twitter
    For Quick Alerts
    ALLOW NOTIFICATIONS  
    For Daily Alerts

    ಡಾ. ವಿಷ್ಣುವರ್ಧನ್‌ ಪ್ರತಿಮೆ ತೆರವುಗೊಳಿಸಿದ ಪೊಲೀಸರ ವಿರುದ್ಧ ಅಭಿಮಾನಿಗಳ ಆಕ್ರೋಶ

    By ಮೈಸೂರು ಪ್ರತಿನಿಧಿ
    |

    ಸ್ಯಾಂಡಲ್ ವುಡ್ ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಜನ್ಮದಿನದ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಬಳಿಯ ಉದ್ಯಾನದಲ್ಲಿ ರಾತ್ರೋರಾತ್ರಿ ಸ್ಥಾಪಿಸಿದ್ದ ನಟ ವಿಷ್ಣುವರ್ಧನ್‌ ಪ್ರತಿಮೆಯನ್ನು ತೆರವುಗೊಳಿಸಿದ ಪೊಲೀಸರ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.

    ಮೈಸೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಉದ್ಯಾನದಲ್ಲಿ ಯಾವುದೇ ಅನುಮತಿ ಪಡೆಯದೇ ಅಭಿಮಾನಿಗಳು ವಿಷ್ಣುವರ್ಧನ್‌ ಪ್ರತಿಮೆ ಸ್ಥಾಪಿಸಿದ್ದರು. ಹೀಗಾಗಿ ಅನಧಿಕೃತವಾಗಿ ಇರಿಸಿದ್ದ ಪ್ರತಿಮೆಯನ್ನು ಪೊಲೀಸರು ತೆರವುಗೊಳಿಸಿದರು. ಪ್ರತಿಮೆ ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

    ಅರಮನೆ ಬಳಿ ಇರುವ ವಿಷ್ಣುವರ್ಧನ್ ಉದ್ಯಾನದಲ್ಲಿ ವಿಷ್ಣು ಪ್ರತಿಮೆ ಸ್ಥಾಪಿಸಬೇಕೆಂದು ಕಳೆದ 10-11 ವರ್ಷಗಳಿಂದ ವಿಷ್ಣು ಅಭಿಮಾನಿಗಳು ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾರೆ ಬಂದಿದ್ದರೂ, ಪಾಲಿಕೆ ಪ್ರತಿಮೆ ಸ್ಥಾಪನೆ ಸಂಬಂಧ ಯಾವ ಕ್ರಮ ಕೈಗೊಳ್ಳದ ಕಾರಣ ಬೇಸತ್ತ ಅಭಿಮಾನಿಗಳು, ಉದ್ಯಾನದಲ್ಲಿ ರಾತ್ರೋರಾತ್ರಿ ವಿಷ್ಣುವರ್ಧನ್‌ ಪ್ರತಿಮೆ ಸ್ಥಾಪಿಸಿದ್ದರು. ಶನಿವಾರ ಬೆಳಗ್ಗೆ ಇಲ್ಲಿಯೇ ಪೂಜೆ ಸೇರಿದಂತೆ ರಕ್ತದಾನ ಶಿಬಿರ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

    Fans outrages against police for cleared of the Dr vishnuvardhan statue in mysore

    ಆದರೆ ಸದರಿ ಕಾರ್ಯಕ್ರಮ ಆರಂಭಿಸುವ ಮುನ್ನ ಅಭಿಮಾನಿಗಳು ಇಲ್ಲದ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಅಭಯ ತಂಡ ಪ್ರತಿಮೆ ಸ್ಥಾಪನೆಗೆ ಅನುಮತಿ ಪಡೆದಿಲ್ಲವೆಂದು ಪ್ರತಿಮೆಯ ಬಿಡಿಭಾಗ ಬಿಚ್ಚಿ ಆಟೋದಲ್ಲಿ ತುಂಬಿಕೊಂಡು ಹೊರಟರು. ಪ್ರತಿಮೆ ತೆರವುಗೊಳಿಸುವ ವೇಳೆ ಅಭಿಮಾನಿಗಳು ಅಧಿಕಾರಿಗಳ ಕಾಲಿಗೆ ಬಿದ್ದು ಮನವಿ ಮಾಡಿದರೂ ಯಾವುದೇ ಸ್ಪಂದನೆ ತೋರದೆ ಪ್ರತಿಮೆ ತೆರವುಗೊಳಿಸಿದರು.

    ಅಧಿಕಾರಿಗಳ ಈ ನಡೆಯನ್ನು ಖಂಡಿಸಿದ ವಿಷ್ಣುವರ್ಧನ್‌ ಅಭಿಮಾನಿಗಳು ಅಧಿಕಾರಿಗಳ ವಿರುದ್ಧವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ವಿಷ್ಣು ಪ್ರತಿಮೆ ಧ್ವಂಸ ಮಾಡಿ ತೆರವುಗೊಳಿಸಲಾಗಿದೆ ಎಂದು ಭಾವೋದ್ವೇಗಗೊಂಡ ಅಭಿಮಾನಿಗಳು ಇದು ವಿಷ್ಣುವಿನ ಕೊಲೆ ಎಂದು ಕಿಡಿಕಾರುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಕಾನೂನಾತ್ಮಕವಾಗಿ ಪ್ರತಿಮೆ ನಿರ್ಮಾಣ

    ಮೈಸೂರಿನಲ್ಲಿ ಅನಧಿಕೃತ ವಿಷ್ಣು ಸ್ಮಾರಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ರಾಮದಾಸ್, ಕಾನೂನು ಮೀರಿ ಯಾರೂ ಈ ರೀತಿ ಪ್ರತಿಮೆ ಸ್ಥಾಪಿಸಬಾರದು. ಡಾ. ವಿಷ್ಣುವರ್ಧನ್ ಯಾವತ್ತೂ ಕಾನೂನು ಮೀರಿದವರಲ್ಲ. ಹೀಗಾಗಿ ಅವರ ಪ್ರತಿಮೆ ವಿಚಾರ ವಿವಾದ ಆಗುವುದು ಬೇಡ. ಸುಪ್ರೀಂ ಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಪ್ರತಿಮೆ ನಿರ್ಮಾಣ ಮಾಡುವುದು ತಪ್ಪು ಎಂದಿದೆ. ಈ ಎಲ್ಲಾ ಕಾರಣದಿಂದ ಭವಿಷ್ಯದಲ್ಲಿ ಕಾನೂನಾತ್ಮಕವಾಗಿಯೇ ವಿಷ್ಣುವರ್ಧನ್ ಅವರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

    ಪ್ರತಿಮೆ ನಿರ್ಮಾಣ ಬಹುವರ್ಷದ ಬೇಡಿಕೆ

    ಮೈಸೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಧಾನದ ಎದುರಿನ ಮೈಸೂರು ಮಹಾನಗರ ಪಾಲಿಕೆ ಉದ್ಯಾನವನದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸಬೇಕೆಂಬುದು ವಿಷ್ಣು ಅಭಿಮಾನಿಗಳ ಬಹುದಿನದ ಬೇಡಿಕೆಯಾಗಿತ್ತು. ನಟ ವಿಷ್ಣುವರ್ಧನ್ ಮೂಲತಃ ಮೈಸೂರಿನವರೇ ಆಗಿದ್ದ ಕಾರಣ ಹಾಗೂ ವಿಷ್ಣುವರ್ಧನ್ ಮೈಸೂರಿನಲ್ಲೇ ಮೃತಪಟ್ಟ ಕಾರಣದಿಂದ ಪಾಲಿಕೆಗೆ ಸೇರಿದ ಈ ಪಾರ್ಕ್‌ನಲ್ಲಿ ವಿಷ್ಣುವರ್ಧನ್ ಪ್ರತಿಮೆ ನಿರ್ಮಿಸುವಂತೆ ಅವರ ಅಭಿಮಾನಿಗಳ ಹಲವು ವರ್ಷಗಳ ಬೇಡಿಕೆಯಾಗಿದೆ.

    ಈ ಬಗ್ಗೆ ವಿಷ್ಣು ಅಭಿಮಾನಿಗಳು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದರು ಸಹ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಎಲ್ಲಾ ಕಾರಣದಿಂದ ಬೇಸತ್ತ ಅಭಿಮಾನಿಗಳು ಯಾವುದೇ ಅನುಮತಿ ಪಡೆಯದೆ ಪಾಲಿಕೆಗೆ ಸೇರಿದ ಉದ್ಯಾನವನದಲ್ಲಿ ರಾತ್ರೋರಾತ್ರಿ ವಿಷ್ಣುವರ್ಧನ್ ಪ್ರತಿಮೆ ತಂದಿರಿಸಿದ್ದರು.

    English summary
    Fans outrages against police for cleared of the Dr Vishnuvardhan statue in mysore.
    Saturday, September 18, 2021, 16:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X