»   » ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ

ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ

By: ಹರಾ
Subscribe to Filmibeat Kannada

'ಅಲ್ಪನಿಗೆ ಐಶ್ವರ್ಯ ಬಂದ್ರೆ, ಅರ್ಧ ರಾತ್ರೀಲಿ ಕೊಡೆ ಹಿಡಿದರಂತೆ..' ಈ ಗಾದೆ ಮಾತನ್ನ ಇಡೀ ಗಾಂಧಿನಗರ ನಿರ್ದೇಶಕ ಎ.ಪಿ.ಅರ್ಜುನ್ ರತ್ತ ಬೆಟ್ಟು ಮಾಡುತ್ತಾ ಹೇಳುತ್ತಿದೆ. ಅದಕ್ಕೆಲ್ಲಾ ಕಾರಣ, ಅರ್ಜುನ್ ರವರ ಇತ್ತೀಚಿನ ವರ್ತನೆ.

ಸ್ಟಾರ್ ಗಳಿಲ್ಲದೆ 'ಅಂಬಾರಿ', 'ಅದ್ದೂರಿ' ಯಂತಹ ಹಿಟ್ ಸಿನಿಮಾಗಳನ್ನ ನಿರ್ದೇಶಕ ಎ.ಪಿ.ಅರ್ಜುನ್ ಕೊಟ್ಟಿರಬಹುದು. ಆದ್ರೀಗ, ಚಾಲೆಂಜಿಂಗ್ ಸ್ಟಾರ್ ಜೊತೆ 'ಐರಾವತ' ಸಿನಿಮಾ ಮಾಡುತ್ತಿರುವ ಅರ್ಜುನ್ ಅಮಲು ನೆತ್ತಿಗೇರಿದೆ. ಅರ್ಜುನ್ ದುರಹಂಕಾರಿ ಆಗಿದ್ದಾರೆ. ಹೀಗಂತ ನಾವು ಹೇಳುತ್ತಿಲ್ಲ. 'ದಾಸ' ದರ್ಶನ್ ಭಕ್ತರು ಅರ್ಜುನ್ ವಿರುದ್ಧ ಸಿಡಿಮಿಡಿಗೊಂಡು ಆಡಿರುವ ಮಾತುಗಳಿವು.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಧಿಕೃತ ಅಭಿಮಾನಿ ಬಳಗ 'ಡಿ'ಕಂಪನಿ, 'ಫೇಸ್ ಬುಕ್'ನಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ವಿರುದ್ಧ ರೊಚ್ಚಿಗೆದ್ದಿದೆ. ಮುಂದೆ ಓದಿ.....


ಅರ್ಜುನ್ ಮೇಲೆ 'ಡಿ'ಕಂಪನಿ ಕೆಂಗಣ್ಣು

ನಿರ್ದೇಶಕ ಎ.ಪಿ.ಅರ್ಜುನ್ ಮೇಲೆ 'ಡಿ'ಕಂಪನಿ ಕೆಂಗಣ್ಣು ಕಾರುತ್ತಿದೆ. 'ಐರಾವತ' ಸಿನಿಮಾ ಲೇಟ್ ಆಗುತ್ತಿರುವುದಕ್ಕೆ ಖುದ್ದು ನಿರ್ದೇಶಕ ಎ.ಪಿ.ಅರ್ಜುನ್ ದುರಹಂಕಾರ ಕಾರಣ ಅಂತ ಬಹಿರಂಗವಾಗಿ ಸ್ಟೇಟ್ಮೆಂಟ್ ಮಾಡಿದೆ. ''ಸಾಮಾನ್ಯವಾಗಿ ಶೂಟಿಂಗ್ ತಡವಾಗುವುದಕ್ಕೆ ನಿರ್ಮಾಪಕರ ಜೇಬು ಖಾಲಿಯಾಗಿರುವುದು ಇಲ್ಲಾಂದ್ರೆ ಹೀರೋ ಕಾಲ್ ಶೀಟ್ ಸಮಸ್ಯೆ ಕಾರಣವಾಗುತ್ತೆ. ಆದ್ರೆ, ಕೋಟಿ ಕೋಟಿ ಖರ್ಚು ಮಾಡುವ ನಿರ್ಮಾಪಕರು, ಒಳ್ಳೆ ಟೀಮ್ ಇದ್ದರೂ, 'ಐರಾವತ' ಚಿತ್ರೀಕರಣ ತಡವಾಗುತ್ತಿರುವುದಕ್ಕೆ 'Director's Sick Attitude' ಕಾರಣ'' ಅಂತ 'ಡಿ' ಕಂಪನಿ ಹೇಳಿಕೊಂಡಿದೆ.


'ಐರಾವತ' ಚಿತ್ರಕ್ಕೆ ಅರ್ಜುನ್ ಪಡೆದಿರುವ ಸಂಭಾವನೆ ಒಂದು ಕೋಟಿ..!

ಗಾಂಧಿನಗರದಲ್ಲಿ 'ಅಂಬಾರಿ', 'ಅದ್ದೂರಿ'ಯಂತಹ ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ ಎ.ಪಿ.ಅರ್ಜುನ್, 'ಐರಾವತ' ಚಿತ್ರಕ್ಕೆ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ ಒಂದು ಕೋಟಿ...! ಇದನ್ನ ಖುದ್ದು 'ಡಿ'ಕಂಪನಿ ಬಹಿರಂಗ ಪಡಿಸಿ, ''ಒಂದು ಕೋಟಿ ಸಂಭಾವನೆ ಪಡೆದರೂ, ಚಿತ್ರವನ್ನ ಸಮಯಕ್ಕೆ ಸರಿಯಾಗಿ ಮುಗಿಸುವ ಜವಾಬ್ದಾರಿ ನಿರ್ದೇಶಕರಿಗಿಲ್ಲ'' ಅಂತ 'ಡಿ' ಕಂಪನಿ ಅರ್ಜುನ್ ವಿರುದ್ಧ ಚಾಟಿ ಬೀಸಿದೆ. ['ಐರಾವತ' ಅರ್ಜುನ್ ಗೆ ಅಮಲು ನೆತ್ತಿಗೇರ್ತಾ?]


ಒಂದು ವರ್ಷ ಆದ್ರೂ 'ಐರಾವತ' ಕಂಪ್ಲೀಟ್ ಆಗಿಲ್ಲ!

'ಐರಾವತ' ಸಿನಿಮಾ ಸೆಟ್ಟೇರಿದ್ದು ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದಂದು. ಈ ವರ್ಷ ದರ್ಶನ್, ತಮ್ಮ ಬರ್ತಡೆಯನ್ನ ಆಚರಿಸಿಕೊಂಡಿದ್ದೂ ಆಯ್ತು. ಒಂದು ವರ್ಷ ಆದ್ರೂ, 'ಐರಾವತ' ಇನ್ನೂ ಶೂಟಿಂಗ್ ಹಂತದಲ್ಲೇ ಇದೆ. ಇದಕ್ಕೆ ನೇರ ಹೊಣೆ ಯಾರು ಅಂದ್ರೆ, ದರ್ಶನ್ ಅಭಿಮಾನಿ ಸಂಘ, ಅರ್ಜುನ್ ರತ್ತ ಬೆಟ್ಟು ಮಾಡಿದೆ. [ನಿನ್ನಿಂದಲೇ ಚಿತ್ರದ ನಾಯಕಿ ದರ್ಶನ್ ಚಿತ್ರದಿಂದ ಔಟ್]


ದರ್ಶನ್ ಕಾಲ್ ಶೀಟ್ ನೀಡಿರುವ ದಿನಗಳೆಷ್ಟು..?

''ಐರಾವತ' ಚಿತ್ರಕ್ಕಾಗಿ ಇಂದಿನವರೆಗೂ ದರ್ಶನ್ ಬರೋಬ್ಬರಿ ಒಂಬತ್ತು ತಿಂಗಳ ಕಾಲ ಕಾಲ್ ಶೀಟ್ ನೀಡಿದ್ದಾರೆ. ಒಂಬತ್ತು ತಿಂಗಳಲ್ಲಿ ನಿರ್ದೇಶಕರು, ದರ್ಶನ್ ಅವರಿಗೆ ಕೆಲಸ ನೀಡಿದ್ದು ಬರೀ 90 ದಿನಗಳು ಮಾತ್ರ..!'' - 'ಡಿ' ಕಂಪನಿ


ದಿನದಲ್ಲಿ ಸಿಂಗಲ್ ಶಾಟ್ ಕೂಡ ತೆಗೆಯೋಲ್ಲ..!

ಇಷ್ಟೆಲ್ಲಾ ಕಾರಣಗಳೊಂದಿಗೆ ಇದೇ ತಿಂಗಳು ನಡೆದ ಘಟನೆಯೊಂದನ್ನ 'ಡಿ' ಕಂಪನಿ ಫೇಸ್ ಬುಕ್ ನಲ್ಲಿ ವಿವರಿಸಿದೆ. ''ಎಂದಿನಂತೆ ಶೂಟಿಂಗ್ ನಿಮಿತ್ತ ಮೇಕಪ್ ಧರಿಸಿ ದರ್ಶನ್ ರೆಡಿಯಾಗಿದ್ದರೂ, ಇಡೀ ಒಂದೇ ಒಂದು ಶಾಟ್ ನ ಕೂಡ ಅರ್ಜುನ್ ತೆಗೆಯಲಿಲ್ಲ. ಬೇಸರದಿಂದ ದರ್ಶನ್ ಮನೆಗೆ ವಾಪಸ್ಸು ತೆರಳಿದರು. 15 ವರ್ಷಗಳ ಚಿತ್ರಜೀವನದಲ್ಲಿ ಮೇಕಪ್ ಧರಿಸಿ ಒಂದು ಶಾಟ್ ಕೂಡ ತೆಗೆಯದೇ ಇರುವುದು ಇದು ಮೊದಲ ಬಾರಿ'' - 'ಡಿ' ಕಂಪನಿ.


ಫೇಸ್ ಬುಕ್ ನಲ್ಲಿ ಸಮರಕ್ಕಿಳಿದ 'ಡಿ'ಕಂಪನಿ

ದರ್ಶನ್ ಕುರಿತ ಎಲ್ಲಾ ಅಪ್ ಡೇಟ್ಸ್ ಗಳನ್ನ ಚಾಚೂ ತಪ್ಪದೇ ನೀಡುವ 'ಡಿ'ಕಂಪನಿ 'ಐರಾವತ' ಚಿತ್ರದಲ್ಲಾಗುತ್ತಿರುವ ಸಮಸ್ಯೆಯನ್ನ ಯಾವುದೇ ರಾಜಿಯಿಲ್ಲದೇ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದೆ. 'ಡಿ' ಕಂಪನಿ ಹಾಕಿಕೊಂಡಿರುವ ಸಂಪೂರ್ಣ ಸ್ಟೇಟಸ್ ಲಿಂಕ್ (ಇಲ್ಲಿದೆ ನೋಡಿ)


ಇದು ಮೊದಲೇನಲ್ಲ..!

'ಐರಾವತ' ಚಿತ್ರದ ನಿರ್ದೇಶಕ ಅರ್ಜುನ್ ಬಗ್ಗೆ ಇಂತಹ ಆರೋಪಗಳು ಕೇಳಿ ಬರುತ್ತಿರುವುದು ಇದು ಮೊದಲೇನಲ್ಲ. 'ಐರಾವತ' ಸಿನಿಮಾ ಸೆಟ್ಟೇರಿದಾಗಿನಿಂದಲೂ ಅರ್ಜುನ್ ಅಹಂ ಬಗ್ಗೆ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಇದೀಗ ಅರ್ಜುನ್ ವರ್ತನೆ ಮಿತಿ ಮೀರಿರುವುದಕ್ಕೆ 'ಡಿ'ಕಂಪನಿ ಬಹಿರಂಗ ಸಮರ ಸಾರಿದೆ. [ರು.100 ಕೋಟಿ ಒಡೆಯನಾದ ಅಂಬಾರಿ ಅರ್ಜುನ್!]


ನಿರ್ದೇಶಕ ಎ.ಪಿ.ಅರ್ಜುನ್ ಸಮಸ್ಯೆ ಏನು?

ಯುಗಾದಿ ಹಬ್ಬದ ಪ್ರಯುಕ್ತ ಎ.ಪಿ.ಅರ್ಜುನ್ ನಿರ್ದೇಶನದ 'ರಾಟೆ' ಸಿನಿಮಾ ತೆರೆಗೆ ಬರುತ್ತಿದೆ. ಅದರ ಪ್ರೊಮೋಷನ್ ನಲ್ಲಿ ಅರ್ಜುನ್ ಬಿಜಿಯಿದ್ದಾರೆ. 'ರಾಟೆ' ಭರಾಟೆಯಿಂದ ಅರ್ಜುನ್ 'ಐರಾವತ'ದ ಕಡೆ ಗಮನ ಹರಿಸುತ್ತಿಲ್ಲ. [ಹುಟ್ಟುಹಬ್ಬದ ದಿನ ಐರಾವತ ಏರಲಿರುವ ದರ್ಶನ್]


ನಿರ್ದೇಶಕ ಎ.ಪಿ.ಅರ್ಜುನ್ ಏನು ಹೇಳ್ತಾರೆ?

ಇಷ್ಟೆಲ್ಲಾ ಆರೋಪಗಳು ಕೇಳಿಬರುತ್ತಿದ್ದರೂ, ಅರ್ಜುನ್ ಮಾತ್ರ ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಫೋನ್ ಮಾಡಿದರೂ, ಅದಕ್ಕೆ ಪ್ರತಿಕ್ರಿಯೆ ನೀಡೋಲ್ಲ. 'ಐರಾವತ' ಚಿತ್ರದ ನಿರ್ಮಾಪಕರೂ ಕೂಡ 'ರಾಟೆ' ರಿಲೀಸ್ ಆಗಲಿ ಅಂತ ಕಾಯುತ್ತಿದ್ದಾರೆ. ವರ್ಷದಿಂದ ರೆಡಿಯಾಗುತ್ತಲೇ ಇರುವ 'ಐರಾವತ' ಆದಷ್ಟು ಬೇಗ ಕಂಪ್ಲೀಟ್ ಆದರೆ, 'ಡಿ' ಫ್ಯಾನ್ಸ್ ಖುಷ್ ಆಗುತ್ತಾರೆ. ಇಲ್ಲಾಂದ್ರೆ, ಇಂತಹ ಸಮರಗಳಿಗೆ ಮುಕ್ತಿ ಇಲ್ಲ..!


English summary
Director A.P.Arjun in controversy again. Even after getting 9 months of call-sheet, A.P.Arjun has not utilized it efficiently. Kannada Movie 'Airavatha' is still under Shooting stage since one year. Enraged with this Darshan's Official Fan Club, 'D' Company has taken its Facebook account to criticize the director's attitude.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada