For Quick Alerts
ALLOW NOTIFICATIONS  
For Daily Alerts

  ಉದಯ ಶಂಕರ್ ಅವರನ್ನು ದುರ್ಬಳಕೆ ಮಾಡಿಕೊಂಡವರೇ ಹೆಚ್ಚು: ನಿರ್ದೇಶಕ ಭಗವಾನ್

  By ಫಿಲ್ಮಿಬೀಟ್ ಡೆಸ್ಕ್
  |

  (ಸಾಹಿತ್ಯ ರತ್ನ ಚಿ.ಉದಯ ಶಂಕರ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಹಿರಿಯ ನಿರ್ದೇಶಕ ಭಗವಾನ್ (ದೊರೈ-ಭಗವಾನ್ ಖ್ಯಾತಿ) ಅವರನ್ನು ಸಂಪರ್ಕಿಸಿದ ಒನ್ ಇಂಡಿಯಾ ಬಳಿ, ಜನ ಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಅವರು ಬೆಳೆದ ರೀತಿ, ಹೊಂದಿದ್ದ ಜನಪ್ರಿಯತೆ, ಅವರ ಪ್ರತಿಭೆಯ ವಿಶೇಷತೆಗಳ ಜತೆಗೆ, ಚಿತ್ರರಂಗ ಅವರ ಒಳ್ಳೆಯತನವನ್ನು ಹೇಗೆ ದುರುಪಯೋಗ ಪಡಿಸಿಕೊಂಡಿತು ಎಂಬುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದಾರೆ.)

  ಕನ್ನಡ ಚಿತ್ರರಂಗಕ್ಕೆ ಸಾವಿರಾರು ಹಾಡುಗಳನ್ನು ಕೊಟ್ಟು ಸಾಹಿತ್ಯ ರತ್ನ ಎಂದು ಬಿರುದು ಪಡೆದಿದ್ದ ಚಿ.ಉದಯ ಶಂಕರ್, ಅಂತರಂಗದಲ್ಲಿ ಅತ್ಯಂತ ಮೃದು ಸ್ವಭಾವದ, ಸಜ್ಜನತೆಯನ್ನೇ ಮೈಗೂಡಿಸಿಕೊಂಡಂಥ ವ್ಯಕ್ತಿ. ಇನ್ನು, ಆತನ ಪ್ರತಿಭೆಯ ಬಗ್ಗೆ ಮಾತನಾಡಲು ನಿಜಕ್ಕೂ ನಾವ್ಯಾರೂ ಅರ್ಹರಲ್ಲ. ಅಂಥ ಮಹಾನ್ ಪ್ರತಿಭಾವಂತ ಆತ....

  ಹೀಗೊಂದು ಪೀಠಿಕೆ ಹಾಕುತ್ತಾ ಮಾತಿಗಿಳಿದ ಭಗವಾನ್, ಒಂದು ಸಣ್ಣ ಮುಗುಳ್ನಗೆ ನಕ್ಕರು. ನಂತರ, ದೂರದ ಗೋಡೆಯ ಮೇಲೆ ಶೂನ್ಯವನ್ನು ದೃಷ್ಟಿಸುತ್ತಾ ತಮ್ಮ ಮಾತು ಮುಂದುವರಿಸಿದರು.

  ಒಂದು ಹಾಡಿಗೆ ಚಿ.ಉದಯಶಂಕರ್ ಪಡೆಯುತ್ತಿದ್ದ ಸಂಭಾವನೆ ಕೇವಲ 200 ರೂಪಾಯಿ!

  ಉದಯ ಶಂಕರ್ ನನಗೆ ಯುವಕನಾಗಿದ್ದಾಗಿನಿಂದಲೇ ನನಗೆ ಪರಿಚಿತ. ಹೆಚ್ಚೂ ಕಡಿಮೆ ಒಂದೇ ವಯೋಮಾನದವರಾದ ನಾವು ಕೆಲವೇ ದಿನಗಳಲ್ಲಿ ಹೋಗೋ ಬಾರೋ ಎಂಬಷ್ಟರ ಮಟ್ಟಿಗೆ ಆತ್ಮೀಯರಾಗಿಬಿಟ್ಟಿದ್ದೆವು. ನನ್ನ ಅವರ ಪರಿಚಯವಾಗಿದ್ದರ ಹಿಂದೆಯೂ ಸ್ವಾರಸ್ಯಕರ ಕತೆಯೊಂದಿದೆ. ಅವರ ತಂದೆ ಸದಾಶಿವಯ್ಯನವರು ಆಗಿನ ಕಾಲಕ್ಕೇ ಕನ್ನಡ ಚಿತ್ರರಂಗದ ದೊಡ್ಡ ಸಾಹಿತಿಗಳಾಗಿದ್ದರು. ನಾವು ನಮ್ಮ ಚಿತ್ರಗಳಿಗೆ ಅವರಿಂದ ಸಾಹಿತ್ಯ ಬರೆಸುತ್ತಿದ್ದೆವು. ಸಾಹಿತ್ಯಿಕ ಕೆಲಸಗಳಿಗಾಗಿ ಅವರ ಮನೆಗೆ ಹೋಗಿ ಬರುತ್ತಿದ್ದರಿಂದ, ನಮಗೆ ಆಗಲೇ ಚಿ.ಉದಯ ಶಂಕರ್ ಪರಿಚಿತವಾಗಿದ್ದು.

  ನಮ್ಮ ಬ್ಯಾನರಿನಡಿಯಲ್ಲಿ ಸಂತ ತುಕಾರಾಂ ಚಿತ್ರ ಮಾಡುವಾಗ ಕಾರಣಾಂತರಗಳಿಂದ ಸದಾಶಿವಯ್ಯ ಅವರಿಗೆ ನಮ್ಮ ಚಿತ್ರಕ್ಕೆ ಬರೆಯಲು ಆಗಲಿಲ್ಲ. ಆಗ, ಅವರ ಸಲಹೆಯ ಮೇರೆಗೆ ನಾವು ಉದಯ ಶಂಕರ್ ಅವರನ್ನು ಚಿತ್ರದ ಸಂಭಾಷಣೆಕಾರನ್ನಾಗಿ ಹಾಕಿಕೊಳ್ಳಬೇಕಾಯಿತು. ಅಷ್ಟರಲ್ಲಾಗಲೇ ಅವರ ತಂದೆಗೆ ಉದಯ ಶಂಕರ್
  ಸಹಾಯ ಮಾಡುತ್ತಿದ್ದರಿಂದ ನಮಗೂ ಅವರ ಪ್ರತಿಭೆಯ ಕೆಲವು ಅಂಶಗಳು ಅರ್ಥವಾಗಿತ್ತು. ಹಾಗಾಗಿ, ಅವರನ್ನು ಸಂತ ತುಕಾರಾಂ ಚಿತ್ರಕ್ಕೆ ಸಂಭಾಷಣೆಗಾರರನ್ನಾಗಿ ನೇಮಿಸಿಕೊಂಡೆವು. ಅಲ್ಲಿಂದ ಶುರುವಾಯ್ತು ಅವರ ಚಿತ್ರ ಜೀವನ.

  ಇಲ್ಲಿ ಹೇಳಬೇಕಾದ ಪ್ರಮುಖ ವಿಚಾರವೇನೆಂದರೆ, ಚಿ.ಉದಯ ಶಂಕರ್ ಅವರ ತಾಳ್ಮೆ ಹಾಗೂ ಪ್ರತಿಯೊಂದನ್ನು ಸರಳವಾಗಿ ತೆಗೆದುಕೊಳ್ಳುವ ಗುಣ. ಸದಾಶಿವಯ್ಯನವರು ಬಲು ಶಿಸ್ತಿನ ಸಿಪಾಯಿ. ಅವರ ಸಾಹಿತ್ಯವೂ ಹಾಗೇ ಇರುತ್ತಿತ್ತು. ಅತ್ಯಂತ ತೂಕದ ಸಾಹಿತ್ಯ ಅವರದ್ದು. ಹಾಗಾಗಿ, ಅವರು ಬರೆದ ಒಂದಕ್ಷರವನ್ನೂ ಬದಲಿಸಿದರೆ ಅವರು ಸಿಡಿಮಿಡಿಗೊಳ್ಳುತ್ತಿದ್ದರು. ಅದರಿಂದ ನಮಗೂ ಅವರಿಗೂ ಯಾವುದೇ ಭಿನ್ನಾಭಿಪ್ರಾಯವಾಗಿಲ್ಲ. ಇದೇ ವಿಚಾರದಲ್ಲಿ ಚಿ.ಉದಯ ಶಂಕರ್ ಬಗ್ಗೆ ಹೇಳುವುದಾದರೆ, ಅವರು ಅವರು ಹಾಡನ್ನೋ, ಸಂಭಾಷಣೆಯನ್ನೋ ಬರೆದು ನಮ್ಮ ಕೈಗೆ ಕೊಟ್ಟು "ನನಗೆ ತೋಚಿದ್ದನ್ನು ನಾನು ಬರೆದಿದ್ದೇನೆ. ನಿಮಗೆ ಬೇಕಾದ ಹಾಗೆ ತಿದ್ದಿಕೊಳ್ಳಿ" ಎನ್ನುತ್ತಿದ್ದರು. ಅಂಥ ಪ್ರತಿಭಾವಂತನ ಸರಳತೆ ನೋಡಿ ನಮಗೆ ಖುಷಿಯಾಗುತ್ತಿತ್ತು. ಆ ಕಾರಣಕ್ಕಾಗಿಯೇ, ಅವರು ಅನೇಕ ಚಿತ್ರ ನಿರ್ದೇಶಕರಿಗೆ ಪ್ರಿಯವಾಗಿದ್ದರು.

  ಇಷ್ಟು ಹೇಳಿದ ಭಗವಾನ್ ಮುಖದಲ್ಲಿ ಅದೇನೋ ದುಗುಡ ಕಾಣಿಸಿಕೊಂಡಿತು. ಯಾವುದೋ ವಿಚಾರವನ್ನು ಹೇಳಲೋ, ಬೇಡವೋ ಎಂಬಂತಾಯಿತು ಅವರ ಮುಖಭಾವ. ಕೆದಕಿದಾಗ ಅವರು ಹೇಳಿದ್ದಿಷ್ಟು.

  ಚಿತ್ರರಂಗದಲ್ಲಿ ತುಂಬಾ ಜನ ಅವರ ಒಳ್ಳೆಯತನ ದುರುಪಯೋಗಪಡಿಸಿಕೊಂಡರು ಎಂದ ಅವರ ಮಾತು ಅಚ್ಚರಿ ತಂದಿತು. ಹೌದು, ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಒಂದು ಹಾಡಿನ ಸಾಹಿತ್ಯಕ್ಕೆ ಅವರು ಪಡೆಯುತ್ತಿದ್ದುದು ಕೇವಲ 150 ರಿಂದ 200 ರೂ. ಮಾತ್ರ! ಆಗಿನ ಕಾಲಕ್ಕೆ ಲಕ್ಷಗಳ ಲೆಕ್ಕದಲ್ಲಿ ಚಿತ್ರ ಮಾಡುತ್ತಿದ್ದರೂ 150 ರೂ., 200 ರೂ. ನೀಡುವಲ್ಲಿ ಹಿಂದೇಟು ಹಾಕಿದ್ದಾರೆ ಕೆಲ ನಿರ್ಮಾಪಕರು. ಅಷ್ಟೇ ಅಲ್ಲ, ಅವರ ಹಾಡುಗಳು ಹಿಟ್ ಆಗಿ, ಆ ಮೂಲಕ ಚಿತ್ರಕ್ಕೆ ಒಳ್ಳೆ ಹೆಸರು ಬಂದರೂ, ಉದಯ ಶಂಕರ್ ಗೆ ಸಂಭಾವನೆ ನೀಡಲಿಲ್ಲವಲ್ಲ ಎಂಬ ಭಾವ ಅವರನ್ನು ಕಾಡಿಲ್ಲ. ಅಂಥ ನಿರ್ಮಾಪಕರೂ ಇದ್ದರು.

  ಅದೆಷ್ಟೋ ಜನರಿಗೆ ಅವರ ಸ್ನೇಹಕ್ಕೆ ಕಟ್ಟುಬಿದ್ದೋ, ಅವರ ಒತ್ತಡಕ್ಕೋ ಒಳಗಾಗಿ ಬರೆದುಕೊಟ್ಟಿದ್ದೂ ಉಂಟು. ಅದೆಷ್ಟೋ ಜನರು, ಉದಯ ಶಂಕರ್ ಗೆ ಇಷ್ಟವಾದ ಮಸಾಲೆ ದೋಸೆ ತರಿಸಿಕೊಟ್ಟು ತಿನ್ನಿಸಿ, ದುಡ್ಡು ಆಮೇಲೆ ಕೊಡ್ತೀವಿ ಅಂತ ಹೇಳಿ ಹಾಡು ಬರೆಸಿಕೊಂಡು ಹೋಗಿ ಆನಂತರ ಕೈಕೊಟ್ಟಿದ್ದಾರೆ. ಆದರೆ, ಇವ್ಯಾವಕ್ಕೂ ಆತ ತಲೆಕೆಡಿಸಿಕೊಂಡವರಲ್ಲ.

  ನಮ್ಮ ಬ್ಯಾನರ್, ರಾಜ್ ಕುಮಾರ್ ಬ್ಯಾನರ್, ವೀರಾಸ್ವಾಮಿ ಬ್ಯಾನರ್ ಸೇರಿದಂತೆ ಕೆಲವೇ ಕೆಲವು ಬ್ಯಾನರ್ ಗಳು ಮಾತ್ರ ಅವರ ಕೆಲಸಕ್ಕೆ ಸೂಕ್ತ ಸಂಭಾವನೆ ಕೊಟ್ಟಿದ್ದು. ಅವರಿಗೆ ಟೋಪಿ ಹಾಕಿದವರೇ ಜಾಸ್ತಿ ಎಂದರು ಭಗವಾನ್.

  ಉದಯ ಶಂಕರ್ ಗೆ ಆಗುತ್ತಿರುವ ಅನ್ಯಾಯಗಳನ್ನು ನೋಡಿ ಹುಷಾರಾಗಿರಲು ಅವರ ಆತ್ಮೀಯರು ಎಷ್ಟು ಹೇಳಿದರೂ ಉದಯ ಶಂಕರ್ ಕೇಳುತ್ತಿರಲಿಲ್ಲ. ನೋಡಿ, ನಾವು ಲಕ್ಷ್ಮಿ ಹಿಂದೆ ಓಡಬಾರದು. ಸರಸ್ವತಿಯ ಆಶ್ರಯದಲ್ಲೇ ಇರಬೇಕು ಅಂತ ಹೇಳುತ್ತಿದ್ದರಂತೆ ಅವರು.

  ಭಗವಾನ್ ಪ್ರಕಾರ, ಹಾಡು ಬರೆಯುವುದು ಬಿಟ್ಟರೆ ಉದಯ ಶಂಕರ್ ಅವರಿಗೆ ವಿಪರೀತ ಶಾಪಿಂಗ್ ಹವ್ಯಾಸ ಇತ್ತಂತೆ. ವಿದೇಶಿ ಪ್ರವಾಸಗಳಿಗೆ ಹೋದಾಗಲೆಲ್ಲಾ ಅತಿಯಾದ ಶಾಪಿಂಗ್ ಮಾಡುತ್ತಿದ್ದರಂತೆ ಅವರು. ಹೀಗೇ, ಟೋಕಿಯೋಕ್ಕೆ ರಾಜ್ ಕುಮಾರ್ ಫ್ಯಾಮಿಲಿ, ದೊರೈ ಭಗವಾನ್ ಸೇರಿದಂತೆ ಹಲವಾರು ಮಿತ್ರರ ಜತೆ ಪ್ರವಾಸಕ್ಕೆ ಹೋದಾಗ ಅಲ್ಲಿ ತಪ್ಪಿಸಿಕೊಂಡು ಬಿಟ್ಟಿದ್ದರಂತೆ! ಅದಕ್ಕೆ ಕಾರಣ ಅವರ ಶಾಪಿಂಗ್ ಖಯಾಲಿ ಎಂದು ನಗುತ್ತಾರೆ ಭಗವಾನ್.

  ಯಾವುದಾದರೂ ಚಿತ್ರಕ್ಕೆ ಬರೆದ ಸಾಹಿತ್ಯದಿಂದ ಬಂದ ದುಡ್ಡಿನ್ನು ಎಂದೂ ಪೂರ್ತಿಯಾಗಿ ಮನೆಗೆ ಕೊಂಡೊಯ್ಯುವ ಆಸಾಮಿಯೇ ಆಗಿರಲಿಲ್ಲ ಅವರು ಎಂದು ನಸುನಗುವ ಸಂಭಾವನೆಯಲ್ಲಿ ಅರ್ಧದಷ್ಟು ಹಣವನ್ನು ಪುಸ್ತಕ, ಹಿಂದಿ ಘಸಲ್, ಇತರ ತನಗಿಷ್ಟವಾದ ಕ್ಯಾಸೆಟ್ಟುಗಳನ್ನು ಕೊಳ್ಳಲು, ತಮ್ಮ ಜ್ಞಾನಾರ್ಜನೆಗಾಗಿ ಬಳಸಿಕೊಳ್ಳುತ್ತಿದ್ದರು ಎನ್ನುತ್ತಾರೆ ಭಗವಾನ್.

  ಇಷ್ಟು ಹೇಳಿದರೂ, ಅವರಿಗೆ ತಮ್ಮ ಆತ್ಮೀಯ ಸ್ನೇಹಿತನನ್ನು ಚಿತ್ರರಂಗ ನಡೆಸಿಕೊಂಡ ರೀತಿಯ ಬಗ್ಗೆ ಮತ್ತಷ್ಟು ಹೇಳಿಕೊಳ್ಳಲು ಮನಸ್ಸಾಯಿತು. ಸರ್, ಅದೇನೇ ಇರಲಿ, ನಮ್ಮ ಉದಯ್ ನ ಚಿತ್ರರಂಗ ಹಾಗೆ ನಡೆಸಿಕೊಳ್ಳಬಾರದಾಗಿತ್ತು. ಅವನು ಚಿತ್ರರಂಗಕ್ಕೆ ನೀಡಿರುವ ಸೇವೆಗೆ ಹೋಲಿಸಿದರೆ ಆತ ಅತ್ಯಂತ ಸಾಹುಕಾರನಾಗಿ ಜೀವಿಸಬೇಕು. ಆದರೆ, ಚಿತ್ರರಂಗದವರು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಆ ನೋವು ನನ್ನನ್ನು ಮಾತ್ರವಲ್ಲ, ಅವನೊಂದಿಗೆ ಆತ್ಮೀಯತೆ ಹೊಂದಿದ್ದ ನಮ್ಮೆಲ್ಲರನ್ನೂ ಕಾಡುತ್ತದೆ ಎಂದರು.

  ಉದಯ ಶಂಕರ್ ಅವರ ಒಳ್ಳೆತನದ ದುರುಪಯೋಗಕ್ಕೆ ಮತ್ತೊಂದು ಉದಾಹರಣೆಯಿದೆ ಎಂದ ಅವರು, ಈ ಬಗ್ಗೆಯೂ ವಿವರಣೆ ನೀಡಿದರು. ಯಾವುದೋ ಒಂದು ಚಿತ್ರದ ಸಾಹಿತ್ಯಕ್ಕಾಗಿ ಆ ಚಿತ್ರದ ನಿರ್ಮಾಪಕರು, ಬೆಂಗಳೂರಿನ ರೇಸ್ ಕೋರ್ಸ್ ಬಳಿಯಿರುವ ಜನಾರ್ಧನ್ ಹೋಟೆಲಿನಲ್ಲಿ ರೂಮು ಮಾಡಿ ಉದಯ ಶಂಕರ್ ಅವರಿಗೆ ಏಕಾಂತವಾಗಿ ಸಾಹಿತ್ಯ ರಚಿಸಲು ಅನುವು ಮಾಡಿಕೊಟ್ಟಿದ್ದರು.

  ಜನಾರ್ಧನ ಹೋಟೆಲ್ ಗೆ ಹತ್ತಿರದಲ್ಲೇ ಶೇಷಾದ್ರಿಪುರಂ ಇದೆಯಲ್ಲಾ... ಅಲ್ಲೇ ಒಬ್ಬ ಕನ್ನಡ ಚಿತ್ರ ನಿರ್ಮಾಪಕರ ಮನೆಯೂ ಇತ್ತು. ಆತ ಅತ್ಯಂತ ಶ್ರೀಮಂತ. ಅವರಿಗೆ ಚಿ. ಉದಯ ಶಂಕರ್ ಗೆ ಜನಾರ್ದನ ಹೋಟೆಲ್ ನಲ್ಲಿ ಬೇರೊಬ್ಬ ನಿರ್ಮಾಪಕರು ರೂಮು ಮಾಡಿಕೊಟ್ಟಿರುವುದು ಗೊತ್ತಾಯಿತು. ಅವರು, ದಿನಾಗಲು ಮುಂಜಾನೆ ಶೇಷಾದ್ರಿಪುರಂನಿಂದ ರೇಸ್ ಕೋರ್ಸ್ ಮಾರ್ಗವಾಗಿ ವಿಧಾನಸೌಧದವರೆಗೆ ವಾಕಿಂಗ್ ಬರುತ್ತಿದ್ದರು.

  ದಿನಾಲು ಹಾಗೆ ವಾಕಿಂಗ್ ಬರುತ್ತಿದ್ದವರು ಮನೆಗೆ ಹಿಂದಿರುಗುವಾಗ, ಜನಾರ್ದನ ಹೋಟೆಲ್ ಗೆ, ಹೋಗಿ ಒಂದು ಮಸಾಲೆ ದೋಸೆ ತಿಂದು, ಕಾಫಿ ಕುಡಿದು ಅದನ್ನು ಚಿ. ಉದಯ ಶಂಕರ್ ಹೆಸರಿಗೆ ಬರೆಸಿ ಹೋಗುತ್ತಿದ್ದರು. ಇದು ಒಂದೆರಡು ದಿನದ ಕೆಲಸವಲ್ಲ. ಇದು ಆ ಶ್ರೀಮಂತ ನಿರ್ಮಾಪಕನ ನಿತ್ಯ ದಿನಚರಿಯಾಯಿತು. ಇವರನ್ನು ನೋಡಿ, ಉದಯ ಶಂಕರ್ ಗೆ ಗೊತ್ತಿರುವ ಮತ್ತೂ ಕೆಲವರು ಅದೇ ಕೆಲಸಕ್ಕಿಳಿದರು. ಬೇಕಾದಾಗ ಬಂದು ಅಲ್ಲಿ ತಿಂಡಿ ತಿಂದು ಆ ಬಿಲ್ಲನ್ನು ಉದಯ ಶಂಕರ್ ಹೆಸರಿಗೆ ಬರೆಸಿ ಬಂದುಬಿಡೋರು. ಆದರೆ, ಇದು ಉದಯ ಶಂಕರ್ ಗೆ ಗೊತ್ತೇ ಆಗಿರಲಿಲ್ಲ. ಆದರೆ, ಈ ವಿಚಾರ ಚಿತ್ರರಂಗದಲ್ಲಿ ಹೇಗೆ ಪಸರಿಸಿತು ಎಂದರೆ, ಉದಯ ಶಂಕರ್ ನಿರ್ಮಾಪಕರ ದುಡ್ಡಿನಲ್ಲಿ ತನ್ನ ಸ್ನೇಹಿತರಿಗೆ ಮಜಾ ಮಾಡಿಸುತ್ತಿದ್ದಾನೆ ಎಂಬ ಅಪಖ್ಯಾತಿ ಅಂಟಿಕೊಂಡು ಬಿಟ್ಟಿತು.

  ಈ ವಿಷಯ ನಿರ್ಮಾಪಕರಿಗೆ ಗೊತ್ತಾಗಿ, ಉದಯ ಶಂಕರ್ ಬಳಿ ಈ ಬಗ್ಗೆ ಎಚ್ಚರಿಸಿದರಂತೆ. ಆಗ, ಉದಯ ಶಂಕರ್ ತುಂಬಾ ನೊಂದುಕೊಂಡರಂತೆ. ಆದರೂ, ಹೋಟೇಲಿನವರಿಗೆ ನನ್ನ ಹೆಸರು ಹೇಳಿಕೊಂಡು ಬರುವವರಿಗೆ ಪುಕ್ಸಟ್ಟೆ ತಿಂಡಿ ಕೊಡಬೇಡಿ ಎಂದು ಹೇಳಲಿಲ್ಲ ಅವರು. ಯಾರು ಎಷ್ಟು ಬೇಕಾದರೂ ತಿನ್ನಲಿ ಆ ದುಡ್ಡನ್ನು ನನ್ನದೇ ಅಕೌಂಟಿಗೆ ಬರೆಯಿರಿ ಎಂದರಂತೆ. ಕೊನೆಗೆ, ಚಿತ್ರದ ಕೆಲಸ ಮುಗಿದ ನಂತರ, ಬಂದ ಸಂಭಾವನೆಯಲ್ಲಿ ಹೋಟೆಲ್ ಬಿಲ್ ಚುಕ್ತಾ ಮಾಡಿದರೆ ಅವರ ಸಂಭಾವನೆಯ ಅರ್ಧದಷ್ಟು ದುಡ್ಡು ಹೋಟೆಲ್ ಕಟ್ಟಿ ಹೊರನಡೆದಿದ್ದಾರೆ. ಹೀಗೆ, ಯಾರ ಮನಸ್ಸನ್ನೂ ನೋಯಿಸಲು ಇಚ್ಛೆ ಪಡದ ಅವರನ್ನು ಮಾತ್ರ ಚಿತ್ರರಂಗದವರು ತುಂಬಾ ನೋಯಿಸಿದ್ದಾರೆ.

  ಇಂಥ ಸಜ್ಜನ ಸಾಹಿತಿಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಅಂದಿನ ಚಿತ್ರರಂಗಕ್ಕೆ ಗೊತ್ತಿರಲಿಲ್ಲ ಎಂದ ಭಗವಾನ್, ಮಾತು ಮುಗಿಸುವ ಮುನ್ನ ಉದಯ ಶಂಕರ್ ಇತರರಿಗೆ ಸಹಾಯ ಮಾಡುವುದರಲ್ಲೂ ಎತ್ತಿದ ಕೈ ಎಂದೂ ಹೇಳಿದರು.

  ಯಾರೋ ನಿವೃತ್ತ ಮೇಷ್ಟ್ರ ಒಬ್ಬರು ಮನೆಯಲ್ಲಿ ಕಷ್ಟವಿದೆ. ಕೆಲಸ ಏನಾದರೂ ಇದ್ರೆ ಕೊಡಿ ಅಂತ ಬಂದಿದ್ದರಂತೆ. ಅವರು ತುಂಬಾ ಮುದ್ದಾಗಿ ಅಕ್ಷರಗಳನ್ನು ಬರೆಯುತ್ತಿದ್ದರಿಂದ, ಅವರಿಗೆ ತಾವು ಬರೆದ ಸಾಹಿತ್ಯವನ್ನು ಗುಂಡಾಗಿ ಬರೆಯುವಂತೆ ಸೂಚಿಸಿ ಅದಕ್ಕೆ ಬೇಕಾದ ಸೌಲಭ್ಯಗಳನ್ನೂ ನೀಡಿದ್ದರಂತೆ ಉದಯ ಶಂಕರ್.

  ಅವರ ಮನೆಯಲ್ಲೇ ಉಳಿಯಲು ಜಾಗ ಕೊಟ್ಟು ಊಟ, ತಿಂಡಿಗೂ ವ್ಯವಸ್ಥೆ ಮಾಡಿದ್ದರಂತೆ. ಹಾಗಾಗಿ, ಆ ನಿವೃತ್ತ ಮೇಷ್ಟ್ರು, ಉದಯ ಶಂಕರ್ ಅವರ ಬರವಣಿಗೆಯನ್ನು ನೀಟಾಗಿ, ಗುಂಡಾಗಿ ಎರಡು ಮೂರು ಪ್ರತಿಗಳಲ್ಲಿ ಬರೆದು ಕೊಡುತ್ತಿದ್ದರಂತೆ.

  ಹೀಗೆ, ತನ್ನ ಕಷ್ಟದಲ್ಲೂ ಇತರರಿಗೆ ಸಹಾಯ ಮಾಡುವ ಗುಣ ಆತನದ್ದು ಎನ್ನುವ ಭಗವಾನ್, ಇಂಥವರು ಮತ್ತೆ ಮತ್ತೆ ಹುಟ್ಟಿಬರೋಲ್ಲ ಸರ್. ರಾಜ್ ಕುಮಾರ್ ಆಗಲೀ, ಉದಯ ಶಂಕರ್ ಆಗಲೀ ಅವರಿಗೆ ಅವರೇ ಸಾಟಿ ಎಂದು ಮಾತು ಮುಗಿಸಿದರು.

  English summary
  Director Bhagavan speaks about Chi Udaya Shankar.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more