»   » ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ

ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ಪಿ.ಶೇಷಾದ್ರಿ

Posted By:
Subscribe to Filmibeat Kannada

'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ರಾಜ್ಯ ಪ್ರಶಸ್ತಿ ಸಿಕ್ಕಿತು. ಖ್ಯಾತ ಖಳನಾಯಕ ತೂಗುದೀಪ ಶ್ರೀನಿವಾಸ್ ಪುತ್ರನಾಗಿ 'ಉತ್ತಮ ನಾಯಕ ನಟ' ಪ್ರಶಸ್ತಿ ಸ್ವೀಕರಿಸಿದ ದರ್ಶನ್, ತಮ್ಮ ಪ್ರಶಸ್ತಿಯನ್ನ ಎಲ್ಲಾ ಖಳನಟರಿಗೂ ಅರ್ಪಿಸಿದರು.

ಇದಲ್ಲದೇ, ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ 'ಉತ್ತಮ ಖಳನಟ'ರಿಗೂ ಪ್ರಶಸ್ತಿ ನೀಡಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟರು. ತಕ್ಷಣ ಇದನ್ನ ಪುರಸ್ಕರಿಸಿದ ಮಾನ್ಯ ಮುಖ್ಯಮಂತ್ರಿಗಳು ಮುಂದಿನ ವರ್ಷದಿಂದ ಖಳನಟರಿಗೂ ಪ್ರಶಸ್ತಿ ನೀಡುವ ಬಗ್ಗೆ ಆಲೋಚಿಸುತ್ತೇವೆ ಎಂದರು. ['ಉತ್ತಮ ವಿಲನ್' ಪರ ನಿಂತ ಚಾಲೆಂಜಿಂಗ್ ಸ್ಟಾರ್]

ಇದೀಗ ಈ ಪ್ರಸ್ತಾವನೆ ಬಗ್ಗೆ ನಿರ್ದೇಶಕ ಪಿ.ಶೇಷಾದ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಲನ್ ಗಳಿಗೆ ಪ್ರತ್ಯೇಕ ಪ್ರಶಸ್ತಿ ನೀಡುವುದು ಸರಿಯಲ್ಲ ಅಂತ ಸರ್ಕಾರಕ್ಕೆ ಪಿ.ಶೇಷಾದ್ರಿ ಪತ್ರ ಬರೆದಿದ್ದಾರೆ. ಇದಲ್ಲದೇ, ಪ್ರಶಸ್ತಿ ಸಮಾರಂಭದಲ್ಲಾದ ಅವ್ಯವಸ್ಥೆ ಬಗ್ಗೆ ಶೇಷಾದ್ರಿ ಗರಂ ಆಗಿದ್ದಾರೆ.

ಹಾಗಾದ್ರೆ, ಸರ್ಕಾರಕ್ಕೆ ಶೇಷಾದ್ರಿ ಬರೆದಿರುವ ಪತ್ರದಲ್ಲಿ ಏನೇನಿದೆ. ಶೇಷಾದ್ರಿ ಬಗ್ಗೆ 'ದಾಸ' ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿರುವ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಮುಂದೆ ಓದಿ.....

ವಿಲನ್ ಗಳಿಗೆ ಪ್ರತ್ಯೇಕ ಪ್ರಶಸ್ತಿ ಬೇಡ..!

'ಉತ್ತಮ ಖಳನಟ' ಪ್ರಶಸ್ತಿ ಬಗ್ಗೆ ದರ್ಶನ್ ಮಾಡಿದ ಪ್ರಸ್ತಾವನೆ ಮತ್ತು ಅದನ್ನ ಸರ್ಕಾರ ಪರಿಗಣಿಸಿರುವ ಬಗ್ಗೆ ತಗಾದೆ ತೆಗೆದಿರುವ ಶೇಷಾದ್ರಿ, ವಿಲನ್ ಗಳಿಗೆ ಪ್ರತ್ಯೇಕ ಪ್ರಶಸ್ತಿ ನೀಡುವುದು ಸರಿಯಲ್ಲ ಅಂದಿದ್ದಾರೆ. ಈಗಾಗಲೇ ಸರ್ಕಾರದ ಪ್ರಶಸ್ತಿಗಳ ಪಟ್ಟಿಯಲ್ಲಿ 'ಪೋಷಕ ನಟ' ಮತ್ತು 'ಪೋಷಕ ನಟಿ' ಪ್ರಶಸ್ತಿಗಳು ಇವೆ. ಈ ವಿಭಾಗದಲ್ಲಿ ಖಳನಟರೂ ಬರುತ್ತಾರೆ. ಈ ಹಿಂದೆ ಅಂತಹ ನಟರಿಗೆ ಪ್ರಶಸ್ತಿ ದೂರಕಿರುವ ಉದಾಹರಣೆಗಳೂ ಇವೆ. ಹೀಗಿರುವಾಗ ಅತ್ಯುತ್ತಮ ಖಳನಟ ಪ್ರಶಸ್ತಿ ನೀಡುವುದು ಎಷ್ಟು ಸರಿ? ಅಂತ ಶೇಷಾದ್ರಿ ಪ್ರಶ್ನಿಸಿದ್ದಾರೆ. [ಮೈಸೂರಿನಲ್ಲಿ ಸ್ಯಾಂಡಲ್ ವುಡ್ ತಾರೆಗಳ ಕಲರವ]

ವಿಲನ್ ಗಳಿಗೆ ಗೌರವ ಎಲ್ಲಿ ಸಿಕ್ಕಿದೆ?

ಕನ್ನಡ ಚಿತ್ರರಂಗಕ್ಕೆ 80 ವರ್ಷಗಳ ಇತಿಹಾಸವಿದೆ. ವಜ್ರಮುನಿ, ತೂಗುದೀಪ ಶ್ರೀನಿವಾಸ್, ಸುಧೀರ್ ಸೇರಿದಂತೆ ಅನೇಕ ಖಳನಟರು ಚಿತ್ರರಂಗಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಆದ್ರೆ, ಅವರನ್ನ ಸರ್ಕಾರ ಗುರುತಿಸಿರುವುದಾದರೂ ಎಲ್ಲಿ? ಪೋಷಕ ನಟರೇ ಬೇರೆ, ಖಳನಟರೇ ಬೇರೆ ಆಗಿರುವ ಕಾರಣ ಎಲ್ಲರನ್ನೂ ಒಂದೇ ತಕಡಿಯಲ್ಲಿ ತೂಗುವುದು ಸರಿಯಲ್ಲ ಅಂತ ಸಿನಿಪ್ರಿಯರು, ದರ್ಶನ್ ಅಭಿಮಾನಿಗಳು ಪಿ.ಶೇಷಾದ್ರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದಕ್ಕಿಳಿದಿದ್ದಾರೆ. [ಹೆಸರಿಗೆ ಮಸಿ ಬಳಿದವರಿಗೆ ಟ್ವಿಟ್ಟರ್ ನಲ್ಲಿ ದರ್ಶನ್ ಟಾಂಗ್]

ತೂಗುದೀಪ ಶ್ರೀನಿವಾಸ್ ಗೆ ಸಿಕ್ಕ ಮನ್ನಣೆ ಏನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಹೇಳಿಕೊಂಡಿರುವ ಪ್ರಕಾರ, ''375 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನನ್ನ ತಂದೆಗೆ ಸರ್ಕಾರದಿಂದ ಯಾವುದೇ ಪುರಸ್ಕಾರ ಸಿಗ್ಲಿಲ್ಲ. ಈಗಿನ ಖಳನಟರಿಗಾದರೂ ಸಿಗಲಿ'' ಅಂತ ದರ್ಶನ್ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಹೇಳಿದ್ದರು.

ಸಮಾರಂಭದ ಅವ್ಯವಸ್ಥೆ ಮೇಲೆ ಶೇಷಾದ್ರಿ ಗರಂ

ರಾಜ್ಯ ಪ್ರಶಸ್ತಿಗಳನ್ನ ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಅಥವಾ ರಾಜ್ಯಪಾಲರು ಕೊಡುತ್ತಾರೆ. ಆದ್ರೆ, ಈ ವರ್ಷ ವೇದಿಕೆಯಲ್ಲಿದ್ದ ಸಚಿವರುಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕೊನೆಗೆ ಪಂಚಾಯತಿ ಸದಸ್ಯರೂ ಪ್ರಶಸ್ತಿ ಪ್ರಧಾನ ಮಾಡಿದರು. ಇದನ್ನ ನೋಡಿದ ಶೇಷಾದ್ರಿ, 'ಸರ್ಕಾರದ ಪ್ರಶಸ್ತಿಯನ್ನ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಪಡೆಯಬೇಕು, ಅದರ ನೆನಪನ್ನು ಬಹುಕಾಲ ಉಳಿಸಿಕೊಳ್ಳಬೇಕು' ಅನ್ನುವುದು ಪ್ರತಿಯೊಬ್ಬ ಪ್ರಶಸ್ತಿ ವಿಜೇತನ ಆಸೆ ಅಂತ ಶೇಷಾದ್ರಿ ಪತ್ರದಲ್ಲಿ ಬರೆದಿದ್ದಾರೆ. [ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ವಿಶೇಷ ಸಂದರ್ಶನ ]

ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಏನಿದೆ?

ಇದುವರೆಗೂ ಒಂಬತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಶೇಷಾದ್ರಿ, ರಾಷ್ಟ್ರ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಇಲ್ಲಿಗಿಂತ ಅಧಿಕ ಸಂಖ್ಯೆಯಲ್ಲಿ ಪ್ರಶಸ್ತಿ ವಿತರಣೆ ಇರುತ್ತದೆ. ಖುದ್ದಾಗಿಯೇ ರಾಷ್ಟ್ರ ಪತಿಗಳು ಸುಮಾರು ಎರಡು ಗಂಟೆಗಳ ಕಾಲ ನಿಂತು ಪ್ರಧಾನ ಮಾಡುತ್ತಾರೆ. ಆದ್ರೆ, ಇಲ್ಲಿ ಹಾಗಿಲ್ಲ ಅಂತ ಶೇಷಾದ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಕಾರ್ಯಕ್ರಮದ ಬಗ್ಗೆಯೂ ಬೇಸರ

ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಮತ್ತು ಚಲನಚಿತ್ರ ಇತಿಹಾಸ ಮತ್ತು ಮಹತ್ವ ಸಾರುವ ಒಂದೆರಡು ಹಾಡು, ನೃತ್ಯ ಇರಬಹುದಿತ್ತು. ಅನರ್ಥದ ಹಾಡು ಮತ್ತು ನೃತ್ಯಗಳ ಬದಲು ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿ ಪಡೆದ ಗಾಯಕರಿಂದಲೇ ಹಾಡು ಹಾಡಿಸಬಹುದಿತ್ತು. ಆದ್ರೆ, ಮನರಂಜನೆ ಹೆಸರಿನಲ್ಲಿ ಅಭಿರುಚಿ ಕೆಡಿಸುವುದು ಸರಿಯಲ್ಲ ಅಂತಾರೆ ಶೇಷಾದ್ರಿ. [ಕನ್ನಡ ಚಲನಚಿತ್ರ ಪ್ರಶಸ್ತಿ, ಮೈಸೂರಿನ ಚಿತ್ರಗಳು]

ರಾಜ್ಯ ಪ್ರಶಸ್ತಿ ದಿನಾಂಕ ನಿಗದಿ ವಿಚಾರ

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಖಚಿತ ದಿನಾಂಕವನ್ನು ಕೂಡ ನಿಗದಿ ಮಾಡಬಹುದು. ರಾಷ್ಟ್ರ ಮಟ್ಟದಲ್ಲಿರುವಂತೆ ಮಾರ್ಚ್ 3 ನೇ ತಾರೀಖು, ಅಂದ್ರೆ ವಾಕ್ಚಿತ್ರ ಹುಟ್ಟಿದ ದಿನದ ನೆನಪಲ್ಲಿ ನಿಗದಿ ಪಡಿಸಬಹುದು ಅಂತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ನಿರ್ದೇಶಕ ಪಿ.ಶೇಷಾದ್ರಿ.

English summary
Kannada Director P.Sheshadri has written letter to Karnataka Government listing out the problems occurred in the Karnataka State Film Award Function and requested the Government to not to add 'Best Villain' Category Award in Future as per Kannada Actor Darshan's suggestion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada