»   » ಪತ್ನಿ ಮೇಲೆ ಹಲ್ಲೆ ಪ್ರಕರಣ; ದರ್ಶನ್ ಗೆ ಕ್ಲೀನ್ ಚಿಟ್

ಪತ್ನಿ ಮೇಲೆ ಹಲ್ಲೆ ಪ್ರಕರಣ; ದರ್ಶನ್ ಗೆ ಕ್ಲೀನ್ ಚಿಟ್

Posted By: Staff
Subscribe to Filmibeat Kannada
ಪತ್ನಿ ವಿಜಯಲಕ್ಷ್ಮಿ ಮೇಲಿನ ಹಲ್ಲೆ ಪ್ರಕರಣದಿಂದ ನಟ ದರ್ಶನ್ ಅವರನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಖುಲಾಸೆಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಹಾಗೂ ಸತಿಪತಿ ಈಗ ಅನ್ಯೋನ್ಯವಾಗಿರು ಕಾರಣ ಪ್ರಕರಣದಿಂದ ದರ್ಶನ್ ರನ್ನು ದೋಷಮುಕ್ತಗೊಳಿಸಲಾಗಿದೆ.

ಸೆಪ್ಟೆಂಬರ್ 8, 2011ರಲ್ಲಿ ದರ್ಶನ್ ಅವರು ಪತ್ನಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದರು. ಪತ್ನಿಯನ್ನು ಸಿಗರೇಟ್ ನಿಂದ ಗಾಯಗೊಳಿಸಿದ್ದರು. ತಮ್ಮ ಮಗುವನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದರು ಎಂದು ಆರೋಪಿಸಿ ವಿಜಯನಗರ ಪೊಲೀಸ್ ಠಾಣೆಗೆ ಸೆಪ್ಟಂಬರ್ 9, 2011ರಲ್ಲಿ ದೂರು ನೀಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷ್ಮಿಗಳನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಅವರ ಅತ್ತೆ ಸುಮತಿ ಹಾಗೂ ಕಾರಿನ ಚಾಲಕ ಲಕ್ಷ್ಮಣ್ ಈ ಪ್ರಕರಣ ಪ್ರಮುಖ ಸಾಕ್ಷಿಗಳಾಗಿದ್ದರು.

ವಿಚಾರಣೆ ವೇಳೆಯಲ್ಲಿ ವಿಜಲಕ್ಷ್ಮಿ ಅವರು, "ತಮ್ಮ ಪತಿ ಸಿಗರೇಟ್ ಸೇದುತ್ತಿರಬೇಕಾದರೆ ಆಕಸ್ಮಿಕವಾಗಿ ಅದು ತಮ್ಮ ಮುಖಕ್ಕೆ ತಗುಲಿ ಸುಟ್ಟ ಗಾಯವಾಯಿತು. ಹಾಗೆಯೇ ಅವರು ಕಾರಿನ ಬಾಗಿಲು ತೆಗೆಯಬೇಕಾದರೆ ಆಕಸ್ಮಿಕವಾಗಿ ಅದರ ಬಾಗಿಲು ಮಗುವಿಗೆ ತಗುಲಿತು" ಎಂದು ಹೇಳಿದ್ದಾರೆ.

ಇನ್ನು ದರ್ಶನ್ ಅವರ ಅತ್ತೆ ಸುಮತಿ ಅವರು, "ನಾನು ಪೊಲೀಸರ ಮುಂದೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ದರ್ಶನ್ ಅವರು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ" ಎಂದಿದ್ದಾರೆ.

ದರ್ಶನ್ ಅವರ ಕಾರು ಚಾಲಕ ಲಕ್ಷ್ಮಣ್, "ಆ ದಿನ ಏನು ನಡೆಯಿತೋ ನನಗೆ ಗೊತ್ತಾಗಲಿಲ್ಲ. ಯಾಕೆಂದರೆ ನಾನು ಕಾರಿನಿಂದ ಹೊರಗಿದ್ದೆ. ಕಾರಿನ ಒಳಗಡೆ ಏನು ನಡೆಯಿತು ಎಂದು ತಿಳಿಯಲಿಲ್ಲ" ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಕೊಟ್ಟಂತಹ ಹೇಳಿಕೆಗಳನ್ನು ಆಧರಿಸಿ ಕೋರ್ಟ್ ದರ್ಶನ್ ಅವರನ್ನು ಖುಲಾಸೆಗೊಳಿಸಿದೆ. ಮೊನ್ನೆಯಷ್ಟೇ (ಫೆ.16) 36ನೇ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್ ಅವರಿಗೆ ಬರ್ತ್ ಡೇ ಗಿಫ್ಟ್ ಸಿಕ್ಕಂತಾಗಿದೆ. ಮುಟ್ಟುಗೋಲು ಹಾಕಿಕೊಂಡಿರುವ ಅವರ ಗನ್ನನ್ನು 30 ದಿನಗಳ ಒಳಗಾಗಿ ಹಿಂತಿರುಗಿಸುವಂತೆ ವಿಜಯನಗರ ಪೊಲೀಸರಿಗೆ ಕೋರ್ಟ್ ಅದೇಶಿಸಿದೆ.

ಸೆಪ್ಟಂಬರ್ 9, 2011ರಂದು ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕ ಹಲ್ಲೆ ಆರೋಪದಡಿ ವಿಜಯನಗರ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. ಅಕ್ಟೋಬರ್ 7, 2011ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಘಟನೆ ನಡೆದ 16 ತಿಂಗಳ ನಂತರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. (ಏಜೆನ್ಸೀಸ್)

English summary
Bangalore's 1st ACMM court aquits Kannada actor Darshan of assaulting his wife Vijayalakshmi. Bangalore Vijayanagara police submitted 100 pages charge sheet against Kannada actor Darshan for assaulting his wife.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada