»   » ಕೇರಳ ಕಾಲೇಜ್‌ ಹುಡುಗಿ ದಿವ್ಯಾ ಉನ್ನಿ ಕನ್ನಡದಲ್ಲಿ

ಕೇರಳ ಕಾಲೇಜ್‌ ಹುಡುಗಿ ದಿವ್ಯಾ ಉನ್ನಿ ಕನ್ನಡದಲ್ಲಿ

Posted By: ಸುಮೇಶ್‌ ಚತುರ್ವೇದಿ
Subscribe to Filmibeat Kannada
Divya Unni
ಕೇವಲ ಒಂದೆರಡು ವರ್ಷಗಳಲ್ಲೇ ಈಕೆ ಬೆಳೆದಳು ; ನಾಯಕಿಯಾಗಿ ಮತ್ತು ದೈಹಿಕವಾಗಿ. ಚಿಕ್ಕಂದಿನಿಂದಲೇ ಭರತನಾಟ್ಯಕ್ಕೆಂದು ಹಾಕುತ್ತಿದ್ದ ಹೆಜ್ಜೆ ಈ ಹೊತ್ತು ಕನ್ನಡದ ನಾಯಕ ಕಂ ನಿರ್ದೇಶಕ ಎಸ್‌.ನಾರಾಯಣ್‌ ಜೊತೆ ಕುಣಿಯುತ್ತಿದೆ. ಮಲೆಯಾಳಿ ಚಿತ್ರರಂಗದಲ್ಲಿ ದಿನ ಬೆಳಗಾಗುವುದರಲ್ಲಿ ಉತ್ತುಂಗಕ್ಕೇರಿ, ಮರು ದಿನವೇ ತಮಿಳು ಸಿನಿಮಾಗೆ ಹಾರಿದ ದಿವ್ಯಾ ಉನ್ನಿ ಎಂಬ ದುಂಡು ಮೊಗ, ದುಂಡು ದೇಹದ ಚೆಲುವೆಯದು ಈ ಹೆಜ್ಜೆ.

ಪ್ರಶಸ್ತಿ ಪಡೆದು ಪೇರಿ ಕಿತ್ತ ಜನುಮದ ಜೋಡಿಯ ಹಳ್ಳಿ ಹುಡುಗಿ ಶಿಲ್ಪ, ತವರಲ್ಲಿ ಹಾಲುಂಡು ಗೋಳೋ ಅಂದ ಸಿತಾರಾ, 'ಸಂಭ್ರಮ"ದ ಹುಬ್ಬಳ್ಳಿ ಹೋಳಿಗೆಯಂಥಾ ಹುಡುಗಿ ಕಾವೇರಿ ಇವರೆಲ್ಲಾ ದಿವ್ಯಾಳ ತೆಂಗು ನಾಡಿನಿಂದಲೇ ಶ್ರೀಗಂಧದ ತವರಿಗೆ ಬಂದದ್ದು. ಬೆಳೆದಷ್ಟೇ ಬೇಗ ಆದದ್ದು ರಿಟೈರ್ಡ್‌. ರಾಘವೇಂದ್ರ ರಾಜ್‌ಕುಮಾರ್‌ ಮೊದಲ ಚಿತ್ರ ಚಿರಂಜೀವಿ ಸುಧಾಕರ್‌ ನಾಯಕಿ ವಿಶಾಲಾಕ್ಷಿ ಮೋನಿಷಾ ಗಮನ ಸೆಳೆದಿದ್ದರೂ, ಅವರ ಪ್ರಾಣಪಕ್ಷಿ ಬಲು ಬೇಗ ಹಾರಿ ಹೋಯಿತು. ಇನ್ನು ಸ್ವರ್ಣ ಎಂಬ ಮಾಜಿ ಮಿಸ್‌ ಕೇರಳ, ಕಳ್ಳ- ಪೊಲೀಸ್‌ ರಾಜೇಂದ್ರನ ಜೊತೆ ಥಕಿಟ ಥಕಿಟ ಧಿಮಿ ತೋಂ ತೋಂ ಕುಣಿಯುತ್ತಿದ್ದಾರೆ. ಈಗ ಕೇರಳದ ದಿವ್ಯಾ ಉನ್ನಿ ಲಕ್‌ ಟೆಸ್ಟ್‌ ಮಾಡಲು ಕನ್ನಡಕ್ಕೆ ಬಂದಿದ್ದಾರೆ.


ಕೊಚ್ಚಿನ್‌ನ ಈ ಹುಡುಗಿ ಇವತ್ತಿಗೂ ಎರ್ನಾಕುಲಂ ಸೆಂಟ್‌ ಥೆರೆಸಾಸ್‌ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿನಿ. ಭರತನಾಟ್ಯದ ಕಲಿಕೆ ಮುಂದುವರೆದಿರುವ ಲಕ್ಷಣಗಳಂತೂ ಇಲ್ಲ. ತನ್ನ ವಯಸ್ಸಿಗೂ ಮೀರಿದ ಸಂಖ್ಯೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಆಗಿದೆ(23). ನಾಟ್ಯ ಪ್ರತಿಭೆಯಿಂದಲೇ ನಟನಾ ಅವಕಾಶ ಸಂಪಾದಿಸಿಕೊಂಡವಳು. ಅಪ್ಪ ಕೆಲಸ ಮಾಡುವುದು ಶಿಪ್‌ಯಾರ್ಡ್‌ನಲ್ಲಿ. ನಾಯಕಿಯಾಗಿ ಸುದ್ದಿ ಮಾಡಿದ್ದಕ್ಕಿಂತ ಹೆಚ್ಚಾಗಿ ಮದುವೆಯಾದವರ ಹಿಂದೆ ಬಿದ್ದಳೆಂಬ ಗಾಳಿಸುದ್ದಿಯಲ್ಲೇ ಮೆರೆದ ದಿವ್ಯಾ ಹೆಸರು ಕೇಳಿ ಬಂದದ್ದು ಸತ್ಯರಾಜ್‌ ಹಾಗೂ ವಿನೀತ್‌ ಜೊತೆಯಲ್ಲಿ.

ವಯಸ್ಸು ಚಿಕ್ಕದಾದರೂ ಪ್ರತಿಭೆ ದಿವ್ಯ. ಹಾಗಂತ ಮೂರ್ತಿಯೇನೂ ಚಿಕ್ಕದಲ್ಲ. ನಾರಾಯಣ್‌ ಈಕೆಯನ್ನು ಯಾಕೆ ಆರಿಸಿದ್ದಾರೋ ಗೊತ್ತಿಲ್ಲ. ಆದರೆ ಈಕೆ ಕನ್ನಡಕ್ಕೆ ಬಂದದ್ದಾದರೂ ಯಾಕೆ ಅಂತ ನಾವು ಪ್ರಾರಂಭಿಸಿದ ಮಾತಿಗೆ ದಿವ್ಯ ಪಟಪಟನೆ ಉತ್ತರ ಕೊಟ್ಟಳು. ತಮಿಳು ಚಿತ್ರರಂಗ ತಳ್ಳಿತೆ ಅಥವಾ ಕೇರಳ ಸಿನಿಮಾ ಬೇಡವಾಯಿತೆ. ಕನ್ನಡಕ್ಕೆ ಬಂದದ್ದು ಯಾಕೆ?

 • ಒಬ್ಬ ನಟಿಗೆ ಭಾಷೆ ತೊಡಕೇ ಅಲ್ಲ. ಹಾಗಂತ ಹಣದ ಹಿಂದೆ ಬಿದ್ದವಳೂ ನಾನಲ್ಲ. ತಮಿಳನ್ನು ನಿರರ್ಗಳವಾಗಿ ಮಾತಾಡುತ್ತಿದ್ದೆ. ಈ ಕಾರಣಕ್ಕೆ ಅವಕಾಶ ಬಂದಾಗ ಅಲ್ಲಿಗೆ ಹೋದೆ. ಕಾರ್ತೀಕ್‌, ಅರ್ಜುನ್‌, ಮಾಧವನ್‌ ಮೊದಲಾದ ಒಳ್ಳೆ ನಟರ ಜೋಡಿ ನಟಿಸಿದೆ. ಕನ್ನಡ ಸಿನಿಮಾಗಳು ಬೇಗ ಬೇಗ ತಯಾರಾಗುತ್ತವೆ. ಜೊತೆಗೆ ಇಲ್ಲಿನವರು ವೃತ್ತಿಪರರು. ಅದಕ್ಕಾಗಿ ಈಗ ಇಲ್ಲಿಗೆ ಬಂದೆ, ಅಷ್ಟೆ.
 • ನಿಮ್ಮ ಮೊದಲ ಸಿನಿಮಾ ಯಾವುದು?
  ಆಗಿನ್ನೂ ನಾನು ಸ್ಕೂಲ್‌ನಲ್ಲಿ ಓದುತ್ತಿದ್ದೆ. 1986. ಜೋಷಿ ಬಂದು ಕರೆದರು. ನೀ ಎತ್ರ ಧನ್ಯ ಎಂಬ ಮಲೆಯಾಳಿ ಚಿತ್ರದಲ್ಲಿ ಬಾಲನಟಿಯಾದೆ. ಸರಿಯಾಗಿ ದಶಕದ ನಂತರ ಕಲ್ಯಾಣ ಸುಗಂಧಿಕಮ್‌ ಎಂಬ ಮಲೆಯಾಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದೆ.
 • ಕನಸಿನ ಪಾತ್ರ ಯಾವುದು?
  ನಾನು ಭರತ ನಾಟ್ಯ ಕಲಿತಿರುವುದರಿಂದ, ಒಬ್ಬ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ನಟಿಸುವ ಕನಸಿದೆ. ಅಂಥಾ ಒಬ್ಬಾಕೆಯ ಜೀವನದ ಸುತ್ತ ಕತೆ ಹೆಣೆದು ಕರೆದರೆ, ನಟನೆಗೆ ಕಣ್ಣುಮುಚ್ಚಿಕೊಂಡು ಓಡಿ ಹೋಗುತ್ತೇನೆ.
 • ಪ್ರೀತಿಯ ಬಗ್ಗೆ ನಿಮ್ಮ ವ್ಯಾಖ್ಯೆ ಏನು?
  ಪ್ರೀತಿಸಿದವನನ್ನು ಕಾಡಕೂಡದು. ದೂರಾದರೆ, ಹೋಗಲು ಬಿಟ್ಟುಬಿಡಿ. ಅವನ ಆತ್ಮ ನಿಮ್ಮ ಪ್ರೀತಿಯನ್ನು ಅವನಿಗೆ ಹಾಡುತ್ತದೆ. ಪ್ರೀತಿ ನಿಜವೇ ಆಗಿದ್ದಲ್ಲಿ ಆತ ಓಡೋಡಿ ಬಂದು ಸೇರುತ್ತಾನೆ. ಈ ರೀತಿ ಆತ್ಮದ ಹಾಡೇ ಪ್ರೀತಿ!
 • ಬಿಚ್ಚು ನಾಯಕಿಯಾಗೋದಕ್ಕೆ ನೀವು ಒಪ್ಪುವಿರಾ?
  (ನಗು) ನಾನು ನಿರ್ದೇಶಕರ ಚಾಯ್ಸ್‌. ಅವರಿಗೆ ನನ್ನಿಂದ ಏನು ಬೇಕು ಎಂಬುದು ಮೊದಲೇ ಸ್ಪಷ್ಟವಾಗಿರುತ್ತದೆ. ನನ್ನ ಮಿತಿಗಳನ್ನು ತಿಳಿದೇ ಅವರು ಆಫರ್‌ ಕೊಡುವುದು. ಪಾತ್ರಕ್ಕೆ ತಕ್ಕಂತೆ ಗ್ಲ್ಯಾಮರ್‌ ಆಗಿ ಕಾಣಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಅತಿಯಾಗಕೂಡದು, ಅಷ್ಟೆ .
 • ನಟನೆ ಬಿಟ್ಟು, ನಿಮ್ಮ ಹವ್ಯಾಸ?
  ನಾನಿನ್ನೂ ವಿದ್ಯಾರ್ಥಿನಿ. ಶೂಟಿಂಗ್‌ ಇಲ್ಲದಿದ್ದಾಗ ಏಳನೇ ಕ್ಲಾಸಿನ ಮಕ್ಕಳಿಗೆ ಪಾಠ ಹೇಳುತ್ತೇನೆ.
 • ನೆಚ್ಚಿನ ನಟ
  ಅನಿಲ್‌ ಕಪೂರ್‌
 • ನಿಮ್ಮನ್ನು ನೀವೇ ಕಂಡಂತೆ..
  ಫ್ರೆಂಡ್ಲಿ. ಯಾರೊಡನೆ ಬೇಕಾದರೂ ಫಟಾಫಟ್‌ ಹೊಂದಿಕೊಳ್ಳುತ್ತೇನೆ .
 • ಕಾಲೇಜಿಗೆ ಈಗಲೂ ಹೋಗೋದು ಮೋಜಿಗಾಗೋ, ಶೋಕಿಗಾಗೋ ಅಥವಾ ಅಪ್ಪ- ಅಮ್ಮನ ತಾಕೀತಿನಿಂದಲೋ?
  ಕ್ಯಾಂಪಸ್‌ ಕ್ಷಣಗಳ ಅನುಭವಗಳನ್ನು ಮಿಸ್‌ ಮಾಡಿಕೊಳ್ಳಲು ನಾನು ಸಿದ್ಧಳಿಲ್ಲ. ತಲೆಗೂದಲನ್ನು ಗಾಳಿ ಜೊತೆ ಮಾತಾಡಲು ಬಿಟ್ಟು, ನಿರಾಳ ಇರುವುದು ಕಾಲೇಜು ಕ್ಯಾಂಪಸ್ಸಿನಲ್ಲಿ ಮಾತ್ರ ಸಾಧ್ಯ. ನನ್ನ ಸ್ನೇಹಿತರೂ ನಟಿಯಾಗಿ ನನ್ನನ್ನು ನೋಡೋದಿಲ್ಲ. ಅವರೆಲ್ಲರ ದೃಷ್ಟಿಯಲ್ಲಿ ನಾನು ಗೆಳತಿ.
 • ನೀವು ಮೈಮರೆವುದು ಯಾವಾಗ?
  ಪುಟ್ಟ ಮಗುವನ್ನು ದಿಟ್ಟಿಸಿದಾಗ.
Read more about: divya ದಿವ್ಯಾ
English summary
Divya Unni, Kerala and Tamil film star enters into sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada