ಮಲೆನಾಡಿನ ಮಡಿಲಲ್ಲಿ ಡಾ.ರಾಜ್ ಕಪ್ ಆರಂಭ
ಇದು ತಾರೆಗಳ ಟ್ವೆಂಟಿ ಟ್ವೆಂಟಿ ಮ್ಯಾಚ್. ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿನಿಂದ (ನ.22) ಪ್ರತಿಷ್ಠಿತ ಡಾ.ರಾಜ್ ಕಪ್ ಕ್ರಿಕೆಟ್ ಪಂದ್ಯಾವಳಿ ಚಾಲನೆ ಪಡೆದುಕೊಂಡಿದ್ದು, ಕನ್ನಡ ಸಿನಿಮಾ ತಾರೆಗಳ ನಡುವಿನ ಆಟ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ನವೆಂಬರ್ 22 ಹಾಗೂ 23ರಂದು ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ ಮತ್ತು ಕಲಾವಿದರ ಒಕ್ಕೂಟ ಆಯೋಜಿಸಿರುವ ಕ್ರೀಡಾಕೂಟ ಇದು. [ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಒಗ್ಗಟ್ಟಿನ ಆಟಕ್ಕೆ ರೆಡಿ]

ಈ ಕಲರ್ ಫುಲ್ ಕ್ರಿಕೆಟ್ ಆಟಕ್ಕೆ ಇನ್ನಷ್ಟು ರಂಗು ತುಂಬುತ್ತಿರುವವರು ನಟಿಯರಾದ ರಾಗಿಣಿ, ಮೇಘನಾ ಗಾಂವ್ಕರ್, ಅನಿತಾ ಭಟ್ ಜೊತೆಗೆ ರವಿಚೇತನ್, ಧರ್ಮ, ಕೀರ್ತಿರಾಜ್, ದಿಲೀಪ್ ರಾಜ್, ರಾಜೇಶ್ ಮುಂತಾದವರು.
ನವೆಂಬರ್ 22ರಂದು ದುನಿಯಾ ವಿಜಿ, ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ಯೋಗಿ ನಾಯಕತ್ವದ ತಂಡಗಳು ಸೆಣೆಸಿದರೆ, ಭಾನುವಾರ (ನ.23) ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಯಶ್ ನೇತೃತ್ವದ ತಂಡಗಳ ನಡುವೆ ಮುಖಾಮುಖಿ ನಡೆಯಲಿದೆ.
ಫೈನಲ್ ಪಂದ್ಯಾವಳಿ ಮಲೇಷ್ಯಾದಲ್ಲಿ ನಡೆಯಲಿದೆ. ಈ ಎಲ್ಲಾ ಮ್ಯಾಚ್ ಗಳನ್ನು ಹಾಸನದ ಜಿಲ್ಲಾ ಮೈದಾನದಲ್ಲಿ ನೋಡಿ ಆನಂದಿಸಬಹುದೇ ವಿನಃ ಯಾವುದೇ ವಾಹಿನಿಯಲ್ಲಿ ನೇರಪ್ರಸಾರವಾಗುವುದಿಲ್ಲ.
ಸರಿಸುಮಾರು 25 ಸಾವಿರ ಅಭಿಮಾನಿಗಳು, ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾವಳಿಯನ್ನು ಕಣ್ಣಾರೆ ಸವಿಯಲಿದ್ದಾರೆ. ಟಿಕೆಟ್ ಬೆಲೆಯನ್ನು ರು.100, ರು.200, ರು.500 ಹಾಗೂ ರು.1000 ನಿಗದಿಪಡಿಸಲಾಗಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











