»   » ಮೂವರು ಹಿರಿಯರಿಗೆ ಪ್ರತಿಷ್ಠಿತ ರಾಜ್ ಸೌಹಾರ್ದ ಪ್ರಶಸ್ತಿ

ಮೂವರು ಹಿರಿಯರಿಗೆ ಪ್ರತಿಷ್ಠಿತ ರಾಜ್ ಸೌಹಾರ್ದ ಪ್ರಶಸ್ತಿ

Posted By:
Subscribe to Filmibeat Kannada
ಪ್ರತಿಷ್ಠಿತ ಡಾ. ರಾಜ್ ಕುಮಾರ್ ಸೌಹಾರ್ದ ಪ್ರಶಸ್ತಿಯನ್ನೂ ಶನಿವಾರ (ಜೂ.2) ಬೆಂಗಳೂರಿನ ತಾಜ್ ವಿವಂತಾದಲ್ಲಿ ಪ್ರದಾನ ಮಾಡಲಾಯಿತು. ಖ್ಯಾತ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್, ರಂಗಭೂಮಿ ಹಾಗೂ ಹಿರಿಯ ಪೋಷಕ ಕಲಾವಿದೆ ರಂಗನಾಯಕಮ್ಮ ಹಾಗೂ ನಿರ್ದೇಶಕ ಚಿ.ದತ್ತುರಾಜ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿಯು ರು.1 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ ಎಂದು ಬರಗೂರು ರಾಮಚಂದ್ರಪ್ಪ ವಿವರ ನೀಡಿದರು. ಸಮಾರಂಭದಲ್ಲಿ ಹಿರಿಯ ನಟ ಶಿವರಾಂ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧಾ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿದ ಹಿರಿಯ ಗಾಯಕ ಪಿ.ಬಿ.ಶ್ರೀನಿವಾಸ್ ಮಾತನಾಡುತ್ತಾ, ಈ ದಿನ ಎಂದೆಂದೂ ಮರೆಯಲಾಗದ ದಿನ. ಈ ಶಾರೀರಕ್ಕೆ ಶರೀರದ ಪರವಾಗಿ ಬಂದಿರುವ ಪ್ರಶಸ್ತಿ. ಆಶ್ಚರ್ಯ ಕರವಾದದ್ದು ಹಾಗೂ ಆನಂದದಾಯಕವಾದದ್ದು. ಈ ಅಭಿಮಾನಿಗಕ್ಕೆ ನಾನು ಚಿರಋಣಿ. ಈ ಸಂದರ್ಭದಲ್ಲಿ ಅವರೇ ಬರೆದ ಒಂದು ಹಾಡನ್ನೂ ಹಾಡಿದರು. ನನ್ನ ಬಾಳಿನಲ್ಲಿ ಈ ದಿನ ಮರೆಯಲಾಗದ ದಿನ ಎಂದು ಪ್ರಶಸ್ತಿ ಸ್ವೀಕರಿಸಿದ ಪಿಬಿಎಸ್ ಕೃತಜ್ಞತೆ ತಿಳಿಸಿದರು.

ರಾಜ್ ಸೌಹಾರ್ದ ಪ್ರಶಸ್ತಿ ಸ್ವೀಕರಿಸಿದ ಮತ್ತೊಬ್ಬ ಹಿರಿಯ ಕಲಾವಿದೆ ರಂಗನಾಯಕಮ್ಮ ಅವರು ಮಾತನಾಡುತ್ತಾ ಅಣ್ಣಾವ್ರನ್ನು ನೆನೆದು ಕೆಲ ಕ್ಷಣ ಭಾವುಕರಾದರು. ನನ್ನನ್ನು ಅವರು ಪ್ರೀತಿಯಿಂದ ರಂಗೂ ಎಂದೇ ಕರೆಯುತ್ತಿದ್ದರು. ನನ್ನ ಮತ್ತು ಅವರ ನಡುವೆ ಅಣ್ಣ ತಂಗಿಯ ಬಾಂಧವ್ಯವಿತ್ತು. ಮುಂದಿನ ಜನ್ಮದಲ್ಲಾದರೂ ಅಣ್ಣಾವ್ರ ತಂಗಿಯಾಗಿಯೇ ಹುಟ್ಟಬೇಕು ಎಂದು ಬೇಡಿಕೊಳ್ಳುತ್ತೇನೆ ಎನ್ನುತ್ತಿದ್ದಂತೆ ಅವರ ಕಣ್ಣು ತುಂಬಿ ಬಂತು. ಸಭೆ ಒಂದು ಕ್ಷಣ ಮೂಕವಾಯಿತು.

ಪುನೀತ್ ಬರೆದಿರುವ 'ಡಾ.ರಾಜ್‌ಕುಮಾರ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ' ಅಪರೂಪದ ಪುಸ್ತಕವೂ ಇಂದು ಅನಾವರಣವಾಯಿತು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ, ಈ ಪುಸ್ತಕದಿಂದಬಂದಂತಹ ಆದಾಯವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ವಿವರ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಮತ್ತೊಂದು ಘಟನೆಯನ್ನು ಮೆಲುಕು ಹಾಕಿದರು. ಅದು ಪುನೀತ್ ನಡೆಸಿಕೊಡುತ್ತಿರುವ 'ಕನ್ನಡದ ಕೊಟ್ಯಧಿಪತಿ' ಗೇಮ್ ಶೋ ಕುರಿತಾದದ್ದು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೋಟ್ಯಧಿಪತಿ ಕಾರ್ಯಕ್ರಮವನ್ನು ನಾನು 8 ಗಂಟೆಗೆ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ.

ಆದರೆ ಇದೇ ಕಾರ್ಯಕ್ರಮ ರಾತ್ರಿ 11ಕ್ಕೆ ಮರುಪ್ರಸಾರವಾಗುತ್ತದೆ. ಆಗ ಕಾರ್ಯಕ್ರಮವನ್ನು ನೋಡುತ್ತಿದ್ದೇನೆ. ನನ್ನ ನಿದ್ದೆಗೆಡಿಸುತ್ತಿರುವುದಕ್ಕಾಗಿ ಪುನೀತ್ ಅವರಿಗೆ ಅಭಿನಂದನೆಗಳು ಎಂದರು. ನನ್ನಂತಹ ಗ್ರಾಮೀಣ ಹಿನ್ನೆಲೆಯಿಂದ ಬಂದಂತಹವರಿಗೆ ರಾಜ್ ಅವರ ಮೇರು ವ್ಯಕ್ತಿತ್ವ, ಅವರ ಸಾಧನೆ ಅಪಾರ ಸ್ಫೂರ್ತಿ ನೀಡುತ್ತದೆ ಎಂದರು.

ರಾಜ್ ಕುಮಾರ್ ಹಾಗೂ ಅವರ ವ್ಯಕ್ತಿತ್ವ ಬೇರೆಬೇರೆಯಾಗಿರಲಿಲ್ಲ. ಎರಡೂ ಒಂದೇ ಆಗಿದ್ದವು. ಅವೆರಡೂ ಭಿನ್ನವಾಗಿದ್ದರೆ ಅದು ನಟನೆಯಾಗುತ್ತಿತ್ತು. ಆದರೆ ರಾಜ್ ಅವರು ಯಾವುದೇ ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಭಾವದ ಹಿನ್ನೆಲೆಯಿಂದ ಬರದಿದ್ದರೂ ತಮ್ಮ ಸ್ವಂತ ಶ್ರಮದಿಂದ ಮುಂದೆ ಬಂದವರು ಎಂದು ಬಣ್ಣಿಸಿದರು. (ಒನ್‌ಇಂಡಿಯಾ ಕನ್ನಡ)

English summary
Veteran singer PB Srinivas who was known as the voice of Dr Rajkumar has been selected along with Ranganayaki and Chi Datturaj for this year's prestigious Dr Rajkumar Souharda Prashasthi. The award includes a cash prize of 1 lakh along with a memento.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada