»   » ಮೀನಾ ತೂಗುದೀಪ ಕಾಲಿಗೆ ಬೀಳಲು ಫ್ಯಾನ್ಸ್ ಆಗ್ರಹ

ಮೀನಾ ತೂಗುದೀಪ ಕಾಲಿಗೆ ಬೀಳಲು ಫ್ಯಾನ್ಸ್ ಆಗ್ರಹ

Posted By:
Subscribe to Filmibeat Kannada
Actor Darshan fans association
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ಹಾಗೂ ಹಿರಿಯ ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರನ್ನು ಸುರಪಾನಮತ್ತರಾಗಿ ಮನಬಂದಂತೆ ನಿಂದಿಸಿರುವ ಕನ್ನಡ ಚಿತ್ರಗಳ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ದರ್ಶನ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ಅವರ ಕಾಲಿಗೆ ಬಿದ್ದು ಸೂರಪ್ಪ ಬಾಬು ಕ್ಷಮೆಯಾಚಿಸಬೇಕು ಎಂದು ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘ ಭಾನುವಾರ (ಜು.8) ಸಂಜೆ ಆಗ್ರಹಿಸಿತು. ಗ್ರೀನ್ ಹೌಸ್ ರಾಜ್ ಮಿಲನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯಕರ್ತರು ಮಾತನಾಡುತ್ತಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ದರ್ಶನ್ ಅಭಿಮಾನಿಗಳು ಹಾಗೂ ಮಾಧ್ಯಮದವರ ಮುಂದೆ ಮೀನಾ ಅವರ ಕಾಲಿಗೆ ಬಿದ್ದು ಸೂರಪ್ಪ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದರ್ಶನ್ ಅಭಿಮಾನಿಗಳು ಎಚ್ಚರಿಸಿದ್ದಾರೆ. ಕ್ಷಮೆ ಕೋರಲು ಸೂರಪ್ಪ ಬಾಬುಗೆ ಮಂಗಳವಾರದ (ಜು.10)ತನಕ ಗಡುವು ನೀಡಲಾಗಿದೆ. (ಯೂಟ್ಯೂಬ್ ವಿಡಿಯೋ)

ಕನ್ನಡ ಚಿತ್ರರಂಗಕ್ಕೆ ಆದರ್ಶಪ್ರಾಯರಾಗಿದ್ದ ಕಲಾವಿದರ ಬಗ್ಗೆ ಈ ರೀತಿ ಮಾತನಾಡುವುದು ತಪ್ಪು. ವರನಟ ಡಾ.ರಾಜ್ ಕುಮಾರ್ ಅವರಂತಹ ಮೇರುನಟರೇ ತೂಗುದೀಪ ಶ್ರೀನಿವಾಸ್ ಅವರಿಗೆ ಗೌರವ ಕೊಡುತ್ತಿದ್ದರು. ಮದ್ಯದ ಅಮಲಿನಲ್ಲಿ ಸೂರಪ್ಪ ಬಾಬು ಬಾಯಿಗೆ ಬಂದಂತೆ ಮಾತನಾಡಿರುವುದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ.

ಈ ವಿಷಯವನ್ನು ಇಲ್ಲಿಗೆ ಬಿಡಲ್ಲ. ಸೂರಪ್ಪ ಬಾಬು ವಿರುದ್ಧ ಪ್ರತಿಭಟನೆ ಕೂರಲು ನಿರ್ಧರಿಸಿದ್ದೇವೆ. ಸೋಮವಾರ (ಜು.9) ಮಧ್ಯಾಹ್ನ 3 ಗಂಟೆಗೆ ಆನಂದರಾವ್ ವೃತ್ತದ ಬಳಿಯ ಗಾಂಧಿಚೌಕದಿಂದ ಚಲನಚಿತ್ರ ವಾಣಿಜ್ಯ ಮಂಡಳಿವರೆಗೆ ಮೌನ ಪ್ರತಿಭಟನೆ ನಡೆಸಲಿರುವುದಾಗಿ ತಿಳಿಸಿದರು.

ಈ ಪ್ರತಿಭಟನಾ ರ್‍ಯಾಲಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ದರ್ಶನ್ ಅಭಿಮಾನಿಗಳು ಆಗಮಿಸಲಿದ್ದಾರೆ. ಇವರೆಲ್ಲರ ಒಕ್ಕೊರಲಿನ ಒತ್ತಾಯ ಇಷ್ಟೇ; ಮೀನಾ ತೂಗುದೀಪ ಅವರ ಕಾಲಿಗೆ ಬಿದ್ದು ಸೂರಪ್ಪ ಬಾಬು ಕ್ಷಮೆಯಾಚಿಸಬೇಕು. ಇದು ಫಿಲಂ ಚೇಂಬರ್ ನಲ್ಲೇ ನಡೆಯಬೇಕು. ಅದೂ ದರ್ಶನ್ ಅಭಿಮಾನಿಗಳು ಹಾಗೂ ಮಾಧ್ಯಮದವರ ಸಮ್ಮುಖದಲ್ಲಿ ಎಂಬುದು.

ಅಭಿಮಾನಿಗಳೇನೋ ಪ್ರತಿಭಟನೆಗೆ ಇಳಿದಿದ್ದಾರೆ. ಆದರೆ ಈ ವಿಷಯವನ್ನು ಅವರು ದರ್ಶನ್ ಗೆ ತಿಳಿಸಿಲ್ಲವಂತೆ. ಆದರೆ ದರ್ಶನ್ ಅವರಿಗೆ ಕಳಂಕ ತರುವ ಪ್ರತಿಭಟನೆ ಮಾತ್ರ ಇದಲ್ಲ. ಕಲಾವಿದರ ಆತ್ಮಾಭಿಮಾನವನ್ನು ಎತ್ತಿಹಿಡಿಯುವ ಮೌನ ಪ್ರತಿಭಟನೆ ಇದು ಎನ್ನುತ್ತದೆ ದರ್ಶನ್ ಅಭಿಮಾನಿಗಳ ಸಂಘ.

ಎಣ್ಣೆ ಏಟಿನಲ್ಲಿ ಸೂರಪ್ಪ ಬಾಬು ಏನೋನೋ ಮಾತನಾಡಿದ್ದರ ವಿರುದ್ಧ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ತಕ್ಷಣ ಪ್ರತಿಕ್ರಿಯಿಸಿದ್ದರು. "ಬೀದಿಯಲ್ಲಿ ಬೊಗಳುವ ನಾಯಿಗಳಿಗೆಲ್ಲಾ ಪ್ರತಿಕ್ರಿಯಿಸಲ್ಲ. ಅವನಿಗೆ ಸಿನಿಮಾ ಮಾಡಲು ಯೋಗ್ಯತೆ ಇಲ್ಲ. ಇಂತಹವರನ್ನು ಇಂಡಸ್ಟ್ರಿಯಿಂದ ಕತ್ತುಹಿಡಿದು ಹೊರತಳ್ಳಬೇಕು" ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಆದರೆ ದರ್ಶನ್ ಮಾತ್ರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್)

English summary
Challenging Star Darshan fans association demanded that Soorappa Babu should apologize in front of Smt Meena Toogudeepa Sreenivas at Karnataka Film Chamber of Commerce. Soorappa Babu using bad words on late actor Toogudeepa Srinivas in drunken state.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada