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

  ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

  ಬಿಜೆಪಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹ ಈ ವಿಷಯವಾಗಿ ಸ್ಪಂದಿಸಿದ್ದು, ''ಯಾರು ಏನೇ ಹೇಳಿದರು ಭೂತಾರಾದನೆ ಹಿಂದೂ ಸಂಸ್ಕೃತಿಯ ಭಾಗ. ಪರಿಶಿಷ್ಟರು, ಕೊರಗರು, ಭೂತಾರಾದನೆ ಮಾಡಿಕೊಂಡು ಬರುತ್ತಿದ್ದಾರೆ. ನಾವು ಪಂಜುರ್ಲಿಯನ್ನು ನಂಬುತ್ತೇವೆ. ನಂದಿ, ನಾಗದೇವ ಬೇರೆ ಬೇರೆ ದೈವಗಳನ್ನು ನಂಬುತ್ತಾರೆ. ಭೂತಾರಾದನೆಯ ಭಾಗವಾಗಿ ಕೋಲ ಮಾಡುತ್ತೇವೆ. ನಮ್ಮ ಬದುಕಿನ ಭಾಗವಾಗಿ ಭೂತಾರಾದನೆ ಇದೆ. ನಾವೆಲ್ಲ ಹಿಂದೂಗಳು. ನಮ್ಮ ಕಷ್ಟಗಳನ್ನು ದೈವ ಪರಿಹಾರಿಸುತ್ತಾರೆ ಎಂಬ ನಂಬಿಕೆಯಲ್ಲಿ ಬೆಳೆದುಕೊಂಡು ಬಂದಿದ್ದೀವಿ'' ಎಂದಿದ್ದಾರೆ.

  ರಿಷಬ್ ಶೆಟ್ಟಿ ಹೇಳಿದ್ದೇನು?

  ರಿಷಬ್ ಶೆಟ್ಟಿ ಹೇಳಿದ್ದೇನು?

  'ಕಾಂತಾರ' ಸಿನಿಮಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ''ಇಂಥಹಾ ವಿಷಯಗಳಿಗೆ ನಾನು ಉತ್ತರಿಸುವ ಅವಶ್ಯಕತೆ ಇಲ್ಲ. ಆ ಸಂಸ್ಕೃತಿಯನ್ನು ಆರಾಧಿಸುವವರೇ ಅದನ್ನು ಒಪ್ಪಿಕೊಂಡಿದ್ದಾರೆ. ನಾನು ಈ ಸಿನಿಮಾ ಮಾಡಬೇಕಾದರೆ ಎಲ್ಲದರ ಬಗ್ಗೆಯೂ ಜಾಗೃತೆ ವಹಿಸಿ, ಆ ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತಿರುವವರೇ ನನ್ನ ಜೊತೆಗಿದ್ದರು. ನಾನೂ ಸಹ ಅಲ್ಲಿಯವನೇ, ಸಣ್ಣ ವಯಸ್ಸಿನಿಂದಲೂ ಅದನ್ನು ನೋಡುತ್ತಾ ಬೆಳೆದವನು'' ಎಂದಿದ್ದಾರೆ. ಚೇತನ್ ನೀಡಿರುವ ಹೇಳಿಕೆಗೆ ದೈವಾರಾಧಕರೂ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  English summary
  Chakravarty Sulibele, Kota Srinivas Poojary and many condemn Chetan's Statement About Kantara movie.
  Thursday, October 20, 2022, 15:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X