For Quick Alerts
  ALLOW NOTIFICATIONS  
  For Daily Alerts

  'ಸಲಗ' ಸಿನಿಮಾ ಕುರಿತು ಯಾರಿಗೂ ಗೊತ್ತಿರದ ವಿಷಯ ಹೇಳಿದ ದುನಿಯಾ ವಿಜಯ್ ಪತ್ನಿ

  |

  ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ 'ಸಲಗ' ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಚಿತ್ರತಂಡ ಇಂದಷ್ಟೆ ಸಕ್ಸಸ್ ಮೀಟ್ ಸಹ ಮಾಡಿದೆ.

  ನಟನಾಗಿ ಬೇಡಿಕೆಯಲ್ಲಿದ್ದ ದುನಿಯಾ ವಿಜಯ್ ಹಠಾತ್ತನೆ ನಿರ್ದೇಶಕ ಆಗಿದ್ದು ಏಕೆ? ಯಾವ ಕಾರಣಕ್ಕೆ ದುನಿಯಾ ವಿಜಯ್ ನಿರ್ದೇಶಕ ಆಗಬೇಕಾಯ್ತು? ಸಿನಿಮಾದ ಹಿಂದೆ ದುನಿಯಾ ವಿಜಯ್ ಶ್ರಮ ಎಂಥಹದ್ದು? ದುನಿಯಾ ವಿಜಯ್ ಅತ್ಯಾಪ್ತರಿಗೆ ಬಿಟ್ಟು ಇನ್ನಾರಿಗೂ ಗೊತ್ತಿಲ್ಲದ ವಿಷಯಗಳನ್ನು ದುನಿಯಾ ವಿಜಯ್ ಪತ್ನಿ ಕೀರ್ತಿ ವಿಜಯ್ 'ಫಿಲ್ಮಿಬೀಟ್' ಜೊತೆ ಹಂಚಿಕೊಂಡಿದ್ದಾರೆ.

  'ಸಲಗ' ಸಿನಿಮಾವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿರುವ ಕಿರ್ತಿ ವಿಜಯ್, ''ಬಹಳ ಖುಷಿಯಾಗುತ್ತಿದೆ. ಇಷ್ಟೋಂದು ಪ್ರೀತಿ ಸಿಗುತ್ತದೆಂಬ ನಿರೀಕ್ಷೆ ಇರಲಿಲ್ಲ. ಜೊತೆಗೆ ಜವಾಬ್ದಾರಿಗಳೂ ಹೆಚ್ಚಾಗಿದೆ'' ಎಂದಿದ್ದಾರೆ. ಜೊತೆಗೆ 'ಸಲಗ' ಸಿನಿಮಾದ ಹಿಂದಿರುವ ದುನಿಯಾ ವಿಜಯ್‌ರ ಸಂಘರ್ಷದ ಕತೆಯನ್ನು ಹಂಚಿಕೊಂಡಿದ್ದಾರೆ.

  ಸಿನಿಮಾ ನಿಂತುಹೋದ ಬಗ್ಗೆ ಹೇಳಿದ ಕೀರ್ತಿ ಗೌಡ

  ಸಿನಿಮಾ ನಿಂತುಹೋದ ಬಗ್ಗೆ ಹೇಳಿದ ಕೀರ್ತಿ ಗೌಡ

  ''ಎಲ್ಲರಿಗೂ ಗೊತ್ತಿರುವಂತೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಆಗಿದ್ದವು. ಅದಾದ ಮೇಲೆ 'ಕುಸ್ತಿ' ಹೆಸರಿನ ಸಿನಿಮಾ ಆಗಬೇಕಿತ್ತು. ಸಿನಿಮಾಕ್ಕೆ ಬಂಡವಾಳ ಹಾಕಬೇಕಿದ್ದ ನಿರ್ಮಾಪಕರು ಮನೆಗೆ ಬಂದು, 'ಯಾಕೊ ಸರಿಹೋಗ್ತಿಲ್ಲ, ದುನಿಯಾ ವಿಜಯ್ ಬೀದಿಗೆ ಬಂದ್ಬಿಟ್ಟ ಅಂತ ಮಾತಾಡಿಕೊಳ್ತಿದ್ದಾರೆ. ಸ್ವಲ್ಪ ದಿನ ಆಗಲಿ ಆ ನಂತರ ನೋಡೋಣ' ಎಂದು ಹೇಳಿ ಹೊರಟು ಹೋದರು. ಇದನ್ನು ಕೇಳಿ ನಮಗೆ ಕಣ್ಣಲ್ಲಿ ನೀರು ಬಂದು ಬಿಡ್ತು'' ಎಂದು ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡರು ಕೀರ್ತಿ ಗೌಡ.

  ಖಿನ್ನತೆಗೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು ವಿಜಿ: ಕೀರ್ತಿ ಗೌಡ

  ಖಿನ್ನತೆಗೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರು ವಿಜಿ: ಕೀರ್ತಿ ಗೌಡ

  ''ಅದಾಗಲೇ ಸಾಕಷ್ಟು ಸಮಸ್ಯೆಗಳಲ್ಲಿದ್ದೆವು. ಆಗ ಹೀಗಾಗಿಬಿಡ್ತು. ದುನಿಯಾ ವಿಜಯ್ ಬಹಳ ಒತ್ತಡಕ್ಕೆ ಸಿಲುಕಿದರು. ಖಿನ್ನತೆಗೆ ಔಷಧಗಳನ್ನು ತೆಗೆದುಕೊಳ್ಳಲು ಆರಂಭಿಸಿದರು. ನಂತರ, ತಾವೇ ಸಿನಿಮಾ ಮಾಡಲು ನಿಶ್ಚಯಿಸಿದರು. ಚಿತ್ರಕತೆ ಬರೆಯಲು ಒಂದು ವರ್ಷ ಸಮಯ ತೆಗೆದುಕೊಂಡರು. ಮಾಸ್ತಿ ಮೊದಲು ವಿಜಯ್ ಜೊತೆ ಸೇರಿಕೊಂಡರು. ನಿಜವಾದ ರೌಡಿಗಳನ್ನು ಕರೆಸಿ ಅನುಭವ ತಿಳಿದುಕೊಂಡರು. ಆ ರೌಡಿಗಳು ತಮ್ಮ ಲವ್ ಸ್ಟೋರಿಗಳು ಹೇಳಿಕೊಳ್ಳೋರು, ನಿಜವಾಗಿ ನಡೆದ ಘಟನೆಗಳನ್ನು ಹೇಳಿಕೊಳ್ಳೋರು. ದುನಿಯಾ ವಿಜಯ್, ರಾತ್ರಿ ಸಮಯ ಮೆಜೆಸ್ಟಿಕ್‌, ಮಾರ್ಕೆಟ್‌ಗೆ ಬೈಕ್‌ ಏರಿ ಹೊರಟು ಬಿಡೋರು, ಅಲ್ಲಿ ಅವರ ನಿಜ ಜೀವನ ತಿಳಿದುಕೊಳ್ಳೋರು. ಚಿತ್ರಕತೆ ಮಾಡಲು ಪ್ರಾರಂಭವಾದ ಒಂದು ವರ್ಷ ನಾವು ಸರಿಯಾಗಿ ಮಾತನಾಡಲೇ ಇಲ್ಲ. ಡಿಸ್ಕಷನ್ ನಡೆಯೋದು, ಸಂಸಾರ ಸಹ ನೋಡುತ್ತಿರಲಿಲ್ಲ, ಕೂತು ಒಂದು ಗಂಟೆ ಮಾತನಾಡಲಿಲ್ಲ'' ಎಂದು 'ಸಲಗ'ದ ಹಿಂದಿನ ಶ್ರಮ ನೆನಪು ಮಾಡಿಕೊಂದರು ಕೀರ್ತಿ.

  ''ಖರ್ಚು ಮಾಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು''

  ''ಖರ್ಚು ಮಾಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು''

  ''ಬಹಳ ಕಷ್ಟದ ದಿನಗಳನ್ನು ನಾವು ಎದುರಿಸಿದೆವು ಮನೆಯಲ್ಲಿ ಯಾವುದಕ್ಕಾದರೂ ಖರ್ಚು ಮಾಡಬೇಕೆಂದರೆ ಯೋಚಿಸುವಂತಾಗಿತ್ತು, ಹಣಕಾಸು ಪರಿಸ್ಥಿತಿ ಕೆಡುತ್ತಾ ಹೋಯ್ತು. ಹೊರಗಿನವರಿಗೆ ಇವರು ಚೆನ್ನಾಗಿದ್ದಾರೆ ಎನ್ನಿಸಬಹುದು ಆದರೆ ನಮಗೆ, ನಮ್ಮ ಆತ್ಮೀಯ ಗೆಳೆಯರಿಗೆ, ಸಂಬಂಧಿಗಳಿಗೆ ನಮ್ಮ ಪರಿಸ್ಥಿತಿ ಗೊತ್ತಿತ್ತು. ಆ ಸಂದರ್ಭದಲ್ಲಿ ದುನಿಯಾ ವಿಜಯ್ ಮೇಲೆ ಶ್ರೀಕಾಂತ್‌ ನಂಬಿಕೆ ಇಟ್ಟರು. ಅವರಿಗೆ ಧನ್ಯವಾದ ಹೇಳಿದರು ಸಾಲದು. ವಿಜಯ್‌ಗೆ ಚಿತ್ರರಂಗದಲ್ಲಿ ಸಾಕಷ್ಟು ಗೆಳೆಯರು ಇದ್ದಾರೆ ಆದರೆ ಅವರ್ಯಾರೂ ಸಹಾಯಕ್ಕೆ ಬರಲಿಲ್ಲ. ಎಲ್ಲರ ಮನೆಯಲ್ಲೂ ಸಮಸ್ಯೆಗಳಿವೆ, ನಮ್ಮದು ತುಸು ದೊಡ್ಡದಾಯಿತು, ಆದರೆ ಅದೇನೋ ದೊಡ್ಡದು ಆಗಿಬಿಟ್ಟಿದೆ ಎಂಬಂತೆ ಅವರನ್ನ ಬೇರೆ ಥರಹವೇ ನೋಡಿದರು. ಇರಲಿ ಅವೆಲ್ಲ ಜೀವನ ಪಾಠ'' ಎಂದು ನಕ್ಕರು ಕೀರ್ತಿ.

  ಶತ್ರು-ಶತ್ರುಗಳು ಒಂದಾಗಿ ಬಹಳ ಸಮಸ್ಯೆ ಕೊಟ್ಟರು: ಕೀರ್ತಿ

  ಶತ್ರು-ಶತ್ರುಗಳು ಒಂದಾಗಿ ಬಹಳ ಸಮಸ್ಯೆ ಕೊಟ್ಟರು: ಕೀರ್ತಿ

  ''ನಮಗೆ ಬಹಳ ಬೇಜಾರಿತ್ತು, ಶತ್ರು-ಶತ್ರುಗಳು ಒಂದಾಗಿ ಬಹಳ ಸಮಸ್ಯೆ ಕೊಟ್ಟರು, ಆದರೆ ಕಲೆಯನ್ನು ಕೊಲ್ಲಲಾಗಲಿಲ್ಲ. ಕಳೆದ ಆರು ವರ್ಷದಲ್ಲಿ ಮೂರು ವರ್ಷ ಬರೀ ಸಮಸ್ಯೆಯಲ್ಲೇ ಕಳೆದೆವು ನಾವು, ನಾವು ನಂಬುವ ಗುರುಗಳ ಮಗನ ಹೆಸರು ಶ್ರೀಕಾಂತ್. ನಿರ್ಮಾಪಕ ಕೆಪಿ ಶ್ರೀಕಾಂತ್, ಗುರುಗಳ ಆಶೀರ್ವಾದದಂತೆ ಬಂದು ಸಹಾಯ ಮಾಡಿದರು. ವಿಜಯ್ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡಿ ಎಂದರು. ವಿಜಯ್ ಹಾಳೋಗಾಗಲಿ, ಕೀರ್ತಿ ಹಾಳಾಗಿ ಹೋಗಲಿ, ವಿಜಯ್ ಬೀದಿಗೆ ಬರಲಿ ಎಂದುಕೊಂಡವರಿಗೆಲ್ಲ ಆದರೆ ಅವರಿಗೆಲ್ಲ ಉತ್ತರ ನೀಡಿದಂತಾಗಿದೆ'' ಎಂದರು ಕೀರ್ತಿ.

  ''ವಿಜಿ ಕರಿಯರ್ ಮುಗಿಯಿತು ಎಂದುಕೊಂಡವರಿಗೆ ಶಾಕ್ ಆಗಿದೆ''

  ''ವಿಜಿ ಕರಿಯರ್ ಮುಗಿಯಿತು ಎಂದುಕೊಂಡವರಿಗೆ ಶಾಕ್ ಆಗಿದೆ''

  ವಿಜಯ್ ಸ್ವಭಾತಃ ಬಹಳ ಹಠಾವದಿ ವ್ಯಕ್ತಿ, ಮಿಸ್ಟರ್ ಬೆಂಗಳೂರು ಸ್ಪರ್ಧೆಯಲ್ಲಿ ರಾಜಕೀಯ ನಡೆದು ಎರಡನೇ ಪ್ರಶಸ್ತಿ ನೀಡಿದಾಗ ಅದನ್ನು ಬಿಸಾಡಿ ಬಂದಿದ್ದರು. ಈ ಕಳೆದ ಹತ್ತು ವರ್ಷದಲ್ಲಿ ಅವರು ಬಹಳ ನೊಂದಿದ್ದಾರೆ. ದುನಿಯಾ ವಿಜಯ್ ಕರಿಯರ್ ಮಿಗೀತು ಎಂದುಕೊಂಡವರಿಗೆ 'ಸಲಗ' ಸಿನಿಮಾದ ಯಶಸ್ಸು ದೊಡ್ಡ ಶಾಕ್ ನೀಡಿದೆ. ಸಿನಿಮಾಕ್ಕೆ ಬಂದು ಹಾರೈಸಿದ ಸ್ಟಾರ್ ನಟರು, ಸಿದ್ದರಾಮಯ್ಯ ಅವರು ಬಂದು ಹರಸಿದರು ಅವರೆಲ್ಲರ ಅಭಿಮಾನಿಗಳು ಸಹ 'ಸಲಗ' ನೋಡಿದ್ದಾರೆ. ದುನಿಯಾ ವಿಜಯ್ ಮಾತ್ರವೇ ಅಲ್ಲದೆ ಒಟ್ಟಾರೆ ಸಿನಿಮಾ ಪ್ರೇಮಿಗಳು ಈ ಸಿನಿಮಾ ನೋಡಿದ್ದಾರೆ. ಅಭಿಮಾನಿಗಳು, ದೇವರುಗಳು, ನಮ್ಮ ಗುರುಗಳ ಭಿಕ್ಷೆ ಈ ಯಶಸ್ಸು'' ಎಂದರು ಕೀರ್ತಿ.

  ಸಿನಿಮಾ ಸೋತರೆ ಜೀವನ ಮುಗೀತಿತ್ತು: ಕೀರ್ತಿ

  ಸಿನಿಮಾ ಸೋತರೆ ಜೀವನ ಮುಗೀತಿತ್ತು: ಕೀರ್ತಿ

  ''ಈ ಸಿನಿಮಾ ಸೋತರೆ ನಮ್ಮ ಜೀವನ ಮುಗಿಯುತ್ತಿತ್ತು, ನಾನು ವಿಜಿ ಬೇರೆ ಕೆಲಸ ಮಾಡಿಕೊಳ್ಳಬೇಕಿತ್ತು. ಆದರೆ ಸಿನಿಮಾ ಗೆದ್ದಿತು. ಸಿನಿಮಾ ಬಿಡುಗಡೆ ಆಗಿ ಮೊದಲ ಶೋನ ವಿಮರ್ಶೆ ಬಂದಾಗ ಅವರು ಮೌನವಾಗಿದ್ದರು, ಅವರ ಕಣ್ಣಲ್ಲಿ ನೀರಿತ್ತು. ನಾವು ಅವಧೂತರನ್ನು ಬಹಳ ನಂಬುತ್ತೀವಿ, ಅಲ್ಲಿ ಹರಕೆ ತೀರಿಸಬೇಕಿತ್ತು, ಬಿಡುಗಡೆ ದಿನ ವಿಜಿ ನೋಡಲು ಹೋದರು, ಆದರೆ ನಾನು ಜನರೊಟ್ಟಿಗೆ ಸಿನಿಮಾ ನೋಡಬೇಕು ಎಂದು ನನ್ನನ್ನು ಕಳಿಸಿದರು. ಇಡೀ ದಿನ ಮೌನವಾಗಿದ್ದರು, ನಾನು ಖುಷಿಯಾಗಿದ್ದೆ, ಈಗಲೂ ಮೌನವಾಗಿದ್ದಾರೆ, ಈ ಸಿನಿಮಾದ ಯಶಸ್ಸು ಗುರುಗಳ ಪಾದಕ್ಕೆ ಅರ್ಪಣೆ'' ಎಂದರು ಕೀರ್ತಿ.

  ವಿಜಯ್ ತಾಯಿ ದೊಡ್ಡ ಜವಾಬ್ದಾರಿ ಹೊರಿಸಿ ಹೋಗಿದ್ದಾರೆ: ಕೀರ್ತಿ

  ವಿಜಯ್ ತಾಯಿ ದೊಡ್ಡ ಜವಾಬ್ದಾರಿ ಹೊರಿಸಿ ಹೋಗಿದ್ದಾರೆ: ಕೀರ್ತಿ

  ವಿಜಯ್ ಅವರ ತಾಯಿ ನಿಧನರಾದ ಬಗ್ಗೆ ಮಾತನಾಡಿದ ಕೀರ್ತಿ, ''ಅವರು ಎಂದೂ ಯಾರಿಗೂ ಬೇಸರ ಮಾಡಿದವರಲ್ಲ, ಆರು ವರ್ಷ ಅವರೊಟ್ಟಿಗೆ ಕಳೆದಿದ್ದು ನನ್ನ ಪುಣ್ಯ, ಅವರಿಗೆ ನನ್ನ ಮೇಲೆ ನಂಬಿಕೆ ಇತ್ತು, ಏನೇ ಕಷ್ಟ ಬಂದರು ನನ್ನ ಮಗನೊಟ್ಟಿಗೆ ನಿಲ್ಲುತ್ತಾಳೆಂಬ ಎಂದು ಅವರಿಗೆ ಅನಿಸಿತ್ತು. ಅದಕ್ಕಾಗಿಯೇ ಹೀಗೆ ಹೋಗಿಬಿಟ್ಟರೋ ಏನೋ. ನನ್ನ ಮೇಲೆ ದೊಡ್ಡ ಜವಾಬ್ದಾರಿಯನ್ನೇ ಹೊರಿಸಿದ್ದಾರೆ. ಮೇಲೆ ಹೋಗಿ ಎಲ್ಲ ದೇವರೊಟ್ಟಿಗೆ ಗಲಾಟೆ ಮಾಡಿ ತಮ್ಮ ಮಗನಿಗೆ 'ಸಲಗ' ಸಿನಿಮಾದ ಮೂಲಕ ಯಶಸ್ಸು ತಂದುಕೊಟ್ಟಿದ್ದಾರೆ. ಅವರ ಆಶೀರ್ವಾದದಿಂದ ಸಿನಿಮಾ ಚೆನ್ನಾಗಿ ಆಗುತ್ತಿದೆ. ನಮಗೆ ಮರುಜನ್ಮ ಸಿಕ್ಕಂತೆ ಆಗಿದೆ'' ಎಂದು ವಿಜಿ ತಾಯಿಯನ್ನು ನೆನಪಿಸಿಕೊಂಡರು ಕೀರ್ತಿ.

  English summary
  Duniya Vijay's wife Keerthi talks about struggles behind Salaga movie. If this movie flops me and Vijay's career may end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X